Rave party at Mysore; ಮೈಸೂರು: ನಾಡಹಬ್ಬ ದಸರಾ ಸಂಭ್ರಮ ಕಳೆಗಟ್ಟುತ್ತಿದ್ದಂತೆಯೇ ಮೈಸೂರಿನ ಹೊರವಲಯದಲ್ಲಿ ನಿನ್ನೆ ರಾತ್ರಿ ನಡೆದಿರುವ ಪಾರ್ಟಿಯೊಂದರ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮೈಸೂರು(Mysore) ನಗರದ ಹೊರ ವಲಯದಲ್ಲಿ ರೇವ್ ಪಾರ್ಟಿ ನಡೆದಿರುವ ಬಗ್ಗೆ ಶಂಕಿಸಲಾಗಿದೆ.
ನಿನ್ನೆ ತಡರಾತ್ರಿ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಮೈಸೂರು ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದು ಪಾರ್ಟಿಯಲ್ಲಿದ್ದ ಐವತ್ತಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಪೊಲೀಸರು ದಾಳಿ ನಡೆಸಿದ ವೇಳೆ ಸ್ಥಳದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕೆಲವು ಯುವಕರು ಪೊಲೀಸರ ಮೇಲೆಯೇ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ನಾಗೇಶ್ ಮತ್ತು ಡಿವೈಎಸ್ಪಿ ಕರೀಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸರು ಬರುತ್ತಿದಂತೆಯೇ ಪಾರ್ಟಿಯಲ್ಲಿ ತೊಡಗಿದ್ದ ಯುವಕರು ಮತ್ತು ಯುವತಿಯರು ಎದ್ದು ಬಿದ್ದು ಓಡಿದ್ದಾರೆ ಎನ್ನಲಾಗಿದೆ.
ನೂರೈವತ್ತಕ್ಕೂ ಹೆಚ್ಚು ಯುವಕರು ಮತ್ತು ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದು, ಆಯೋಜಕರಿಂದ ಒಬ್ಬರಿಗೆ ಎರಡು ಸಾವಿರ ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿತ್ತು. ಇಸ್ರೇಲ್ ನಿಂದ ರ್ಯಾಪರ್ ಗ್ರೇನ್ ರಿಪ್ಪರ್ ನನ್ನು ಕರೆಸಲಾಗಿದ್ದು,
ಸ್ಥಳದಲ್ಲಿ ಎಫ್ಎಸ್ಎಲ್ ತಂಡದಿಂದ ಪರಿಶೀಲನೆ ನಡೆದಿದೆ.
ಇನ್ನು ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಮತ್ತು ಮಾದಕ ದ್ರವ್ಯ ದೊರೆತಿಲ್ಲ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿಕೆ ನೀಡಿದ್ದು, ಪಾರ್ಟಿ ನಡೆಸುವುದಕ್ಕೆ ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಹೇಳಿದ್ದಾರೆ.
ವಿದೇಶಿಯರು ಪಾರ್ಟಿಯಲ್ಲಿ ಭಾಗಿಯಾಗಿರುವ ನಿಟ್ಟಿನಲ್ಲಿ ತನಿಖೆ ನಡೆಸಲಾಗುವುದು ಎಂದು ಹೇಳಿರುವ ಎಸ್ಪಿ ವಿಷ್ಣುವರ್ಧನ್, ಮದ್ಯ ಮತ್ತು ಸಿಗರೇಟ್ ಸ್ಥಳದಲ್ಲಿ ದೊರೆತಿದ್ದು, ಪಾರ್ಟಿಯಲ್ಲಿ ಇದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ,
ವರದಿ ಬಂದ ನಂತರ ಪಾರ್ಟಿ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಕಾರ್ಯಕ್ರಮದ ಆಯೋಜಕರ ಕೂಡಾ ಕ್ರಮ ಕೈಗೊಳ್ಳುವುದಾಗಿಯೂ ಎಸ್ಪಿ ಹೇಳಿದ್ದಾರೆ.

ಈ ಮಧ್ಯೆ ದಸರಾ ಹಬ್ಬ ಸಮೀಪಿಸುತ್ತಿದ್ದಂತೆಯೇ ಮೈಸೂರು ನಗರದ ಹೊರವಲಯದಲ್ಲಿ ಪಾರ್ಟಿ ನಡೆದಿರುವ ಕುರಿತಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ,ಪೊಲೀಸರು ತನಿಖೆ ನಡೆಸಿ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ, ಎಸ್ ಪಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.
Police raided on late night party at Mysore city outskirts suspects rave party