ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋತವರ ಹೆಸರು ಮತ್ತೆ ಲೋಕಸಭಾ ಸ್ಪರ್ಧಿಗಳ ಲಿಸ್ಟ್ ನಲ್ಲಿ ಕೇಳಿಬರಲಾರಂಭಿಸಿದೆ. ಈ ಲಿಸ್ಟ್ ನಲ್ಲಿ ಅಗ್ರಸ್ಥಾನದಲ್ಲಿರೋದೇ ಮಾಜಿಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೆಸರು.ಆದರೆ ಈಗ ಈ ಚರ್ಚೆಗೆ ಅಂತ್ಯಬಿದ್ದಂತಾಗಿದ್ದು, ಮಗನ ಭವಿಷ್ಯದ ಬಗ್ಗೆ ಕುಮಾರಸ್ವಾಮಿಯೇ ಅಂತಿಮ ನಿರ್ಧಾರ ಘೋಷಿಸಿದ್ದಾರೆ.
ಮಾಜಿಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಎರಡೆರಡು ಭಾರಿ ಚುನಾವಣಾ ಕಣಕ್ಕಿಳಿದ್ದು ಕೈ ಸುಟ್ಟುಕೊಂಡಿದ್ದಾರೆ. ಒಮ್ಮೆ ಲೋಕಸಭಾ ಉಪ ಚುನಾವಣೆ, ಇನ್ನೊಮ್ಮೆ ವಿಧಾನಸಭಾ ಚುನಾವಣೆ. ಈ ಎರಡು ಚುನಾವಣೆ ಸೋಲು ವೈಯಕ್ತಿಕವಾಗಿ ನಿಖಿಲ್ ವೃತ್ತಿ ಬದುಕಿನ ಬಗ್ಗೆ ನೊರೆಂಟು ಪ್ರಶ್ನೆ ಹುಟ್ಟುಹಾಕಿದೆ. ವಿನಾಕಾರಣ ಹೆಚ್ಡಿಕೆ ತಮ್ಮ ರಾಜಕೀಯ ಪ್ರತಿಷ್ಠೆಗಾಗಿ ಮಗನ ಭವಿಷ್ಯವನ್ನು ಬಲಿಕೊಡುತ್ತಿದ್ದಾರೆ. ತಂದೆಯ ರಾಜಕೀಯ ಜಿದ್ದಿಗಾಗಿ ನಿಖಿಲ್ ರನ್ನು ದಾಳವಾಗಿ ಬಳಸುತ್ತಿದ್ದಾರೆ ಎಂಬೆಲ್ಲ ಮಾತುಗಳು ಕೇಳಿಬಂದಿದ್ದವು. ವೈಯಕ್ತಿಕವಾಗಿ ನಿಖಿಲ್ ಕೂಡ ಎರಡೆರಡು ಸೋಲಿನಿಂದ ಕಂಗೆಟ್ಟಿದ್ದು, ರಾಜಕೀಯದ ಸಹವಾಸವೇ ಬೇಡ ಎಂದು ದೂರವುಳಿಯುವ ನಿರ್ಧಾರವನ್ನು ಮಾಡಿದ್ದಾರಂತೆ.

ಇನ್ನೊಂದೆಡೆ ರಾಜ್ಯದ ರಾಜಕೀಯ ಪರಿಸ್ಥಿತಿಯೂ ಜೆಡಿಎಸ್ ಗೆ ಪೂರಕವಾಗಿಲ್ಲ. ವಿಧಾನಸಭಾ ಚುನಾವಣೆಯಲ್ಲಿ 35 ಸ್ಥಾನವನ್ನು ಗೆಲ್ಲೋ ಲೆಕ್ಕಾಚಾರದಲ್ಲಿದ್ದ ಜೆಡಿಎಸ್ ಗೆ ಹೀನಾಯ ಸೋಲು ಜನ ತಿರಸ್ಕಾರವನ್ನು ಮನದಟ್ಟು ಮಾಡಿಸಿದೆ. ಹೀಗಾಗಿ ಮತ್ತೊಮ್ಮೆ ಯಾವುದೇ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿದು ಅವಮಾನ ಮಾಡಿಕೊಳ್ಳೋಕೆ ನಿಖಿಲ್ ಕುಮಾರಸ್ವಾಮಿ ಸಿದ್ಧವಿಲ್ಲವಂತೆ. ಮಾತ್ರವಲ್ಲ ಮಗನನ್ನು ಹೀಗೆ ಚುನಾವಣೆಗೆ ನಿಲ್ಲಿಸಿ ಸೋಲಿಸಿ ನೋವು ಕೊಡೋದು ಬೇಡ ಎಂದು ಅನಿತಾ ಕುಮಾರಸ್ವಾಮಿ ಕೂಡ ಕುಮಾರಸ್ವಾಮಿಗೆ ವಾರ್ನ್ ಮಾಡಿದ್ದಾರಂತೆ.
ಹೀಗಾಗಿ ಮುದ್ದಿನ ಮಗನನ್ನು ಈ ಸೋಲಿನ ರಾಜಕಾರಣದಿಂದ ದೂರವಿಡಲು ಕುಮಾರಸ್ವಾಮಿ ಗಟ್ಟಿ ತೀರ್ಮಾನ ಮಾಡಿದ್ದಾರಂತೆ. ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ಮಾಜಿಸಿಎಂ ಎಚ್ಡಿಕೆ ನೇರವಾಗಿ ಈ ಬಗ್ಗೆ ಮಾತನಾಡಿದ್ದು, ನನ್ನ ಮಗ ರಾಜಕಾರಣ ಮಾಡಿಯೇ ಬದುಕಬೇಕೆಂದು ಎಲ್ಲೂ ಬರೆದಿಲ್ಲ.ನನ್ನ ಮಗ ರಾಜಕಾರಣಕ್ಕೆ ಬರೋದಿಲ್ಲ. ಸಿನಿಮಾ ಕ್ಷೇತ್ರದಲ್ಲೇ ಮುಂದುವರೆಯುತ್ತಾನೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ.

ಸಹೋದರ ರೇವಣ್ಣನ ಇಬ್ಬರೂ ಪುತ್ರರು ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಂಡಿದ್ದು, ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡ ಕುಮಾರಸ್ವಾಮಿ ಶತಾಯ ಗತಾಯ ಮಗನನ್ನು ರಾಜಕಾರಣಕ್ಕೆ ತಂದು ಲೋಕಸಭೆ ಅಥವಾ ವಿಧಾನಸಭೆ ಮೆಟ್ಟಿಲು ಹತ್ತಿಸಬೇಕೆಂದು ಪ್ರಯತ್ನಿಸಿದ್ದರು. ಆದರೆ ಆರಂಭಿಕ ವಿಘ್ನ ಕುಮಾರಸ್ವಾಮಿ ಕನಸನ್ನು ಭಗ್ನಗೊಳಿಸಿದೆ. ಹೀಗಾಗಿ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬಂತೆ ಕುಮಾರಸ್ವಾಮಿ ಮಗನ ರಾಜಕೀಯ ಭವಿಷ್ಯ ಆರಂಭ ಕ್ಕೂ ಮುನ್ನವೇ ಅಧಿಕೃತ ಅಂತ್ಯಕಂಡಿದೆ.