ಸಾಗರ ದ್ವೀಪ : ಮಕರ ಸಂಕ್ರಾಂತಿ ಪ್ರಯುಕ್ತ ಪವಿತ್ರ ಗಂಗಾ ನದಿ ಮತ್ತು ಬಂಗಾಳಕೊಲ್ಲಿಯ ಸಂಗಮದ ಸಾಗರ ದ್ವೀಪದಲ್ಲಿಂದು ಭಾರತ, ಬಾಂಗ್ಲಾದೇಶ ಮತ್ತು ನೇಪಾಳದ ವಿವಿಧ ಭಾಗಗಳ 30 ಲಕ್ಷಕ್ಕೂ ಹೆಚ್ಚು ಭಕ್ತರು ಪುಣ್ಯಸ್ನಾನ ಮಾಡಿದರು.

ಮಕರ ಸಂಕ್ರಾಂತಿ ಪ್ರಯುಕ್ತ ನಡೆದ ವಿಶೇಷ ಆಚರಣೆಯಲ್ಲಿ ಸುಮಾರು 30 ಲಕ್ಷ ಮಂದಿ ಭಾಗವಹಿಸಿದ್ದು, ಈ ಹಿಂದಿನ ಎಲ್ಲ ದಾಖಲೆಗಳನ್ನು ಈ ಸಂಖ್ಯೆ ಮೀರಿದೆ ಎಂದು ಪಶ್ಚಿಮಬಂಗಾಳ ಸರ್ಕಾರದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಪಶ್ಚಿಮ ಬಂಗಾಳದ 24 ಪರಿಗಣ ಜಿಲ್ಲೆಯಲ್ಲಿರುವ ಸಾಗರದ್ವೀಪದಲ್ಲಿ ಗಂಗಾ ನದಿಯಲ್ಲಿ ಮಿಂದೇಳಲು ಲಕ್ಷಾಂತರ ಹಿಂದು ಭಕ್ತರು ಆಗಮಿಸುತ್ತಾರೆ. ನಂತರ ನದಿ ದಂಡೆಯಲ್ಲಿರುವ ಕಪಿಲ ಮುನಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಮರ್ಪಿಸುತ್ತಾರೆ. ಕಳೆದ ವರ್ಷ ಇಲ್ಲಿಗೆ 20 ಲಕ್ಷ ಭಕ್ತರು ಭಾಗವಹಿಸಿದ್ದು ಹೊಸ ದಾಖಲೆಯಾಗಿತ್ತು.

ಲಕ್ಷಾಂತರ ಭಕ್ತರು ಪವಿತ್ರ ಗಂಗೆ ಸ್ನಾನ ಮತ್ತು ಸಂಕ್ರಾಂತಿ ಆಚರಣೆಯಲ್ಲಿ ಪಾಲ್ಗೊಂಡಿರುವುದರಿಂದ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ. ನೂಕುನುಗ್ಗಲು ಮತ್ತು ಕಾಲ್ತುಳಿತ ತಪ್ಪಿಸಲು ವಿಶೇಷ ವ್ಯವಸ್ಥೆ ಕೈಗೊಳ್ಳಲಾಗಿದೆ.