ದುಬೈ: ಭಾರತ ಕ್ರಿಕೆಟ್ ತಂಡದಲ್ಲಿ ಮಿಸ್ಟರ್ 360 ಡಿಗ್ರಿ ಬ್ಯಾಟ್ಸ್’ಮನ್ ಯಾರಾದ್ರೂ ಇದ್ರೆ ಅದು ಮುಂಬೈನ ಸೂರ್ಯಕುಮಾರ್ ಯಾದವ್ (Suryakumar Yadav success). ತಮ್ಮ 360 ಬ್ಯಾಟಿಂಗ್ ಕಲೆಯನ್ನು ಹಾಂಕಾಂಗ್ ವಿರುದ್ಧದ ಏಷ್ಯಾ ಕಪ್ (Asia Cup 2022) ಪಂದ್ಯದ ಮೂಲಕ ಸೂರ್ಯಕುಮಾರ್ ಯಾದವ್ ಕ್ರಿಕೆಟ್ ಜಗತ್ತಿಗೆ ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ.
ಸೂರ್ಯಕುಮಾರ್ ಯಾದವ್ 360 ಡಿಗ್ರಿ ಆಟಗಾರನೆಂದು ಕರೆಸಿಕೊಳ್ಳಲು ಕಾರಣ ರಬ್ಬರ್ ಬಾಲ್ ಮಹಿಮೆ. ಅಚ್ಚರಿಯಾದರೂ ಇದು ಸತ್ಯ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಹಾಂಕಾಂಗ್ ವಿರುದ್ಧದ ಪಂದ್ಯದಲ್ಲಿ ವಿಧ್ವಂಸಕ ಆಟವಾಡಿದ್ದ ಸೂರ್ಯಕುಮಾರ್ ಯಾದವ್, ಕೇವಲ 26 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್’ಗಳ ನೆರವಿನಿಂದ ಸಿಡಿಲಬ್ಬರದ ಅಜೇಯ 68 ರನ್ ಸಿಡಿಸಿದ್ದರು. ಸೂರ್ಯನ ಬ್ಯಾಟಿಂಗ್ ಅಬ್ಬರಕ್ಕೆ ನಾನ್’ಸ್ಟ್ರೈಕ್’ನಲ್ಲಿದ್ದ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ ಅವರೇ ನಿಬ್ಬೆರಗಾಗಿ ಹೋಗಿದ್ದರು.
ಸೂರ್ಯಕುಮಾರ್ ಯಾದವ್ ಭಾರತದ ಎಬಿ ಡಿವಿಲಿಯರ್ಸ್ ಎಂದೇ ಫೇಮಸ್. ದಕ್ಷಿಣ ಆಫ್ರಿಕಾದ ಎಬಿಡಿ ರೀತಿಯಲ್ಲೇ ಮೈದಾನದ ಎಲ್ಲಾ ದಿಕ್ಕುಗಳಿಗೂ ಚೆಂಡನ್ನು ಬಾರಿಸಬಲ್ಲ ಸಾಮರ್ಥ್ಯ ಸೂರ್ಯನಿಗಿದೆ. ಅದಕ್ಕೇ ಅವರನ್ನು 360 ಡಿಗ್ರಿ ಆಟಗಾರನೆಂದು ಕರೆಯಲಾಗುತ್ತದೆ. 360 ಡಿಗ್ರಿ ಬ್ಯಾಟಿಂಗ್ ಅಂದ್ರೆ ಮೈದಾನದ ಸುತ್ತಲೂ ಎಲ್ಲಾ ದಿಕ್ಕುಗಳಲ್ಲಿ ರನ್ ಗಳಿಸಬಲ್ಲ ಸಾಮರ್ಥ್ಯ. ಕಟ್, ಪುಲ್, ಕವರ್ ಡ್ರೈವ್, ಆನ್ ಡ್ರೈವ್, ಸ್ಟ್ರೇಟ್ ಡ್ರೈವ್, ಅಪ್ಪರ್ ಕಟ್, ಸ್ಕೂಪ್.. ಹೀಗೆ ಕ್ರಿಕೆಟ್’ನ ಎಲ್ಲಾ ಬ್ಯಾಟಿಂಗ್ ಕಲೆಗಳನ್ನು ಸೂರ್ಯಕುಮಾರ್ ಯಾದವ್ ಕರಗತ ಮಾಡಿಕೊಂಡಿದ್ದಾರೆ. ಚಿಕ್ಕಂದಿನಲ್ಲಿ ಸ್ನೇಹಿತರ ಜೊತೆ ರಬ್ಬರ್ ಬಾಲ್ ಕ್ರಿಕೆಟ್ ಆಡುವಾಗ ಕಲಿತ ಹೊಡೆತಗಳೇ ನನಗೆ ಈಗ ನೆರವಾಗುತ್ತಿವೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.
“ಸ್ಕೂಪ್’ನಂತಹ ಶಾಟ್’ಗಳನ್ನು ನಾನು ನೆಟ್ಸ್’ನಲ್ಲಿ ಬಾರಿಸುವುದೇ ಇಲ್ಲ. ಅದರ ಅಭ್ಯಾಸವನ್ನೂ ಮಾಡುವುದಿಲ್ಲ. ಚಿಕ್ಕಂದಿನಲ್ಲಿ ಸ್ನೇಹಿತರ ಜೊತೆ ಸಿಮೆಂಟ್ ಪಿಚ್’ಗಳ ಮೇಲೆ ಸಾಕಷ್ಟು ರಬ್ಬರ್ ಬಾಲ್ ಕ್ರಿಕೆಟ್ ಆಡಿದ್ದೆ. ಇದೆಲ್ಲಾ ಬಂದಿರುವುದು ಅಲ್ಲಿಂದಲೇ”.
- ಸೂರ್ಯಕುಮಾರ್ ಯಾದವ್, ಭಾರತ ಕ್ರಿಕೆಟ್ ತಂಡದ ಆಟಗಾರ.
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 32 ವರ್ಷದ ಬಲಗೈ ಬ್ಯಾಟ್ಸ್’ಮನ್ ಸೂರ್ಯಕುಮಾರ್ ಯಾದವ್ ಆಡಿರುವ 25 ಟಿ20 ಪಂದ್ಯಗಳಿಂದ 39.89ರ ಸರಾಸರಿಯಲ್ಲಿ 1 ಶತಕ ಮತ್ತು 6 ಅರ್ಧಶತಕಗಳ ಸಹಿತ 758 ರನ್ ಕಲೆ ಹಾಕಿದ್ದಾರೆ. ಅತೀ ಕಡಿಮೆ ಅವಧಿಯಲ್ಲಿ ಐಸಿಸಿ Rankingನಲ್ಲಿ ಟಾಪ್-5ನಲ್ಲಿ ಕಾಣಿಸಿಕೊಂಡಿರುವ ಸೂರ್ಯ, ಸದ್ಯ 2ನೇ ಸ್ಥಾನದಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಸಿಡಿಲಬ್ಬರ ಬ್ಯಾಟಿಂಗ್ ನೆರವಿನಿಂದ ಹಾಂಕಾಂಗ್ ವಿರುದ್ಧದ ಪಂದ್ಯವನ್ನು 40 ರನ್’ಗಳಿಂದ ಗೆದ್ದ ಭಾರತ ಏಷ್ಯಾ ಕಪ್’ನಲ್ಲಿ ‘ಎ’ ಗ್ರೂಪ್’ನಿಂದ ಅಜೇಯ ತಂಡವಾಗಿ ಸೂಪರ್-4 ಹಂತ ಪ್ರವೇಶಿಸಿದೆ.
ಇದನ್ನೂ ಓದಿ : Duleep Trophy: ದುಲೀಪ್ ಟ್ರೋಫಿ: ದಕ್ಷಿಣ ವಲಯ ತಂಡದಲ್ಲಿ ಕರ್ನಾಟಕದ ನಾಲ್ವರಿಗೆ ಸ್ಥಾನ; ಮಯಾಂಕ್ ಅಗರ್‌ವಾಲ್ ಉಪನಾಯಕ
ಇದನ್ನೂ ಓದಿ : Irfan Pathan: ಅರಬ್ ದೇಶದಲ್ಲಿ ಯುವ ಕ್ರಿಕೆಟಿಗರಿಗೆ ಕ್ರಿಕೆಟ್ ಪಾಠ ಹೇಳಿಕೊಟ್ಟ ಟೀಮ್ ಇಂಡಿಯಾ ಆಲ್ರೌಂಡರ್ ಇರ್ಫಾನ್ ಪಠಾಣ್
Mr 360 Suryakumar Yadav is the rubber ball glory behind Suryas success