ಬೆಂಗಳೂರು : ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟಿಸಲಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಜುಲೈ9 ರ ವರೆಗೆ ಭಾರೀ ಮಳೆ ಸುರಿಯಲಿದ್ದು, ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಬಿಸಿಲ ಝಳ ಹೆಚ್ಚಾಗಿದೆ. ಆದರೆ ಮುಂದಿನ ನಾಲ್ಕು ದಿನಗಳ ಕಾಲ ಹವಾಮಾನದಲ್ಲಿ ಬದಲಾವಣೆ ಯಾಗಲಿದೆ. ಶ್ರೀಲಂಕಾ ಕರಾವಳಿ ಭಾಗದ ಸಮುದ್ರದಲ್ಲಿ ಮೇಲ್ಮೈ ಸುಳಿ ಗಾಳಿ ತೀವ್ರಗೊಂಡಿದೆ. ಇದರಿಂದಾಗಿ ರಾಜ್ಯದಲ್ಲಿ ಮಳೆ ಸುರಿಯಲಿದೆ. ಜು.5ರ ನಂತರ ಮಳೆ ಬಿರುಸುಗೊಳ್ಳಲಿದೆ. ಬಿಸಿಲ ತಾಪ ಕಡಿಮೆಯಾಗಲಿದ್ದು, ಮೋಡ ಮುಸುಕಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆ ಗಳಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜುಲೈ 8 ಮತ್ತು 9 ರಂದು ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಅಲ್ಲದೇ ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ ಮತ್ತು ನಗರ, ಚಿಕ್ಕ ಬಳ್ಳಾಪುರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಜುಲೈ 6 ರಂದು ಭಾರೀ ಸುರಿಯುವ ಸಾಧ್ಯತೆಯಿದೆ.