Mysore Dasara; ಮೈಸೂರು: ನಾಡಹಬ್ಬ ಮೈಸೂರು ದಸರಾ ವೀಕ್ಷಣೆಗೆ ಇಂದಿನಿಂದ ಟಿಕೆಟ್ ಮಾರಾಟ ಆರಂಭಗೊಂಡಿದೆ. ಅಧಿಕೃತ ವೆಬ್ ಸೈಟ್ ಮೂಲಕ ಟಿಕೆಟ್ ಮಾರಾಟ ನಡೆಯಲಿದ್ದು, https://www.mysoredasara.gov.in/ ವೆಬ್ ಸೈಟ್‌ನಲ್ಲಿ ಟಿಕೆಟ್ ಗಳು ಲಭ್ಯವಾಗಲಿವೆ. ಮೈಸೂರು ಅರಮನೆಯಲ್ಲಿ ಜಂಬೂ ಸವಾರಿ ವೀಕ್ಷಣೆಗೆ 3500 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಬನ್ನಿಮಂಟಪದಲ್ಲಿನ ಪಂಜಿನ ಕವಾಯತು ವೀಕ್ಷಣೆಗೆ 1000 ರೂಪಾಯಿ ದರ ನಿಗದಿ ಮಾಡಲಾಗಿದೆ.

ಎಲ್ಲರಿಗೂ ಟಿಕೆಟ್ ದೊರೆಯಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಐದು ದಿನಗಳ ಕಾಲ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಸೆಪ್ಟೆಂಬರ್ 26 ರಿಂದ 30 ರವರೆಗೂ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದ್ದು, ದಾಸ್ತಾನು ಇರುವವರೆಗೂ ಟಿಕೆಟ್ ಮಾರಾಟ ಮುಂದುವರೆಯಲಿದೆ ಎಂದು ದಸರಾ ವಿಶೇಷ ಅಧಿಕಾರಿಯೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಆನ್ ಲೈನ್ ಮುಖಾಂತರ ದಸರಾ ಗೋಲ್ಡ್ ಕಾರ್ಡ್ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ದಿನ 1000 ದಿಂದ 1500 ರಷ್ಟು ಗೋಲ್ಡ್ ಕಾರ್ಡ್ ಗಳನ್ನು ಮಾರಾಟ ಮಾಡಲಾಗುತ್ತದೆ.ಒಂದು ದಸರಾ ಗೋಲ್ಡ್ ಕಾರ್ಡ್ ಗೆ 6500 ರೂಪಾಯಿ ನಿಗದಿ ಪಡಿಸಲಾಗಿದ್ದು, ಒಂದು ಗೋಲ್ಡ್ ಕಾರ್ಡ್ ನಲ್ಲಿ ಒಬ್ಬರು ಜಂಬೂ ಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿಬೆಟ್ಟ, ಅರಮನೆ ಮತ್ತು ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶ ಒದಗಿಸಲಾಗಿದೆ.
ಇದನ್ನೂ ಓದಿ: ಜೈಲಿನಲ್ಲೇ ಐಟಿ ವಿಚಾರಣೆ ಎದುರಿಸಿದ ಕೊಲೆ ಆರೋಪಿ ದರ್ಶನ್
ಇನ್ನು ಯುವ ದಸರಾ ಕಾರ್ಯಕ್ರಮಕ್ಕೆ ಕೂಡಾ ಟಿಕೆಟ್ ದರ ನಿಗದಿಪಡಿಸಲಾಗಿದ್ದು, ಗ್ಯಾಲರಿ 1 ಗೆ ಎಂಟು ಸಾವಿರ ರೂಪಾಯಿ ಮತ್ತು ಗ್ಯಾಲರಿ 2 ಕ್ಕೆ ಐದು ಸಾವಿರ ರೂಪಾಯಿ ದರ ವಿಧಿಸಲಾಗಿದೆ. ಇಂದಿನಿಂದ ಆನ್ ಲೈನ್ ಮುಖಾಂತರ ಯುವ ದಸರಾ ಟಿಕೆಟ್ ಗಳು ಮಾರಾಟಗೊಳ್ಳಲಿವೆ.ಇದೇ ವೇಳೆ ದಸರಾ ಹಿನ್ನೆಲೆಯಲ್ಲಿ ಮೈಸೂರು ಅರಮನೆಯಲ್ಲಿನ ಖಾಸಗಿ ಕಾರ್ಯಕ್ರಮಕ್ಕೆ ಸಿದ್ಧತೆಗಳು ನಡೆದಿದ್ದು, ಇಂದು ಖಾಸಗಿ ದರ್ಬಾರ್ ಗಾಗಿ ಅರಮನೆಯಲ್ಲಿ ರತ್ನ ಖಚಿತ ಸಿಂಹಾಸನವನ್ನು ಜೋಡಿಸುವ ಕಾರ್ಯ ಜರುಗಿದೆ.

ಇಂದು ಬೆಳಗ್ಗೆ ನವಗ್ರಹ ಹೋಮ ಮತ್ತು ಶಾಂತಿ ಪೂಜೆ ಮೂಲಕ ಸಿಂಹಾಸನ ಜೋಡಣೆ ಕಾರ್ಯ ನಡೆದಿದೆ. ರತ್ನ ಖಚಿತ ಸಿಂಹಾಸನ ಜೋಡಣೆಯ ಹಿನ್ನೆಲೆಯಲ್ಲಿ ಮಧ್ಯಾಹ್ನದವರೆಗೂ ಸಾರ್ವಜನಿಕರಿಗೆ ಅರಮನೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಅಕ್ಟೋಬರ್ 3 ರಿಂದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದು, ಸಂಸದರಾಗಿ ಮೊದಲ ಬಾರಿಗೆ ದಸರಾ ರಾಜಪರಂಪರೆಯಲ್ಲಿ ಯದುವೀರ ಒಡೆಯರ್ ಭಾಗಿಯಾಗುತ್ತಿದ್ದಾರೆ.
ಇದನ್ನೂ ಓದಿ : ಪವಿತ್ರಾ ಗೌಡ ಮೈಮೇಲೆ ದರ್ಶನ್ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?
Mysore Dasara online tickets distribution begins