ಬೆಂಗಳೂರು : ಒಂದೆಡೆ ರಾಜ್ಯದಾದ್ಯಂತ ಚಿಂತಕ ರೋಹಿತ ಚಕ್ರತೀರ್ಥ (Rohith Chakrathirtha) ಸಮಿತಿ ಸಿದ್ಧಪಡಿಸಿದ ಹಾಗೂ ಪರಿಷ್ಕರಿಸಿದ ಪಠ್ಯಕ್ರಮಕ್ಕೆ ತೀವ್ರ ವಿರೋಧ (text Book Controversy) ವ್ಯಕ್ತವಾಗುತ್ತಿದೆ. ಪಠ್ಯವನ್ನು ಬದಲಾಯಿಸಬಾರದು ಹಾಗೂ ರೋಹಿತ್ ಚಕ್ರತೀರ್ಥ ಅವರನ್ನು ಪಠ್ಯಸಮಿತಿಯಿಂದ ಕೈಬಿಡಬೇಕೆಂಬ ಒತ್ತಡವೂ ವ್ಯಕ್ತವಾಗುತ್ತಿದೆ. ಆದರೆ ಇದೆಲ್ಲದರ ಮಧ್ಯೆ ಚಿಂತಕ ಹಾಗೂ ಶಿಕ್ಷಣ ತಜ್ಞ ರೋಹಿತ್ ಚಕ್ರ ತೀರ್ಥ ತಮ್ಮ ಪಠ್ಯಕ್ರಮ ಪರಿಷ್ಕರಣೆಯ ಅನುಭವ ಹಂಚಿಕೊಂಡಿದ್ದು, ಪಠ್ಯಕ್ರಮ ಬದಲಾವಣೆಯನ್ನು ಬೌದ್ಧಿಕ ಪಕ್ವತೆಯ ಸಾಕ್ಷಿ ಎಂದು ಬಣ್ಣಿಸಿದ್ದಾರೆ. ಹೌದು ಸರ್ಕಾರ ಈ ವರ್ಷ ಮೂರನೇ ತರಗತಿ ಹೊರತುಪಡಿಸಿ 1 ರಿಂದ 10 ನೇ ತರಗತಿಯ ಭಾಷಾ ಪಠ್ಯ ಹಾಗೂ ಇನ್ನೂ ಕೆಲ ವಿಷಯಗಳ ಪಠ್ಯವನ್ನು ಪರಿಷ್ಕರಣೆ ಮಾಡಿದೆ. ಕೆಲವನ್ನು ಕೈಬಿಟ್ಟು ಹಲವನ್ನು ಸೇರಿಸಿ ಪಠ್ಯಕ್ರಮವನ್ನು ಸರಿಮಾಡಿದ್ದೇವೆ ಎಂದು ಸಮಿತಿ ಹೇಳಿದೆ. ಆದರೆ ಪಠ್ಯ ಕ್ರಮದ ಕೇಸರಿಕರಣವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇದಕ್ಕೆ ನಾಡಿನ ಹಲವು ಸಾಹಿತಿಗಳು ಕೈಜೋಡಿಸಿದ್ದಾರೆ.
ಈ ಮಧ್ಯೆ ರೋಹಿತ್ ಚಕ್ರತೀರ್ಥ (Rohith Chakrathirtha) ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪಠ್ಯಕ್ರಮ ಪರಿಷ್ಕರಣೆಯ ಅನುಭವವನ್ನು ವಿವರವಾಗಿ ಹಂಚಿಕೊಂಡಿದ್ದು, ಜನರು ಬೌದ್ಧಿಕ ಪಕ್ವತೆಯ ಕಾರಣಕ್ಕೆ ಬದಲಾವಣೆ ಬಯಸಿದ್ದಾರೆ. ಯಥಾ ರಾಜಾ ತಥಾ ಪ್ರಜಾ ಎಂಬಂತೆ ಒಳ್ಳೆಯ ನಾಯಕರಿಂದಾಗಿಜನರಲ್ಲಿ ಒಳ್ಳೆಯ ಬದಲಾವಣೆಯಾಗಿದೆ ಎನ್ನುವ ಮೂಲಕ ಪರೋಕ್ಷವಾಗಿ ಮೋದಿಯನ್ನು ಹೊಗಳಿದ್ದಾರೆ. ಆರೇಳು ತಿಂಗಳು ನಾವು ಹಗಲಿರುಳು ಕೆಲಸ ಮಾಡಿದ್ದೆವು. ಒಂದು ಬಗೆಯ ಸುಸ್ತು ಆವರಿಸಿಕೊಂಡಿತ್ತು. ಸುಸ್ತಾಗಿದ್ದುದು ಕೆಲಸ ಮಾಡಿದ್ದಕ್ಕಲ್ಲ; ಸರಕಾರಿ ಇಲಾಖೆಯ ಕಾಗದ ಪತ್ರಗಳ ಶಿಷ್ಟಾಚಾರಗಳಿಗೆ. ಆ ಪತ್ರ ಬರೆ, ಈ ಫಾರ್ಮ್ ತುಂಬಿಸು, ಮತ್ತೊಂದು ರಿಪೋರ್ಟು ಕೊಡು.. ಹೀಗೆ ಸರಕಾರೀ ಯಂತ್ರಕ್ಕೆ ಅತ್ಯಗತ್ಯವಾಗಿ ಕೊಡಲೇಬೇಕಿದ್ದ ಒಂದಷ್ಟು ಕೆಲಸಗಳನ್ನೂ, ಪರಿಷ್ಕರಣೆಯ ಜೊತೆಜೊತೆಗೆ ಮಾಡಿಕೊಡಬೇಕಿತ್ತು. ಅದೆಲ್ಲವನ್ನು ಮಾಡಿ ಪುಸ್ತಕಗಳು ಒಂದು ಹಂತಕ್ಕೆ ಎಲ್ಲ ತಯಾರಾಗಿ ಮುದ್ರಣಕ್ಕೆ ಹೋದವೆಂಬುದನ್ನು ಖಚಿತಪಡಿಸಿಕೊಂಡ ಮೇಲೆ ಚೆನ್ನಾಗಿ ನಿದ್ದೆ ಬಂದದ್ದು.
ಹಾಗಂತ ನಾವು ಮಾಡಿದ್ದು ಘನಂದಾರೀ ಕೆಲಸವೇನಲ್ಲ. ಇದು ಮೇಲುಮೇಲಿನ ಪರಿಷ್ಕರಣೆಯ ಕೆಲಸ ಅಷ್ಟೆ. ಆದರೂ ಕೆಲವು ಅಧ್ಯಾಯಗಳು ಹಿಂದಿನ ಪರಿಷ್ಕರಣೆಯಲ್ಲಿ ಎಷ್ಟು ಹದಗೆಟ್ಟಿದ್ದವೆಂದರೆ ಅವನ್ನು ಪೂರ್ತಿಯಾಗಿ ಹೊಸದಾಗೇ ಬರೆಯಬೇಕಾದ ಅನಿವಾರ್ಯತೆಯಿತ್ತು. ಕೆಲವು ಅಧ್ಯಾಯಗಳನ್ನು ಅಡ್ಡಾದಿಡ್ಡಿಯಾಗಿ ಸೇರಿಸಿದ್ದರು, ಅವನ್ನೆಲ್ಲ ಕ್ರಮಬದ್ಧಗೊಳಿಸಬೇಕಾಯಿತು. ಅನಗತ್ಯ ಸಿದ್ಧಾಂತಗಳ ತುರುವಿಕೆಯನ್ನು ತೆಗೆದುಹಾಕಿ ಶುದ್ಧ ಪಾಠಾಂಶಗಳನ್ನಷ್ಟೆ ಉಳಿಸಬೇಕಾಯಿತು. ನಕ್ಷೆಗಳು ತಪ್ಪಿದ್ದವು; ಹತ್ತು ವರ್ಷಗಳ ಹಿಂದಿನ ಅಂಕೆ-ಸಂಖ್ಯೆಗಳಿದ್ದವು; ನೂರಾರು ಕಾಗುಣಿತ ದೋಷಗಳು ಪುಟಪುಟಗಳಲ್ಲೂ ಹೊಡೆದುಕಾಣುತ್ತಿದ್ದವು. ಅವೆಲ್ಲವನ್ನು ಸರಿಪಡಿಸುವ, ಹೊಸ ಅಂಶಗಳನ್ನು ಸೇರಿಸುವ, ಹಳೆಯದರಲ್ಲಿ ಅಪ್ರಸ್ತುತವಾದದ್ದನ್ನು ಕೈಬಿಡುವ, ೨೦೧೪ರ ಮೂಲಪಠ್ಯವನ್ನೂ ೨೦೧೭ರ ಪರಿಷ್ಕರಣ ಪಠ್ಯವನ್ನೂ ಮುಂದಿಟ್ಟುಕೊಂಡು ಗಮನಿಸುವ, ಸಮರ್ಪಕವಾದದ್ದನ್ನು ಉಳಿಸಿಕೊಳ್ಳುವ ಕೆಲಸವೂ ಇತ್ತು. ಸಮಾಜವಿಜ್ಞಾನದ ಸವಾಲುಗಳೇ ಬೇರೆ, ಕನ್ನಡ ಭಾಷಾಪಠ್ಯಗಳಲ್ಲಿದ್ದ ಸವಾಲುಗಳೇ ಬೇರೆ.
ಇರಲಿ, ಆ ಕಷ್ಟಗಳ ಗೋಳಿನ ಕತೆಗಳೆಲ್ಲ ನಮಗೇ ಇರಲಿ. ಈಗ ಖುಷಿಯಾಗಿರುವುದು ಈ ಪುಸ್ತಕಗಳನ್ನು ಸಾರ್ವಜನಿಕರು ಮುಕ್ತವಾಗಿ ಸ್ವಾಗತಿಸಿರುವುದಕ್ಕೆ. ಸಮಾಜದ ಪ್ರತಿಯೊಬ್ಬರೂ ಇವನ್ನು ತಮ್ಮ ಪುಸ್ತಕಗಳೆಂಬ ಪ್ರೀತಿಯಿಂದ ಎದೆಗೊತ್ತಿಕೊಂಡಿದ್ದಾರೆ. ಓದುವ ಆಸಕ್ತಿ ಹುಟ್ಟಿಸುವ ಪುಸ್ತಕಗಳ ಪಟ್ಟಿಯಲ್ಲಿ ಬಹುಶಃ ಕೊಟ್ಟಕೊನೆಯ ಸಾಲಲ್ಲಿ ನಿಲ್ಲುವುದು ಪಠ್ಯಪುಸ್ತಕಗಳು. ಆದರೆ ಅಂಥ ಪುಸ್ತಕಗಳೇ ಇಂದು ದೊಡ್ಡ ಮಟ್ಟದ ಚರ್ಚೆಗೆ, ಮೆಚ್ಚುಗೆಗೆ ಪಾತ್ರವಾಗಿವೆ ಎಂದರೆ ಅಷ್ಟರಮಟ್ಟಿಗೆ ಈ ಸಮಾಜ ಪ್ರಬುದ್ಧವಾಗಿದೆ, ಸ್ಪಂದನಶೀಲವಾಗಿದೆ ಎಂದು ಅರ್ಥ. ಇಂಥದೊಂದು ಸಾಮಾಜಿಕ ಜಾಗೃತಿಯನ್ನು ನೋಡಲಿದ್ದೇವೆಂದು ಐದು ವರ್ಷಗಳ ಹಿಂದೆ ಯಾರಾದರೂ ಹೇಳಿದ್ದರೆ ಖಂಡಿತ ನಂಬುತ್ತಿರಲಿಲ್ಲ! ಆಳುವ ವ್ಯವಸ್ಥೆ ಸರಿದಾರಿಯಲ್ಲಿದ್ದಾಗ ಸಮಾಜವೂ ಮೆಚ್ಯೂರ್ ಆಗುತ್ತದೆ; ಸಮಾಜ ತನ್ನ ಬೌದ್ಧಿಕ ಪಕ್ವತೆ ತೋರಿಸತೊಡಗಿದಾಗ ಅದಕ್ಕೆ ತಕ್ಕಂಥ ವ್ಯವಸ್ಥೆಯನ್ನೇ ರಾಜ್ಯ/ರಾಷ್ಟ್ರಗಳಲ್ಲಿ ಕೂರಿಸುತ್ತದೆ ಕೂಡ. ಯಥಾ ರಾಜ ತಥಾ ಪ್ರಜಾ ಅಲ್ಲವೆ?
ನಾವು ಸಾಗಬೇಕಿರುವ ದಾರಿ ಇನ್ನೂ ಇದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೇಳಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಹೊಚ್ಚಹೊಸ ಸಮಾಜ ವಿಜ್ಞಾನ, ವಿಜ್ಞಾನ, ಗಣಿತ, ಭಾಷೆಯ ಪಠ್ಯಗಳನ್ನು ಬರೆಯಬೇಕಿದೆ. ಸಮಾಜ ವಿಜ್ಞಾನದ ಪಠ್ಯಗಳು ಹೇಗಿರಬೇಕೆಂಬ ವಿಷಯದಲ್ಲಂತೂ ನನಗೆ ಖಚಿತ ಅಭಿಪ್ರಾಯವಿದೆ; ಸ್ಪಷ್ಟತೆ ಸಿಕ್ಕಿದೆ. ಈಗ ನಾವು ಪರಿಷ್ಕರಿಸಿ ಕೊಟ್ಟಿರುವ ಪುಸ್ತಕಗಳಿಗಿಂತ ಮುಂದಿನ ದಿನಗಳಲ್ಲಿ ಬರೆಯುವ ಪುಸ್ತಕಗಳು ತುಂಬ ಭಿನ್ನವಾಗಿರುತ್ತವೆ. ಹಾಗೆ ಹೊಸ ಪಠ್ಯಗಳನ್ನು ಬರೆಯುವ ಜವಾಬ್ದಾರಿ ಸಿಕ್ಕರೆ ಅದಕ್ಕಿಂತ ಭಾಗ್ಯವಿಲ್ಲ; ಇಲ್ಲವಾದರೆ ನಾನೇ ಒಂದಷ್ಟು ಪಠ್ಯಗಳನ್ನು ಬರೆಯಬೇಕೆಂದೂ ಯೋಜನೆ ಹಾಕಿದ್ದೇನೆ. ಪಠ್ಯಗಳನ್ನು ದೂರುತ್ತ ಕೂರುವುದಕ್ಕಿಂತ ಮಕ್ಕಳು ಮೆಚ್ಚಿ ಚಪ್ಪರಿಸಿ ಓದಬಹುದಾದ ಪಠ್ಯಗಳನ್ನು ಕೊಟ್ಟಾಗಷ್ಟೇ ಶಿಕ್ಷಣ ಕ್ಷೇತ್ರ ಸುಧಾರಿಸುವುದು ಎಂಬುದಂತೂ ಖಚಿತವಾಗಿದೆ.
ಒಂದು ಬದಲಾವಣೆಯನ್ನು ಮುಕ್ತವಾಗಿ ಸ್ವಾಗತಿಸುತ್ತ ಒಂದಿಡೀ ಸಮಾಜವೇ ಜಾಗೃತವಾಗಿ ಎದ್ದುನಿಲ್ಲುವ ಈ ಕ್ಷಣಗಳನ್ನು ಮನದುಂಬಿಕೊಳ್ಳುವುದೇ ಒಂದು ಭಾವುಕ ಅನುಭವ. ಈ ದಾರಿಯಲ್ಲಿ ಸಹಪಯಣಿಗರಾಗಿದ್ದ ಎಲ್ಲರಿಗೆ, ಮುಖ್ಯವಾಗಿ ಸಮಾಜವನ್ನು ಜೀವಂತವಿಟ್ಟಿರುವ ಪ್ರಾಣವಾಯುವಾದ ನಿಮಗೆ ನಾನು ಋಣಿ. ಆದರೆ ಈ ಪೋಸ್ಟ್‌ಗೆ ಸಾಕಷ್ಟುನೆಗಟಿವ್ ಕಮೆಂಟ್ ಗಳು ಬಂದಿದ್ದು, ರೋಹಿತ್ ಚಕ್ರತೀರ್ಥರನ್ನು ಜನರು ಮೋದಿ ಭಕ್ತ ಎಂದು ಕರೆದಿದ್ದಾರೆ.
ಇದನ್ನೂ ಓದಿ : upsc result 2021 : ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಗಂಗಾವತಿ ಮೂಲದ ವೈದ್ಯೆ
ಇದನ್ನೂ ಓದಿ : ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಶ್ರುತಿ ಶರ್ಮಾ ಬಗ್ಗೆ ಇಲ್ಲಿದೆ ಮಾಹಿತಿ
Rohith Chakrathirtha Reaction About text Book Controversy