ಬೆಂಗಳೂರು : (Nandini vs Amul) ಕರ್ನಾಟಕದ ಹೆಮ್ಮೆಯ ನಂದಿನಿ ಉತ್ಪನ್ನಗಳ ಅಭಾವದ ಬೆನ್ನಲ್ಲೇ ಅಮುಲ್ ಕರ್ನಾಟಕದಲ್ಲಿ ಹಾಲು ಮಾರಾಟ ಮಾಡಲು ಮುಂದಾಗಿದೆ. ನಂದಿನಿಯ ಜಾಗವನ್ನು ಇಂದು ಅಮುಲ್ ಆಕ್ರಮಿಸಲು ಮುಂದಾಗಿದೆ. ಈ ಹಿಂದೆಯೇ ಅಮುಲ್ ಜೊತೆ ಕೆಎಂಎಫ್ ಅನ್ನು ವಿಲೀನ ಮಾಡಲು ಸರಕಾರ ಮುಂದಾಗಿತ್ತು. ಇದಕ್ಕೆ ಕನ್ನಡಿಗರ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ವಿಲೀನದ ನಿರ್ಧಾರವನ್ನು ಕೈಬಿಡಲಾಗಿತ್ತು. ಇದಾದ ಬಳಿಕ ನಂದಿನಿ ಪ್ಯಾಕೆಟ್ ಮೇಲೆ ದಹಿ ಎಂಬ ಹೊಂದಿ ಪದವನ್ನು ಮುದ್ರಿಸಿ ಕನ್ನಡಿಗರ ಮೇಲೆ ಹಿಂದಿ ಹೇರಿಕೆಯ ಕುತಂತ್ರವು ನಡೆದಿತ್ತು. ಇದಕ್ಕೂ ಕೂಡ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು, ಇದನ್ನು ಕೂಡ ಸರಕಾರ ಹಿಂದಕ್ಕೆ ಪಡೆದುಕೊಂಡಿತ್ತು.
ಗುಜರಾತ್ ಮೂಲದ ಅಮುಲ್ ಹಾಲು ಉತ್ಪಾದನಾ ಮಂಡಳಿ ಇದೀಗ ಕರ್ನಾಟಕದಲ್ಲೂ ಹಾಲು ಮಾರಾಟ ಮಾಡಲು ಮುಂದಾಗಿದೆ. ಕ್ವಿಕ್ ಕಾಮರ್ಸ್ ಫ್ಲಾಟ್ ಫಾರ್ಮ್ ಮೂಲಕ ಮನೆ ಬಾಗಿಲಿಗೆ ಹಾಲು, ಮೊಸರು ಪೂರೈಕೆಯನ್ನು ಮಾಡಲು ಪ್ಲ್ಯಾನ್ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಅಮುಲ್ ವಿರುದ್ದ ಕನ್ನಡಿಗರ ಆಕ್ರೋಶ ಮುಗಿಲು ಮುಟ್ಟಿದ್ದು, ನಂದಿನಿ ಉಳಿಸಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಇದರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಕನ್ನಡಿಗರು ನಂದಿನಿ ಬ್ರಾಂಡ್ ಅಂಬಾಸಿಡರ್ ಅಗಿದ್ದ ದಿವಂಗತ ಪುನೀತ್ ರಾಜ್ ಕುಮಾರ್ ಅವರ ಜಾಹೀರಾತುವಿನ ಸಾಲುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಂದಿನಿ ಉಳಿಸಿ ಅಭಿಯಾನದ ಜೊತೆಗೆ ಗೋ ಅಮುಲ್ ಎನ್ನುವ ಕೂಗು ಸಹ ಜೋರಾಗಿಯೇ ಕೇಳುತ್ತಿದೆ.
ಆನ್ ಲೈನ್ ಮೂಲಕ ಮಾತ್ರ ಗ್ರಾಹಕರಿಗೆ ಹಾಲು, ಮೊಸರು ಮಾರಾಟ ಮಾಡುವುದಾಗಿ ಏ. 5 ರಂದು ಅಮುಲ್ ಟ್ವೀಟ್ ಮಾಡಿಕೊಂಡಿತ್ತು. ಆದರೆ ಭವಿಷ್ಯದಲ್ಲಿ ನೂರಕ್ಕೂ ಹೆಚ್ಚು ಉತ್ಪನ್ನಗಳನ್ನು ದೊಡ್ಡ ಮಟ್ಟದಲ್ಲಿ ಮಾರಾಟ ಮಾಡುವ ಹೆಬ್ಬಯಕೆಯನ್ನು ಅಮುಲ್ ಹೊಂದಿದೆ. ಇನ್ನೂ ಈ ಬಗ್ಗೆ ಕೆಎಂಎಫ್ ನ ಅಧಿಕಾರಿಗಳು ಮಾತನಾಡಿದ್ದು, ಅಮುಲ್ ಗೆ ಏಳು ವರ್ಷದಿಂದ ಐನೂರು ಲೀಟರ್ ಹಾಲು ಮಾರಾಟ ಮಾಡಲು ಆಗಲಿಲ್ಲ. ನಂದಿನಿ ಉತ್ಪನ್ನಗಳು ದೇಶದ ಎಲ್ಲಾ ಕಡೆಯಲ್ಲೂ ಮಾರುಕಟ್ಟೆಯಲ್ಲಿ ಇರುವಂತೆ ಅಮುಲ್ ಉತ್ಪನ್ನಗಳು ಇವೆ. ಈಗ ಆನ್ ಲೈನ್ ಮೂಲಕ ಮಾರಾಟ ಪ್ರಕ್ರಿಯೆ ನಡೆಸಿದರೂ ಕೂಡ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದಿದ್ದಾರೆ.
ನಂದಿನಿ ಇಳಿಕೆ, ಅಮುಲ್ ಗಳಿಕೆ, ಸರಕಾರ ಮೂಕ ಬಸವ !
ಇನ್ನೂ ರಣದೀಪ್ ಸಿಂಗ್ ಸುರ್ಜೇವಾಲ ಬಿಜೆಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ” ಕರ್ನಾಟಕದ ನಂದಿನಿ ಅನ್ನು ಗುಜರಾತ್ ಅಮುಲ್ ಗೆ ಮಾರಾಟ ಮಾಡುವ ಬಿಜೆಪಿಯ ಷಡ್ಯಂತ್ರ ಈಗ ಸ್ಪಷ್ಟವಾಗಿದೆ. ಅಮಿತ್ ಶಾ ಅವರು ಮೊದಲು ಹೇಳಿಕೆ ನೀಡಿದ್ದರು. ಇದೀಗ ಶೋಭಾ ಕರಂದ್ಲಾಜೆ ಅದನ್ನು ಬೆಂಬಲಿಸಿದ್ದಾರೆ. ನಂದಿನಿ ಇಳಿಕೆ, ಅಮುಲ್ ಗಳಿಕೆ, ಸರಕಾರ ಮೂಕ ಬಸವ ! ನಂದಿನಿ ಉಳಿಸಿ, ಬಿಜೆಪಿ ಓಡಿಸಿ ” ಎಂದು ಟ್ವೀಟ್ ಮಾಡಿದ್ದಾರೆ.
” ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ ನಡೆದಿದೆ 3ನೇ ಸಂಚು. ಸಂಚು1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ, ಸಂಚು2: ಮೊಸರಿನ ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ, ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲ. 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ. #ನಂದಿನಿಉಳಿಸಿ ” ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ʼ ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್ʼಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ.ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ. ” ಎಂದು ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
” ಕೆಎಂಎಫ್ ಜತೆ ಅಮುಲ್ ಅನಗತ್ಯ ಸ್ಪರ್ಧೆ ನಡೆಸಿ ದಿನದಿಂದ ದಿನಕ್ಕೆ ನಂದಿನಿಯನ್ನು ತುಳಿಯುವ ಹುನ್ನಾರ ನಡೆಸುತ್ತಿದೆ, ಇದು ಸ್ಪಷ್ಟ. ಸಹಕಾರಿ ಕ್ಷೇತ್ರದ ಪ್ರಸಿದ್ಧ ಸೋದರ ಸಂಸ್ಥೆಗಳ ನಡುವೆ ಅನಾರೋಗ್ಯಕರ ಪೈಪೋಟಿ ಯಾರಿಗೂ ಹಿತವಲ್ಲ.ಕೆಎಂಎಫ್ ರಾಜ್ಯದ ಸಾವಿರಾರು ಗ್ರಾಮಗಳ ಸಹಕಾರ ಸಂಘಗಳ ಮೂಲಕ ರೈತರಿಂದಲೇ ಹಾಲನ್ನು ನೇರವಾಗಿ ಖರೀದಿಸುತ್ತದೆ . ಬಿಜೆಪಿ ಡಬಲ್ ಎಂಜನ್ ಸರಕಾರ ನಮ್ಮ ರಾಜ್ಯದ ಹಾಲು ಉತ್ಪಾದಕರನ್ನು ಬೀದಿಗೆ ತಳ್ಳಿ ಗುಜರಾತಿಗಳ ಗುಲಾಮರನ್ನಾಗಿ ಮಾಡುವ ಹುನ್ನಾರ ನಡೆಸಿರುವುದು ಸ್ಪಷ್ಟ. ಗುಜರಾತಿನಲ್ಲಿ ಎಂದೂ ಕೆಎಂಎಫ್ ಹಾಲು ಮಾರಿದ್ದಿಲ್ಲ. ಅದು ಅಮುಲ್ ನ ಸ್ಥಳೀಯ ಮಾರುಕಟ್ಟೆ ಹಿತ, ಸಹಕಾರಿ ತತ್ವವನ್ನು ಗೌರವಿಸಿದೆ. ಹಾಲು ಸಮೃದ್ಧಿ ಇರುವ ಯಾವುದೇ ಮಹಾಮಂಡಳದ ಸ್ಥಳೀಯ ವ್ಯಾಪ್ತಿಯಲ್ಲಿ ಕೆಎಂಎಫ್ ತನ್ನ ಹಾಲನ್ನು ಮಾರಲ್ಲ. ಕರ್ನಾಟಕ ನೈಜ ಸಹಕಾರ ತತ್ತ್ವ ನಂಬಿದ್ದರೆ, ಗುಜರಾತ್ ಅಸಹಕಾರವನ್ನೇ ನಂಬಿದೆ.” ಎಂದು ಸರಣಿ ಟ್ವೀಟ್ ಗಳ ಮೂಲಕ ಕುಮಾರಸ್ವಾಮಿ ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ.
ಇದನ್ನೂ ಓದಿ : ಅಮುಲ್ ವಿರುದ್ದ ಆಕ್ರೋಶ : ಕನ್ನಡಿಗರಿಂದ ನಂದಿನಿ ಉಳಿಸಿ ಅಭಿಯಾನ
ಕಾಂಗ್ರೆಸ್, ಜೆಡಿಎಸ್ ಪಕ್ಷದ ಕಾರ್ಯಕರ್ತರ ಈ ಎಲ್ಲಾ ಆರೋಪಗಳಿಗೂ ಬೊಮ್ಮಾಯಿ ಟಕ್ಕರ್ ನೀಡಿದ್ದು, ” ನಂದಿನಿ ರಾಷ್ಟ್ರವ್ಯಾಪಿ. ನಮ್ಮ ಕಾಲದಲ್ಲಿಯೇ ಮೆಗಾಡೈರಿಗಳ ಸ್ಥಾಪನೆಯಾಗಿದೆ. ಮೆಗಾಡೈರಿಗೆ ಅನುದಾನ ಬಿಡುಗಡೆ ಮಾಡಿದ್ದು ನಾವು. ಕೆಎಂಎಫ್ನ ನಂದಿನಿ ರಾಷ್ಟ್ರ ಮಟ್ಟದ ಬ್ರ್ಯಾಂಡ್. ನಂದಿನಿ ಬ್ರ್ಯಾಂಡ್ ದೇಶದಲ್ಲಿ ನಂ.1 ಸ್ಥಾನಕ್ಕೆ ಏಳಿಗೆ ಹೊಂದಲಿದೆ. ಅಮುಲ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ.” ಎಂದು ಹೇಳಿದ್ದು, ಅಮುಲ್ ಬ್ರ್ಯಾಂಡ್ ವಿಚಾರವಾಗಿ ಯಾರೂ ಆತಂಕಪಡಬೇಕಿಲ್ಲ. ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ವೃದ್ಧಿಗೆ ಮತ್ತಷ್ಟು ಕ್ರಮಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
Nandini vs Amul: Bommai where the Congress collided with the JDS