ದಾವಣಗೆರೆ : ಕೋವಿಡ್ ಸೆಂಟರ್ ನಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೋಮ ಹವನ ನಡೆಸುವ ಮೂಲಕ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ವಿವಾದಕ್ಕೆ ಸಿಲುಕಿದ್ದಾರೆ. ಶಾಸಕರ ವಿರುದ್ದ ಅಧಿಕಾರಿಗಳು ದೂರು ದಾಖಲಿಸಲು ಮುಂದಾಗಿದ್ದಾರೆ. ಆದ್ರೆ ಶಾಸಕರು ಮಾತ್ರ ತಾಕತ್ತಿದ್ದರೆ ದೂರು ದಾಖಲಿಸಿ ಎಂದು ಪ್ರತಿ ಸವಾಲು ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಅರಬಗಟ್ಟೆಯ ಕೋವಿಡ್ ಸೆಂಟರ್ ನಲ್ಲಿ ರೇಣುಕಾಚಾರ್ಯ ಹಾಗೂ ದಂಪತಿಗಳು ಮೃತ್ಯುಂಜಯ ಹೋಮ, ಧನ್ವಂತರಿ ಹೋಮ ನಡೆಸಿದ್ದರು. ಆದ್ರೀಗ ಶಾಸಕರ ಕ್ರಮ ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತಹಶೀಲ್ದಾರ್ ಶಾಸಕರ ವಿರುದ್ದ ಪ್ರಕರಣ ದಾಖಲು ಮಾಡುವುದಾಗಿ ಎಚ್ಚರಿಸಿದ್ದರು. ಆದ್ರೆ ಕೊರೊನಾ ಸೋಂಕಿತರು ತಹಶೀಲ್ದಾರ್ ಕ್ರಮದ ವಿರುದ್ದ ಆಕ್ರೋಶ ಹೊರಹಾಕಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ರೇಣುಕಾಚಾರ್ಯ ಅಧಿಕಾರಿಗಳ ವಿರುದ್ದ ಹರಿಹಾಯ್ದಿದ್ದಾರೆ. ತನ್ನ ವಿರುದ್ದ ಕೇಸ್ ದಾಖಲಿಸಲು ಮುಂದಾಗಿರುವುದರಿಂದ ಹಿಂದೆ ಕಾಂಗ್ರೆಸ್ ಶಾಸಕರ ಕೈವಾಡವಿದೆ ಅಂತಾನೂ ಆರೋಪಿಸಿದ್ದು, ತಾಕತ್ತಿದ್ದರೆ ನನ್ನ ವಿರುದ್ದ ದೂರು ದಾಖಲಿಸಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಇನ್ನೊಂದೆಡೆ ಶಾಸಕರ ಪರ ಪ್ರತಿಭಟನೆ ನಡೆಸಿರೋ ಕೊರೊನಾ ಸೋಂಕಿತರು ಶಾಸಕರ ವಿರುದ್ದ ದೂರು ದಾಖಲಾದ್ರೆ ನಾವು ಊಟ ಉಪಹಾರವನ್ನೇ ತ್ಯೇಜಿಸುವುದಾಗಿ ಎಚ್ಚರಿಸಿದ್ದಾರೆ.