MLC Election : ಮಂಗಳೂರು/ ಉಡುಪಿ : ಸಂಸದ ಕೋಟ ಶ್ರೀನಿವಾಸ ಪೂಜಾರಿ ಆವರ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ದಿನಾಂಕ ಘೋಷಣೆಯಾಗಿದೆ. ಬಿಜೆಪಿ ಅಭ್ಯರ್ಥಿ ಆಯ್ಕೆ ಸದ್ಯ ಕಗ್ಗಂಟಾಗಿದೆ. ಪ್ರಮೋದ್ ಮಧ್ವರಾಜ್, ಅರುಣ್ ಪುತ್ತಿಲ ಹೆಸರು ಮಂಚೂಣಿಯಲ್ಲಿದೆ. ಆದರೆ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಆಯ್ಕೆಗೆ ಕಾರ್ಯಕರ್ತರ ವಲಯದಲ್ಲಿ ಅಪಸ್ವರ ಕೇಳಿಬಂದಿದೆ.

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳನ್ನು ಒಳಗೊಂಡಿರುವ ವಿಧಾನ ಪರಿಷತ್ ಸ್ಥಳೀಯ ಸಂಸ್ಥೆಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಸ್ಥಾನಗಳನ್ನು ಪಡೆದುಕೊಂಡಿದ್ದವು. ಬಿಜೆಪಿಯಿಂದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹ್ಯಾಟ್ರಿಕ್ ಗೆಲುವು ದಾಖಲಿಸಿದ್ದರೆ, ಕಾಂಗ್ರೆಸ್ ಪಕ್ಷದಿಂದ ಮಂಜುನಾಥ ಭಂಡಾರಿ ಗೆಲುವು ಕಂಡಿದ್ದರು. ಆದರೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಉಡುಪಿ – ಚಿಕ್ಕಮಗಳೂರು ಕ್ಷೇತ್ರದಿಂದ ಸ್ಪರ್ಧೆ ಮಾಡಿ ಗೆಲುವು ಕಂಡಿದ್ದಾರೆ.
ಇದನ್ನೂ ಓದಿ : ವಿಧಾನ ಪರಿಷತ್ ದಕ್ಷಿಣ ಕನ್ನಡ, ಉಡುಪಿ ಕ್ಷೇತ್ರದ ಉಪ ಚುನಾವಣೆಗೆ ಮುಹೂರ್ತ ಫಿಕ್ಸ್
ಕೋಟ ಶ್ರೀನಿವಾಸ ಪೂಜಾರಿ ಅವರಿಂದ ತೆರವಾಗಿರುವ ಸ್ಥಾನಕ್ಕೆ ಇದೀಗ ಚುನಾವಣಾ ಆಯೋಗ ಚುನಾವಣೆಯನ್ನು ಘೋಷಣೆ ಮಾಡಿದೆ. ಆದರೆ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್‌ಗಳಿಗೆ ಅವಧಿ ಮುಗಿದಿದ್ದರೂ ಕೂಡ ಚುನಾವಣೆ ನಡೆದಿಲ್ಲ. ಹೀಗಾಗಿ ಹಾಲಿ ಸದಸ್ಯರೇ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸ್ಥಳೀಯ ಸಂಸ್ಥೆಗಳ ಒಟ್ಟು ಮತದಾರರ ಲೆಕ್ಕಾಚಾರದಲ್ಲಿ ಬಿಜೆಪಿ ಗೆಲುವು ದಾಖಲಿಸುವುದು ಖಚಿತ.

ಇದೇ ಕಾರಣದಿಂದಲೇ ವಿಧಾನ ಪರಿಷತ್ ಸ್ಥಾನಕ್ಕಾಗಿ ಬಾರೀ ಪೈಪೋಟಿ ಏರ್ಪಟ್ಟಿದೆ. ಉಡುಪಿ ಭಾಗದಿಂದ ಪ್ರಮೋದ್ ಮಧ್ವರಾಜ್ ಅವರ ಹೆಸರು ಮಂಚೂಣಿಯಲ್ಲಿದ್ರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಅರುಣ್ ಪುತ್ತಿಲ ಅವರ ಹೆಸರು ಬಲವಾಗಿ ಕೇಳಿಬರುತ್ತಿದೆ. ಈ ಇಬ್ಬರ ಪೈಕಿ ಓರ್ವರಿಗೆ ಟಿಕೆಟ್ ಖಚಿತ ಎನ್ನಲಾಗುತ್ತಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾ ಮಾಜಿ ಸಂಸದ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಕೂಡ ಲಾಭಿ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಶಾಲೆಗಳ ದಸರಾ ರಜೆಗೆ ಹೊಸ ಮಾರ್ಗಸೂಚಿ : ಎಷ್ಟು ದಿನ ರಜೆ ? ಇಲ್ಲಿದೆ ಸಂಪೂರ್ಣ ಮಾಹಿತಿ
ಆದರೆ ನಳಿನ್ ಕುಮಾರ್ ಅವರ ಆಯ್ಕೆಗೆ ಬಿಜೆಪಿ ಕಾರ್ಯಕರ್ತರು, ಮುಖಂಡರ ವಲಯದಲ್ಲಿ ಅಪಸ್ವರ ಕೇಳಿಬಂದಿದೆ. ಹೀಗಾಗಿ ನಳಿನ್ ಕುಮಾರ್ ಕಟೀಲು ಅವರಿಗೆ ಮಣೆ ಹಾಕುವ ಸಾಧ್ಯತೆ ತೀರಾ ಕಡಿಮೆ. ಇನ್ನು ಅವಳಿ ಜಿಲ್ಲೆಗಳಲ್ಲಿ ಬಿಲ್ಲವ ಸಮುದಾಯಕ್ಕೆ ಬಿಜೆಪಿ ಈ ಬಾರಿ ಮಣೆ ಹಾಕಲು ಮುಂದಾದ್ರೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲಗೆ ಲಕ್ ಖುಲಾಯಿಸುವ ಸಾಧ್ಯತೆಯಿದೆ.

ಆಪ್ತನ ಪರ ಸಂಸದ ಶ್ರೀನಿವಾಸ ಪೂಜಾರಿ ಲಾಬಿ ?
ಇನ್ನೊಂದೆಡೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ತನ್ನ ಅತ್ಯಾಪ್ತನಿಗೆ ಟಿಕೆಟ್ ಕೊಡಿಸಲು ತೆರೆಮರೆಯಲ್ಲಿ ಬಾರೀ ಕಸರತ್ತು ನಡೆಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪ್ರಮೋದ್ ಮಧ್ವರಾಜ್ ಅಥವಾ ಅರುಣ್ ಪುತ್ತಿಲ ಅವರಿಗೆ ಟಿಕೆಟ್ ನೀಡಿದ್ರೆ ಎರಡೂ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಬಲ ಬರಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನೊಂದೆಡೆಯಲ್ಲಿ ಬಂಜಾರ ಪ್ರಕಾಶ ಶೆಟ್ಟಿ ಅವರ ಹೆಸರು ಕೇಳಿಬಂದಿದೆ.
ಇದನ್ನೂ ಓದಿ : ತಿರುಪತಿ ಲಡ್ಡು ವಿವಾದದ ಬೆನ್ನಲ್ಲೇ ಕೆಎಂಎಫ್ ಮಹತ್ವದ ನಿರ್ಧಾರ : ತುಪ್ಪ ಸಾಗಿಸಲು ಜಿಪಿಎಸ್
ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಘೋಷಣೆ ಆಗಲು ಇನ್ನು ಮೂರು ದಿನಗಳು ಮಾತ್ರವೇ ಬಾಕಿ ಉಳಿದಿದೆ. ಬಿಜೆಪಿ ಉನ್ನತ ಮೂಲಗಳ ಪ್ರಕಾರ ಇಂದೇ ಬಿಜೆಪಿ ಟಿಕೆಟ್ ಘೋಷಣೆ ಮಾಡುವ ಸಾಧ್ಯತೆಯಿದೆ. ಬಿಜೆಪಿ ಈ ಬಾರಿ ಯಾರಿಗೆ ಮಣೆ ಹಾಕಲಿದೆ ಅನ್ನೋದು ಸದ್ಯದ ಕುತೂಹಲ. ಒಟ್ಟಿನಲ್ಲಿ ಬಿಜೆಪಿ ಅಳೆದು ತೂಗಿ ಟಿಕೆಟ್ ಘೋಷಿಸದೇ ಇದ್ರೆ ಬಿಜೆಪಿಯಲ್ಲಿ ಅಸಮಾಧಾನ ಸ್ಪೋಟವಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
MLC by-election: Pramod Madhwaraj, Arun Puttila BJP Candidate Outrage against Nalin Kumar Kateel