ಭಾನುವಾರ, ಏಪ್ರಿಲ್ 27, 2025
Homekarnatakaಪ್ರಮೋದ್‌ ಮಧ್ವರಾಜ್‌ ವಿರುದ್ದ ಟೀಕೆ : ಮೊಗವೀರರ ಕುಲಕಸುಬು ಕೆಣಕಿ ಸಮುದಾಯವನ್ನೇ ಎದುರು ಹಾಕಿಕೊಂಡ್ರಾ ಡಿ.ಕೆ.ಶಿವಕುಮಾರ್‌...

ಪ್ರಮೋದ್‌ ಮಧ್ವರಾಜ್‌ ವಿರುದ್ದ ಟೀಕೆ : ಮೊಗವೀರರ ಕುಲಕಸುಬು ಕೆಣಕಿ ಸಮುದಾಯವನ್ನೇ ಎದುರು ಹಾಕಿಕೊಂಡ್ರಾ ಡಿ.ಕೆ.ಶಿವಕುಮಾರ್‌ ?

- Advertisement -

ಉಡುಪಿ : (Pramod Madhwaraj Vs Dk Shivakumar) ರಾಜಕೀಯದಲ್ಲಿ ಪಕ್ಷಾಂತರ ಸರ್ವೇ ಸಾಮಾನ್ಯ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರ್ಪಡೆಯಾಗಿರುವ ಪ್ರಭಾವಿ ಮೊಗವೀರ ಮುಖಂಡ ಪ್ರಮೋದ್‌ ಮಧ್ವರಾಜ್‌ (Pramod Madhwaraj) ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ (Dk Shivakumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಡಿಕೆಶಿ ಪ್ರಮೋದ್‌ ಮಧ್ವರಾಜ್‌ ಅವರನ್ನು ಟೀಕಿಸುವ ಭರದಲ್ಲಿ ಕರಾವಳಿಯಲ್ಲಿ ಬಹುಸಂಖ್ಯೆಯಲ್ಲಿರುವ ಮೊಗವೀರ ಸಮುದಾಯದ ವಿರೋಧವನ್ನು ಕಟ್ಟಿಕೊಂಡಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ಬೈಂದೂರಿಗೆ ಆಗಮಿಸಿದ್ದ ವೇಳೆಯಲ್ಲಿ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಿ ಗಾಳಹಾಕಿಕೊಂಡು ಕೂರಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿರುವುದು ಕರಾವಳಿ ಮೊಗವೀರ ಸಮುದಾಯದಲ್ಲಿ ಅಸಮಧಾನವನ್ನು ಉಂಟು ಮಾಡಿದೆ. ಈಗ ಗಾಳ ಹಾಕುವುದು ಮತ್ತು ಮೀನು ಹಿಡಿಯುವ ಕೆಲಸವನ್ನು ಇತರ ಸಮುದಾಯದವರೂ ಮಾಡುತ್ತಾರೆ. ಆದರೆ ಮೀನುಗಾರಿಕೆ ಮೊಗವೀರರ ಕುಲಕಸುಬು.‌ ಅದರಲ್ಲೂ ಪ್ರಮೋದ್ ಮಧ್ವರಾಜ್ ಮೊಗವೀರ ಸಮುದಾಯದ ಪ್ರಭಾವಿ ನಾಯಕ. ಅವರನ್ನು ರಾಜಕೀಯ ವೇದಿಕೆಯಲ್ಲಿ ವ್ಯಂಗ್ಯ ಮಾಡಿ ಡಿಕೆಶಿ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮೊಗವೀರರನ್ನು ಕೆಣಕಿದ ಡಿಕೆಶಿ : ಸಾಮಾಜಿಕ ಜಾಲತಾಣದಲ್ಲಿ ಬಾರಿ ಆಕ್ರೋಶ

ಡಿಕೆಶಿ ಅವರ ಈ ವ್ಯಂಗ್ಯದ ಹೇಳಿಕೆಯನ್ನು ಕಾಂಗ್ರೆಸ್ ನಲ್ಲಿರುವ ಕೆಲವು ಮೊಗವೀರ ಸಮುದಾಯದವರು ಸಮರ್ಥಿಸಿಕೊಂಡಿದ್ದಾರೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಶಿ ಹಾಗೂ ಕಾಂಗ್ರೆಸ್ ವಿರುದ್ದ ಸಾಕಷ್ಟು ಟೀಕೆ, ಆಕ್ರೋಶಗಳು ಕೇಳಿಬರುತ್ತಿದೆ. ರಾಜಕಾರಣಿಗಳು ಪಕ್ಷ ಬದಲಾಯಿಸುವುದು ವೈಯಕ್ತಿಕ ವಿಚಾರ. ಸದ್ಯ ಬಿಜೆಪಿಯಲ್ಲಿರುವ ಪ್ರಮೋದ್ ಮಧ್ವರಾಜ್ ಅವರ ತಂದೆ ಮಧ್ವರಾಜ್ ಅವರು ಕಾಂಗ್ರೆಸ್ ನ ನಾಯಕರು. ತಾಯಿ ಮನೋರಮಾ ಮಧ್ವರಾಜ್ ಅವರು ಕೂಡ ಕಾಂಗ್ರೆಸ್ ನಲ್ಲಿ ಸಚಿವರಾಗಿ ಬಿಜೆಪಿಯಲ್ಲಿ ಸಂಸದೆಯಾಗಿದ್ದರು. ಇನ್ನು ಪ್ರಮೋದ್ ಮಧ್ವರಾಜ್ ಅವರು ಕೂಡ ಕಾಂಗ್ರೆಸ್‌ ಚಿಹ್ನೆಯ ಅಡಿಯಲ್ಲಿಯೇ ಶಾಸಕರಾಗಿ, ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಮೀನುಗಾರಿಕಾ ಸಚಿವರಾಗಿದ್ದರು. ಇಂಥ ಭವ್ಯ ರಾಜಕೀಯದ ಹಿನ್ನೆಲೆ ಇರುವ ಓರ್ವ ಮೊಗವೀರ ಸಮುದಾಯದ ನಾಯಕರನ್ನು ಗಾಳದ ಹೆಸರಿನಲ್ಲಿ ವ್ಯಂಗ್ಯವಾಡಿರುವುದು ಡಿ.ಕೆ.ಶಿವಕುಮಾರ್‌ ಅವರ ಕೆಳಮಟ್ಟದ ರಾಜಕೀಯಕ್ಕೆ ಉದಾಹರಣೆ ಅನ್ನೋ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದ್ದು, ಡಿ.ಕೆ.ಶಿವಕುಮಾರ್‌ ಹೇಳಿಕೆಯಿಂದಾಗಿ ಮೊಗವೀರರು ರಾಜಕೀಯವಾಗಿ ಒಡೆಯುವಂತಾಗಿದೆ.

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಹೇಳಿಕೆಯ ಕುರಿತು ಉಡುಪಿ ಕಾಂಗ್ರೆಸ್‌ ಅಭ್ಯರ್ಥಿ ವಿರೋಧ ವ್ಯಕ್ತಪಡಿಸುತ್ತಿಲ್ಲ. ಮುಖ್ಯವಾಗಿ ಟಿಕೆಟ್‌ ಒದಗಿಸುವಲ್ಲಿ ಡಿಕೆ ಶಿವಕುಮಾರ್‌ ಅವರ ಪಾತ್ರ ಮಹತ್ವದ್ದಾಗಿತ್ತು. ಇನ್ನೊಂದೆಡೆಯಲ್ಲಿ ಬಿಜೆಪಿ ಅಭ್ಯರ್ಥಿ ಯಶಪಾಲ್‌ ಸುವರ್ಣ ಕೂಡ ಈ ಬಗ್ಗೆ ಚಕಾರವೆತ್ತಿಲ್ಲ. ಪ್ರಮುಖವಾಗಿ ಮೊಗವೀರ ಸಮುದಾಯದ ಕುಲಕಸುಬನ್ನು ವ್ಯಂಗ್ಯಕ್ಕೆ ಬಳಸಿರುವುದು ಸಮುದಾಯದವರಿಗೆ ನೋವನ್ನು ತಂದಿದೆ. ಒಂದೊಮ್ಮೆ ಕನಕಪುರದಲ್ಲಿ ಇವರ ಸಮುದಾಯದ ಬಗ್ಗೆ ಇದೇ ರೀತಿ ಬೇರೆ ಪಕ್ಷದವರು ಬಂದು ಲೇವಡಿ ಮಾಡಿರುತ್ತಿದ್ದರೆ ಇಷ್ಟರಲ್ಲೇ ಪರಿಸ್ಥಿತಿ ವಿಕೋಪಕ್ಕೆ ತಿರುತ್ತಿತ್ತು. ಆದರೆ ಕರಾವಳಿಯಲ್ಲಿ ಹಾಗಾಗಲಿಲ್ಲ. ರಾಜಕೀಯದಿಂದಾಗಿ ಮೊಗವೀರರಲ್ಲಿ ಇಂತಹ ಹಲವಾರು ಬಣಗಳು ಹುಟ್ಟಿಕೊಂಡಿದ್ದರೂ ಕೂಡ ಕುಲಕಸುಬಿನ ವಿಚಾರ ಬಂದಾಗ ಎಲ್ಲರೂ ಒಗ್ಗಟ್ಟಾಗುತ್ತಾರೆ ಅನ್ನೋ ಅಂಶವನ್ನು ಡಿಕೆಶಿ ಮರೆತಿರಬೇಕು ಅನ್ನೋ ಮಾತುಗಳು ಕೇಳಿಬಂದಿವೆ.

ಕರಾವಳಿಯಲ್ಲಿ ಕಾಂಗ್ರೆಸ್‌ಗೆ ಮುಳುವಾಗುತ್ತಾ ಡಿಕೆಶಿ ಹೇಳಿಕೆ ?
ಕಾರವಾರದಿಂದ ಕಾಸರಗೋಡಿನ ಗಡಿಯವರೆಗೂ ಮೊಗವೀರ ಸಮುದಾಯ ನೆಲೆಯನ್ನು ಕಂಡುಕೊಂಡಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿಯೂ ಮೊಗವೀರ ಸಮುದಾಯದ ಮತದಾರರಿದ್ದಾರೆ. ರಾಜಕೀಯ ಪಕ್ಷಗಳು ಮೊಗವೀರ ಸಮುದಾಯದ ಮತ ಪಡೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಆದರೆ ರಾಜಕೀಯವಾಗಿ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತಿಲ್ಲ ಅನ್ನೋ ಆರೋಪ ಕೇಳಿಬರುತ್ತಲೇ ಇದೆ. ಹಿಂದೆ ಕರಾವಳಿ ರಾಜಕೀಯದಲ್ಲಿ ಮೊಗವೀರ ಸಮುದಾಯದ ಹಲವು ನಾಯಕರಿದ್ದಾರೆ. ಆದ್ರೆ ಇದೀಗ ಉಡುಪಿ ವಿಧಾನಸಭಾ ಕ್ಷೇತ್ರವನ್ನು ಹೊರತು ಪಡಿಸಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಗವೀರ ಸಮುದಾಯದವರಿಗೆ ಟಿಕೆಟ್‌ ನೀಡಿಲ್ಲ ಅನ್ನೋ ಮಾತು ಕೇಳಿಬಂದಿದೆ. ಇದನ್ನೂ ಓದಿ : Krishnamurthy Acharya : ಡಿಕೆಶಿಯ ರಾಜಿ ಸಂಧಾನಕ್ಕೆ ಒಪ್ಪುವರೇ ಕೃಷ್ಣಮೂರ್ತಿ ಆಚಾರ್ಯ ?

ಈ ನಡುವಲ್ಲೇ ಡಿಕೆ ಶಿವಕುಮಾರ್‌ ಇದೀಗ ಮೊಗವೀರ ಸಮುದಾಯದ ಕುಲಕಸುಬಿನ ಬಗ್ಗೆ ಕೆಣಕಿರುವುದು ಮೊಗವೀರರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಚುನಾವಣೆ ನಡೆಯುತ್ತಿದ್ದು, ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಮೊಗವೀರ ಅಭ್ಯರ್ಥಿಗಳೇ ಕಣದಲ್ಲಿದ್ದಾರೆ. ಉಳಿದಂತೆ ಇತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಮೊಗವೀರ ಮತಗಳೇ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಲಿವೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ದೊಡ್ಡಮಟ್ಟದ ಹೊಡೆತ ಕೊಡುವುದು ಗ್ಯಾರಂಟಿ ಅನ್ನೋ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬಂದಿವೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular