ಸಿದ್ದಾಪುರ : ಅದು ಕರ್ನಾಟಕದ ಪವಿತ್ರ ಪುಣ್ಯಕ್ಷೇತ್ರ. ಈ ಕ್ಷೇತ್ರದಲ್ಲಿ ನದಿಯೇ ಉಕ್ಕಿ ಹರಿದು ದೇವರ ವಿಗ್ರಹಕ್ಕೆ ಸ್ವಯಂ ಅಭಿಷೇಕ ನಡೆಸುತ್ತಿದೆ. ಈ ಬಾರಿಯೂ ನದಿ ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿಯ ವಿಗ್ರಹ ತೋಯಿಸುವ ಕ್ಷಣವನ್ನು ಭಕ್ತರು ಕಣ್ತುಂಬಿಕೊಂಡಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಕಮಲಶಿಲೆ ಬ್ರಾಹ್ಮೀಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶತ ಶತಮಾನಗಳಿಂದ ಇಂತಹದೊಂದು ಅಪೂರ್ವ ವಿದ್ಯಾಮಾನ ನಡೆದುಕೊಂಡು ಬಂದಿದೆ. ದೇವಸ್ಥಾನದ ಪಕ್ಕದಲ್ಲಿಯೇ ಹರಿಯುವ ಕುಬ್ಜಾ ನದಿ ಮಳೆಗಾಲದಲ್ಲಿ ಉಕ್ಕಿ ಹರಿದು ದುರ್ಗಾಪರಮೇಶ್ವರಿ ಗರ್ಭಗುಡಿಯನ್ನು ಪ್ರವೇಶಿಸಿ ದೇವಿಯ ವಿಗ್ರಹವನ್ನು ತೋಯಿಸುತ್ತದೆ. ಇಂತಹ ಅಪೂರ್ವ ಕ್ಷಣವನ್ನು ಕಣ್ತುಂಬಿ ಕೊಳ್ಳಲು ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ವರ್ಷಂಪ್ರತಿ ಆದ್ರಾ ಮಳೆಯ ಸಂರ್ಭದಲ್ಲಿ ಈ ಕ್ಷಣ ನಡೆಯುತ್ತಿದ್ರೆ, ಈ ಬಾರಿ ಆಶ್ಲೇಷಾ ಮಳೆಯ ಆರ್ಭಟಕ್ಕೆ ಕುಬ್ಜೆ ದೇವಿಗೆ ಸ್ವಯಂ ಅಭಿಷೇಕವನ್ನು ಮಾಡಿದ್ದಾಳೆ.

ಕಮಲಶಿಲೆಯಲ್ಲಿ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಿ ಲಿಂಗರೂಪದಲ್ಲಿ ನೆಲೆನಿಂತಿದ್ದಾಳೆ. ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಿಗೆ ಕುಬ್ಜೆ ಸ್ವಯಂ ಅಭಿಷೇಕದ ಹಿಂದೆ ಪೌರಾಣಿಕ ಹಿನ್ನೆಲೆಯೊಂದಿದೆ. ಕೈಲಾಸ ಪರ್ವತದಲ್ಲಿ ಪಿಂಗಳ ಎಂಬ ಸುಂದರ ನೃತ್ಯಗಾರ್ತಿಯಿದ್ದಳಂತೆ. ಒಮ್ಮೆ ಅವಳು ತನ್ನ ಅಹಂಕಾರದಿಂದ ತಾನು ನರ್ತಿಸುವುದಿಲ್ಲವೆಂದು ಹೇಳಿದಾಗ, ಪಾರ್ವತಿ ಭೂಲೋಕದಲ್ಲಿ ಕುರೂಪಿಯಾದ ಹೆಣ್ಣಾಗಿ ಹುಟ್ಟು ಎಂದು ಶಾಪವನ್ನಿತ್ತಳು. ಪಿಂಗಳೆಗೆ ಶಾಪವಿತ್ತ ಪಾರ್ವತಿ ತನ್ನ ತಪ್ಪಿನ ಅರಿವಾದ ಪಿಂಗಳೆಯು ಕ್ಷಮೆಯಾಚಿಸಲು ಕರಟಾಸುರನ ದುಷ್ಕೃತ್ಯಗಳಿಂದ ಪರಿತಪಿಸುತ್ತಿರೋ ಭೂಲೋಕವಾಸಿಗಳ ಉದ್ದಾರಕ್ಕೆ ತಾನೇ ಅವತರಿಸುತ್ತೇನೆ.

ಸಹ್ಯಾದ್ರಿಯ ತಪ್ಪಲಿನಲ್ಲಿರುವ ಋಕ್ಷ್ವಮುನಿಯ ಆಶ್ರಮದ ಬಳಿಯಲ್ಲಿ ಕಮಲಶಿಲೆಯ ರೂಪದ ಲಿಂಗದಲ್ಲಿ ಕಾಣಿಸಿಕೊಳ್ಳುತ್ತೇನೆ ಎಂದಳಂತೆ. ಪಿಂಗಳೆ ಭೂಮಿಗೆ ಅವತರಿಸಿದ್ದು ಕುಬ್ಜೆಯೆಂಬ ಕುರೂಪಿಯಾಗಿ. ಕುಬ್ಜೆ ತನ್ನ ಈ ಜನ್ಮದ ಮೋಕ್ಷಕ್ಕಾಗಿ ಈ ಕ್ಷೇತ್ರದಲ್ಲಿರೋ ಸುಪಾರ್ಶ್ವ ಗುಹೆಯಲ್ಲಿ ತಪಸ್ಸು ಮಾಡತೊಡಗುತ್ತಾಳೆ. ಈ ತಪಸ್ಸಿನಿಂದ ಪ್ರಸನ್ನಳಾಗೋ ಪಾರ್ವತಿ ಸುಪಾರ್ಶ್ವಗುಹೆಯಲ್ಲಿ ಹುಟ್ಟೋ ನಾಗತೀರ್ಥ ಮತ್ತು ಈಗಿನ ಕುಬ್ಜಾನದಿಯ ಸಂಗಮಸ್ಥಳದಲ್ಲಿ ಕಮಲಶಿಲೆಯ ಲಿಂಗವಾಗಿ ಪ್ರತ್ಯಕ್ಷಳಾಗುತ್ತಾಳೆ.

ದೇವಿಯು ಶ್ರೀಕೃಷ್ಣನ ಸ್ಪರ್ಷದಿಂದ ನಿನ್ನ ಪಾಪಪರಿಹಾರವಾಗುವುದೆಂಬ ವಿಧಿಲಿಖಿತವಿರೋದ್ರಿಂದ ನೀನು ಮಥುರೆಗೆ ತೆರಳು ಎಂದು ಕುಬ್ಜೆಗೆ ತಿಳಿಸುತ್ತಾಳೆ. ಸಹ್ಯಾದ್ರಿಯ ತಪ್ಪಲಲ್ಲಿ ಹುಟ್ಟಿ ಪಶ್ಚಿಮದ ಕಡಲೆಡೆಗೆ ಸಾಗೋ ನದಿ ಕುಬ್ಜೆಯ ನೆನಪಲ್ಲಿ ಕುಬ್ಜಾ ನದಿಯೆಂದೇ ಹೆಸರು ಪಡೆಯುತ್ತದೆ ಎಂದು ತಿಳಿಸುತ್ತಾಳೆ. ಹೀಗೆ ಶ್ರೀಕೃಷ್ಣನ ಸ್ಪರ್ಷದಿಂದ ಗೂನುಬೆನ್ನಿನ ಅಜ್ಜಿಯೊಬ್ಬಳ ಶಾಪ ಪರಿಹಾರಗೊಳ್ಳುತ್ತದೆ.

ಪಾರ್ವತಿಯಿಂದ ಶಾಪಗ್ರಸ್ತೆಯಾದ ಪಿಂಗಲೆ ಕುಬ್ಜೆಯಾಗಿ ಧರೆಯಲ್ಲಿ ಜನಿಸಿ ಶಾಪವಿಮುಕ್ತಿಗಾಗಿ ದೇವಿಯನ್ನು ತೋಯಿಸುವ ಚರಿತ್ರೆಯಿದು. ಬಹಳ ಹಿಂದೆ ಈ ಗಳಿಗೆಗೋಸ್ಕರ ಭಕ್ತರು ಭಯಭಕ್ತಿಯಿಂದ ಕಾಯುತ್ತಿದ್ದರು. ದೇವಳದ ಹೆಬ್ಬಾಗಿಲಿನ ಮೂಲಕ ಕುಬ್ಜೆ ಪ್ರವೇಶಿಸಿ ಗರ್ಭಗಡಿ ಪ್ರವೇಶಿಸಿ ಪಾಣಿಪೀಠ, ಅದರ ಮೇಲಿನ ಉದ್ಭವಲಿಂಗ ತೋಯಿಸಿ ಅಲ್ಲಿ ಇಟ್ಟಿರುವ ಹೂವನ್ನು ತೇಲಿಸಿಕೊಂಡು ಹೋದಾಗ ಮಾತ್ರ ಅದೊಂದು ಪರಿಪೂರ್ಣ ತೋಯಿಸುವಿಕೆಯ ವಿದ್ಯಮಾನ ಎಂದು ಪರಿಗಣಿಸಲಾಗುತ್ತದೆ.

ಈ ಕ್ಷ ಣದಲ್ಲಿ ವಿಶೇಷ ಮಂಗಳಾರತಿ ನಡೆಯುತ್ತದೆ. ನೀರು ಇಳಿದು ಹೋದ ಬಳಿಕ ಶುದ್ಧೀಕರಣ ನಡೆದು ಕಟ್ಟುಕಟ್ಟಳೆ ಪೂಜೆ ನಡೆಯುತ್ತದೆ. ಈ ಬಾರಿಯೂ ಕುಬ್ಜೆಯ ಸ್ವಯಂ ಅಭಿಷೇಕ ಸಂದರ್ಭದಲ್ಲಿ ಅರ್ಚಕರು ವಿಶೇಷ ಪೂಜೆಯನ್ನು ಸಲ್ಲಿಸಿದರು. ವರ್ಷಂಪ್ರತಿ ಕುಬ್ಜಾ ನದಿ ದೇವಸ್ಥಾನ ಪ್ರವೇಶಿಸಿ ದುರ್ಗಾಪರಮೇಶ್ವರಿ ದೇವಿಯ ಪಾದ ತೊಳೆಯುತ್ತಾಳೆನ್ನುವ ನಂಬಿಕೆ ಭಕ್ತರಲ್ಲಿದೆ.

ವರ್ಷಂಪ್ರತಿ ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಕಮಲಶಿಲೆಗೆ ಆಗಮಿಸುತ್ತಾರೆ. ದೇವಿಗೆ ಸ್ನಾನ ಮಾಡಿಸಿದ ಬಳಿಕ ತೀರ್ಥಸ್ನಾನ ಮಾಡುವ ಮೂಲಕ ಭಕ್ತರು ಸಂತೃಪ್ತರಾಗುತ್ತಿದ್ದರು. ಆದರೆ ಈ ಬಾರಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಕ್ತರು ಸಂಖ್ಯೆ ಕ್ಷೀಣಿಸಿತ್ತು. ದೇವಸ್ಥಾನದ ಮೊಕ್ತೇಸರರು, ಅರ್ಚಕರು, ದೇವಸ್ಥಾನದ ಸಿಬ್ಬಂದಿಗಳು ಹಾಗೂ ಕೆಲ ಭಕ್ತರು ಅಪೂರ್ವ ಕ್ಷಣವನ್ನು ಕಣ್ತುಂಬಿಕೊಂಡಿದ್ದಾರೆ.