ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಸಂಕಷ್ಟಕ್ಕೆ ಸಿಲುಕಿದೆ. ಲಾಕ್ ಡೌನ್ ಹೇರಿಕೆಯಿಂದಾಗಿ ಹಲವರು ಉದ್ಯೋಗ ಕಳೆದುಕೊಂಡಿದ್ದಾರೆ. ಹಲವಾರ ಸಂಸ್ಥೆಗಳಿಗೆ ಬೀಗ ಬಿದ್ದಿದೆ. ಆದರೆ ಕೊರೊನಾ ಸೋಂಕಿನ ಆರ್ಭಟದ ನಡುವಲ್ಲೇ ರಾಜ್ಯದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.

ರಾಜ್ಯದಲ್ಲಿ ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಮದ್ಯ ಮಾರಾಟದಿಂದ ಬಂದ ಆದಾಯಕ್ಕಿಂತಲೂ, ಈ ಬಾರಿಯ ಲಾಕ್ ಡೌನ್ ಹೇರಿಕೆಯಿಂದಾಗಿ ಆದಾಯ ಕೊಂಚ ಕಡಿಮೆಯಾಗಿದೆ. ಆದರೆ ಮೇ ತಿಂಗಳಿಂದ ಸೆಪ್ಟೆಂಬರ್ವರೆಗೆ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.

ಕಳೆದ ಬಾರಿ ಬರೋಬ್ಬರಿ 10,880 ಕೋಟಿ ರೂಪಾಯಿ ಆದಾಯ ಮದ್ಯ ಮಾರಾಟದಿಂದ ಹರಿದುಬಂದಿದ್ದರೆ, ಈ ಬಾರಿ 9,518 ಕೋಟಿ ರೂಪಾಯಿ ಆದಾಯ ಸರಕಾರದ ಬೊಕ್ಕಸಕ್ಕೆ ತುಂಬಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 1,362 ಕೋಟಿ ರೂ. ಕಡಿಮೆಯಾಗಿದೆ. ಆದರೆ ಸರಿ ಸುಮಾರು ಎರಡು ತಿಂಗಳ ಕಾಲ ಹೇರಿಕೆಯಾದ ಲಾಕ್ ಡೌನ್ ಎಫೆಕ್ಟ್ ನಿಂದ ಕೊಂಚ ಕಡಿಮೆಯಾಗಿದೆ. ಆದರೆ ಲಾಕ್ ಡೌನ್ ತೆರವಿನ ಬೆನ್ನಲ್ಲೇ ಮಾರಾಟ ದಾಖಲೆ ಬರೆದಿದೆ.

ಮೇ ತಿಂಗಳಿನಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ದೊರೆಯುತ್ತಿದ್ದಂತೆಯೇ ಒಂದೇ ತಿಂಗಳಲ್ಲಿ ಬರೋಬ್ಬರಿ 1,397 ಕೋಟಿ ರೂ. ಆದಾಯ ಹರಿದುಬಂದಿತ್ತು. ಅಲ್ಲದೇ ಜೂನ್‌ನಲ್ಲಿ 2,549 ಕೋಟಿ ರೂ., ಜುಲೈನಲ್ಲಿ 1,904 ಕೋಟಿ ರೂ., ಆಗಸ್ಟ್‌ನಲ್ಲಿ 1,830 ಕೋಟಿ ರೂ. ಹಾಗೂ ಸೆಪ್ಟಂಬರ್‌ನಲ್ಲಿ 1,936 ಕೋಟಿ ರೂ. ಆದಾಯ ಮದ್ಯ ಮಾರಾಟದಿಂದಲೇ ಬಂದಿದೆ. ಇನ್ನು ಈ ಬಾರಿ ಬರೋಬ್ಬರಿ 249.49 ಲಕ್ಷ ಬಾಕ್ಸ್ ಇಂಡಿಯನ್ ಮೇಡ್ ಲಿಕ್ಕರ್ (ಐಎಂಎಲ್) ಮಾರಾಟವಾಗಿದೆ.

ಕೊರೊನಾ ಕಾರಣದಿಂದಾಗಿ ಸ್ವಲ್ಪ ಪ್ರಮಾಣದಲ್ಲಿ ಅಬಕಾರಿ ಇಲಾಖೆಯ ಆದಾಯಕ್ಕೆ ಕುತ್ತು ಬಂದಿದೆ. ಆದರೆ ಆರ್ಥಿಕ ಸಂಕಷ್ಟವಿದ್ದರೂ ಕೂಡ ಜನರು ಮದ್ಯ ಸೇವನೆಯಿಂದ ಮಾತ್ರ ಹಿಂದೆ ಬಿದ್ದಿಲ್ಲ ಅನ್ನೋದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ.