ಬೆಂಗಳೂರು: ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಶಾಸಕ ಮುನಿರತ್ನ (Muniratna) ಹನಿ ಟ್ರ್ಯಾಪ್ (Honeytrap) ಮಾಡಿಸಿದ್ದಾರೆ ಎಂದು ಜೈಲಿನಲ್ಲಿರುವ ಶಾಸಕ ಮುನಿರತ್ನ ವಿರುದ್ಧ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಮಾಜಿ ಸಚಿವ ಮತ್ತು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಪ್ರಕರಣದ ಸಂತ್ರಸ್ಥೆ ಈ ಆರೋಪವನ್ನು ಮಾಡಿದ್ದಾರೆ. ಬೆಂಗಳೂರಿನ ರಾಜಭವನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಂತ್ರಸ್ಥೆ ಈ ಗಂಭೀರ ಆರೋಪವನ್ನು ಮಾಡಿದ್ದಾರೆ.ಇಬ್ಬರು ಮಾಜಿ ಮುಖ್ಯಮಂತ್ರಿಗಳ ವೀಡಿಯೋ ಬಂಧಿತ ಶಾಸಕ ಮುನಿರತ್ನ ಬಳಿ ಇದ್ದು, ಆ ವೀಡಿಯೋ ತೋರಿಸಿಯೇ ಅವರು ಬಿಜೆಪಿ ಸರ್ಕಾರದಲ್ಲಿ ಸಚಿವ ಸ್ಥಾನ ಪಡೆದುಕೊಂಡಿದ್ದರು ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದಾರೆ.
ಅಲ್ಲದೇ, ನಾಲ್ಕು ಜನರಿಗೆ ಏಡ್ಸ್ ಟ್ರ್ಯಾಪ್ ಮಾಡಿಸುವ ಪ್ಲ್ಯಾನ್ ಶಾಸಕ ಮುನಿರತ್ನ ಅವರಿಗೆ ಇತ್ತು ಎಂದು ಹೇಳಿರುವ ಸಂತ್ರಸ್ಥೆ, ಆ ಪೈಕಿ ಒಬ್ಬರಿಗೆ ಟ್ರ್ಯಾಪ್ ಮಾಡಿಸಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದೂ ಹೇಳಿದ್ದಾರೆ. ಎಸಿಪಿ ಹಾಗೂ ಇನ್ಸ್ ಪೆಕ್ಟರ್ ಗಳ ವೀಡಿಯೋಗಳನ್ನು ಕೂಡಾ ಮುನಿರತ್ನ ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಹೇಳಿರುವ ಸಂತ್ರಸ್ಥೆ, ಮುನಿರತ್ನ ಬಿಡುಗಡೆಯಾದ ಬಳಿಕ ಬೇಕಾದರೆ ಬ್ರೈನ್ ಮ್ಯಾಪಿಂಗ್ ಮಾಡಲಿ ಎಂದೂ ಸಂತ್ರಸ್ಥೆ ಒತ್ತಾಯಿಸಿದ್ದಾರೆ.

ಇದೇ ವೇಳೆ, ಶಾಸಕ ಮುನಿರತ್ನ ತನಗೆ 2020 ರಲ್ಲಿ ಪರಿಚಯವಾಗಿದ್ದು, ಬಳಿಕ ಬೆಂಗಳೂರಿನಲ್ಲಿ ಗೋಡೌನ್ ನಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪ ಮಾಡಿರುವ ಸಂತ್ರಸ್ಥೆ, ನನ್ನ ವೀಡಿಯೋ ಇಟ್ಟುಕೊಂಡು ತೋರಿಸಿ ಬೇರೆಯವರನ್ನೂ ಹನಿಟ್ರ್ಯಾಪ್ ಮಾಡುವಂತೆ ಬೆದರಿಸಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೇ ಮುನಿರತ್ನ ಜಾಮೀನು ಪಡೆದು ಜೈಲಿನಿಂದ ಹೊರ ಬಂದ ಬಳಿಕ ತನಗೆ ಜೀವ ಭಯ ಇದೆ ಎಂದೂ ಸಂತ್ರಸ್ಥೆ ಮಹಿಳೆ ಸುದ್ದಿಗೋಷ್ಠಿಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಕೂಡಾ ಮುನಿರತ್ನ ಹನಿಟ್ರ್ಯಾಪ್ ಮಾಡಿಸಿರುವ ವೀಡಿಯೋಗಳು ತನ್ನ ಬಳಿ ಇದ್ದು, ಅದನ್ನು ಎಸ್ ಐಟಿಗೆ ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ಹೇಳಿರುವ ಸಂತ್ರಸ್ಥೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನೂ ತಾನು ಭೇಟಿ ಮಾಡಬೇಕಾಗಿದೆ ಎಂದೂ ಹೇಳಿರುವುದು ಗಮನಾರ್ಹವಾಗಿದೆ.

ಇನ್ನು ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಈಗಾಗಲೇ ಐಪಿಎಸ್ ಅಧಿಕಾರಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ಸಿಐಡಿ ವಿಶೇಷ ತನಿಖಾ ತಂಡವನ್ನು ರಚಿಸಿದೆ.