ದೆಹಲಿ: ಕ್ರಿಕೆಟ್ ಜಗತ್ತಿನಲ್ಲೀಗ ಟೀಮ್ ಇಂಡಿಯಾದ ಮಾಜಿ ನಾಯಕ, ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅವರ ಫಾರ್ಮ್’ನದ್ದೇ ಸುದ್ದಿ. “ಹಳ್ಳಕ್ಕೆ ಬಿದ್ದವನಿಗೆ ಆಳಿಗೊಂದು ಕಲ್ಲು” ಎಂಬಂತೆ ಔಟ್ ಆಫ್ ಫಾರ್ಮ್ ಕೊಹ್ಲಿ ವಿರುದ್ಧ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ಟೀಕಾಸ್ತ್ರಗಳನ್ನು ಪುಂಖಾನುಪುಂಖವಾಗಿ ಪ್ರಯೋಗಿಸುತ್ತಿದ್ದಾರೆ. ಅತ್ತ ವಿರಾಟ್ ಕೊಹ್ಲಿ ದಯನೀಯ ವೈಫಲ್ಯ ಎದುರಿಸುತ್ತಿದ್ರೆ, ಇತ್ತ ಕೊಹ್ಲಿ ಅವರ ಬಾಲ್ಯದ ಗುರು (Virat Kohli Childhood Coach) ತಮ್ಮ ಶಿಷ್ಯನ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಶಿಷ್ಯನನ್ನು ಬಾಲ್ಯದಿಂದಲೂ ನೋಡಿರುವ ಕೋಚ್ ರಾಜ್’ಕುಮಾರ್ ಶರ್ಮಾ ಕೊಹ್ಲಿಗಾಗಿ ದೆಹಲಿಯಲ್ಲಿ ಕಾಯುತ್ತಿದ್ದು, ತಮ್ಮ ಬಳಿ ಬಂದರೆ ವಿರಾಟ್ ಸಮಸ್ಯೆಗೆ ಪರಿಹಾರ ನೀಡಬಲ್ಲೆ ಎಂದಿದ್ದಾರೆ.
“ವಿರಾಟ್ ಕೊಹ್ಲಿಯ ಫಾರ್ಮ್ ಬಗ್ಗೆ ಯಾವುದೇ ಚಿಂತೆಯಿಲ್ಲ. ಇಂಗ್ಲೆಂಡ್ ಪ್ರವಾಸದಲ್ಲಿ ಆತ ಔಟಾದ ಎಸೆತಗಳಲ್ಲೆಲ್ಲಾ ಅದ್ಭುತ ಎಸೆತಗಳಾಗಿದ್ದವು. ಆದರೂ ಬ್ಯಾಟಿಂಗ್’ನಲ್ಲಿ ಆತ ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ, ಆತ ನನ್ನ ಬಳಿ ಬಂದರೆ ಆ ಸಮಸ್ಯೆಯನ್ನು ನಿವಾರಿಸುವ ಪ್ರಯತ್ನ ಮಾಡುತ್ತೇನೆ. ನನ್ನ ಪ್ರಕಾರ ವಿರಾಟ್ ನನ್ನ ಬಳಿ ಬರುತ್ತಾನೆ ಎಂದುಕೊಂಡಿದ್ದೇನೆ”.
- ರಾಜ್ ಕುಮಾರ್ ಶರ್ಮಾ, ವಿರಾಟ್ ಕೊಹ್ಲಿ ಅವರ ಬಾಲ್ಯದ ಕೋಚ್.
ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 6 ಇನಿಂಗ್ಸ್’ಗಳಲ್ಲಿ ಕೇವಲ 76 ರನ್ ಕಲೆ ಹಾಕಿರುವ ವಿರಾಟ್ ಕೊಹ್ಲಿ ಅವರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಏಷ್ಯಾ ಕಪ್ ಟೂರ್ನಿಗೂ ಮುನ್ನ ಕೊಹ್ಲಿ ಒಂದೂವರೆ ತಿಂಗಳು ಕ್ರಿಕೆಟ್”ನಿಂದ ದೂರ ಉಳಿಯಲಿದ್ದಾರೆ. ಇದೇ ಸಮಯವನ್ನು ಬಳಸಿಕೊಂಡು ತಮ್ಮ ಬ್ಯಾಟಿಂಗ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಸಾಧ್ಯತೆಯಿದೆ. ಕೊಹ್ಲಿಯನ್ನು ಆರಂಭದ ದಿನಗಳಿಂದಲೂ ನೋಡಿರುವ ಕಾರಣ ಆತನ ಸಮಸ್ಯೆಗೆ ನಾನೇ ಪರಿಹಾರ ಒದಗಿಸಬಲ್ಲೆ ಎಂದು ಕೊಹ್ಲಿ ಅವರ ಬಾಲ್ಯದ ಕೋಚ್ ರಾಜ್”ಕುಮಾರ್ ಶರ್ಮಾ ಹೇಳಿದ್ದಾರೆ. ಬಾಲ್ಯದ ದಿನಗಳಿಂದಲೂ ವಿರಾಟ್ ಕೊಹ್ಲಿ, ದೆಹಲಿಯಲ್ಲಿರುವ ರಾಜ್ ಕುಮಾರ್ ಶರ್ಮಾ ಅವರ ಕ್ರಿಕೆಟ್ ಅಕಾಡೆಮಿಯಲ್ಲೇ ಅಭ್ಯಾಸ ನಡೆಸುತ್ತಿದ್ದರು.
“ಈ ಅಕಾಡೆಮಿಯ ಆತನ ಸ್ವಂತ ಮೈದಾನವಿದ್ದಂತೆ. ಬಿಡುವಿಲ್ಲದ ಕ್ರಿಕೆಟ್ ಕಾರಣದಿಂದ ಆತನಿಗೆ ಸಮಯವಿರಲಿಲ್ಲ. ಈಗ ಸಮಯ ಸಿಕ್ಕಿದೆ. ಆತ ಇಲ್ಲೇ ಸ್ವಲ್ಪ ಸಮಯ ಕಳೆದು ಅಭ್ಯಾಸ ನಡೆಸಬಹುದು. ಅದರಿಂದ ಆತನಿಗೂ ಮನೋಲ್ಲಾಸ ಸಿಗಲಿದೆ” ಎಂದಿದ್ದಾರೆ ಕೊಹ್ಲಿಯ ಬಾಲ್ಯದ ಗುರು ರಾಜ್ ಕುಮಾರ್ ಶರ್ಮಾ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ನಡೆದ ಐಪಿಎಲ್ ಟೂರ್ನಿಯಲ್ಲೂ ವಿರಾಟ್ ಕೊಹ್ಲಿ ತಮ್ಮ ಗುಣಮಟ್ಟಕ್ಕೆ ತಕ್ಕಂತೆ ಆಟ ಆಡಿರಲಿಲ್ಲ. ಐಪಿಎಲ್-2022 ಟೂರ್ನಿಯಲ್ಲಿ 16 ಪಂದ್ಯಗಳನ್ನಾಡಿದ್ದ ವಿರಾಟ್, 22.73ರ ಸರಾಸರಿಯಲ್ಲಿ ಕೇವಲ 115.98ರ ಸ್ಟ್ರೈಕ್”ರೇಟ್’ನೊಂದಿಗೆ 341 ರನ್ ಗಳಿಸಿದ್ದರು.
ಇದನ್ನೂ ಓದಿ : Virat Kohli form : ವಿರಾಟ್ ಕೊಹ್ಲಿ ಫಾರ್ಮ್ ಕಂಡುಕೊಳ್ಳಲು ಬಿಸಿಸಿಐ ಬಳಿಯಿದೆ ಜಬರ್ದಸ್ತ್ ಪ್ಲಾನ್
ಇದನ್ನೂ ಓದಿ : IND vs WI ODI Series: ವಿಂಡೀಸ್ ವಿರುದ್ಧದ ಏಕದಿನ ಸರಣಿ : ಟೀಮ್ ಇಂಡಿಯಾದ ಈ ಪಂಚಪಾಂಡವರ ಪಾಲಿಗೆ ಇಂಪಾರ್ಟೆಂಟ್
Virat Kohli Childhood Coach Rajkumar Sharma Waiting for Kohli