ಬೆಂಗಳೂರು : ರಾಜ್ಯದಲ್ಲಿ ಮತ್ತೊಮ್ಮೆ ಬೆಳಗಾವಿ ರಾಜಕಾರಣ ( Belagavi politics ) ಗಮನ ಸೆಳೆದಿದೆ. ಸಿಡಿ ಪ್ರಕರಣ ದಿಂದ ಸಚಿವ ಸಂಪುಟದಿಂದ ಹೊರಬಿದ್ದ ರಮೇಶ್ ಜಾರಕಿಹೊಳಿ ಮರಳಿ ಸಂಪುಟ ಸೇರ್ಪಡೆ ಕಸರತ್ತು ನಡೆಸಿರುವಾಗಲೇ ಬೆಳಗಾವಿಯಲ್ಲಿ ಜಾರಕಿಹೊಳಿ ಬ್ರದರ್ಸ್ ಹೊರಗಿಟ್ಟು ಕತ್ತಿ ಹಾಗೂ ಸವದಿ ಸಭೆ ನಡೆಸಿದ್ದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ದಶಕಗಳ ವೈಮನಸ್ಸು ಮುರಿದಿರುವ ಬಿಜೆಪಿ ಹಿರಿಯ ಸಚಿವ ಉಮೇಶ್ ಕತ್ತಿ ಹಾಗೂ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಬೆಳಗಾವಿ ಬಿಜೆಪಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಹಾಗೂ ರಮೇಶ್ ಜಾರಕಿಹೊಳಿಯನ್ನು ಹೊರಗಿಟ್ಟು ಮಹತ್ವದ ಸಭೆ ನಡೆಸಿದ್ದಾರೆ.
ಈ ಸಭೆಯಿಂದ ಉದ್ದೇಶಪೂರ್ವಕವಾಗಿ ಜಾರಕಿಹೊಳಿ ಬ್ರದರ್ಸ್ ಹೊರಗಿಟ್ಟಿರೋದು ಈ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಸಭೆಯಲ್ಲಿ ಕತ್ತಿ ಹಾಗೂ ಲಕ್ಷ್ಮಣ್ ಸವದಿ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ಸಿಗದಂತೆನೋಡಿಕೊಳ್ಳಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ವಿವಾದಗಳಲ್ಲಿ ಸಿಲುಕಿಕೊಂಡಿರೋ ರಮೇಶ್ ಜಾರಕಿಹೊಳಿ ಬದಲು ಜಿಲ್ಲೆಯ ಇನ್ನುಳಿದ ಶಾಸಕರನ್ನು ಸಚಿವರನ್ನಾಗಿ ಮಾಡಲು ಹೈಕಮಾಂಡ್ ಮುಂದೇ ಬೇಡಿಕೆ ಇಡಲು ಕತ್ತಿ ಹಾಗೂ ಸವದಿ ನಿರ್ಧರಿಸಿದ್ದಾರಂತೆ.
ಬೆಳಗಾವಿ ಶಾಸಕ ಅಭಯ ಪಾಟೀಲ್ ಹಾಗೂ ಕುಡಚಿ ಶಾಸಕ ಪಿ.ರಾಜೀವ್ ರನ್ನು ಸಚಿವರನ್ನಾಗಿಸಲು ಸಿಎಂ ಹಾಗೂ ಹೈಕಮಾಂಡ್ ಮೇಲೆ ಒತ್ತಡ ಹೇರೋಣ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಈ ರಹಸ್ಯ ಸಭೆಯ ವಿಚಾರ ಬಹಿರಂಗವಾಗುತ್ತಿದ್ದಂತೆ ಜಾರಕಿಹೊಳಿ ಬ್ರದರ್ಸ್ ಸೂಕ್ತ ತಿರುಗೇಟು ನೀಡಿದ್ದು, ಸುದೀರ್ಘ ಪೇಸ್ ಬುಕ್ ಪೋಸ್ಟ್ ಮೂಲಕ ಬಾಲಚಂದ್ರ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಅಸಲಿಗೆ ಇದು ಬಿಜೆಪಿ ಸಭೆ ಅಲ್ಲ. ಅಥವಾ ಅಂತಹ ಮಹತ್ವದ ಸಭೆಯೂ ಅಲ್ಲ. ಇಲ್ಲಿ ಯಾರನ್ನು ಹೊರಗಿಟ್ಟು ಸಭೆ ನಡೆಸಲಾಗಿದೆ ಅನ್ನೋ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಯಾವ ನಾಯಕರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂಬುದು ಹೈಕಮಾಂಡ್ ಗಮನದಲ್ಲಿದೆ. 2008 ರಿಂದ ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದಿದ್ದಾರೆ.
ಇನ್ನು ಬೆಳಗಾವಿಯಲ್ಲಿ ನಡೆದ ಈ ಸಭೆಗೆ ಪ್ರತಿಯಾಗಿ ರಮೇಶ್ ಜಾರಕಿಹೊಳಿ ಕೂಡಾ ಗುಪ್ತ್ ಗುಪ್ತ್ ಸಭೆ ನಡೆಸಿದ್ದು, ಮಹೇಶ್ ಕುಮಟಳ್ಳಿ,ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ಹಲವರ ಜೊತೆ ಸಭೆ ನಡೆಸಿದ್ದಾರೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಚುನಾವಣೆಗೂ ಮುನ್ನವೇ ರಾಜಕೀಯ ಮೇಲಾಟಗಳು ಚುರುಕುಗೊಂಡಿವೆ.
ಇದನ್ನೂ ಓದಿ : ಸದ್ಯಕ್ಕೆ ವಿಸ್ತರಣೆಯಾಗಲ್ಲ ಸಂಪುಟ : ಆಕಾಂಕ್ಷಿಗಳಿಗೆ ಹೈಕಮಾಂಡ್ ಶಾಕ್
ಇದನ್ನೂ ಓದಿ : ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ : ಯಾವ ಸಚಿವರಿಗೆ ಯಾವ ಜಿಲ್ಲೆ, ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
(again start Belagavi politics, Jarakiholi brothers There was missed secret meeting)