ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡ ಮೊದಲ ಡೇ -ನೈಟ್ ಟೆಸ್ಟ್ ಸರಣಿಯನ್ನು ಆಡುತ್ತಿದ್ದು, ಮೊದಲ ಟೆಸ್ಟ್ ನಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ದುಕೊಂಡಿದೆ. ಆದರೆ ಮೊದಲ ಟೆಸ್ಟ್ ನಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಯುವ ಓಪನರ್ ಪ್ರಥ್ವಿ ಶಾ ಎರಡೇ ಎಸೆತಗಳಲ್ಲಿ ಕ್ಲೀನ್ ಬೋಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಆಸೀಸ್‌ನ ಅನುಭವಿ ಎಡಗೈ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಅವರ ಅದ್ಭುತ ವೇಗಕ್ಕೆ ನಿರುತ್ತರರಾದ 21 ವರ್ಷದ ಬಲಗೈ ಆಟಗಾರ ಪ್ರಥ್ವಿ ಶಾ ತಾನೆದುರಿಸಿದ 2ನೇ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಆಫ್ ಸ್ಟಂಪ್‌ನ ಆಚೆಯಿದ್ದ ಚೆಂಡನ್ನು ಫುಟ್‌ವರ್ಕ್ ಇಲ್ಲದೇ ಆಡಲು ಮುಂದಾದ ಶಾ, ಇನ್‌ಸೈಡ್ ಎಡ್ಜ್ ಮೂಲಕ ಕ್ಲೀನ್ ಬೌಲ್ಡ್ ಆದರು.

ಆಸ್ಟ್ರೇಲಿಯಾ ನೆಲದಲ್ಲಿ ಆಡಿದ ಅನುಭವ ಹೊಂದಿರುವ ಭರವಸೆಯ ಆಟಗಾರ ಕೆ.ಎಲ್.ರಾಹುಲ್ ಹಾಗೂ ಯುವ ಆಟಗಾರ ಶುಭ್ ಮನ್ ಗಿಲ್ ಟೆಸ್ಟ್ ಸರಣಿಗೆ ಆಯ್ಕೆಯಾಗಿದ್ದರೂ ಕೂಡ ನಾಯಕ ವಿರಾಟ್ ಕೊಯ್ಲಿ ಪ್ರಥ್ವಿ ಶಾ ಅವರಿಗೆ 11ರ ಬಳಗದಲ್ಲಿ ಅವಕಾಶ ನೀಡಿದ್ದರು. ಈ ಬಾರಿಯ ಐಪಿಎಲ್ ಟೂರ್ನಿ ಹಾಗೂ ಈ ಹಿಂದಿನ ನ್ಯೂಜಿಲ್ಯಾಂಡ್ ಸರಣಿಯಲ್ಲಿಯೂ ಪ್ರಥ್ವಿ ಶಾ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿರಲಿಲ್ಲ.

ಇದರ ನಡುವಲ್ಲೇ ಆಸ್ಟ್ರೇಲಿಯಾ ವಿರುದ್ದದ ಮೊದಲ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಮಾಡಿದಾಗಲೇ ಸಾಕಷ್ಟು ವಿರೋಧಗಳು ಕೇಳಿಬಂದಿತ್ತು. ಇದೀಗ ಟೆಸ್ಟ್ ಪಂದ್ಯದಲ್ಲಿ ಸೊನ್ನೆ ಸುತ್ತುತ್ತಿದ್ದಂತೆಯೇ ಟ್ರೋಲಿಗರಿಗೆ ಪ್ರಥ್ವಿ ಶಾ ಆಹಾರವಾಗಿದ್ದಾರೆ.