ಸೋಮವಾರ, ಏಪ್ರಿಲ್ 28, 2025
HomeCoastal Newsಒತ್ತಿನೆಣೆ ಕಾರು ಸುಟ್ಟ ಪ್ರಕರಣ : ಸಿನಿಮಾ ಸ್ಟೈಲ್‌ನಲ್ಲಿ ಸೂಸೈಡ್‌ ಹೈಡ್ರಾಮ, ಅಮಾಯಕನನ್ನು ಸುಟ್ಟ ಕೊಂದ...

ಒತ್ತಿನೆಣೆ ಕಾರು ಸುಟ್ಟ ಪ್ರಕರಣ : ಸಿನಿಮಾ ಸ್ಟೈಲ್‌ನಲ್ಲಿ ಸೂಸೈಡ್‌ ಹೈಡ್ರಾಮ, ಅಮಾಯಕನನ್ನು ಸುಟ್ಟ ಕೊಂದ ಪಾಪಿಗಳು

- Advertisement -

ಕುಂದಾಪುರ : ಒತ್ತಿನೆಣೆ ಸಮೀಪದಲ್ಲಿ ನಡೆದಿದ್ದ ಕಾರು ಸುಟ್ಟ ಪ್ರಕರಣಕ್ಕೀಗ (Ottinene Man Burnt Alive in Car) ಮೇಜರ್‌ ಟ್ವಿಸ್ಟ್‌ ಸಿಕ್ಕಿದೆ. ಹಳೆ ಕೇಸಿನಿಂದ ಪಾರಾಗುವ ಸಲುವಾಗಿ ಸೂಸೈಡ್‌ ಡ್ರಾಮಾ ಮಾಡಲು, ಅಮಾಯಕನೋರ್ವನನ್ನು ಪಾಪಿಗಳು ಬಲಿ ಕೊಟ್ಟಿದ್ದಾರೆ. ವಯಾಗ್ರ ಎಂದು ಸುಳ್ಳು ಹೇಳಿ ನಿದ್ದೆ ಮಾತ್ರೆ ತಿನ್ನಿಸಿ ನಂತರ ಕಾರಿನಲ್ಲಿ ಕುಳ್ಳಿರಿಸಿ ಪೆಟ್ರೋಲ್‌ ಸುರಿದು ಸಜೀವವಾಗಿ ದಹನ ಮಾಡಿದ್ದಾರೆ.

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆ ಸಮೀಪದ ಹೇನಬೇರು ರಸ್ತೆಯಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಕಾರೊಂದು ಪತ್ತೆಯಾಗಿತ್ತು. ಮಾತ್ರವಲ್ಲ ಕಾರಿನ ಹಿಂಬದಿಯ ಸೀಟ್‌ನಲ್ಲಿ ಅಸ್ಥಿಪಂಜರ ಪತ್ತೆಯಾಗಿತ್ತು. ಈ ಕುರಿತು ಪ್ರಕರಣದ ಜಾಡು ಹಿಡಿದು ಹೊರ ಪೊಲೀಸರು ಕೇವಲ ಒಂದೇ ದಿನದ ಅವಧಿಯಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಮಾತ್ರವಲ್ಲ ಕಾರಿನಲ್ಲಿ ವ್ಯಕ್ತಿಯೋರ್ವನನ್ನು ಸಜೀವವಾಗಿ ದಹನ ಮಾಡಿರುವುದನ್ನು ಬಯಲು ಮಾಡಿದ್ದಾರೆ.

ಕಾರ್ಕಳ ಮೂಲದ ಆನಂದ ದೇವಾಡಿಗ (62 ವರ್ಷ) ಎಂಬಾತನೇ ಕಾರಿನಲ್ಲಿ ಸಜೀವವಾಗಿ ದಹನವಾದ ವ್ಯಕ್ತಿ. ಕಾರ್ಕಳದ ಮಾಳ ನಿವಾಸಿ ಸದಾನಂದ ಶೇರಿಗಾರ್ (52 ವರ್ಷ), ಹಿರ್ಗಾನ ಶಿವನಗರದ ಶಿಲ್ಪಾ ಸಾಲ್ಯಾನ್ (30 ವರ್ಷ) ಎಂಬವರೇ ಅಮಾಯಕನ್ನು ಕಾರಿನಲ್ಲಿರಿಸಿ ಸುಟ್ಟು ಹಾಕಿದ ಆರೋಪಿಗಳು. ಅಲ್ಲದೇ ಕೊಲೆ ಆರೋಪಿಗಳು ಪರಾರಿಯಾಗಲು ಸಹಕಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ಸತೀಶ್ ದೇವಾಡಿಗ (49 ವರ್ಷ), ನಿತಿನ್ ದೇವಾಡಿಗ (40 ವರ್ಷ) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ಸಿನಿಮಾ ಶೈಲಿಯಲ್ಲಿ ನಡೆದಿತ್ತು ಕೊಲೆ !

ಖಾಸಗಿ ಸರ್ವೇಯರ್‌ ಆಗಿ ಕೆಲಸ ಮಾಡುತ್ತಿದ್ದ ಸದಾನಂದ ಶೇರಿಗಾರ್ ಕಲ್ಲು ಕ್ವಾರಿಯೊಂದನ್ನು ನಡೆಸುತ್ತಿದ್ದಾನೆ. ಈ ಹಿಂದೆ ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿ ಕೆಲಸ ಮಾಡುತ್ತಿದ್ದ ವೇಳೆಯಲ್ಲಿ, 2019ರಲ್ಲಿ ವ್ಯಕ್ತಿಯೊಬ್ಬರ ಜಮೀನಲ್ಲಿ ಅಕ್ರಮವಾಗಿ ತನ್ನ ಕೈ ಬರಹದಲ್ಲಿ ರಸ್ತೆ ಇರುವುದಾಗಿ ನಕ್ಷೆ ತಯಾರಿಸಿಕೊಟ್ಟಿದ್ದ. ಈ ಪ್ರಕರಣದ ಬಗ್ಗೆ ಜಮೀನಿನ ಮಾಲೀಕರು ಸದಾನಂದ ಶೇರಿಗಾರ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರನ್ನು ದಾಖಲು ಮಾಡಿದ್ದರು. ಅಷ್ಟೇ ಅಲ್ಲಾ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ಕೂಡ ದಾಖಲಾಗಿತ್ತು. ಆದರೆ ನ್ಯಾಯಾಲಯದಿಂದ ಹಲವು ಬಾರಿ ವಾರೆಂಟ್‌ ಮಂಜೂರಾಗಿದ್ದರೂ ಕೂಡ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಜೊತೆಗೆ ನ್ಯಾಯಾಲಯದಿಂದ ಜಾಮೀನು ಸಿಗದೇ ಇದ್ದಾಗ, ತಾನು ಸತ್ತು ಹೋಗಿರುವುದಾಗಿ ಜನರನ್ನು ನಂಬಿಸಿ ಪರಾರಿಯಾಗುವ ಹುನ್ನಾರ ನಡೆಸಿದ್ದಾನೆ. ಹೀಗಾಗಿ ಆನಂದ ದೇವಾಡಿಗನ್ನು ಸಿನಿಮಾ ಶೈಲಿಯಲ್ಲಿ ಕೊಲೆ ಮಾಡಿದ್ದಾರೆ.

ವಯಾಗ್ರ ಮಾತ್ರೆ ಎಂದು ನಿದ್ರೆ ಮಾತ್ರೆ ತಿನ್ನಿಸಿದ ಶಿಲ್ಪಾ !

ಸದಾ ಒಂದಿಲ್ಲೊಂದು ಖತರ್‌ನಾಕ್‌ ಕೆಲಸ ಮಾಡಿಕೊಂಡಿದ್ದ ಸದಾನಂದ ಸೇರಿಗಾರನಿಗೆ ಜಮೀನು ವಿಚಾರದಲ್ಲಿ ಹಿರ್ಗಾನದ ಶಿಲ್ಪಾ ಪೂಜಾರಿ ಎಂಬ ವಿವಾಹಿತ ಮಹಿಳೆಯ ಪರಿಚಯವಾಗಿತ್ತು. ತಾನು ಹಳೆಯ ಕೇಸಿನಿಂದ ಬಜಾವ್‌ ಆಗಲು ಹೆಣೆದಿದ್ದ ಸೂಸೈಡ್‌ ಡ್ರಾಮಾವನ್ನು ಸದಾನಂದ ಶಿಲ್ಪಾಳ ಬಳಿಯಲ್ಲಿ ಹೇಳಿಕೊಂಡಿದ್ದ. ಇದಕ್ಕೆ ಸಾಥ್‌ ಕೊಟ್ಟ ಶಿಲ್ಪಾ ಸದಾನಂದ ಯೋಜನೆಗಾಗಿ ಸಿದ್ದ ಪಡಿಸಿದ್ದು ಆನಂದ ದೇವಾಡಿಗನನ್ನು. ಶಿಲ್ಪಾ ರಾತ್ರಿಯ ವೇಳೆಯಲ್ಲಿ ಕಾಮದಾಹ ತೀರಿಸುವುದಾಗಿ ಹೇಳಿ, ಆನಂದ ದೇವಾಡಿಗನನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದಾಳೆ. ಈ ವೇಳೆಯಲ್ಲಿ ಆನಂದ ದೇವಾಡಿಗನಿಗೆ ವಯಾಗ್ರ ಮಾತ್ರೆ ಎಂದು ನಂಬಿಸಿ ನಿದ್ರೆಯ ಮಾತ್ರೆಯನ್ನು ನೀಡಿದ್ದಾಳೆ. ಮಾತ್ರೆ ಸೇವಿಸಿ ನಿದೆಗೆ ಜಾರುತ್ತಲೇ ಶಿಲ್ಪಾ ಸದಾನಂದನನ್ನು ತನ್ನ ಮನೆಗೆ ಕರೆಯಿಸಿಕೊಂಡಿದ್ದಾಳೆ.

ಹಳೆಯ ಕಾರಿನಲ್ಲಿ ಒತ್ತಿನೆಣೆಯ ವರೆಗೆ ಪ್ರಯಾಣ

ಸದಾನಂದ ತನ್ನ ಬಳಿಯಲ್ಲಿದ್ದ ಹಳೆಯ ಕಾರನ್ನು ಶಿಲ್ಪಾಳ ಮನೆಗೆ ತಂದಿದ್ದಾನೆ. ಈ ವೇಳೆಯಲ್ಲಿ ಇಬ್ಬರೂ ಸೇರಿಕೊಂಡು ಆನಂದ ದೇವಾಡಿಗನನ್ನು ಕಾರಿನಲ್ಲಿ ಕೂರಿಸಿಕೊಂಡು ಒತ್ತಿನೆಣೆಯ ವರೆಗೂ ಪ್ರಯಾಣ ಬೆಳೆಸಿದ್ದಾರೆ. ಈ ನಡುವಲ್ಲೇ ಬೈಲೂರು ಬಳಿಯಲ್ಲಿನ ಪೆಟ್ರೋಲ್‌ ಬಂಕ್‌ನಲ್ಲಿ ೧೦ ಲೀಟರ್‌ ಕ್ಯಾನ್‌ನಲ್ಲಿ ಹಾಗೂ ೨ ಲೀಟರ್‌ ಬಾಟಲಿಯಲ್ಲಿ ಪೆಟ್ರೋಲ್‌ ಖರೀದಿ ಮಾಡಿದ್ದಾರೆ. ನಂತರ ಒತ್ತಿನೆಣೆ ತಲುಪಿದ ಬಳಿಕ ಹೇನಬೇರು ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ, ಕಾರಿನೊಳಗೆ ಆನಂದ ದೇವಾಡಿಗನನ್ನು ಇರಿಸಿ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗುತ್ತಿದ್ದಂತೆಯೇ ಆರೋಪಿ ಸದಾನಂದನ ಪತ್ನಿಯ ಸಹೋದರರಾದ ನಿತಿನ್‌ ದೇವಾಡಿಗ ಹಾಗೂ ಸತೀಶ್‌ ದೇವಾಡಿಗ ಎಂಬವರು ಬೇರೆಯ ಕಾರಿನಲ್ಲಿ ಬಂದು ಶಿಲ್ಪಾ ಹಾಗೂ ಸದಾನಂದನನ್ನು ಕರೆದುಕೊಂಡು ಶಿಲ್ಪಾಳ ಮನೆ ಮುಟ್ಟಿಸಿದ್ದರು.

ಪರಾರಿಯಾಗಲು ಹೊರಟವರಿಗೆ ಕೈ ಕೊಟ್ಟ ಬಸ್‌

ಒತ್ತಿನೆಣೆಯಲ್ಲಿ ಕಾರಿನ ಜೊತೆಗೆ ಅಮಾಯಕನನ್ನು ಕೊಂದು ಮುಗಿಸಿದ್ದ ಪಾಪಿಗಳು ಬುಧವಾರ ಸಂಜೆ ಬೆಂಗಳೂರಿನ ಕಡೆಗೆ ಹೊರಟಿದ್ದರು. ಆದರೆ ಬೆಂಗಳೂರಿಗೆ ತೆರಳಬೇಕಾಗಿದ್ದ ಬಸ್‌ ಹಾಳಾಗಿತ್ತು. ಇದರಿಂದಾಗಿ ಮೂಡಬಿದ್ರೆಯ ಮೂಲಕ ಕಾರ್ಕಳಕ್ಕೆ ವಾಪಾಸಾಗುತ್ತಿದ್ದರು. ಕಾರ್ಕಳ ಬೈಪಾಸ್‌ ಬಳಿಯಲ್ಲಿ ಆರೋಪಿಗಳಿಬ್ಬರು ಪೊಲೀಸರ ಕೈಯಲ್ಲಿ ಸಿಕ್ಕಿ ಹಾಕಿಕೊಂಡಿದ್ದರು.

ಸದಾನಂದನಿಗೆ ಕೈಕೊಟ್ಟ ಸಹೋದರ, ಸ್ನೇಹಿತ

ಕಾರಿನಲ್ಲಿ ಆನಂದ ದೇವಾಡಿಗನನ್ನು ಸಜೀವವಾಗಿ ಸುಟ್ಟು ಹಾಕಿದ ನಂತರದಲ್ಲಿ ತಾನು ನಾಪತ್ತೆಯಾಗಿದ್ದೇನೆ ಎಂದು ಬಿಂಬಿಸಿಕೊಳ್ಳುವ ಸಲುವಾಗಿ ತಮ್ಮ ರವಿಶಂಕರನಿಗೆ ಕರೆ ಮಾಡಿದ್ದ ಸದಾನಂದ, ತಾನು ನಾಪತ್ತೆ ಆಗಿದ್ದೇನೆ ಎಂದು ದೂರು ಕೊಡು ಎಂದು ತಿಳಿಸಿದ್ದಾನೆ. ಆದರೆ ಸಹೋದರ ಮಾತ್ರ ಅಣ್ಣನ ಮಾತಿಗೆ ಸೊಪ್ಪು ಹಾಕಿರಲಿಲ್ಲ. ನಂತರದಲ್ಲಿ ತನ್ನ ಸ್ನೇಹಿತನೊಬ್ಬನಿಗೂ ಕರೆ ಮಾಡಿದ್ದ ಸದಾನಂದ ದೂರು ನೀಡುವಂತೆಯೂ ಕೇಳಿಕೊಂಡಿದ್ದ. ಆದರೆ ಇಬ್ಬರೂ ದೂರು ನೀಡಿಲಿಲ್ಲ ಎನ್ನಲಾಗುತ್ತಿದೆ.

36 ಗಂಟೆಯಲ್ಲಿ ಪ್ರಕರಣ ಬೇಧಿಸಿದ ಪೊಲೀಸರು !

ಒತ್ತಿನೆಣೆ ಸಮೀಪದಲ್ಲಿ ನಡೆದಿದ್ದ ಪ್ರಕರಣ ಕರಾವಳಿಗರನ್ನು ಬೆಚ್ಚಿ ಬೀಳಿಸಿತ್ತು. ಅಲ್ಲದೇ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಂಡಿತ್ತು. ಆದ್ರೆ ಉಡುಪಿ‌ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಹೆಚ್ಚುವರಿ ಎಸ್ಪಿ ಎಸ್.ಟಿ ಸಿದ್ದಲಿಂಗಪ್ಪ, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ. ನಿರ್ದೇಶನದಲ್ಲಿ ವೃತ್ತನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿಎಸ್ಐ ಪವನ್ ನಾಯಕ್, ಗಂಗೊಳ್ಳಿ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ಕೇವಲ 36 ಗಂಟೆಗಳ ಅವಧಿಯಲ್ಲಿ ಪೊಲೀಸರು ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮೋಹನ ಪೂಜಾರಿ , ನಾಗೇಂದ್ರ, ಕೃಷ್ಣ ದೇವಾಡಿಗ, ಶಾಂತರಾಮ ಶೆಟ್ಟಿ, ಅಣ್ಣಪ್ಪ ಪೂಜಾರಿ, ಚಂದ್ರಶೇಖರ, ಸುಜಿತ್‌, ಶ್ರೀಧರ, ಪ್ರಿನ್ಸ್, ಚಾಲಕರಾದ ಚಂದ್ರಶೇಖರ್ ಅವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಪೊಲೀಸರ ಕಾರ್ಯಕ್ಕೆ ಇದೀಗ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ಯವಾಗುತ್ತಿದೆ.

ಇದನ್ನೂ ಓದಿ : Udupi court sentenced 20 years : ಅಪ್ತಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ : 20 ವರ್ಷ ಶಿಕ್ಷೆ ವಿಧಿಸಿದ ನ್ಯಾಯಾಲಯ

ಇದನ್ನೂ ಓದಿ : Ottinene Burnt car : ಒತ್ತಿನೆಣೆ ಕಾರು ಸುಟ್ಟ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌ : ಸಾಸ್ತಾನ ಟೋಲ್‌ ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಮಹಿಳೆ ಯಾರು ?

Ottinene Man Burnt Alive in Car, Four Arrested in Byndoor Udupi

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular