ಒಂದೆಡೆ ಸಿಎಂ ಸಿದ್ಧರಾಮಯ್ಯ ತಮ್ಮ ಹುದ್ದೆ ಉಳಿಸಿಕೊಳ್ಳೋ ಟೆನ್ಸನ್ ನಲ್ಲಿದ್ದಾರೆ. ಇನ್ನೊಂದೆಡೆ ನಾಡಿನ ಹೆಂಗಳೆಯರು ಕೂಡ ತಲೆಕೆಡಿಸಿಕೊಂಡಿದ್ದಾರೆ. ಅಯ್ಯೋ ಸಿದ್ಧು ಟೆನ್ಸನ್ ಗೂ , ಮಹಿಳೆಯರ ಬೇಸರಕ್ಕೂ ಏನು ಸಂಬಂಧ ಅಂತಿರಾ. ಸಂಬಂಧವಿದೆ. ಮುಡಾದಿಂದ ಕುರ್ಚಿ ಉಳಿಸಿಕೊಳ್ಳೋ ಆತಂಕದಲ್ಲಿದ್ದಾರೆ ಸಿಎಂ. ಇನ್ನೊಂದೆಡೆ ಕಳೆದ ಮೂರು ತಿಂಗಳಿನಿಂದ ಬರದೇ ಇರೋ ಗೃಹಲಕ್ಷ್ಮೀ ಹಣ ಈ ತಿಂಗಳು ಬರೋದಿಲ್ಲ ಅನ್ನೋದು ಮಹಿಳೆಯರ ಲೆಕ್ಕಾಚಾರ. ಹೀಗಾಗಿ ಮಹಿಳೆಯರು ಸರ್ಕಾರಕ್ಕೆ ಹಿಡಿಶಾಪ ಹಾಕ್ತಿದ್ದಾರೆ.
ರಾಜ್ಯದ ಒಂದೂವರೆ ಕೋಟಿಗೂ ಅಧಿಕ ಬಡ ಹಾಗೂ ಮಧ್ಯಮವರ್ಗದ ಫಲಾನುಭವಿ ಮಹಿಳೆಯರಿಗೆ ಸರ್ಕಾರ ಪ್ರತಿತಿಂಗಳು 2 ಸಾವಿರ ರೂಪಾಯಿ ನೀಡುತ್ತಿದೆ. ಒಂದಿಷ್ಟು ತಿಂಗಳು ಸಾರಾಸಗಾಟಾಗಿ ಅಕೌಂಟ್ ಗೆ ಬಂದು ಬಿದ್ದ ಹಣ ಈಗ ನಾಪತ್ತೆಯಾಗಿದೆ. ಕೋಟ್ಯಾಂತರ ಮಹಿಳೆಯರ ಪೈಕಿ ಕೇವಲ 1.21 ಕೋಟಿ ಮಹಿಳೆಯರಿಗೆ ಮಾತ್ರ ಗೃಹಲಕ್ಷ್ಮೀ ಹಣ ಸಂದಾಯವಾಗುತ್ತಿದೆ. ಇನ್ನೂ ಅಂದಾಜು 17 ಲಕ್ಷಕ್ಕೂ ಅಧಿಕ ಮಹಿಳೆಯರು ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ.

ಅರ್ಜಿ ಸಲ್ಲಿಸಿದ ಕೋಟ್ಯಾಂತರ ಮಹಿಳೆಯರ ಪೈಕಿ ಇನ್ನೂ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದಾರೆ. ಆಧಾರ ಕಾರ್ಡ್ ನ ಸಮಸ್ಯೆ, ಮನೆಯ ರೇಶನ್ ಕಾರ್ಡ್ ನಲ್ಲಿ ಹೆಸರಿನ ಸಮಸ್ಯೆ ಹೀಗೆ ನಾನಾ ಟೆಕ್ನಿಕಲ್ ಸಮಸ್ಯೆಯಿಂದ ಒಂದೊಂದು ಗ್ರಾಮದ ಬಹುತೇಕ ಮಹಿಳೆಯರು ಯೋಜನೆಯಿಂದ ವಂಚಿತರಾಗಿದ್ದಾರೆ,
ಇನ್ನಷ್ಟು ಮಹಿಳೆಯರು ಪ್ರತಿನಿತ್ಯ ಬ್ಯಾಂಕ್, ತಹಶೀಲ್ದಾರ ಕಚೇರಿ, ಆಧಾರ್ ಅಪ್ಡೇಟ್ ಎಂದೆಲ್ಲ ಓಡಾಡಿ ಎರಡು ಸಾವಿರ ದಕ್ಕುವಂತೆ ಮಾಡಿಕೊಂಡಿದ್ದಾರೆ. ಆದರೆ ಇಷ್ಟೆಲ್ಲ ಸರ್ಕಸ್ ಬಳಿಕ ಈಗ ಗೃಹಲಕ್ಷ್ಮೀ ಬರಿದಾದಂತಿದೆ. ಕಳೆದ ಜುಲೈ ನಿಂದ ಮಹಿಳೆಯರ ಖಾತೆಗೆ ಎರಡು ಸಾವಿರ ರೂಪಾಯಿ ಬಿದ್ದಿಲ್ಲ.
ಈ ಬಗ್ಗೆ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಸರ್ಕಾರ ವರಮಹಾಲಕ್ಷ್ಮೀ ಹಬ್ಬದ ಹೊತ್ತಿಗೆ ಆಯ್ದ ಕೆಲ ಜಿಲ್ಲೆಗಳ ಹೆಣ್ಣುಮಕ್ಕಳ ಅಕೌಂಟ್ ಗೆ ಹಣ ಹಾಕಿತ್ತು. ಆದರೆ ಎಲ್ಲರ ಮಹಿಳೆಯರಿಗೂ ಗೃಹಲಕ್ಷ್ಮೀ ದರ್ಶನವಾಗಿಲ್ಲ.
ಇನ್ನೂ ಗೃಹಲಕ್ಷ್ಮೀ ಯೋಜನೆ ವಿಚಾರದಲ್ಲಿ ಸ್ಪೋಟಕ ಸಂಗತಿಯೊಂದು ಬಯಲಾಗಿದೆ. ಇನ್ನು ಬಹುತೇಕ ಗೃಹ ಲಕ್ಷ್ಮೀ ಹಣ ಬರೋದು ಅನುಮಾನ ಎನ್ನಲಾಗ್ತಿದೆ. ಜುಲೈ,ಅಗಸ್ಟ್ ಹಾಗೂ ಸಪ್ಟೆಂಬರ್ ಒಟ್ಟು ಮೂರು ತಿಂಗಳ ಹಣ ಬರಬೇಕಿದೆ. ಈ ಹಿಂದೆ ಮಹಿಳೆಯರನ್ನು ಸಮಾಧಾನಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಜೂನ್ ಮತ್ತು ಜುಲೈ ತಿಂಗಳ ಹಣವನ್ನು ಒಟ್ಟಿಗೆ ನಿಮ್ಮ ಅಕೌಂಟ್ ಗೆ ಹಾಕುತ್ತೇವೆ. ಮುಂದಿನ ತಿಂಗಳಿನಿಂದ ಪ್ರತಿತಿಂಗಳು ಅಕೌಂಟ್ ಝಣ ಝಣ ಕಾಂಚಾಣ ಬೀಳುತ್ತೆ ಎಂದಿದ್ದರು. ಆದರೆ ಕೇವಲ ಜೂನ್ ತಿಂಗಳ ಹಣ ಬಂದಿದ್ದು ಬಿಟ್ಟರೇ ಮತ್ತೆ ಮಹಿಳೆಯರು 2 ಸಾವಿರ ರೂಪಾಯಿ ಮುಖ ನೋಡಿಲ್ಲ.

ಆದರೆ ಆರ್ಥಿಕ ಇಲಾಖೆ ಮೂಲಗಳ ಮಾಹಿತಿ ಪ್ರಕಾರ, ಮೂರು ತಿಂಗಳ ಹಣವನ್ನು ಒಂದೆ ಸಲಕ್ಕೆ ರಿಲೀಸ್ ಮಾಡೋದಾದರೇ ಅಂದಾಜು 7000 ಕೋಟಿ ರೂಪಾಯಿ ಅಗತ್ಯವಿದೆ. ಈಗಿರುವ ಸ್ಥಿತಿಯಲ್ಲಿ ಸರ್ಕಾರ ಯಾವ ಕಾರಣಕ್ಕೂ 7000 ಕೋಟಿ ರೂಪಾಯಿ ರಿಲೀಸ್ ಮಾಡುವ ಸ್ಥಿತಿಯಲ್ಲಿಲ್ಲ. ಹೀಗಾಗಿ ಜೂನ್ ಜುಲೈ ಹಾಗೂ ಅಗಸ್ಟ್ ತಿಂಗಳ ಹಣಕ್ಕೆ ಎಳ್ಳು ನೀರು ಬಿಟ್ಟಂತೆ. ಇನ್ನು ಸಪ್ಟೆಂಬರ್ ತಿಂಗಳೊಂದಕ್ಕೆ ಸಹಾಯಧನ ವಿತರಣೆಗೆ ಬರೋಬ್ಬರಿ 2500 ಕೋಟಿ ಅಗತ್ಯವಿದೆ.. ಆ ಹಣವನ್ನು ರಿಲೀಸ್ ಮಾಡೋದು ಅನುಮಾನ ಎನ್ನಲಾಗ್ತಿದೆ.
ಅದರಲ್ಲೂ ಈಗ ಸಿಎಂ ಮುಡಾ ಹಗರಣದ ಟೆನ್ಸನ್ ನಲ್ಲಿದ್ದಾರೆ. ಸರ್ಕಾರ ಉಳಿಯುವುದೇ ಅನುಮಾನ ಎನ್ನಲಾಗ್ತಿದೆ ಇಂಥ ಹೊತ್ತಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಯಾಗೋದಿಲ್ಲ. ಹೀಗಾಗಿ ಗೃಹಲಕ್ಷ್ಮೀಯರ ಅಕೌಂಟ್ ಖಾಲಿಯಾಗೇ ಉಳಿಯೋದು ನಿಶ್ಚಿತ.