ಬೆಂಗಳೂರು : ಮಾಡದ ತಪ್ಪಿಗೆ ಸೌದಿಯಲ್ಲಿ ಜೈಲು ಪಾಲಾಗಿದ್ದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಬೀಜಾಡಿಯ ನಿವಾಸಿ ಹರೀಶ್ ಬಂಗೇರ ಕೊನೆಗೂ ತಾಯ್ನಾಡಿಗೆ ಮರಳಿದ್ದಾರೆ. ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಆಗಮಿಸಿದ್ದ ಅವರನ್ನು ಏರ್‌ಪೋರ್ಟ್‌ನಲ್ಲಿ ಸ್ವಾಗತಿಸಲಾಗಿದೆ.

ಹರೀಶ್ ಬಂಗೇರ ಅವರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆಯನ್ನು ತೆರೆದು ಅದರಲ್ಲಿ ಮೆಕ್ಕಾ ಹಾಗೂ ಸೌದಿಯ ದೊರೆಯ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಅರಬ್ ರಾಷ್ಟ್ರಗಳಲ್ಲಿ ಭಾರೀ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಸೌದಿ ಪೊಲೀಸರು ಹರೀಶ್ ಬಂಗೇರ ಅವರನ್ನು ಬಂಧಿಸಿದ್ದರು.

ಆದರೆ ಹರೀಶ್ ಬಂಗೇರ ಅವರು ನಿರಪರಾಧಿ ಎಂದು ಸಾಭೀತು ಪಡಿಸಲು ಲೋಕೇಶ್ ಅಂಕದಕಟ್ಟೆ ಹಾಗೂ ಅವರ ತಂಡ, ಕುಟುಂಬಸ್ಥರು ಹಾಗೂ ಉಡುಪಿ ಪೊಲೀಸರು ಸಾಕಷ್ಟು ಶ್ರಮವಹಿಸಿದ್ದರು. ಈ ನಡುವಲ್ಲೇ ಸುಮಾರು ಒಂದು ವರ್ಷ ಏಳು ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದ ಹರೀಶ್ ಬಂಗೇರ ಕೊನೆಗೂ ಬಿಡುಗಡೆಯಾಗಿದ್ದಾರೆ.

ಸೌದಿ ಅರೇಬಿಯಾ ವಿಮಾನ ನಿಲ್ದಾಣದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಇಂದು ಮುಂಜಾನೆ 6.30ಕ್ಕೆ ಬಂದಿಳಿದ ಹರೀಶ್ ಬಂಗೇರ ಅವರನ್ನು ಪತ್ನಿ, ಮಗು ಹಾಗೂ ಹರೀಶ್ ಬಂಗೇರ ಬಿಡುಗಡೆಗೆ ಶ್ರಮಿಸಿದ್ದ ಲೋಕೇಶ್ ಅಂಕದಕಟ್ಟೆ ಅವರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ಮಾಡದ ತಪ್ಪಿಗೆ ಸೌದಿಯಲ್ಲಿ ಹರೀಶ್ ಬಂಗೇರ ಜೈಲು ಪಾಲಾಗುತ್ತಿದ್ದಂತೆಯೇ ಸಾಕಷ್ಟು ಮಂದಿ ಹೋರಾಟ ನಡೆಸಿದ್ದಾರೆ. ಅದ್ರಲ್ಲೂ ಲೋಕೇಶ್ ಅಂಕದಕಟ್ಟೆ ಹಾಗೂ ಅವರ ಸ್ನೇಹಿತರು ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದಾರೆ. ಮಾತ್ರವಲ್ಲ ಸಾಮಾಜಿಕ ಕಾರ್ಯಕರ್ತ ಡಾ. ರವೀಂದ್ರನಾಥ್ ಶ್ಯಾನುಭಾಗ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಕೆ. ಜಯಪ್ರಕಾಶ್ ಹೆಗ್ಡೆ, ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಪೊಲೀಸ್ ಅಧಿಕಾರಿ ಕಮಲಪಂತ್ ಸೇರಿದಂತೆ ಹಲವರು ಸಹಕಾರ ನೀಡಿದ್ದರು. ಹರೀಶ್ ಬಂಗೇರ ಆಗಮನಕ್ಕೆ ಸಂಸದೆ ಶೋಭಾ ಕರಂದ್ಲಾಜೆ ಕೂಡ ಟ್ವೀಟ್ ಮಾಡಿದ್ದಾರೆ. ಹರೀಶ್ ಬಂಗೇರ ಬಿಡುಗಡೆ ಸಹಕರಿಸಿದ ಕೇಂದ್ರ ನಾಯಕರಿಗೆ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ : ಮಾಡದ ತಪ್ಪಿಗೆ 3 ವರ್ಷ ಶಿಕ್ಷೆ : ಸೌದಿ ಜೈಲಿನಿಂದ ಬಿಡುಗಡೆ, ಆ.18 ಕ್ಕೆ ಹುಟ್ಟೂರಿಗೆ ಹರೀಶ್ ಬಂಗೇರ