ಬೆಂಗಳೂರು : ಕರ್ನಾಟಕ ಸರಕಾರ ರಾಜ್ಯದ ಜನರಿಗಾಗಿ ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಯನ್ನು ಜಾರಿಗೊಳಿಸಿದೆ. ವರಮಹಾಲಕ್ಷ್ಮೀ ಹಬ್ಬದ ಬೆನ್ನಲ್ಲೇ ರಾಜ್ಯ ಸರಕಾರ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಕರ್ನಾಟಕ ಸರಕಾರ ಈ ಯೋಜನೆಗೆ ಗೃಹ ಆರೋಗ್ಯ ಯೋಜನೆ (Gruha Arogya) ಎಂದು ನಾಮಕರಣ ಮಾಡಲಾಗಿದೆ. ಈ ಯೋಜನೆಯ ಮೂಲಕ ವೈದ್ಯರು ಮನೆ ಬಾಗಿಲಿಗೆ ಬರಲಿದ್ದಾರೆ. ಅಷ್ಟಕ್ಕೂ ಈ ಯೋಜನೆಯ ಲಾಭಗಳೇನು ಅನ್ನೋ ವರದಿ ಇಲ್ಲಿದೆ.
ಗೃಹ ಆರೋಗ್ಯ ಯೋಜನೆ ಬಡವರ ಪಾಲಿನ ಸಂಜೀವಿನಿ. ಈ ಯೋಜನೆಯ ಮೂಲಕ ಪ್ರತಿಯೊಬ್ಬರ ಮನೆ ಬಾಗಿಲಿಗೆ ವೈದ್ಯರನ್ನು ಕಳುಹಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆಯ್ದ ಸಮಸ್ಯೆಗಳಿಗೆ ಉಚಿತ ಔಷಧಿಗಳನ್ನು ಸ್ಥಳದಲ್ಲಿಯೇ ವಿತರಿಸಲಾಗುತ್ತದೆ. ಈಗಾಗಲೇ ‘ಗೃಹ ಆರೋಗ್ಯ’ ಯೋಜನೆಯನ್ನು ಜಾರಿಗೆ ತರಲು ಸರಕಾರ ನಿರ್ಧರಿಸಿದೆ. ಮೊದಲಿಗೆ ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿಯಾಗಲಿದ್ದು, ನಂತರ ಇತರ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಯೋಜನೆ ಸಿದ್ಧಪಡಿಸಲಾಗಿದೆ. ಸಮಸ್ಯೆ ಉಲ್ಬಣಗೊಂಡ ನಂತರ ಚಿಕಿತ್ಸೆ ನೀಡುವ ಬದಲು, ರೋಗ ಕಾಣಿಸಿಕೊಳ್ಳುವ ಮೊದಲು ಪರೀಕ್ಷಿಸಿ ಚಿಕಿತ್ಸೆ ನೀಡಲಾಗುತ್ತದೆ.

ಗೃಹ ಆರೋಗ್ಯ ಯೋಜನೆಯಡಿ ಆರೋಗ್ಯ ಸಿಬ್ಬಂದಿ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಎಲ್ಲ ಸದಸ್ಯರನ್ನು ತಪಾಸಣೆ ಮಾಡುತ್ತಾರೆ. ಬಿಪಿ, ಮಧುಮೇಹದಂತಹ ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲೇ ಔಷಧ ನೀಡಿ, ಸಂಕೀರ್ಣ ಪ್ರಕರಣಗಳನ್ನು ಪತ್ತೆ ಹಚ್ಚಿ, ಗಂಭೀರ ಸಮಸ್ಯೆ ಇರುವವರನ್ನು ಗುರುತಿಸಿ ಸೂಕ್ತ ಚಿಕಿತ್ಸೆಗೆ ಶಿಫಾರಸು ಮಾಡಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಇದನ್ನೂ ಓದಿ : ಸೋಲಿನಲ್ಲೇ ಕೊನೆಯಾಯ್ತಾ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯ : ಅಂತಿಮ ನಿರ್ಧಾರ ಪ್ರಕಟಿಸಿದ ಎಚ್‌ಡಿಕೆ

ಆಗಸ್ಟ್ 30 ರಂದು ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ :
ರಾಜ್ಯ ಕಾಂಗ್ರೆಸ್ ಸರಕಾರವು ತನ್ನ ಮಹತ್ವಾಕಾಂಕ್ಷೆಯ ಗೃಹ ಲಕ್ಷ್ಮಿ ಯೋಜನೆಯನ್ನು (ಎಲ್ಲಾ ಅರ್ಹ ಕುಟುಂಬಗಳ ಮಹಿಳಾ ಮುಖ್ಯಸ್ಥರಿಗೆ ರೂ. 2,000 ಮಾಸಿಕ ಧನಸಹಾಯ) ಆಗಸ್ಟ್ 30 ರಂದು ಮೈಸೂರಿನಲ್ಲಿ ಪ್ರಾರಂಭಿಸಲು ಸಿದ್ದತೆ ನಡೆಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ. ಶಿವಕುಮಾರ್ ಅವರು ತಿಳಿಸಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯತ್ (ZP) ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಯೋಜನೆಯ ಜಾರಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ.
ಮೇ ತಿಂಗಳಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ಸರ್ಕಾರ ನೀಡಿದ ಐದು ಚುನಾವಣಾ ಪೂರ್ವ ಭರವಸೆಗಳಲ್ಲಿ ಗೃಹ ಲಕ್ಷ್ಮಿ ಯೋಜನೆಯೂ ಒಂದು. ಮೈಸೂರು ಭಾಗದ ಹಲವು ಜಿಲ್ಲೆಗಳ 1.5 ಲಕ್ಷಕ್ಕೂ ಅಧಿಕ ಫಲಾನುಭವಿ ಮಹಿಳೆಯರ ಸಮ್ಮುಖದಲ್ಲಿ ಆಗಸ್ಟ್ 30 ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ಅಧಿಕೃತ ಉದ್ಘಾಟನೆ ನಡೆಯಲಿದೆ.
ಈಗಾಗಲೇ ರಾಜ್ಯ ಸರಕಾರ ಗೃಹಲಕ್ಷ್ಮೀ ಯೋಜನೆಯ ಜಾರಿಗೆ ಹಲವು ದಿನಾಂಕಗಳನ್ನು ಪ್ರಕಟಿಸಿತ್ತು. ಇದೀಗ ರಾಜ್ಯದ ಹಲವು ಕಡೆಗಳಲ್ಲಿ ಈ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಲಿದೆ. ಕಾಂಗ್ರೆಸ್ ಪಕ್ಷ ಐದು ಗ್ಯಾರಂಟಿ ಯೋಜನೆಗಳ ಮೂಲಕವೇ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಏರಿತ್ತು. ಕಾಂಗ್ರೆಸ್‌ನ ಉನ್ನತ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಸಂಪುಟದ ಸಚಿವರು ಮತ್ತು ಕಾಂಗ್ರೆಸ್ ನಾಯಕರು ಬೃಹತ್ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಸಭೆಗೆ ಜಿಪಂ ಸಭಾಂಗಣಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಪೈಪೋಟಿ ನಡೆಸಿ ಹಾರ ಹಾಕಿ ಸ್ವಾಗತಿಸಿದರು.
Gruha Arogya: Good News, Karnataka Govt Announced Another New Scheme For People