ಗಣರಾಜ್ಯೋತ್ಸವಕ್ಕೆ ರಕ್ತಪಾತ ನಡೆಸಲು ಉಗ್ರರಿಂದ ಭಾರೀ ಸಂಚು !

0

ವದೆಹಲಿ : ಜನವರಿ 26ರ ಗಣರಾಜ್ಯೋತ್ಸವ ವೇಳೆ ರಾಷ್ಟ್ರ ರಾಜಧಾನಿ ದೆಹಲಿ ಅಥವಾ ಗುಜರಾತಿನಲ್ಲಿ ಐಸಿಸ್ ಉಗ್ರರನ್ನು ಬಳಸಿ ರಕ್ತಪಾತ ನಡೆಸಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದೆ ಎಂಬ ಸ್ಫೋಟಕ ಮಾಹಿತಿಯೊಂದು ಇದೀಗ ಬೆಳಕಿಗೆ ಬಂದಿದೆ.
ದೆಹಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರೋ ಖ್ವಾಜಾ ಮೊಯಿದ್ದೀನ್ ಸೇರಿದಂತೆ 6 ಮಂದಿಯ ತಂಡದ ಇಬ್ಬರು ಸದಸ್ಯರು ದಾಳಿ ನಡೆಸೋ ಸಾಧ್ಯತೆಯಿದೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಈ ಹಿಂದೆ ಖ್ವಾಜಾ ಬೆಂಗಳೂರಿನಲ್ಲಿ ನೆಲೆಸಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದು, ಇಬ್ಬರು ಉಗ್ರರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ.
ಐಸಿಸ್ ಉಗ್ರರನ್ನು ಬಳಸಿಕೊಂಡು ದಾಳಿ ನಡೆಸಿ, ನಂತರ ದಾಳಿಯ ಹೊಣೆಯನ್ನು ಐಸಿಸ್ ಉಗ್ರರ ತಲೆಗೆ ಕಟ್ಟುವುದು ಪಾಕಿಸ್ತಾನದ ಐಎಸ್ ಐ ಹುನ್ನಾರ ನಡೆಸಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ತಮಿಳುನಾಡಿನ ತಿರುವಳ್ಳೂರ್ ಜಿಲ್ಲೆಯ ಹಿಂದೂ ಸಂಘಟನೆಯ ನಾಯಕ ಕೆ.ಪಿ.ಸುರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಆರು ಮಂದಿ ಉಗ್ರರು ತಮಿಳುನಾಡಿನಿಂದ ಪರಾರಿಯಾಗಿದ್ದರು. ಈ ಗುಂಪು ಹತ್ಯೆ ಬಳಿಕ ಬೆಂಗಳೂರಿನಲ್ಲಿ ನೆಲೆ ನಿಂತು, ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಿತ್ತು. ಅಲ್ಲಿಂದ ನೇಪಾಳಕ್ಕೆ ಪ್ರಯಾಣಿಸಿ, ಮತ್ತೆ ಭಾರತ ಪ್ರವೇಶಿಸಿತ್ತು. ಈ ಪೈಕಿ ಖ್ವಾಜಾ ಮೊಯಿದ್ದೀನ್, ಅಬ್ದುಲ್ ಸಮದ್ ಸೇರಿ ಮೂವರನ್ನು ದೆಹಲಿಯಲ್ಲಿ ಹಾಗೂ ನಾಲ್ಕನೆಯವನನ್ನು ಗುಜರಾತಿನಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧನಕ್ಕೊಳಪಡಿಸಿದ್ದಾರೆ.
ಈ ಗುಂಪಿನಲ್ಲಿ ಇನ್ನೂ ಇಬ್ಬರು ನಾಪತ್ತೆಯಾಗಿದ್ದು, ಅವರು ಜ.26ರಂದು ದೆಹಲಿ ಅಥವಾ ಗುಜರಾತ್ ರಾಜ್ಯದಲ್ಲಿ ದಾಳಿ ನಡೆಸುವ ಸಾಧ್ಯತೆಗಳಿವೆ. ಆ ದಾಳಿ ಜಂಟಿಯಾಗಿ ಬೇಕಾದರೂ ನಡೆಯಬಹುದು. ಇಬ್ಬರೂ ಏಕಾಂಗಿಯಾಗಿ ಬೇರೆ ಕಡೆ ದಾಳಿ ಮಾಡಲೂಬಹುದು ಎಂದು ಹೇಳಲಾಗುತ್ತಿದೆ. ಈ ಇಬ್ಬರೂ ಉಗ್ರರಿಗೆ ವಿದೇಶ ನಿಯಂತ್ರಕರೊಬ್ಬರಿಂದ ಸಹಾಯ ಸಿಗುತ್ತಿದೆ ಎಂದು ವರದಿಗಳು ತಿಳಿಸಿವೆ. ಜ.26ಕ್ಕೆ ಮುನ್ನ ಬೃಹತ್ ದಾಳಿಯನ್ನು ನಡೆಸುವಂತೆ ತನಗೆ ಸೂಚನೆ ಇದ್ದು ಎಂದು ನಾಲ್ಕನೇ ಆರೋಪಿ ಹೇಳಿದ್ದಾರೆ. ಈತ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದು, ಆತನಿಂದ ಮಾಹಿತಿ ಹೆಕ್ಕಲು ತಮಿಳು ತರ್ಜುಮೆಕಾರನನ್ನು ಪೊಲೀಸರು ಬಳಸಿಕೊಂಡಿದ್ದಾರೆಂದು ತಿಳಿದುಬಂದಿದೆ.

Leave A Reply

Your email address will not be published.