ಬೆಂಗಳೂರು : ರಾಜ್ಯದಲ್ಲಿ ಅಧಿಕಾರಿಗಳು ಏನು ಮಾಡಿದ್ರೂ ನಡೆಯುತ್ತೇ ಅನ್ನೋ ನಡವಳಿಗೆ ಇನ್ನು ಮುಂದೆ ನಡೆಯೋದಿಲ್ಲ. ಅಧಿಕಾರಿಗಳು 15 ದಿನದೊಳಗೆ ತಮ್ಮ ಇಲಾಖೆಯ ಎಲ್ಲಾ ಫೈಲ್ ಕ್ಲಿಯರ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸಿಎಂ ಬಸವರಾಜ್ ಬೊಮ್ಮಾಯಿ ವಾರ್ನಿಂಗ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆಯೇ ಸಚಿವ ಸಂಪುಟ ಸಭೆಯನ್ನು ನಡೆಸಿ, ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮೂಲಕ ಹಣಕಾಸಿನ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ರಾಜ್ಯದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯವನ್ನು ಮಾಡುತ್ತೇನೆ. ಇನ್ನು ಮುಂದೆ ಅಧಿಕಾರಿಗಳು ಚಲ್ತಾ ಹೇ ಆಟಿಟ್ಯೂಡ್ ಮಾಡುವಂತಿಲ್ಲ ಎಂದು ಸೂಚಿಸಿದ್ದಾರೆ.
ನನ್ನದು ದಕ್ಷ, ಪ್ರಾಮಾಣಿಕ ಹಾಗೂ ಜನರಪರ ಆಡಳಿತ ಎಂದ ಬೊಮ್ಮಾಯಿ, ರಾಜ್ಯದಲ್ಲಿ ಆರ್ಥಿಕ ಶಿಸ್ತನ್ನು ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಅಧಿಕಾರಿಗಳು ತಮ್ಮ ಇಲಾಖೆ ಯಲ್ಲಿನ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಯೋಜನೆಗಳಿಗೆ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗದ ರೀತಿಯಲ್ಲಿ ಕನಿಷ್ಠ ಶೇ.5 ರಷ್ಟನ್ನು ಉಳಿಕೆ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಜನರ ಅನುಕೂಲಕ್ಕಾಗಿ ಫೈಲ್ ಕ್ಲಿಯರ್ ಡ್ರೈವ್ ಕಾರ್ಯವನ್ನು ಆರಂಭ ಮಾಡಲಾಗುತ್ತಿದೆ. ಹೀಗಾಗಿ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಬಾಕಿ ಉಳಿದಿರುವ ಫೈಲ್‌ಗಳನ್ನು ಕೇವಲ 15 ದಿನಗಳ ಒಳಗಾಗಿ ಕಡ್ಡಾಯವಾಗಿ ಕ್ಲಿಯರ್ ಮಾಡಲೇ ಬೇಕು ಎಂದು ಸೂಚಿಸಿದ್ದಾರೆ.