ಕೊರೊನಾ ವೈರಸ್ ಸೋಂಕಿ ಹಿನ್ನೆಲೆಯಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ಈ ಬಾರಿ ದುಬೈಗೆ ಶಿಫ್ಟ್ ಆಗಿದೆ. ಪ್ರೇಕ್ಷಕರೇ ಇಲ್ಲದೇ ಐಪಿಎಲ್ ಪಂದ್ಯಾವಳಿ ಸಾಗಿ ಬರುತ್ತಿದೆ. ಜನರೆಲ್ಲಾ ಮನೆಯಲ್ಲಿ ಕುಳಿತು ನೆಚ್ಚಿನ ತಂಡಗಳಿಗೆ ಚಿಯರ್ ಅಪ್ ಮಾಡುತ್ತಿದ್ದಾರೆ. ಈ ನಡುವಲ್ಲೇ ಐಪಿಎಲ್ ಆರಂಭಿಕ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯ ವೀಕ್ಷಣೆಯ ಮೂಲಕ ಹೊಸ ದಾಖಲೆ ಬರೆದಿದೆ.

ಸೆಪ್ಟೆಂಬರ್ 19ರಂದು ಚೆನ್ನೈ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಆರಂಭಿಕ ಪಂದ್ಯ ನಡೆದಿದ್ದು ಈ ಪಂದ್ಯದಲ್ಲಿ ಚೆನ್ನೈ ತಂಡ ಗೆದ್ದು ಬೀಗಿತ್ತು. ಈ ಪಂದ್ಯವನ್ನು ಬರೋಬ್ಬರಿ 20 ಕೋಟಿ ಜನರು ವೀಕ್ಷಿಸಿದ್ದಾರೆ.

ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್ ಮಾಡಿದ್ದು ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (ಬಿಎಆರ್‌ಸಿ)ಯ ಪ್ರಕಾರ, ಅಭೂತಪೂರ್ವ 20 ಕೋಟಿ ಜನರು ಪಂದ್ಯವನ್ನು ವೀಕ್ಷಿಸಲು ಟ್ಯೂನ್ ಮಾಡಿದ್ದಾರೆ.

ಯಾವುದೇ ದೇಶದ ಯಾವುದೇ ಕ್ರೀಡಾ ಲೀಗ್ ನಲ್ಲಿ ಇದು ಆರಂಭಿಕ ದಿನದ ವೀಕ್ಷಣೆಯಲ್ಲಿ ದಾಖಲಾಗಿರುವುದರಲ್ಲಿ ಇದೇ ಹೆಚ್ಚು ಟ್ವೀಟ್ ಮಾಡಿದ್ದಾರೆ.

ಈ ಬಾರಿಯ ಐಪಿಎಲ್ ನಲ್ಲಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೇ ಇದ್ರೂ ಕೂಡ ಪಂದ್ಯಗಳು ಮಾತ್ರ ರೋಚಕತೆಯಿಂದ ಕೂಡಿರುತ್ತಿವೆ.

ಅಲ್ಲದೇ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರೇಕ್ಷಕರ ಗದ್ದಲ ಸದ್ದನ್ನು ವೀಕ್ಷಕ ವಿವರಣೆಯೊಂದಿಗೆ ನೀಡುತ್ತಿರೋದ್ರಿಂದಾಗಿ ಜನರಿಗೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದೆ ಅನ್ನೋ ಭಾವನೆ ವ್ಯಕ್ತವಾಗುತ್ತಿಲ್ಲ.

ಇನ್ನು ದಾಖಲೆಯ ವೀಕ್ಷಣೆಯನ್ನು ಕಂಡಿರುವ ಈ ಪಂದ್ಯ ಗೆಲ್ಲುವ ಮೂಲಕ ಐಪಿಎಲ್ ಟೂರ್ನಿಯಲ್ಲಿ ಒಟ್ಟಾರೆ 100 ಪಂದ್ಯಗಳ ಗೆದ್ದ ದಾಖಲೆಗೆ ಎಂಎಸ್ ಧೋನಿ ಭಾಜನರಾಗಿದ್ದಾರೆ.