KUMARASWAMY ; ಬೆಂಗಳೂರು: ಐಪಿಎಸ್ ಅಧಿಕಾರಿ ಎಂ. ಚಂದ್ರಶೇಖರ್ ಮತ್ತು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಡುವಿನ ಸಂಘರ್ಷ ಮುಂದುವರಿದಿದೆ.
ಲೋಕಾಯುಕ್ತ ಎಡಿಜಿಪಿ ಅಗಿರುವ ಚಂದ್ರಶೇಖರ್ (ADGP CHANDRASHEKAR) ವಿರುದ್ಧ ಜಾತ್ಯಾತೀತ ಜನತಾದಳ ಇಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರನ್ನೂ ನೀಡಲಾಗಿದೆ.ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ನೇತೃತ್ವದಲ್ಲಿ ದೂರು ಡಿಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿ ಮಾಡಿದ ಜೆಡಿಎಸ್ ನಿಯೋಗ ಎಡಿಜಿಪಿ ಚಂದ್ರಶೇಖರ್ ಮೇಲೆ ಕ್ರಮ ಜರುಗಿಸುವಂತೆ ಮನವಿ ಮಾಡಿದೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿರುವ ಜೆಡಿಎಸ್ ರಾಜ್ಯ ಕಚೇರಿ ಮುಂಭಾಗದಲ್ಲಿ ಬೆಂಗಳೂರು ಮಹಾನಗರ ಘಟಕದ ಅಧ್ಯಕ್ಷ ಹೆಚ್.ಎಂ. ರಮೇಶ್ ಗೌಡ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎನ್. ತಿಪ್ಪೇಸ್ವಾಮಿ, ಟಿ.ಎ. ಶರವಣ, ಟಿ.ಎನ್. ಜವರಾಯಿ ಗೌಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ ಭಾಗವಹಿಸಿದ್ದರು. ನಂತರ ಜೆಡಿಎಸ್ ಕಚೇರಿಯಿಂದ ಮುಖ್ಯರಸ್ತೆಯವರೆಗೂ ಮೆರವಣಿಗೆ ನಡೆಸಿದ ಜೆಡಿಎಸ್ ಕಾರ್ಯಕರ್ತರು ಐಪಿಎಸ್ ಅಧಿಕಾರಿ ಚಂದ್ರಶೇಖರ್ ವಿರುದ್ಧ ಧಿಕ್ಕಾರ ಘೋಷಣೆ ಕೂಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.
ಇದೇ ವೇಳೆ ನವದೆಹಲಿಯಲ್ಲಿ ಇಂದು ಎಡಿಜಿಪಿ ಚಂದ್ರಶೇಖರ್ ಕುರಿತಾಗಿ ಮಾತನಾಡಿದ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ನಾನು ಒಬ್ಬ ಅಧಿಕಾರಿಯ ಕರ್ಮಕಾಂಡದ ಬಗ್ಗೆ ಮಾತಾಡಿದ್ದೆ, ಆದರೆ, ಅವರು ನನ್ನ ಜೈಲಿಗೆ ಕಳಿಸುವ ತಿರುಕನ ಕನಸು ಕಾಣುತ್ತಿದ್ದಾರೆ. ಅವರು ಎಲ್ಲಿ ಯಾರ ಚೇಂಬರ್ ನಲ್ಲಿ ಕುಳಿತು ಮಾತಾಡಿದ್ದಾರೆ ಎನ್ನುವ ಮಾಹಿತಿ ನನಗೆ ಇದೆ. ಒಂದು ದಿನವಾದರೂ ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಕಳಿಸಬೇಕೆಂದು ಚರ್ಚೆ ಮಾಡಲಾಗಿದೆ ಇಂದು ಆರೋಪ ಮಾಡಿದ್ದಾರೆ.

ಹಿಂದೆ ಇದೇ ಸಿದ್ದರಾಮಯ್ಯ ಅವರ ಪಟಾಲಂ ನನ್ನನ್ನು ಒಂದು ದಿನವಾದರೂ ಜೈಲಿಗೆ ಕಳಿಸಬೇಕು ಎಂದು ಸಂಚು ಹೂಡಿತ್ತು. ಈಗಿರುವ ಅವರ ಪಟಾಲಂ ಕೂಡ ಅದೇ ರೀತಿಯಲ್ಲಿ ಕನಸು ಕಾಣುತ್ತಿದೆ ಎಂದು ಹೇಳಿರುವ ಹೆಚ್.ಡಿ. ಕುಮಾರಸ್ವಾಮಿ, ಯಾರೋ ಒಬ್ಬ ಅಧಿಕಾರಿ ಬಂದು ನೀವು ಕ್ರಿಮಿನಲ್ ಮುಖ್ಯಮಂತ್ರಿ ಎಂದರೆ ಏನು ಮಾಡುತ್ತೀರಿ ಸಿದ್ಧರಾಮಯ್ಯನವರೇ ಎಂದು ಪ್ರಶ್ನೆ ಮಾಡಿದ್ದಾರೆ.ಈ ಮಧ್ಯೆ ನಿನ್ನೆ ಎಡಿಜಿಪಿ ಚಂದ್ರಶೇಖರ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದ್ದ ಕೇಂದ್ರ ಸಚಿವ ಕುಮಾರಸ್ವಾಮಿ, ಚಂದ್ರ ಶೇಖರ್ ವಿರುದ್ಧ ತನಿಖೆ ನಡೆಸುವಂತೆ ಕೋರಿದ್ದರು.
Jds complained to DGP against ADGP