Bone Marrow Transplant: ಬೆಂಗಳೂರು: ಕಿದ್ವಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ಥಲಸ್ಸೇಮಿಯಾ ಬಾಲಕನಿಗೆ ಮೊದಲ ಬಾರಿ ಅಸ್ಥಿಮಜ್ಜೆ ಚಿಕಿತ್ಸೆ ಯಶಸ್ವಿಯಾಗಿದೆ. ಬೆಂಗಳೂರಿನ ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ ಸಂಸ್ಥೆ ಈ ದಾಖಲೆ ನಿರ್ಮಿಸಿದ್ದು, ಅನುವಂಶಿಕ ರಕ್ತ ಕಾಯಿಲೆಗಳಲ್ಲಿ ಒಂದಾಗಿರುವ ಥಲಸ್ಸೆಮಿಯಾಕ್ಕೆ ಮೊದಲ ಬಾರಿಗೆ ಮಕ್ಕಳ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸಾ ವೆಚ್ಚವು ಅಂದಾಜು ಏಳರಿಂದ ಹದಿನೈದು ಲಕ್ಷ ರೂಪಾಯಿ ತಗುಲುತ್ತದೆ. ಆದರೆ ಕಿದ್ವಾಯಿ ಸಂಸ್ಥೆಯಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ. ಏಳು ವರ್ಷದ ಬಾಲಕನಿಗೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಚಿಕಿತ್ಸೆಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಮಾಡಲಾಗಿದ್ದು, ಪ್ರಧಾನ ಮಂತ್ರಿಗಳ ಪರಿಹಾರ ನಿಧಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ, ಎಸ್ಸಿಪಿ/ಟಿಎಸ್ಪಿ ಯೋಜನೆ, ಇಎಸ್ಐ ಮತ್ತು ಸಿಜಿಎಚ್ಎಸ್ ಯೋಜನೆಗಳನ್ನು ಬಳಸಿಕೊಂಡು ಉಚಿತವಾಗಿ ಈ ಚಿಕಿತ್ಸೆ ಮಾಡಲಾಗಿದೆ.

ಹುಟ್ಟಿನಿಂದಲೇ ಬೀಟಾ ಥಲಸ್ಸೆಮಿಯಾ ಕಾಯಿಲೆಯಿಂದ ಬಳಲುತ್ತಿದ್ದ ಏಳು ವರ್ಷದ ಬಾಲಕನಿಗೆ ಪ್ರತಿ ತಿಂಗಳು ರಕ್ತ ಬದಲಾವಣೆ ಮಾಡಬೇಕಾಗಿತ್ತು. ಬಾಲಕನಿಗೆ ಕೀಮೋಥೆರಪಿ ಮತ್ತು ಇಮ್ಯುನೋಥೆರಪಿ ಮಾಡಿ ನಂತರ ಬಾಲಕನ ಅಕ್ಕನಿಂದ ಸಂಗ್ರಹಿಸಲಾದ ಸ್ಟೆಮ್ ಸೆಲ್ ಇನ್ಫ್ಯೂಷನ್ ನಡೆಸಲಾಗಿದೆ.
ಇದನ್ನೂ ಓದಿ : ಮೈಸೂರು ದಸರಾ ವೀಕ್ಷಣೆಗೆ ಇಂದಿನಿಂದ ಆನ್ ಲೈನ್ ಟಿಕೆಟ್ ಮಾರಾಟ ಆರಂಭ; ಗೋಲ್ಡ್ ಕಾರ್ಡ್ ಗೆ 6500 ರೂ. ನಿಗದಿ
ಥಲಸ್ಸೆಮಿಯಾ ಮೇಜರ್ ಸಾಮಾನ್ಯ ಅನುವಂಶಿಕ ರಕ್ತ ಕಾಯಿಲೆಗಳಲ್ಲಿ ಒಂದಾಗಿದ್ದು, ಸಣ್ಣ ಗಾತ್ರದ ಕೆಂಪು ರಕ್ತ ಕಣಗಳ ಉತ್ಪಾದನೆ ಹೆಚ್ಚಾಗುತ್ತದೆ. ಇದರಿಂದ ರಕ್ತಹೀನತೆಗೆ ಮಾಸಿಕ ರಕ್ತ ವರ್ಗಾವಣೆ ಮತ್ತು ಕಬ್ಬಿಣಾಂಶದ ಅಗತ್ಯವಿರುತ್ತದೆ. ರಾಷ್ಟ್ರೀಯ ಆರೋಗ್ಯ ಮಿಷನ್ ಅಂಕಿಅಂಶಗಳ ಪ್ರಕಾರ ಥಲಸ್ಸೆಮಿಯಾ ಮೇಜರ್ ಗೆ ಪ್ರಮುಖ ಚಿಕಿತ್ಸೆ ಎಂದರೆ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟೇಷನ್ ಆಗಿದೆ.
ಕಿದ್ವಾಯಿ ಸಂಸ್ಥೆಯಲ್ಲಿ 100ನೇ ಅಸ್ಥಿಮಜ್ಜೆ ಕಸಿ ಇದಾಗಿದ್ದು, ಮೊದಲ ಪೀಡಿಯಾಟ್ರಿಕ್ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಅನ್ನು 2022 ರಲ್ಲಿ ನಡೆಸಲಾಯಿತು. ಅಂದಿನಿಂದ ಇಲ್ಲಿಯವರೆಗೆ ನೂರು ಪೀಡಿಯಾಟ್ರಿಕ್ ಮತ್ತು ವಯಸ್ಕರ ಅಸ್ಥಿಮಜ್ಜೆ ಕಸಿಗಳನ್ನು ಮಾಡಲಾಗಿದೆ.
ಕಿದ್ವಾಯಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಆಂಕೊಲಾಜಿ 14 ಹಾಸಿಗೆ ಸೌಲಭ್ಯ ಮತ್ತು ತೀವ್ರ ನಿಗಾ ಘಟಕವನ್ನು ಹೊಂದಿರುವ ಭಾರತದ ಅತಿದೊಡ್ಡ ಬೋನ್ ಮ್ಯಾರೋ ಟ್ರಾನ್ಸ್ ಪ್ಲಾಂಟ್ ಘಟಕವಾಗಿದ್ದು, ಕರ್ನಾಟಕ ರಾಜ್ಯದಲ್ಲಿ ಏಕೈಕ ಸ್ವಾಯತ್ತ ಸರ್ಕಾರಿ ಆಸ್ಪತ್ರೆಯಾಗಿದೆ.
ಇದನ್ನೂ ಓದಿ : ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ದಾಖಲಾಗೇ ಬಿಡ್ತು ಎಫ್ ಐಆರ್ ; ರಾಜೀನಾಮೆ ನೀಡ್ತಾರಾ ಸಿಎಂ?
Bangalore News Successful first bone marrow transplant to thalassemia child