IND vs ENG 2nd T20 : ಚೆನ್ನೈ : ಭಾರತ ಹಾಗೂ ಇಂಗ್ಲೆಂಡ್ (in vs eng) ತಂಡಗಳ ನಡುವಿನ ಎರಡನೇ ಟಿ೨೦ ಪಂದ್ಯವು ಇಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಪಂದ್ಯದಲ್ಲಿ ಗೆದ್ದು ಬೀಗಿರುವ ಭಾರತ ಎರಡನೇ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡಕ್ಕೆ ಮಣ್ಣು ಮುಕ್ಕಿಸಲು ರಣತಂತ್ರ ಹೂಡಿದೆ. ಆದರೆ ಭಾರತಕ್ಕೆ ಅಭಿಷೇಕ್ ಶರ್ಮಾ ಗಾಯ ತಲೆನೋವಾಗಿ ಪರಿಣಮಿಸಿದೆ.
ಪಂದ್ಯ ಯಾವಾಗ: ಶನಿವಾರ, ಜನವರಿ 25 ರಂದು ಸಂಜೆ 7:00 IST
ಎಲ್ಲಿ: ಎಂಎ ಚಿದಂಬರಂ ಕ್ರೀಡಾಂಗಣ, ಚೆನ್ನೈ
IND vs ENG 2nd T20 : ಏನು ನಿರೀಕ್ಷಿಸಬಹುದು ?
ಒಂಬತ್ತು ಐಪಿಎಲ್ 2024 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಬೆನ್ನಟ್ಟಿದ ತಂಡಗಳು ಗೆದ್ದವು, ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 170. ಪಂದ್ಯದ ದ್ವಿತೀಯಾರ್ಧದಲ್ಲಿ ಇಬ್ಬನಿ ಪ್ರಮುಖ ಪಾತ್ರವಹಿಸುವ ಸಾಧ್ಯತೆಯಿದೆ. ಟಾಸ್ ಪಂದ್ಯಕ್ಕೆ ಪ್ರಮುಖ ಪಾತ್ರವಹಿಸಿಲಿದೆ.ಕಳೆದ ಐಪಿಎಲ್ ಪಂದ್ಯಗಳಲ್ಲಿ ಈ ಮೈದಾನದಲ್ಲಿ ವೇಗಿಗಳು ಹೆಚ್ಚು ಲಾಭವನ್ನು ಪಡೆದುಕೊಂಡಿದ್ದಾರೆ.
ಎರಡನೇ ಪಂದ್ಯಕ್ಕೆ ಮೊಹಮ್ಮದ್ ಶೆಮಿ ?
ಕೋಲ್ಕತ್ತಾದಲ್ಲಿ ನಡೆದ ಮೊದಲ ಟಿ20ಐ ಪಂದ್ಯದ ನಂತರ ಖ್ಯಾತ ಬೌಲರ್ ಮೊಹಮ್ಮದ್ ಶೆಮಿ ಯಾಕೆ ಆಡಲಿಲ್ಲ ಅನ್ನೋದು ಹಲವು ಪ್ರಶ್ನೆಯಾಗಿತ್ತು. ಆದರೆ ಇಂದಿನ ಪಂದ್ಯದಲ್ಲಿ ಶೆಮಿ ಆಡುವುದು ಬಹುತೇಕ ಖಚಿತವಾಗಿದೆ. 2023 ರ ವಿಶ್ವಕಪ್ ನಂತರ ಶಮಿ ಅಂತರರಾಷ್ಟ್ರೀಯ ತಂಡಕ್ಕೆ ಮರಳುವ ಮೊದಲ ಪಂದ್ಯ ಇದಾಗಿರಲಿದೆ. ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನೇತೃತ್ವದಲ್ಲಿ ಮೊಹಮ್ಮದ್ ಶೆಮಿ ಅತ್ಯುತ್ತಮ ಬೌಲಿಂಗ್ ನಿರ್ವಹಣೆಯನ್ನು ಮಾಡಿದ್ದಾರೆ.

ಭಾರತ ತಂಡಕ್ಕೆ ಮೊಹಮ್ಮದ್ ಶೆಮಿ ಆಗಮನ ಆನೆ ಬಲ ಬಂದಂತಾಗಿದೆ. ಭಾರತ ತಂಡದ ಆಡುವ ಬಳಗದಲ್ಲಿ ಶೆಮಿ ಕಾಣಿಸಿಕೊಂಡ್ರೆ ರವಿ ಬಿಷ್ಣೋಯ್ ತಂಡದಿಂದ ಹೊರಗಿಡುವ ಸಾಧ್ಯತೆಯಿದೆ. ಅಥವಾ ಮೊದಲ ಪಂದ್ಯದಲ್ಲಿ ನಿರೀಕ್ಷಿತ ಮಟ್ಟದ ಆಟವನ್ನು ಆಡದೇ ಇರುವ ನಿತೀಶ್ ರೆಡ್ಡಿ ಅವರನ್ನು ಹೊರಗಿಡುವ ಸಾಧ್ಯತೆಯಿದೆ. ಇನ್ನು ತರಬೇತಿಯ ವೇಳೆಯಲ್ಲಿ ಕಳೆದ ಪಂದ್ಯದ ಹಿರೋ ಅಭಿಷೇಕ್ ಶರ್ಮಾ ಗಾಯ ಮಾಡಿಕೊಂಡಿದ್ದಾರೆ.
ಬಲ ಪಾದಕ್ಕೆ ಪೆಟ್ಟಾಗಿರುವ ಕಾರಣಕ್ಕೆ ಅಭಿಷೇಕ್ ಶರ್ಮಾ ಅವರು ಬ್ಯಾಟಿಂಗ್ ಮಾಡಿರಲಿಲ್ಲ. ಇದು ತಂಡಕ್ಕೆ ತಲೆನೋವು ತರಿಸಿದೆ. ಆದರೂ ಕೂಡ ಅವರು ಇಂದಿನ ಪಂದ್ಯಕ್ಕೆ ಕಣಕ್ಕೆ ಇಳಿಯುತ್ತಾರಾ ? ಇಲ್ಲವೇ ಅನ್ನೋದು ಇನ್ನೂ ಖಚಿತವಾಗಿಲ್ಲ. ಒಂದೊಮ್ಮೆ ಅಭಿಷೇಕ್ ಶರ್ಮಾ ತಂಡದಿಂದ ಹೊರಗೆ ಬಿದ್ರೆ ಧ್ರುವ ಜುರೆಲ್ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.
ಭಾರತ ಸಂಭಾವ್ಯ XI ತಂಡ :
ಅಭಿಷೇಕ್ ಶರ್ಮಾ/ಧ್ರುವ್ ಜುರೆಲ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್ (ನಾಯಕ), ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಅಕ್ಷರ್ ಪಟೇಲ್, ನಿತೀಶ್ ರೆಡ್ಡಿ, ಅರ್ಶ್‌ದೀಪ್ ಸಿಂಗ್, ಮೊಹಮ್ಮದ್ ಶಮಿ/ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ
ಇಂಗ್ಲೆಂಡ್ ತಂಡದ ಕಳೆದ ಪಂದ್ಯದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಂಡಿತ್ತು. ಗಸ್ ಅಟ್ಕಿನ್ಸನ್ ಬದಲು ಬ್ರೈಡನ್ ಕಾರ್ಸೆ ಅವರನ್ನು ಕಣಕ್ಕೆ ಇಳಿಸಿತ್ತು. ಅಲ್ಲದೇ ಅನಾರೋಗ್ಯದ ಕಾರಣ ಜಾಕೋಬ್ ಬೆಥೆಲ್ ಶುಕ್ರವಾರ ಅಭ್ಯಾಸಕ್ಕೆ ಹಾಜರಾಗಲಿಲ್ಲ ಎಂದು ವರದಿಯಾಗಿದೆ. ಅಲ್ಲದೇ ಜೇಮೀ ಸ್ಮಿತ್ ಅವರನ್ನು 12ರ ಬಳಗಕ್ಕೆ ಸೇರ್ಪೆಡೆಗೊಳಿಸುವ ಸಾಧ್ಯತೆಯೂ ಇದೆ.

ಕಳೆದ ಪಂದ್ಯದ ಹೀರೋ ಎನಿಸಿಕೊಂಡಿರುವ ಅಭಿಷೇಕ್ ಶರ್ಮಾ ಅವರನ್ನು ಕಟ್ಟಿಹಾಕಲು ಸದ್ಯ ಇಂಗ್ಲೆಂಡ್ ತಂಡ ರಣತಂತ್ರವನ್ನು ಹೂಡಿದೆ. ಸದ್ಯ ಜೋಫ್ರಾ ಆರ್ಚರ್, ಮಾರ್ಕ್ ವುಡ್ ಮತ್ತು ಬ್ರೈಡನ್ ಕಾರ್ಸೆ ಉತ್ತಮ ಎಸೆತಗಾರಿಕೆಯನ್ನು ನಿಭಾಯಿಸುವ ತಾಕತ್ತು ಹೊಂದಿದ್ದಾರೆ. ಆದರೆ ಸೂರ್ಯ ಕುಮಾರ್ ಯಾದವ್ ಯಾವ ಹಂತದಲ್ಲಿ ಸ್ಪೋಟಕ ಆಟಕ್ಕೆ ಮನ ಮಾಡ್ತಾರೆ ಅನ್ನೋ ಭಯವೂ ಇಂಗ್ಲೆಂಡ್ ತಂಡವನ್ನು ಕಾಡುತ್ತಿದೆ.
ಇಂಗ್ಲೆಂಡ್ ತಂಡದ ಸಂಭಾವ್ಯ ಪ್ಲೇಯಿಂಗ್ XI:
ಬೆನ್ ಡಕೆಟ್, ಫಿಲಿಪ್ ಸಾಲ್ಟ್ (ವಿ.ಕೀ.), ಜೋಸ್ ಬಟ್ಲರ್ (ನಾಯಕ), ಹ್ಯಾರಿ ಬ್ರೂಕ್, ಲಿಯಾಮ್ ಲಿವಿಂಗ್‌ಸ್ಟೋನ್, ಜಾಕೋಬ್ ಬೆಥೆಲ್, ಜೇಮೀ ಓವರ್ಟನ್, ಬ್ರೈಡನ್ ಕಾರ್ಸೆ, ಜೋಫ್ರಾ ಆರ್ಚರ್, ಆದಿಲ್ ರಶೀದ್, ಮಾರ್ಕ್ ವುಡ್
Also read : ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿಶೇಷ ಚೇತನ ವಿದ್ಯಾರ್ಥಿ ಶಶಿಕಾಂತ ಹಿರೇಮಠ್
ಚೆಪಾಕ್ ಮೈದಾನದ ಬಗ್ಗೆ ನಿಮಗೆ ಗೊತ್ತಿದೆಯಾ ?
ಚೆಪಾಕ್ ಮೈದಾನದಲ್ಲಿ ನಡೆದ ಎರಡೂ ಪಂದ್ಯಗಳಲ್ಲಿಯೂ ಕೊನೆಯ ಎಸೆತದಲ್ಲಿಯೇ ಪಂದ್ಯ ನಿರ್ಣಯವಾಗಿತ್ತು. 2012 ರಲ್ಲಿ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತವನ್ನು ಒಂದು ರನ್ ನಿಂದ ಸೋಲಿಸಿತ್ತು. ಅಲ್ಲದೇ 2018 ರಲ್ಲಿ ಭಾರತ ವೆಸ್ಟ್ ಇಂಡೀಸ್ ಅನ್ನು ಆರು ವಿಕೆಟ್ ಗಳಿಂದ ಸೋಲಿಸಿತು.
100 ವಿಕೆಟ್ ಸರದಾರನಾಗ್ತಾರಾ ಆರ್ಶದೀಪ್ ಸಿಂಗ್ ?
ಅಂತರಾಷ್ಟ್ರೀಯ ಟಿ 20 ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಮೈಲುಗಲ್ಲು ಸಾಧಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಳ್ಳಲು ಆರ್ಶದೀಪ್ ಸಿಂಗ್ ಕೇವಲ ಮೂರು ವಿಕೆಟ್ ದೂರದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ದ ನಡೆಯಲಿರುವ ಪಂದ್ಯದಲ್ಲಿ ಅವರು ಮೂರು ವಿಕೆಟ್ ಪಡೆದುಕೊಂಡ್ರೆ ಅವರು ನೂರು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಳ್ಳಲಿದ್ದಾರೆ.
IND vs ENG 2nd t20 : Abhishek Sharma out? India-England team Playing XI