ನೆರೆಯ ರಾಜ್ಯಗಳಲ್ಲಿ ಕೊರೋನಾ ಎರಡನೇ-ಮೂರನೇ ಅಲೆ ಪ್ರಮಾಣ ಹಾಗೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಬೆನ್ನಲ್ಲೇ ರಾಜ್ಯಕ್ಕೆ ಬ್ಲ್ಯಾಕ್ ಫಂಗಸ್ ಶಾಕ್ ತಟ್ಟಿದೆ. ಕಳೆದ ಒಂದು ತಿಂಗಳಿನಲ್ಲೇ 475 ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲಾಗಿದೆ.

ಕೊರೋನಾ ಮೂರನೇ ಅಲೆ ತಡೆಯಲು ರಾಜ್ಯದಾದ್ಯಂತ ಕಟ್ಟುನಿಟ್ಟನ ಕ್ರಮಕ್ಕೆ ಸರ್ಕಾರ ಚಿಂತನೆ ನಡೆಸಿರುವ ಬೆನ್ನಲ್ಲೇ ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಕೇಸ್ ಹೆಚ್ಚಿರುವ ಸಂಗತಿ ಬೆಳಕಿಗೆ ಬಂದಿದ್ದು, ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ತಿಂಗಳಿನಲ್ಲೇ 475 ಪ್ರಕರಣಗಳು ದಾಖಲಾಗಿದ್ದರೇ ಈ ಪೈಕಿ 73 ಜನರು ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಹೊಸ ಸೋಂಕಿತ ಪ್ರಕರಣಗಳೊಂದಿಗೆ ಒಟ್ಟು ಬ್ಲ್ಯಾಕ್ ಫಂಗಸ್ ಸೋಂಕಿತರ ಸಂಖ್ಯೆ 3,669 ಕ್ಕೆ ಏರಿಕೆಯಾಗಿದೆ. ಮೃತರ ಸಂಖ್ಯೆ 341 ತಲುಪಿದೆ. ಬೆಂಗಳೂರು ಒಂದರಲ್ಲೇ 122 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಈ ಪೈಕಿ 22 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ, ಬೌರಿಂಗ್, ಕೆ.ಸಿ.ಜನರಲ್ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಸರ್ಕಾರ ಈ ಸೋಂಕಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದರೂ ಔಷಧಗಳ ಕೊರತೆ ಕಾಡುತ್ತಿದೆ.

ಬ್ಲ್ಯಾಕ್ ಫಂಗಸ್ ಗೆ ನೀಡುವ ಲಿಪೋಸೋಮಲ್ ಆಂಪೋಟೆರಿಸನ್ ಬಿ ಔಷಧದ ಕೊರತೆ ಎದುರಾಗಿದ್ದು, ಇದಕ್ಕೆ ಪರ್ಯಾಯವಾಗಿ ಬೇರೆ ಔಷಧಿ ಕೊಡಲಾಗುತ್ತಿದೆ. ಇದರಿಂದ ರೋಗಿಗಳ ಚೇತರಿಕೆ ಧೀರ್ಘ ಸಮಯ ತೆಗೆದುಕೊಳ್ಳುತ್ತಿದೆ. ಕೆಲವರು ಆರಂಭದಲ್ಲಿ ನಿರ್ಲಕ್ಷ್ಯಿಸುತ್ತಿದ್ದು, ಸೋಂಕು ಉಲ್ಬಣಿಸಿದ ಬಳಿಕ ಚಿಕಿತ್ಸೆಗೆ ದಾಖಲಾಗುತ್ತಿರುವುದರಿಂದ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪುತ್ತಿದ್ದಾರೆ.