ದುಬೈ : ಟಿ20 ವಿಶ್ವಕಪ್‌ನಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿದೆ. ಐಪಿಎಲ್‍ನಲ್ಲಿ ರನ್ ಹೊಳೆಯನ್ನೇ ಹರಿಸಿದ್ದ ಬ್ಯಾಟ್ಸ್‌ಮ್ಯಾನ್‌ಗಳು ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ಪಾಕಿಸ್ತಾನ ವಿರುದ್ದ ಮೊದಲ ಸೋಲು ಕಂಡಿದ್ದ ಭಾರತ, ಇದೀಗ ನ್ಯೂಜಿಲೆಂಡ್ ತಂಡದ ವಿರುದ್ದವೂ ಹೀನಾಯ ಸೋಲು ಕಂಡಿದೆ. ಸತತ ಎರಡು ಸೋಲಿನ ಬೆನ್ನಲ್ಲೇ ಭಾರತ ಇದೀಗ ಸೆಮಿಫೈನಲ್ ಪ್ರವೇಶಿಸುವುದೇ ಅನುಮಾನವಾಗಿದೆ.
ದುಬೈನ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತಕ್ಕೆ ಆರಂಭಿಕರಾದ ಇಶಾನ್ ಕಿಶನ್ ಹಾಗೂ ರಾಹುಲ್ ಜೋಡಿ ಉತ್ತಮ ಜೊತೆಯಾಟದ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಕಿಶಾನ್ ಬಹುಬೇಗನೆ ವಿಕೆಟ್ ಒಪ್ಪಿಸಿದ್ರು, ನಂತರ ರಾಹುಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಜೊತೆಯಾಟ ಪ್ರದರ್ಶಿಸಿದ್ದರೂ ಕೂಡ ರಾಹುಲ್ ಕೆಟ್ಟ ಹೊಡೆತಕ್ಕೆ ವಿಕೆಟ್ ಒಪ್ಪಿಸಿದ್ದಾರೆ.
ಕೆ.ಎಲ್ ರಾಹುಲ್ 18 ರನ್ (16 ಎಸೆತ, 3 ಬೌಂಡರಿ) ಮತ್ತು ರೋಹಿತ್ ಶರ್ಮಾ 14 ರನ್(14 ಎಸೆತ, 1 ಬೌಂಡರಿ, 1 ಸಿಕ್ಸ್) ಬಾರಿಸಿ ಇಬ್ಬರು ವಿಕೆಟ್ ಒಪ್ಪಿಸಿ ಹೊರ ನಡೆದರು. ನಾಯಕ ವಿರಾಟ್ ಕೊಹ್ಲಿ 9 ರನ್ (17 ಎಸೆತ) ಮಾಡಿ ಔಟ್ ಆದರು. ನಂತರ ಹಾರ್ದಿಕ್ ಪಾಂಡ್ಯ 23 ರನ್ (24 ಎಸೆತ, 1 ಬೌಂಡರಿ) , ರವೀಂದ್ರ ಜಡೇಜಾ 26 ರನ್ (19 ಎಸೆತ, 2 ಬೌಂಡರಿ, 1 ಸಿಕ್ಸ್) ನೆರವಿನಿಂದ ಭಾರತ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 110 ರನ್ ಗಳಿಸಿತು.
ಭಾರತ ನೀಡಿದ 111 ರನ್‍ಗಳ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಕೇವಲ 2 ವಿಕೆಟ್ ನಷ್ಟಕ್ಕೆ 14.3 ಓವರ್‌ಗಳಲ್ಲಿ 111 ರನ್ ಮಾಡಿ ಗೆದ್ದು ಬೀಗಿದೆ. ಸತತ ಎರಡು ಪಂದ್ಯಗಳನ್ನು ಸೋತಿರುವ ಭಾರತದ ಸೆಮಿಫೈನಲ್ ಪ್ರವೇಶ ಬೇರೆ ತಂಡಗಳ ಫಲಿತಾಂಶದ ಮೇಲೆ ನಿಂತಿದೆ. ಸದ್ಯದ ಸ್ಥಿತಿಯಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ಉತ್ತಮ ರನ್‌ರೇಟ್ ಹೊಂದಿದ್ದು, ಭಾರತದ ಟ್ರೋಫಿ ಗೆಲ್ಲುವ ಕನಸು ನುಚ್ಚುನೂರಾಗಿದೆ.
ಇದನ್ನೂ ಓದಿ : 2022 ಐಪಿಎಲ್‌ಗೆ ಎಂಟ್ರಿ ಕೊಟ್ಟ ಲಕ್ನೋ, ಅಹಮದಾಬಾದ್ ಹೊಸ ತಂಡ
ಇದನ್ನೂ ಓದಿ : ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿದ ರಾಹುಲ್ ದ್ರಾವಿಡ್