Karkala Parasurama theme park : ಬೆಂಗಳೂರು : ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿವಾದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಮೂರ್ತಿ ನಿರ್ಮಾಣದ ವಿಚಾರದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ಹೊರಡಿಸಿದ್ದು, ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಉಡುಪಿ ಜಿಲ್ಲಾಡಳಿತಕ್ಕೆ ಸೂಚಿಸಿದೆ.

ಕಾರ್ಕಳದ ಕಾಂಗ್ರೆಸ್ ಮುಖಂಡ ಕೃಷ್ಣ ಶೆಟ್ಟಿ ಎಂಬವರು ಪರಶುರಾಮ ಮೂರ್ತಿ ನಿರ್ಮಾಣದಲ್ಲಿ ಅವ್ಯವಹಾರ ನಡೆದಿದೆ. ಪರಶುರಾಮನ ಮೂರ್ತಿ ನಿರ್ಮಾಣಕ್ಕೆ ಕಂಚಿನ ಬದಲು ಪೈಬರ್ ಬಳಕೆ ಮಾಡಲಾಗಿದೆ ಎಂದು ಆರೋಪಿಸಿದ್ದರು. ಕಾರ್ಕಳ ಪೊಲೀಸರು ಬೆಂಗಳೂರಿನಲ್ಲಿರುವ ಶಿಲ್ಪಿ ಕೃಷ್ಣ ನಾಯ್ಕ್ ಅವರ ಕೃಷ್ ಆರ್ಟ್ ವರ್ಕ್ಸ್‌ನಿಂದ ನಿರ್ಮಾಣ ಹಂತದಲ್ಲಿ ಮೂರ್ತಿಯನ್ನು ಕಾರ್ಕಳಕ್ಕೆ ಕೊಂಡೊಯ್ದಿದ್ದರು. ಇದೇ ವೇಳೆಯಲ್ಲಿಯೇ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಮುನಿಯಾಲು ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಬೆದರಿಕೆ ಹಾಕಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು.
ಪರಶುರಾಮ ಥೀಮ್ ಪಾರ್ಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯ ಪೀಠ ಮಹತ್ವದ ಆದೇಶವನ್ನು ಹೊರಡಿಸಿದೆ. ಪರಶುರಾಮನ ಮೂರ್ತಿ ನಿರ್ಮಾಣಕ್ಕೆ ಯಾರು ತಡೆಯೊಡ್ಡುವಂತಿಲ್ಲ. ಅಲ್ಲದೇ ನಿಗದಿತ ಅವಧಿಯ ಒಳಗಾಗಿ ಪರಶುರಾಮ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವಂತೆ ಶಿಲ್ಪಿ ಕೃಷ್ಣ ನಾಯ್ಕ್, ನಿರ್ಮಿತಿ ಕೇಂದ್ರ ಹಾಗೂ ಜಿಲ್ಲಾಧಿಕಾರಿಗಳಿಗೆ ನ್ಯಾಯಾಲಯ ಸೂಚನೆಯನ್ನು ನೀಡಿದೆ.
ಶಿಲ್ಪಿ ಕೃಷ್ಣ ನಾಯ್ಕ್ ಅವರ ಪರ ಖ್ಯಾತ ಹಿರಿಯ ವಕೀಲರಾದ ಅರುಣ್ ಶ್ಯಾಮ್ ಅವರು ವಾದ ಮಂಡಿಸಿದ್ದರು. ಪರಶುರಾಮನ ಮೂರ್ತಿಯನ್ನು ಫೈಬರ್‌ನಿಂದ ನಿರ್ಮಿಸಲಾಗಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ನಾಯಕರಿಗೆ ಇದೀಗ ಹೈಕೋರ್ಟ್‌ನಲ್ಲಿ ಫೈಬರ್ ಪ್ರತಿಮೆ ಎನ್ನುವುದನ್ನು ಸಾಬೀತು ಮಾಡಲು ಸಾಧ್ಯವಾಗಿಲ್ಲ. ಈ ಮೂಲಕ ಕಾಂಗ್ರೆಸ್ ದೊಡ್ಡ ಮಟ್ಟದಲ್ಲಿ ಮುಖಭಂಗ ಅನುಭವಿಸಿದೆ.

ಪರಶುರಾಮನ ಪ್ರತಿಮೆಗೆ ಸಂಬಂಧಿಸಿದಂತೆ ಎನ್‌ಐಟಿಕೆ ತಜ್ಞರ ತಂಡ ಈಗಾಗಲೇ ವರದಿಯನ್ನು ಕೊಟ್ಟಿದ್ದು, ಕಂಚಿನಿಂದಲೇ ಪ್ರತಿಮೆ ಮಾಡಲಾಗಿದೆ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟವಾಗಿದೆ ಹೇಳಿದೆ. ವಾದವನ್ನು ಆಲಿಸಿದ್ದ ನ್ಯಾಯಮೂರ್ತಿಗಳು ಇದೀಗ ಆದೇಶ ನೀಡಿದ್ದು, ಕಾರ್ಕಳ ಪೊಲೀಸರು ವಶ ಪಡಿಸಿಕೊಂಡಿರುವ ಮೂರ್ತಿಗಳನ್ನು ಮರಳಿ ಪಡೆಯುವಂತೆಯೂ ಸೂಚಿಸಿದ್ದಾರೆ. ಒಂದೊಮ್ಮೆ ಯಾವುದೇ ರೀತಿಯ ಲೋಪವಾಗಿದ್ದರೆ ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಪೊಲೀಸರು ದಂಡ ಕಟ್ಟಿಕೊಡುವಂತೆಯೂ ಸೂಚಿಸಿದ್ದಾರೆ.
ಇದನ್ನೂ ಓದಿ : ಪರಶುರಾಮ ಮೂರ್ತಿ ವಿವಾದ : ಮುನಿಯಾಲು ಉದಯ್ ಕುಮಾರ್ ಶೆಟ್ಟಿ ವಿರುದ್ದ ದೂರು ಕೊಟ್ಟ ಶಿಲ್ಪಿ ಕೃಷ್ಣ ನಾಯ್ಕ್
ಅವ್ಯವಹಾರ ಮಾಡಿಲ್ಲ, ನನ್ನ ಸತ್ಯಕ್ಕೆ ನ್ಯಾಯ ಸಿಕ್ಕಿದೆ : ಶಿಲ್ಪಿ ಕೃಷ್ಣ ನಾಯ್ಜ್
ಕಾರ್ಕಳ ಪರಶುರಾಮನ ಮೂರ್ತಿ ನಿರ್ಮಾಣದ ವಿಚಾರದಲ್ಲಿ ಹೈಕೋರ್ಟ್ ನೀಡಿರುವ ತೀರ್ಪು ಶಿಲ್ಪಿ ಕೃಷ್ಣ ನಾಯ್ಕ್ ಅವರಿಗೆ ಖುಷಿ ಕೊಟ್ಟಿದೆ. ನ್ಯೂಸ್ ನೆಕ್ಸ್ಟ್ ಜೊತೆಗೆ ಮಾತನಾಡಿರುವ ಕೃಷ್ಣ ನಾಯ್ಕ್ ಅವರು, ನಾನು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಿದ್ದೇನೆ. ನಮ್ಮೂರಿನಲ್ಲಿ ಪರಶುರಾಮನ ಮೂರ್ತಿ ಸ್ಥಾಪನೆ ಆಗಬೇಕು ಅನ್ನೋ ಕಾರಣಕ್ಕೆ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ನಾನೊಬ್ಬ ಶಿಲ್ಪಿ ನನ್ನ ಕೆಲಸಕ್ಕೆ ಎಂದಿಗೂ ಮೋಸ ಮಾಡಲಾರೆ ಎಂದಿದ್ದಾರೆ.
ಒಂದಿಂಚೂ ಲೋಪ ಬಾರದಂತೆ ಪರಶುರಾಮನ ಮೂರ್ತಿಯನ್ನು ನಿರ್ಮಾಣ ಮಾಡಿದ್ದೆ. ಆದರೆ ಕಾಂಗ್ರೆಸ್ ನಾಯಕರಾದ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಹಾಗೂ ಕೃಷ್ಣ ಶೆಟ್ಟಿ ಅವರು ಇಲ್ಲ ಸಲ್ಲದ ಆರೋಪಗಳನ್ನು ಮಾಡಿದ್ದರು. ಆದ್ರೀಗ ನ್ಯಾಯಾಲಯ ಸತ್ಯದ ಪರ ತೀರ್ಪು ಕೊಟ್ಟಿದೆ. ಆದಷ್ಟು ಶೀಘ್ರದಲ್ಲಿ ಮೂರ್ತಿ ಪ್ರತಿಷ್ಠಾಪನೆಯ ಕಾರ್ಯವನ್ನು ಮಾಡುತ್ತೇನೆ.
ಇದನ್ನೂ ಓದಿ : ಬೈಂದೂರು : ಮೆಹಂದಿ ಶಾಸ್ತ್ರದ ವೇಳೆ ಮದುಮಗ ಎಸ್ಕೇಪ್, ಮದುವೆಯೇ ರದ್ದು !
ನಾನೊಬ್ಬ ಶಿಲ್ಪಿ, ಕಲೆಗಾರ ಅನ್ನೋದನ್ನು ನೋಡದೇ ಆ ರಾತ್ರಿ ಪೊಲೀಸರು ನನಗೆ ತೊಂದರೆ ನೀಡಿದ್ದಾರೆ. ಪರಶುರಾಮ ಸೃಷ್ಟಿಕರ್ತ ಆತನ ದಯೆಯಲ್ಲಿಯೇ ನಾವು ಬದುಕುತ್ತಿದ್ದೇವೆ. ಹಿಂದೂ ಧರ್ಮದಲ್ಲಿ ಹುಟ್ಟಿದ ನಾವು ಪರಶುರಾಮನನ್ನು ದೇವರಾಗಿ ಪೂಜಿಸುತ್ತೇವೆ. ಅಂತಹ ಪರಶುರಾಮನ ಮೂರ್ತಿ ನಿರ್ಮಾಣದ ಕೆಲಸ ನನಗೆ ಸಿಕ್ಕಿದ್ದು ಸೌಭಾಗ್ಯ ಎಂದೇ ಭಾವಿಸಿದ್ದೇನೆ. ಅಂತಹ ಪುಣ್ಯದ ಕೆಲಸದಲ್ಲಿ ನಾನು ಮೋಸ ಮಾಡಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಅನಗತ್ಯವಾಗಿ ಕಿರಿಕಿರಿ ಮಾಡಿದ್ದಾರೆ. ಆದರೆ ಮೂರ್ತಿ ನಿರ್ಮಾಣದಲ್ಲಿ ಯಾವುದೇ ಲೋಪವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
Karkala Parasurama theme park dispute Important order from Karnataka High Court