ಭಾನುವಾರ, ಏಪ್ರಿಲ್ 27, 2025
HomekarnatakaManjarabad Fort : ನಕ್ಷತ್ರಾಕಾರದ ಮಂಜರಾಬಾದ್ ಕೋಟೆ

Manjarabad Fort : ನಕ್ಷತ್ರಾಕಾರದ ಮಂಜರಾಬಾದ್ ಕೋಟೆ

- Advertisement -
  • ಹೇಮಂತ್ ಚಿನ್ನು

ಹಾಸನ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರಗಳಲ್ಲಿ ಒಂದಾಗಿರುವ ಸಕಲೇಶಪುರವು ಬಹಳಷ್ಟು ಪ್ರಾಕೃತಿಕ ಸ್ಥಳಗಳು ಮತ್ತು ಕಣ್ಣಿಗೆ ಕಟ್ಟುವಂತಹ ನೈಸರ್ಗಿಕ ದೃಶ್ಯಗಳಿಂದ ಮತ್ತು ಮನೋಹರವಾದ ಕಲೆ ಮತ್ತು ವಾಸ್ತುಶಿಲ್ಪಗಳಿಂದ ಕೂಡಿದ ಜನಪ್ರಿಯ ಪ್ರವಾಸಿ ತಾಣಗಳಿಂದ ಕೂಡಿದೆ. ಈ ಪ್ರದೇಶವು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ, ಆರಾಧಿಸುವ ರಸಿಕರ ಚಿತ್ತವನ್ನು ಆಕರ್ಷಿಸುವ ದಟ್ಟ ಅರಣ್ಯಗಳಿಂದಲೂ, ಬೆಟ್ಟಗುಡ್ಡ, ನದಿಗಳಿಂದಲೂ, ಜಲಪಾತಗಳಿಂದಲೂ, ನೀರಿನ ಝರಿಗಳಿಂದಲೂ ಮತ್ತು ಗಿರಿಕಂದರಗಳಿಂದಲೂ ಕೂಡಿದೆ. ಪಶ್ಚಿಮ ಘಟ್ಟಗಳಲ್ಲಿರುವ ಪುಷ್ಪಗಿರಿ, ಬಿಸಲೆ ಅರಣ್ಯ ಶ್ರೇಣಿ, ಹಿರೇಕಲ್ ಗಿರಿ ಶ್ರೇಣಿ, ಮತ್ತು ನಿತ್ಯ ಹರಿದ್ವರ್ಣ ಕಾಡುಗಳು ಪ್ರತಿಯೊಬ್ಬರ ಗಮನವನ್ನು ಸೆಳೆಯುತ್ತವೆ.

PC CREDIT : Ashwathrai/ ManjarabadfortFB

ಸಮುದ್ರಮಟ್ಟದಿಂದ ಈ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಅಂದರೆ 3393 ಅಡಿಗಳು 252 ಮೆಟ್ಟಿಲುಗಳನ್ನು ಏರಿದರೆ ಸಿಗುವ ಈ ಕೋಟೆಯು ನಕ್ಷತ್ರಾಕಾರದ ರಚನೆಯ ವಿಶಿಷ್ಟ ತಂತ್ರವನ್ನೊಳಗೊಂಡ “ಕಡೆಗಾಪು” ಮತ್ತು “ಗಿರಿದುರ್ಗ”ವಾಗಿದೆ. ಈ ಕೋಟೆಯ ಸಂರಕ್ಷಣಾ ಜವಾಬ್ದಾರಿಯನ್ನು 1956ರ ಪುರಾತತ್ವ ಇಲಾಖೆಯ ನಿಯಮದಂತೆ ವಹಿಸಿಕೊಂಡಿದ್ದು ಸೂಕ್ತ ರಕ್ಷಣೆ ನೀಡಿ, ಪರಿಣಿತ ಮಾರ್ಗದರ್ಶಿಗಳ ನೇಮಕಾತಿ ಮಾಡಿದ್ದರೆ ಇಡೀ ಜಿಲ್ಲೆಯಲ್ಲಿಯೇ ಶ್ರೇಷ್ಠವಾದ ಸ್ಮಾರಕಗಳಲ್ಲೊಂದಾಗುತಿತ್ತು. ವಿಶೇಷವಾದ ದುರ್ಗ ರಚನಾ ತಂತ್ರ, ಶೈಲಿಯನ್ನು ಹೊಂದಿರುವ ಈ ಕೋಟೆಯು ಶೇಕಡ 60 ಭಾಗ ಮಾತ್ರ ಭದ್ರವಾಗಿ ಉಳಿದು, ಭೀಮಬಲವನ್ನು ಕಾಪಾಡಿಕೊಂಡು ಬಂದಿದೆ.

ಕಡೆಗಾಪು : ಕಡೆಗಾಪು ಎಂದರೆ ಕೊನೆಯ ರಕ್ಷಣೆ ಎಂದಾಗುತ್ತದೆ. ರಾಜಧಾನಿಯ ಮೇಲೆ ದಂಡೆತ್ತಿ ಯಾರಾದರು ವೈರಿಗಳು ಬಂದಾಗ ಗುಪ್ತವಾಗಿ ಕೊನೆಯ ರಕ್ಷಣೆಗಾಗಿ ತನ್ನೆಲ್ಲ ಅಮೂಲ್ಯ ವಾದ ಚರಾಸ್ತಿಗಳನ್ನು ಭದ್ರವಾಗಿ ಇಟ್ಟುಕೊಳ್ಳುವ ರೂಢಿಯು ಇತಿಹಾಸದುದ್ದಕ್ಕೂ ರಾಜ ಮಹರಾಜರು ನಡೆಸಿಕೊಂಡು ಬಂದಿದ್ದನ್ನು ಕಾಣುತ್ತೇವೆ. ಅಂತಹ ರಕ್ಷಣೆಗಾಗಿ ಮಾಡಿಕೊಂಡ ಟಿಪ್ಪುವಿನ ಅಮೂಲ್ಯವಾದ ಕೋಟೆಯೇ ಈ ಮಂಜ್ರಾಬಾದ್ ಕೋಟೆ ಆಗಿರುತ್ತದೆಂದು ಹೇಳಲಾಗಿದೆ.

ಕೋಟೆಗಳ ರಚನಾ ಶಾಸ್ತ್ರದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳನ್ನು ಮಾಡಲಾಗಿದ್ದು ಭೂದುರ್ಗ, ಜಲದುರ್ಗ, ವನದುರ್ಗ, ಗಿರಿದುರ್ಗಗಳೆಂದು ಕರೆಯಲಾಗುತ್ತಿದೆ. ಭೂವಲಯ ದಲ್ಲಿ ಜಲಸಂಪನ್ಮೂಲಗಳ ನಡುವೆ ಕಟ್ಟಲ್ಪಟ್ಟ ಕೋಟೆಗಳನ್ನು ಜಲ ದುರ್ಗಗಳೆಂದು ಕರೆದರೆ, ಬೆಟ್ಟ ಅಥವಾ ಗುಡ್ಡಗಳ ಮೇಲೆ ಕಟ್ಟಲ್ಪಟ್ಟ ಕೋಟೆಗಳಿಗೆ ಗಿರಿದುರ್ಗವೆಂದು ಕರೆಯಲಾಗುತ್ತದೆ. ದುರ್ಗವೆಂದರೆ ಇಲ್ಲಿ ಕೋಟೆ ಎಂದರ್ಥ. ಮಂಜ್ರಾಬಾದ್ ಕೋಟೆಯೂ ಸಹ ಗಿರಿಯೊಂದರ (ಗುಡ್ಡದ) ಮೇಲೆ ಕಟ್ಟಿದ (ನಿರ್ಮಿಸಿದ) ದುರ್ಗವಾಗಿದೆ. ಶ್ರೀರಂಗಪಟ್ಟಣದ ಕೋಟೆಯು ಜಲದುರ್ಗವಾದರೆ ಐಗೂರಿನ ಕೋಟೆಯು ವನದುರ್ಗವಾಗಿದೆ.

ಈ ಸ್ಥಳದಲ್ಲಿ ಮಂಜರಾ ಬಾದ್‌ ಕೋಟೆ ನಿರ್ಮಿಸಲು ಕಾರಣಗಳು :

1) ಆಂಗ್ಲರ, ನಿಜಾಮರ, ಮರಾಠರ ದಾಳಿಯನ್ನು ತಡೆಯಲು ಈ ಸ್ಥಳವು ಬಹು ಆಯಕಟ್ಟಿನ ಸ್ಥಳವಾಗಿತ್ತು.
2) ಹೈದರಾಲಿ, ಟಿಪ್ಪುಸುಲ್ತಾನರು ಮಂಗಳೂರು ಬಂದರನ್ನು ನೌಕಾ ನೆಲೆಯನ್ನಾಗಿ ಭದ್ರಪಡಿಸಿಕೊಳ್ಳಲು ಇಚ್ಛಿಸಿದ್ದರು. ತಮ್ಮ ಆಳ್ವಿಕೆಯಲ್ಲಿ ಈ ಬಂದರು ಇಂಗ್ಲೀಷರಿಗೂ ಮತು ಹೈದರಾಲಿಗೂ ಹಸ್ತಾಂತರವಾಗುತ್ತಲೇ ಇರುವುದರಿಂದ ಮಂಗಳೂರು, ಶ್ರೀರಂಗಪಟ್ಟಣಗಳ ನಡುವಿನ ಆಯಕಟ್ಟಿನ ಪ್ರದೇಶದಲ್ಲಿದ್ದ ಈ ಅಡಾಣಿ ಗುಡ್ಡದ ಮೇಲೆ ಟಿಪ್ಪು ಕೋಟೆಯನ್ನು ಕಟ್ಟಿಸುವುದು ಅನಿವಾರ್ಯವಾಗಿತ್ತು.
3) ಕ್ರಿ.ಶ.1784ರಲ್ಲಿ ಟಿಪ್ಪು ಬ್ರಿಟೀಷರನ್ನು ಎದುರಿಸಿದಾಗ ಈ ಮಂಗಳೂರು ಬಂದರು ತೀರ ಸಂಪರ್ಕ ಮಾಧ್ಯಮದ ಸ್ಥಳವಾಯಿತು. ಆಗಾಗ ಮಂಗಳೂರಿಗೆ ಹೋಗಿಬರುತಿದ್ದ ಟಿಪ್ಪು ಬೆಳ್ತಂಗಡಿಯಿಂದ ಮುಂದೆ ಬಂದು ಭಲಂ(ಈಗಿನ ಐಗೂರು) ನಲ್ಲಿ ತಂಗುತಿದ್ದರು. ಈ ಸ್ಥಳ ಹಲವು ಭದ್ರತೆಗೆ ಪ್ರಮುಖವಾದದ್ದು ಎಂದು ಅರಿವಾಗಿ ಇವರು ಇಲ್ಲಿಯೇ ಕೋಟೆಯನ್ನು ನಿರ್ಮಿಸಬೇಕೆಂದು ಸಂಕಲ್ಪ ಮಾಡಿದರು.
4) ಟಿಪ್ಪು ಮುಖ್ಯವಾಗಿ ಸೌಂದರ್ಯೋಪಾಸಕನಾಗಿದ್ದು, ಈ ಸ್ಥಳದ ಮೇಲೆ ನಿಂತು ಕಣ್ಣಿನ ಬಿಂಬವನ್ನು ಸುತ್ತಲೂ ಹಾಯಿಸಿದಾಗ ಕಂಡ ಉಪಮಾತೀತ ಬೆರಗನ್ನು ಸವಿದು ಇಲ್ಲಿ ಕೋಟೆಯನ್ನು ಕಟ್ಟಿಸಲು ನಿರ್ಧರಿಸಿ ನಂತರ, ವಿಶಿಷ್ಟ ಸೌಂದರ್ಯಸ್ಮಾರಕವನ್ನು ಅಷ್ಟಕೋನಾಕೃತಿಯಲ್ಲಿ ನಿರ್ಮಿಸಿದನು. ಟಿಪ್ಪು ಕಟ್ಟಿಸಿದ ಜಮಲಾಬಾದ್, ಬೆಂಗಳೂರು ದಿಂಡಗಲ್ ಮುಂತಾದ ಕೋಟೆಗಳು ಈ ಕೋಟೆಯಷ್ಟು ನಿರ್ದಿಷ್ಟವಾದ ಬಿಂದುವಿನಲ್ಲಿ ಕರಾರುವಾಕ್ಕಾಗಿ ಕಟ್ಟಿಸಿದವುಗಳಾಗಿಲ್ಲ. ಅಲ್ಲಿ ಭದ್ರತೆಯಿಂದಲೂ, ವಿಶಿಷ್ಟ ಶೈಲಿಯಿಂದಲೂ, ಅಷ್ಟಕೋನಾಕೃತಿ ಅಲಂಕರಣಗಳಿಂದಲೂ ಕೂಡಿರಬಹುದು.
5) ಟಿಪ್ಪು ಸುಲ್ತಾನನಿಗೂ ಅಂದಿನ ಇಂಗ್ಲೀಷರ ಸೈನ್ಯದ ಜನರಲ್ ಮ್ಯಾಥ್ಯೂಸನಿಗೂ ಹಲವು ಸಲ ಹಣಾಹಣಿ ನಡೆದದ್ದು ಇತಿಹಾಸದ ಪುಟದಲ್ಲಿ ದಾಖಲಾಗಿದೆ. ಕ್ರಿ.ಶ.1783ರಲ್ಲಿ ಟಿಪ್ಪು ಮಂಗಳೂರಿನಲ್ಲಿ ವಿಜಯಿಯಾದ ನಂತರ ಅದೇ ವರ್ಷ ಇಂಗ್ಲೀಷರ ಇನ್ನೊಂದು ಸೈನ್ಯ ಕರ್ನಲ್ ಕ್ಯಾಂಬೆಲ್‍ನ ಕೈಕೆಳಗೆ ಬಂದು ಮಂಗಳೂರನ್ನು ವಶಪಡಿಸಿಕೊಂಡರು. ಟಿಪ್ಪು ದೊಡ್ಡ ಸೈನ್ಯದೊಂದಿಗೆ ಮಂಗಳೂರಿಗೆ ಬಂದು ಯುದ್ದ ನಿರತನಾದ. ಆಗಲು ಆಂಗ್ಲರು ಸೋತುಹೋದರು. ಹೀಗಾಗಿ ಮಂಗಳೂರು, ಹೊನ್ನಾವರ ಟಿಪ್ಪುವಿನ ಸಂಪರ್ಕಕ್ಕೆ ಬಂದವು. ಅಲ್ಲಿಂದ ಟಿಪ್ಪುವಿಗೆ ಅಂತರಾಷ್ಟೀಯ ಸಂಬಂಧಕ್ಕೇ (ಹಡಗಿನ ಮೂಲಕ) ಮಂಗಳೂರೇ ಪ್ರಮುಖ ಕೇಂದ್ರವಾಯಿತು. ಈ ಸಂದರ್ಭದಲ್ಲಿ ಇಂದಿನ ಕಾಸರಗೋಡು ಜಿಲ್ಲೆಯ ಬೇಕಲ್‍ಕೋಟೆಯು ಪ್ರಬಲ ಆಡಳಿತ ಕೇಂದ್ರವಾಯಿತು. ಆಗಾಗ ಆಕ್ರಮಣ ಮಾಡಲೆತ್ನಿಸುವ ಆಂಗ್ಲರನ್ನು ಮರ್ದಿಸಲು ಶ್ರೀರಂಗಪಟ್ಟಣ, ಮಂಗಳೂರು ನಡುವೆ ಒಂದು ಸೈನ್ಯವನ್ನು ಇಡುವ ಕೋಟೆಯನ್ನು ಕಟ್ಟಿಸುವುದು ಅನಿವಾರ್ಯವಾಯಿತು. ಬೇಕಲ್‍ಕೋಟೆಯ ವೈಶಿಷ್ಟತೆಯನ್ನು ಮನಗಂಡಿದ್ದ ಟಿಪ್ಪುಸುಲ್ತಾನ್ “ಕಡೆಗಾಪು” ಕೋಟೆಯ ದೃಷ್ಟಿಯಿಂದಲೂ ಕೂಡ ಸಕಲೇಶಪುರ ಬಳಿ ಇರುವ ಅಡಾಣಿ ಗುಡ್ಡದ ಮೇಲೆ ವೈಶಿಶ್ಟ್ಯ ಪೂರ್ಣವಾದ, ಭದ್ರವಾದ ಕಲ್ಲಿನ ಕೋಟೆಯೊಂದನ್ನು ಕಟ್ಟಿಸಿದ. ಬೇಕಲ್‍ಕೋಟೆಯ ಕೆಲವು ಅಂಶಗಳನ್ನು ಈ ಮಂಜ್ರಾಬಾದ್ ಕೋಟೆಯಲ್ಲಿಯೂ ಕಾಣಬಹುದು.
6) ತೀರ ಆಪತ್ಕಾಲದಲ್ಲಿ ನಿಬಿಡವಾದ ಅರಣ್ಯದಿಂದ ಆಚ್ಛಾದಿತವಾಗಿದ್ದ ಈ ಕೋಟೆಯಲ್ಲಿ ಉಳಿದುಕೊಳ್ಳಲಿಕ್ಕಾಗಿ ಅಥವಾ ಚರಾಸ್ತಿಗಳನ್ನು ರಕ್ಷಿಸಿಕೊಳ್ಳುವ ಕಾರಣವೂ ಕೂಡ ಈ ಕೋಟೆಯ ನಿರ್ಮಾಣದ ಉದ್ದೇಶವಾಗಿತ್ತೆಂದು ತೋರುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಸ್ಪೂರ್ತಿಗೊಂಡ ಟಿಪ್ಪು ಸುಲ್ತಾನರು ಬಹುಶಃ ಉಪಯೋಗಿ ಆಗಬಲ್ಲ ಕೋಟೆಯ ನಿರ್ಮಾಣ ಮಾಡಿದರು. “ಮಂಜ್ರಾಬಾದ್” ಎಂಬ ಹೆಸರಿನ ನಾಮಕರಣದ ಬಗ್ಗೆಯು ಹಲವಾರು ಅರ್ಥಗಳನ್ನು ಪೌರಾಣಿಕ ಕಾಲದಿಂದಲೂ ಕೊಡಬಹುದಾಗಿದೆ. ಪರಿಸರದ ವಾಸ್ತವಿಕತೆಗೆ ಒತ್ತುಕೊಟ್ಟು ಸ್ಥಳೀಯ ಜನಾಭಿಪ್ರಾಯದ ಮೇರೆಗೆ ಹೆಸರನ್ನಿಡಲಾಯಿತೆಂದು ಪರಂಪರೆಯಿಂದ ತಿಳಿದುಬರುತ್ತದೆ. 200ವರ್ಷಗಳ ನಂತರವು ಈ ಕೋಟೆಗೆ ಮಾತ್ರವಲ್ಲ; ಇಡೀ ತಾಲ್ಲೂಕಿಗೆ “ಮಂಜ್ರಾಬಾದ್” ಎಂಬ ಹೆಸರು ದಾಖಲೆಗೊಂಡಿತ್ತು.

PC CREDIT : Ashwathrai/ ManjarabadfortFB

ಕೆಲವು ಕಡೆ ಇದೇ ಟಿಪ್ಪುವು ಈ ಪರಿಸರದ ಅನೇಕಪ್ರದೇಶಗಳಿಗೆ ಪರ್ಶಿಯನ್‍ ಹೆಸರುಗಳನ್ನು ಇಟ್ಟಿದ್ದ. ಆ ಹೆಸರುಗಳು ಟಿಪ್ಪು ನಂತರ ಬಳಕೆಯಾಗದೇ ಮಾಸಿಹೋದವು. ಉದಾಹರಣೆ ಗಾಗಿ ಚಿತ್ರದುರ್ಗವನ್ನು ಗೆದ್ದುಕೊಂಡ ನಂತರ ಇದಕ್ಕೆ ಪರೂಖಾಯೂಬ್‍ಸ್ಸಾರ್ ಎಂದು, ಬಳ್ಳಾರಿಗೆ “ಸಮರ್ಪಟ್ಟಣ” ಎಂದು, ಪಾವಗಡಕ್ಕೆ “ಖುತುಬ್‍ಮಿನರ್” ಎಂದು, ಸಿರಾಕ್ಕೆ “ರುಸ್ತುಮಾಬಾದ್” ಎಂದು, ದೇವರಹಳ್ಳಿಗೆ “ಯೂಸೂಪಾಬಾದ್” ಎಂದು ಹೆಸರುಗಳನ್ನು ಮರುನಾಮಕರಣ ಮಾಡಿದ್ದ. ಜನಾಭಿಪ್ರಾಯ ಮತ್ತು ಪರಿಸರಕ್ಕೆ ಸಂಬಂದಿಸಿದ ಹೆಸರು ಗಳು ಇವಾಗಿದ್ದವು. ಈ ಎಲ್ಲಾ ಹೆಸರುಗಳು ಟಿಪ್ಪುವಿನ ನಂತರ ಮೂಲ ಹೆಸರಿಗೆ ಮರಳಿದವು. ಆದರೆ ಮಂಜ್ರಾಬಾದ್ ಎಂಬ ಹೆಸರಿನಲ್ಲಿ ಅಂತರ್ಗತವಾದ ಭಾವ ಅರ್ಥವು ಇಲ್ಲಿಯ ಪ್ರಾದೇಶಿಕತೆಗೆ ಪರಿಸರಕ್ಕೆ ತುಂಬ ಅನನ್ಯವಾಗಿದೆ. ಹೀಗಾಗಿ ಈ ಹೆಸರು ಬಹುಕಾಲ ಜನರ ಬಾಯಿಯಲ್ಲಿ ಮತ್ತು ದಾಖಲೆಗಳಲ್ಲಿ ಹಸಿರಾಗಿವೆ.

ಪರ್ಶಿಯನ್‍ ಭಾಷೆಯಲ್ಲಿ ಮಂಜರ್+ಅಬಾದ್=ಮಂಜ್ರಾಬಾದ್ ಎಂಬುವುದು ಮಂಜಿನಿಂದ ಆವೃತವಾದ, ಸೌಂದರ್ಯದ ಹಿನ್ನೆಲೆಯುಳ್ಳ ಸ್ಥಳವೆಂದು ಆಗುತ್ತದೆ. ನಿಸರ್ಗದತ್ತವಾದ ಈ ಸ್ಥಳವು ಕೂಡ ಭೌಗೋಳಿಕ ಹಿನ್ನೆಲೆಯುಳ್ಳ ಪದನಾಮವಾಗಿದೆ. ಇದರ ಜೊತೆಗೆ ಕ್ರಿ.ಶ.1763-1782ರ ಅವಧಿಯಲ್ಲಿ ಹೈದರಾಲಿಯು ಕೋಟೆಯನ್ನು ಕಟ್ಟಿಸಿದ್ದಾಗಿ ಹೇಳುತ್ತಾರೆ ಆದರೆ ಹೈದರಾಲಿ ಕೋಟೆ ಕಟ್ಟಿದ್ದಕ್ಕೆ ಯಾವುದೇ ಆಧಾರಗಳಿಲ್ಲ. ಇತಿಹಾಸ ತಜ್ಞರಾದ ಬೆಂಜಮಿನ್‍ಲೂಯಿಸ್, ಹಯವದನರಾವ್ ಮೊದಲಾದವರು ಈ ಕೋಟೆಯನ್ನು ಅನ್ವೇಷಣೆ ಮಾಡುವ ಕಾಲಕ್ಕೆ ಸಿಕ್ಕಿದ್ದ 2 ಪರ್ಶಿಯನ್ ಶಾಸನಗಳ ಆಧಾರದ ಮೇಲೆ ಟಿಪ್ಪುವೇ ಕ್ರಿ.ಶ.1792ರಲ್ಲಿ ಈ ಕೋಟೆಯನ್ನು ಕಟ್ಟಿಸಿದನೆಂದು ರಾಜ್ಯ, ಜಿಲ್ಲಾ ಗೆಜೆಟೇಟ್‍ಯರ್ನಲ್ಲಿ ನಮೂದಿಸಿದರು. ಈ ಶಾಸನಗಳ ಆಧಾರದ ಮೇಲೆ ಟಿಪ್ಪುವೇ ಕ್ರಿ.ಶ.1792ರಲ್ಲಿ ಈ ಕೋಟೆಯನ್ನು ಕಟ್ಟಿಸಿದರೆಂದು ಹೇಳಲಾಗುತ್ತದೆ.ಈ ಶಾಸನಗಳು ಅದೇನೆ ಆದರೂ ಹೈದರ್ ಗಿಂತಲು ತಂತ್ರಜ್ಞಾನದಲ್ಲಿ, ಕಲಾತ್ಮಕತೆಯಲ್ಲಿ, ಸೌಂದರ್ಯೊಪಾಸನೆಯಲ್ಲಿ ಟಿಪ್ಪುವೇ ನೈಪುಣ್ಯತೆಯನ್ನು ಪಡೆದಿದ್ದ. ಹೀಗಾಗಿ ಹೈದರಾಲಿಯ ಭಕ್ತಿ ಸ್ಮಾರಕವಾಗಿ ಈ ಕೋಟೆಯನ್ನು ಕಟ್ಟಿಸಿರುವುದು ಸಮಂಜಸವಾಗಿ ಕಾಣುವುದಿಲ್ಲ.

ಇತಿಹಾಸ ತಜ್ಞರ ವರದಿಗಳಲ್ಲಿ:

ಇತಿಹಾಸ ತಜ್ಞರಾದ ಬಿ.ಎಲ್.ರೈಸ್, ಹಯವದನರಾವ್ ಮತ್ತು ಪ್ರಾಚ್ಯ ಸಂಶೋದನೆ ವರದಿಗಳ ಪ್ರಕಾರ ಟಿಪ್ಪು ಕ್ರಿ.ಶ. 1792ರಲ್ಲಿ ಮಂಜ್ರಾಬಾದ್ ಕೋಟೆಯನ್ನು ನಿರ್ಮಾಣ ಮಾಡಿದರೆಂದು ತಿಳಿದುಬರುತ್ತದೆ. (ಆರ್ಕಿಯಾಲಾಜಿಕಲ್ ವರದಿಯೊಂದರ ಯಥಾನಕಲನ್ನು ಕೊನೆಗೆ ಕೊಡಲಾಗಿದೆ.) ಇಷ್ಟಲ್ಲದೆ ಪ್ರೋ ಶೇಕ್‍ಆಲಿಯವರು, ಡಾ.ಶ್ರೀವತ್ಸ ಎಸ್. ವಟಿ ಅವರು ಡಾ.ಮಂಜುನಾಥ್‍ಸಕಲೇಶ್‍ರವರು, ಡಾ|| ಚನ್ನಬಸಪ್ಪಪಾಟೀಲರು ಮೇಲಿನ ಅಭಿಪ್ರಾಯವನ್ನೆ ದೃಡೀಕರಿಸುತ್ತಾರೆ. ಈ ಎಲ್ಲಾ ಕಾರಣಗಳಿಂದಾಗಿ ಸಕಲೇಶಪುರದ ಬಳಿ ಇರುವ ಮಂಜ್ರಾಬಾದ್ ಕೋಟೆಯು ಟಿಪ್ಪುಸುಲ್ತಾನ್ ನಿಂದ ನಿರ್ಮಾಣವಾಯಿತೆಂದು ಖಚಿತವಾಗಿದೆ.

ಕೋಟೆ ಎರಡು ಹಂತಗಳಲ್ಲಿ ಏಕೆ ನಿರ್ಮಾಣವಾಯಿತು ?

ಈ ಕೋಟೆಯನ್ನು ಎರಡು ಹಂತಗಳಲ್ಲಿ ಕಟ್ಟಿಸಿದ ಹಿನ್ನೆಲೆಯಲ್ಲಿ ಜಿಜ್ಞಾಸೆ ತಾಳುವುದು ಸಹಜವಾಗಿದೆ. ಮೇಲುನೋಟಕ್ಕೆ ಎರಡು ಅವದಿಯಲ್ಲಿ ಬಗೆಯಾದ ವಸ್ತುಗಳನ್ನು ಬಳಸಿದ್ದು ಗೋಚರವಾಗುತ್ತದೆ. ಕೆಲವರು ಹೈದರಾಲಿಗಿಂತಲೂ ಮುಂಚೆಯೆ ನಿರ್ಮಾಣವಾಗಿರಬಹುದೆಂದು ಕೆಲವರು, ಹೈದರಾಲಿ ಅರ್ಧ ಕಟ್ಟಿಸಿ ನಂತರ ಟಿಪ್ಪು ಪೂರ್ಣನಿರ್ಮಾಣ ಮಾಡಿರಬಹುದೆಂದು ಊಹಿಸುತ್ತಾರೆ. ಇನ್ನೊಂದು ಮಾಹಿತಿಯ ಪ್ರಕಾರ ಬಲಂ ನಾಯಕರು(ಐಗೂರು ನಾಯಕರು) ಪ್ರಾಥಮಿಕ ಹಂತದ ಕೋಟೆಯನ್ನು ನಿರ್ಮಿಸಿ, ನಂತರ ಅದಕ್ಕೆ ತಕ್ಕಂತೆ ಮುಂದಿನ ಕೋಟೆಯನ್ನು ಟಿಪ್ಪುಸುಲ್ತಾನ್ ಕಟ್ಟಿಸಿದನೆಂದು ಕೆಲವರು ಶೀರ್ಷಿಕೆಯನ್ನು ಬಿತ್ತಿದ್ದಾರೆ. ಆದರೆ ಇಷ್ಟೊಂದು ಶುಭ್ರವಾದ, ವೈಜ್ಞಾನಿಕ ಹಿನ್ನೆಲೆಯುಳ್ಳ ಅಷ್ಟಕೋನಾಕೃತಿಯನ್ನು ಎಲ್ಲಿಯೂ ಅವರು ಕಟ್ಟಿಸಿಲ್ಲವೆಂದು ದಾಖಲೆಗಳು ತಿಳಿಸುತ್ತದೆ. ಕೇಳಂತಗಳಲ್ಲಿ ಕಲ್ಲುಗಳನ್ನು ಬಳಸಿ ಕಟ್ಟಿಸಿದ ಮೇಲೆ 8-10-12 ಅಡಿಗಳ ನಿರ್ಮಾಣವು ಇಟ್ಟಿಗೆಗಳನ್ನು ಬಳಸಿ ಕಟ್ಟಲಾಗಿದೆ. ಈ ಎರಡೂ ಹಂತದ ಕಟ್ಟಡದಲ್ಲಿ ಗಾರೆ ಗಚ್ಚುಗಳನ್ನು ಬಳಸಿ ಸುಣ್ಣದ ಲೇಪನಮಾಡಿದ್ದು ಅಲ್ಲಲ್ಲಿ ಕಂಡುಬರುತ್ತದೆ. ಕ್ರಿ.ಶ 1784ರಲ್ಲಿ ಬ್ರಿಟೀಷರನ್ನು ಎದುರಿಸುವಾಗ ಹೆಚ್ಚು ಸಶಕ್ತಗೊಳ್ಳಲು ಜಮಾಲಾಬಾದ್, ಎಂಬ ಕೋಟೆಯನ್ನು ಕಟ್ಟಿಸಿರಬಹುದೆಂದು. ಈ ಸಮಯದಲ್ಲೆ ಈ ಕೋಟೆಯನ್ನು ಕಲ್ಲಿನಿಂದ ಕಟ್ಟಿಸಲು ಆರಂಬಿಸಿರಬೇಕು.

ಒಂದೆರಡು ವರ್ಷಗಳ ಕಾಲ ನಿರ್ಮಾಣಕಾರ್ಯವು ನಡೆದಿರಬಹುದು. ಈ ಸಂದರ್ಭದಲ್ಲಿ ಬ್ರಿಟೀಷರ ದಂಗೆಗಳು ಹೆಚ್ಚಾದವು ಎಂದು ತೋರುತ್ತದೆ. ಸಂಪೂರ್ಣವಾಗಿ ಸಮುದ್ರ ತೀರದಲ್ಲಿ ತಕ್ಷಣ ಒಂದು ಸುಭದ್ರ ಕೋಟೆ ನಿರ್ಮಿಸುವ ಅವಶ್ಯಕತೆ ಬಂದಿರುವುದರಿಂದ ಬೆಳ್ತಂಗಡಿ ಬಳಿಯ ಜಮಾಲಾಬಾದ್ ಎಂಬ ಕೋಟೆಯ ನಿರ್ಮಾಣದ ಕಡೆ ಗಮನ ಹರಿಸಬೇಕಾದ್ದರಿಂದ ಅಡಾಣಿ ಗುಡ್ಡದ ಮೇಲಿನ ಕಲ್ಲಿನಲ್ಲಿ ಕಟ್ಟಿಸುತಿದ್ದ ಕೋಟೆಯು ಅರ್ಧದಲ್ಲಿ ನಿಂತಿರಬಹುದು. ಪ್ರಾಯಶಃ ಬ್ರಿಟೀಷರೋಡನೆ ಹೋರಾಟದಲ್ಲಿ 7-8 ವರ್ಷಕಾಲ ಈ ಕಡೆ ಗಮನಹರಿಸಲಿಲ್ಲವೆಂದು ಕಾಣುತ್ತದೆ. ನಂತರ ಸುಮಾರು 1790ರಲ್ಲಿ ಪುನಃ ಅರ್ಧಕ್ಕೆ ನಿಲ್ಲಿಸಿದ್ದ ಕೋಟೆಯೆಡೆಗೆ ಗಮನ ನೀಡಿ ಪುನರ್ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿರಬಹುದು

ಶತಮಾನಗಳ ಅಂತರದಲ್ಲಿ ಈ ಕೋಟೆಯು ನಿರ್ಮಾಣವಾಗಿರಬಹುದೆಂದು ಜಿಜ್ಞಾಸೆಗಳಾದವು. ಏನೇ ಆದರೂ ತಂತ್ರಶಾಸ್ತ್ರ ಮತ್ತು ಇತರೆ ಕಾರಣಗಳಿಂದ ಈ ಬಗೆಯ ಕೋಟೆಯನ್ನು ಟಿಪ್ಪುಸುಲ್ತಾನ್ ಮಾತ್ರ ಕಟ್ಟಿಸಲು ಸಾದ್ಯವಿದೆ ಎಂಬುದು ಇತಿಹಾಸ ತಜ್ಞರ ದಾಖಲೆಗಳಿಂದ ತಿಳಿದುಬರುತ್ತದೆ. ಸಂಪೂರ್ಣವಾಗಿ ಕಟ್ಟಿಸಲಾದ ಕೋಟೆಯ ಮೇಲೆ ನಿಂತು ಸುತ್ತಲಿನ ವಿಸ್ತ್ರುತ ಸೌಂದರ್ಯವನ್ನು ಟಿಪ್ಪು ಕಂಡು ಮನಸಾರೆ ಉದ್ಘರಿಸಿದ ಬಗೆ ಸ್ಥಳೀಯ ಕತೆಯೊಂದು ಹೀಗೆ ಹೇಳುತ್ತದೆ.

ಒಂದು ದಿನ ಬೆಳಗಿನ ಸಮಯ ಕೋಟೆಯ ಬುರುಜುಗಳನ್ನೇರಿ ಪಶ್ಚಿಮ ದಿಕ್ಕಿನ ಘಟ್ಟ ಶ್ರೇಣಿಯನ್ನು ಸುತ್ತಲಿನ ಪಚ್ಚೆ ಪೈರುಗಳನ್ನು ಹಚ್ಚ ಹಸಿರಿನ ನಿತ್ಯ ವರ್ಣಮಯ ಸಸ್ಯಕಾಶಿಯನ್ನ ವೀಕ್ಷಿಸಿ ಒಂದೆಡೆ ಹಾಲುಕ್ಕಿ ಹರಿಯುವ ಮಂಜಿನ ರಾಶಿ, ಇನ್ನೊಂದೆಡೆ ಅತ್ಯುಚ್ಚವಾದ ಸೌಂದರ್ಯ ಸಿರಿಯ ಸನ್ನಿಧಿ, ಮತ್ತೊಂದೆಡೆ ಮೈದಾನದಂತೆ ಹಾಸಿಕೊಂಡ ಪೈರುಗಳನ್ನು ಕಂಡು “ಆಹಾ! ಕಿತುನಾ ಸುಂದರ್ ಹೈ ಮಂಜ್ರಾಬಾದ್” ಎಂದು ಉಧ್ಘರಿಸಿದ. ಅಂದಿನಿಂದಲೆ ಈ ಕೋಟೆಗೆ ಮಂಜ್ರಾಬಾದ್ ಕೋಟೆ ಎಂಬ ಹೆಸರು ನಿತ್ಯ ನಿರಂತರವಾಗಿ ಜನರ ಬಾಯಿಯಿಂದ ಬಾಯಿಗೆ ಹರಿದು ಬಂದಿತು.

ಆತ್ಯಾಧುನಿಕ ವಾಸ್ತು ವಿನ್ಯಾಸ ಪಾಶ್ಚಾತ್ಯ ಶೈಲಿ :

ಕ್ರಿ.ಶ 1696ರಲ್ಲಿ ನಿರ್ಮಾಣಗೊಂಡ ಇಂತಹ ಕೋಟೆಗಳ ಉದಾಹರಣೆಗಳು ನಮಗೆ ದೊರೆಯುತ್ತವೆ. ಭಾರತೀಯ ಕೋಟೆಗಳ ನಿರ್ಮಾಣಗಳಿಗೆ ಪಾಶ್ಚಾತ್ಯ ವಾಸ್ತು ತಜ್ಞರು ಸಹಾಯ ಮಾಡಲಾರಂಬಿಸಿದ ನಂತರವೇ ಈ ಕೋಟೆಯ ನಿರ್ಮಾಣವಾದುದು ಖಚಿತವಾಗಿದೆ. ಆಗಾಗಲೇ ಜರ್ಮನ್, ಫ್ರೆಂಚ್ ಮತ್ತು ಮುಸ್ಲಿಂ ದೇಶಗಳ ಮಧುರ ಭಾಂದವ್ಯದಲಿದ್ದ ಟಿಪ್ಪು ಸುಲ್ತಾನನು, ಅಲ್ಲಿಯ ಹಲವು ತಂತ್ರಜ್ಞರನ್ನು ಕರೆಯಿಸಿ ಕೋಟೆಯನ್ನು ಐರೋಪ್ಯ ಮಾದರಿಯಲ್ಲಿ ಸ್ಥಾಪಿಸಿದನೆಂದು ಇತಿಹಾಸಕಾರರ ಅಭಿಪ್ರಾಯ. ಹೊರನೋಟಕ್ಕೆ ಈ ಕೋಟೆಯು ಷಡ್ಭುಜಾಕೃತಿಯನ್ನು ಹೊಂದಿದ್ದರೂ ಅಷ್ಟಕೋನಾಕೃತಿಯೇ ಇದರ ಕೇಂದ್ರ ಬಿಂದುವಾಗಿದೆ. ಇದರ ದ್ವಾರವು 40 ಅಡಿ ಅಗಲ 25ಅಡಿ ಎತ್ತರವಾಗಿದ್ದು ಕಮಾನುದ್ವಾರವನ್ನು ಹೊಂದಿದೆ. ಇದೇ ಒಂದನೇಯ ಬಾಗಿಲು ಮತ್ತು ಪ್ರವೇಶದ್ವಾರವಾಗಿದೆ. ಅಲ್ಲಿಂದ ಮುಂದೆ ತಿರುವುಗಳ ದಾರಿಯಲ್ಲಿ ಸಾಗಿದರೆ ಮತ್ತೊಂದು ದ್ವಾರ ಸಿಗುತ್ತದೆ.ಇಲ್ಲಿ ಕೇವಲ ಕಮಾನು ಅಡಿಪಾಯ ಬಾಗಿಲು ಮುಂತಾದ ಶಿಲಾಕಂಬಗಳನ್ನು ಕಾಣಬಹುದಾಗಿದೆ.

1 ಮತ್ತು 2ನೇ ದ್ವಾರಗಳ ನಡುವೆ ಭದ್ರವಾದ ಪರಿವೀಕ್ಷಣಾ ಕೊಠಡಿ ಇದೆ. ಅಲ್ಲಿಂದ 40ಅಡಿ ಪಶ್ಚಿಮ ಭಾಗದಲ್ಲಿ ಸಾಗಿದರೆ ದಕ್ಷಿಣ ದಿಕ್ಕಿಗೆ ತಿರುಗುವ ದಾರಿಯಲ್ಲಿ ಪ್ರಮುಖವಾದ 3ನೇ ದ್ವಾರ ಸಿಗುತ್ತದೆ. 2ನೇ ದ್ವಾರವನ್ನು ದಾಟುವಾಗ ಕೋಟೆಯೊಳಗಿನಿಂದ ನುಸುಳಿ ಬರಬಹುದಾದ ಒಂದು ಗುಪ್ತ ಮಾರ್ಗವಿದೆ. ಇದು 6 ಅಡಿ ಎತ್ತರ 3ಅಡಿ ಅಗಲವಾದ ಬಾಗಿಲಿನಿಂದ ಹಾಯ್ದು 90ಡಿಗ್ರಿ ಯಲ್ಲಿ ತಿರುಗಿ 60ಅಡಿ ಉದ್ದದ ಗುಪ್ತವಾದ ದಾರಿಯನ್ನು ಕಾಣಬಹುದು .ಇದನ್ನು ಆಯ್ದು ಬಂದರೆ 2ನೇ ಕೋಟೆಗೆ ಬರಬಹುದು.

ಉತ್ತರ ದಿಕ್ಕಿನ ಬಾಗಿಲು ಒಳಗಡೆಗೆ ಅಂಟಿಕೊಂಡಂತೆ 15*10 ಅಡಿಗಳ ಕೋಣೆ ಇದ್ದು ಬಾಗಿಲಿಗೆ ಹಗಳಿ ಹಾಕುವಾಗ 4-6 ಜನ ಸೈನಿಕರು 25ಉದ್ದನೆಯ ತೊಲೆಯನ್ನು ಈ ಕೋಣೆ ಯೊಳಗೆ ಅಗಳಿಯನ್ನು ಹಾಯ್ದು ಹೋಗಿ ಮುಂದಿನ ದ್ವಾರದ ಕೋಣೆಯೊಳಗೆ ಭದ್ರಗೊಳ್ಳುವ ತಂತ್ರವನ್ನು ಮಾಡಲಾಗಿದೆ.ಛದ್ಮ ವೇಶದಾರಿಗಳು ಯಾರಾದರು ಕೋಟೆಯೋಳಗೆ ಪ್ರವೇಶಗೊಳ್ಳುವಾಗ ಸಿಕ್ಕಿ ಬೀಳುವ ವ್ಯವಸ್ಥೆಗಾಗಿ ಇದನ್ನು ಮಾಡಲಾಗಿದೆ ಎಂದು ಹೇಳುತ್ತಾರೆ. ಹೊಸದಾಗಿ ಈ ಕೋಟೆಯೊಳಗೆ ಪ್ರವೇಶಗೊಳ್ಳುವಾಗ ಟಿಪ್ಪು ಸೈನ್ಯದ ಗುರುತುಳ್ಳ ವ್ಯಕ್ತಿ ಈ ಕೌಂಟರಿನಲ್ಲಿ ತನ್ನ ಗುರುತನ್ನು ತೋರಿಸಿ ಒಳಕ್ಕೆ ಹೋಗಬಹುದಿತ್ತೆನ್ನಿಸುತ್ತದೆ. ಕಲಾ ಕೌಶಲ್ಯದಿಂದಲೂ, ಭದ್ರತೆಯಿಂದ ಸುಂದರ ನಕ್ಷೆಯಿಂದ 3ನೇ ದ್ವಾರವು ಬಹಳ ಕಲಾತ್ಮಕ ವಾಗಿ ಪ್ರಮುಖವಾಗಿ ಕಂಡುಬರುತ್ತದೆ. 20ಅಡಿ ಎತ್ತರವುಳ್ಳ ಕಮಾನಿನ ಮೇಲೆ ಸುಳುವು ಹೊಳವುಗಳನ್ನು ಮಾಡಲಾಗಿದ್ದು ಹುಲಿಯ ಪಟ್ಟೆಗಳನ್ನು ಕಮಾನಿನ ಮೇಲೆ ಸಿಮೆಂಟ್ ಗಚ್ಚಿನಿಂದ ರೂಪಗೊಳಿಸಲಾಗಿದೆ. ಪ್ರಮುಖವಾದ ಯಾವುದೇ ಚಾರಿತ್ರಿಕ ಸ್ಮಾರಕಗಳಲ್ಲಿ ನುರಿತ ತಜ್ಞರಿಂದ ಸ್ಮಾರಕದ ಮೂಲ ನಕ್ಷೆಯನ್ನು ಕಟ್ಟಡದ ಒಳಗೆ /ಹೊರಗೆ ಬಿಡಿಸಿದ್ದನ್ನು ಕಾಣುತ್ತೇವೆ. ಮೂರನೇ ದ್ವಾರದ ಮೇಲ್ ಗೋಡೆಯು 35ಅಡಿಗಳ ಎತ್ತರವಾಗಿದ್ದು 5ಅಡಿಗಳು ದಪ್ಪವಾಗಿದೆ.

ಈ ಕೋಟೆಗೋಡೆಯ ದಪ್ಪ 10ಅಡಿಯೊಳಗಿದ್ದರೆ 25ಅಡಿಗಳ ಎತ್ತರವಾಗಿದೆ.ಹಿಂಬದಿಯಿಂದ ಈ ಕೋಟೆ ಗೋಡೆಯು ಬಹಳ ಕಡಿದಾಗಿ ಮೇಲಕ್ಕೆ ಹೋಗಿದೆ. ಪ್ರತಿಯೊಂದು ಕೋನಗಳ ಕೇಂದ್ರದಲ್ಲಿ ಒಟ್ಟು 8ಬುರುಜುಗಳಿವೆ, ಪ್ರತಿಯೊಂದು ಬುರುಜಿನಲ್ಲಿ ಕಮಾನಾಕೃತಿಯ ಪ್ರವೇಶದ್ವಾರವಿದ್ದು ಒಳವೃತ್ತ ಸ್ಥಳದಲ್ಲಿ 4ಜನ ನಿಲ್ಲುವಷ್ಟು ಸ್ಥಳವಿದೆ. ಕೆಲವು ಕಡೆ ಎರಡು ಜನ ಮರೆಯಾಗುವಂತಹ ಗೂಡುಗಳಿವೆ. 8 ಬುರುಜುಗಳಲ್ಲಿ ಈಗಾಗಲೆ 2 ಶಿಥಿಲಗೊಂಡಿದ್ದು ಅನದನು ಪುನರ್ ನಿರ್ಮಾಣ ಮಾಡಲಾಗಿದೆ. ಕೋಣೆಯ ಪಕ್ಕದಲ್ಲಿ ಈ ಹಿಂದೆ ತಿಳಿಸಿದಂತೆ ಧಾನ್ಯ ಸಂಗ್ರಹದ ಕೋಣೆಗಳು ಪುನಃ ಸಿಗುತ್ತದೆ. ಮೊದಲನೆ ಕೋಣೆಯಲ್ಲಿ ದವಸಗಳನ್ನಿಡುವ ಕೋಣೆಗೆ ಇದು ವಿರುದ್ದ ದಿಕ್ಕಿನಲ್ಲಿದೆ. ಇದರ ನಂತರ ಕುದುರೆಲಾಯಗಳು, ವಿಶ್ರಾಂತಿ ಗೃಹಗಳು ಪಾಕಶಾಲೆಗಳಿವೆ. ಇವೆಲ್ಲ ಕಮಾನುಗಳನ್ನೊಂದಿದೆ. ಇಲ್ಲಿ ಬಿದ್ದ ನೀರು ಹರಿದು ಹೊರಬರಲು ಸಣ್ಣ ಕಾಲುವೆಯೊಂದು ಹೊರಕ್ಕೆಬರುತ್ತದೆ. ಮುಂದೆ ಪೂರ್ವದಿಕ್ಕಿನಲ್ಲಿ 8-10 ಕೋಣೆಗಳನ್ನು ನಿರ್ಮಿಸಬಹುದಾದಷ್ಟು ಸ್ಥಳದಲ್ಲಿ ಅಪೂರ್ಣವಾದ ಕಟ್ಟಡಗಳ ಸುಳಿವುಗಳಿವೆ. ಇವೆಲ್ಲ ನಿರ್ಮಾಣವಾದುದು ಕೇವಲ ಶೇ.60 ಭಾಗದಷ್ಟು ಮಾತ್ರ ಇನ್ನುಳಿದ ಶೇ 40 ಭಾಗ ಕಟ್ಟಿಸಲು ಯೋಚಿಸಿ ಮೊದಲ ಹಂತ ನಿರ್ಮಿಸಿದ ಸಾಕ್ಷಿಗಳು ನಮಗೆ ಗೊಚರವಾಗುತ್ತದೆ.

ಫಿರಂಗಿಗಳನ್ನು ಮೇಲಕ್ಕೆ ಕೊಂಡೊಯ್ಯಲು ಸುಲಭವಾಗಲೆಂದು ಹೀಗೆ ಮಾಡಲಾಗಿದೆ. ಕೋಟೆಯಮೇಲೆ ಅಂಚಿನುದ್ದಕ್ಕು 3ಅಡಿ ಎತ್ತರದ 1 ವರೆ ಅಡಿ ಅಗಲದ ಗೋಡೆಯು ಉತ್ತು ಬಳಸಿದ್ದು 20 ಅಡಿಗೊಮ್ಮೆ ಈ ರೀತಿಯ ಕಿರಿದಾರಿಗಳನ್ನು ಮಾಡಿದ್ದು ಕಡಿದಾದ ಮತ್ತು ಹಿಂದಿನಿಂದ ಏರಲು ಸಾದ್ಯವಿಲ್ಲದಷ್ಟು ಅಪಾಯದಿಂದ ಕೂಡಿವೆ. ಇವನ್ನು ಒಂದರಪಕ್ಕ ಒಂದನ್ನು ಅಡ್ಡವಾಗಿ ಇಟ್ಟ ಇಟ್ಟಿಗೆಗಳಿಗೆ ಕಾಂಕ್ರೀಟು ಹಾಕಿ ಬಿಗಿಗೊಳಿಸಲಾಗಿದೆ. ಪ್ರತಿಯೊಂದು ಈ ರೀತಿ ಮಾದರಿಗಳು ಒಂದುವರೆ ಅಡಿ ಅಗಲದಿಂದ ಕಡಿದಾಗಿ 4-8-10-12 ಅಡಿಗಳವರೆಗೆ ಕೆಳಮುಖವಾಗಿ ಹೋಗಿವೆ. ಒಟ್ಟು ಕೋಟೆಯ ಕೇಂದ್ರ ಬಿಂದುವಿನಲ್ಲಿ + ಆಕಾರದ 40*40 ಅಡಿಗಳ ಅಳತೆಯ ಕೊಳವಿದ್ದು 40 ಅಡಿಗಳ ಆಳದಿಂದ ನೀರು ಸಂಗ್ರಹ ವಾಗುತಿತ್ತು. ಆದ್ದರಿಂದ ತಳಪಾಯ ಕಾಣುತಿದ್ದು ಇದೀಗ ಸ್ವಚ್ಚಗೊಳಿಸಲಾಗಿದೆ.

ನಾಲ್ಕೂ ದಿಕ್ಕಿನಲ್ಲಿಯೂ 10ಅಡಿ ಅಗಲವಾದ ಮೆಟ್ಟಿಲುಗಳುಳ್ಳ ದಾರಿಯು 20ಅಡಿಗಳ ಕೆಳಗಿನವರೆಗೂ ಹೋಗಿದೆ. ಈ ಕೊಳದ ಸುತ್ತಲೂ ರಕ್ಷಣಾಗೋಡೆ ಇಲ್ಲದೆ ಮಳೆ ಮತ್ತು ಗಾಳಿಗೆ ಮಣ್ಣು ಮತ್ತು ಕೊಳಕುನೀರು ಈ ಕೊಳಕ್ಕೆ ಬಿದ್ದಿದ್ದರ ಪರಿಣಾಮವಾಗಿ ಕೆಳಗೆ ದುರ್ಗಂಧ ನೀರು, ಗಿಡ ಗಂಟೆಗಳು ಬೆಳೆಯಲು ಅವಕಾಶವಾಗುತ್ತದೆ. ಈ ತರಹದ ಕೊಳವು ಟಿಪ್ಪು ಕಟ್ಟಿಸಿದ ಯಾವ ಕೋಟೆಯಲ್ಲು ಕಾಣಬರುವುದಿಲ್ಲ. ಈ ಕೋಟೆಯು ಗಿರಿದುರ್ಗವಾದ್ದರಿಂದ ಮೇಲಕ್ಕೆ ನೀರನ್ನು ತರುವ ಸಮಸ್ಯೆಯನ್ನು ನೀಗಲಿಕ್ಕಾಗಿ ಈ ರೀತಿ ಮಾಡಲಾಗಿದೆ. ಕೋಟೆಗೆ ಈ ಕೊಳವು ಭೂಷಣ ಪ್ರಾಯವಾಗಿದೆ. ನಕ್ಷತ್ರಗಳ ಮೂಲೆಯಿಂದ ಸಮಾನಾಂತರವಾಗಿ ಈ ಕೊಳವು 180 ಅಡಿಗಳ ಅಂತರದಲ್ಲಿದೆ. ಈ ಕೊಳದ ಅನತಿ ದೂರದಲ್ಲಿ 2ಮದ್ದಿನ ಮನೆಗಳಿವೆ. ಇವುಗಳು ಪಿರಮಿಡ್ ಆಕೃತಿಯನ್ನು ಹೋಲುತಿದ್ದು ಕೋಟೆಯ ಒಳಾಂಗಣದ ಸಮತಟ್ಟದಿಂದ 15ಅಡಿಗಳ ಕೆಳಭಾಗದಲ್ಲಿ 615 ಅಡಿಗಳ ಒಂದೊಂದು ಅಂಕಣಗಳಿವೆ. ಭೂಮಿಯ ಮೇಲೆ 8 ಅಡಿ ಎತ್ತರದಲ್ಲಿ ತ್ರಿಕೋನಾಕೃತಿಯನ್ನು ಹೊಂದಿದೆ. ಕೋಟೆಯ ಪೂರ್ವದಿಕ್ಕಿನಲ್ಲಿರುವ 53 ಅಡಿಗಳ ಉದ್ದಗಲದ 2 ಮದ್ದಿನ ಮನೆಗಳಿಗೆ ಚೌಕಾಕಾರದ ಬಾಗಿಲುಗಳಿವೆ.

ಮೆಟ್ಟಿಲುಗಳಿಂದ ದಕ್ಷಿಣದಿಕ್ಕಿಗೆ ಇಳಿದರೆ ಪೂರ್ವ ದಿಕ್ಕಿನಲ್ಲಿ ಕತ್ತಲೆಯಿಂದ ಆವರಿಸಿದ ಕೋಣೆಗಳಿವೆ. ಮೇಲಿನಿಂದ ಬೆಳಕು ಹರಿಯಲು ಕಿರಿಕಿಂಡಿಗಳಿದ್ದರು ಅಗತ್ಯವಿದ್ದಷ್ಟು ಬೆಳಕು ಇಲ್ಲ. ಬೆಳಕಿಗಾಗಿ ಅಲ್ಲಲ್ಲಿ ಮಾಡುಗಳನ್ನು ಮಾಡಲಾಗಿದೆ. ಗಾರೆಯಿಂದ ನಿರ್ಮಿಸಿದ ಈ ಕಟ್ಟಡಕ್ಕೆ ಅಂದೇ ಸುಣ್ಣವನ್ನು ಬಳಿಯಲಾಗಿದ್ದು ಇಂದಿಗೂ ಕೂಡ ಹೊಳಪು ನೀಡುತ್ತದೆ. ಭೂಮಿಯ ಮೇಲೆ ಮದ್ದು ಅರೆಯುವಂತ ಕ್ರಿಯೆಗಳನ್ನು ಮಾಡಿದರೆ ಗಾಳಿ ಬಿಸಿಲು ಮತ್ತು ಕಿಡಿಗಳಿಂದ ಅಪಾಯವಾಗಬಹುದೆಂಬ ಕಾರಣದಿಂದ ಮದ್ದು ತಯಾರಿಸುವ ಕೋಣೆಗಳನ್ನು ನೆಲ ಅಂತಸ್ಥಿನಲ್ಲಿ ಮಾಡಿರಬಹುದು. ಟಿಪ್ಪು ಕಟ್ಟಿಸಿದ್ದ ಅನೇಕ ಕೋಟೆಗಳಲ್ಲಿ ಈ ರೀತಿಯ ವ್ಯವಸ್ಥೆಯನ್ನು ಕಾಣಬಹುದಾಗಿದೆ. ಆದರೆ ಮೇಲಿನಿಂದ ಕೆಳಕ್ಕೆ ಇಳಿಯಲಾಗದ ಜನರು ಇದೇ ಸುರಂಗಮಾರ್ಗ,ಇಲ್ಲಿಂದಲೆ ಬೇರೆಡೆಗೆ ಹೋಗಬಹುದೆಂದು ಊಹಿಸುತ್ತಾರೆ.

PC CREDIT : Ashwathrai/ ManjarabadfortFB

ಮೇಲ್ಬಾಗದಲ್ಲಿ ಮದ್ದಿನ ಕಚ್ಚಾವಸ್ತುಗಳನ್ನು ಸಂಸ್ಕರಿಸಿ ಜವಾಬ್ದಾರಿಯಿಂದ ಕೆಳಮಳಿಗೆಯಲ್ಲಿ ಶೇಖರಿಸಿಡಲಾಗುತ್ತಿತ್ತು. ಒಟ್ಟಾರೆ ಈ ಕೋಟೆಯು ಪರಿಪೂರ್ಣವಾಗಿ ಕಟ್ಟಲ್ಪಟ್ಟಿದ್ದರೆ ಕರ್ನಾಟಕದಲ್ಲಿಯೇ ವಿಶಿಷ್ಟವಾದ ಭದ್ರವಾದ ಕೋಟೆ ಎನಿಸುತಿತ್ತು. ಶೇ 60ಭಾಗ ಕಲ್ಪನೆಯಂತೆ ಪೂರ್ಣಗೊಳಿಸಿದ್ದು ಇನ್ನು ಶೇ 40ರಷ್ಟು ಭಾಗ ಅಂದರೆ ಒಳ ಕಮಾನುಗಳ ಮುಂದಿನ ಅಂಕಣ ಅಲಂಕರಣಗಳು ಪೂರ್ಣಗೊಳ್ಳಲಿಲ್ಲ. ಇದಕ್ಕೆ ಕಾರಣ ಹಲವು ಇರಬಹುದು. ಕಲ್ಲಿನಕೋಟೆಗೆ ಅಂಟಿಕೊಂಡಂತೆ 10ಅಡಿ ಅಗಲದ 10ಅಡಿ ಆಳವಾದ, ಕಡಿದಾದ ಕಂದಕವೊಂದಿದ್ದು ಈ ಕಂದಕದಿಂದ 10-12-15-20 ಅಡಿಗಳ ಅಂತರದಲ್ಲಿ ಗುಡ್ಡದ ಅಂಚಿಗೆ ಅಂಟಿಕೊಡಂತೆ 2ಅಡಿ ಅಗಲ 4ಅಡಿ ಎತ್ತರದ ಗಾರೆಯಿಂದ ಭದ್ರಗೊಳಿಸಿದ ಇಟ್ಟಿಗೆಯ ಹೊರಕೋಟೆ ಇದೆ. ಈಗ ಇದು ಕೂಡ ನಾಮಾವಶೇಷವಾಗುತ್ತಿದ್ದು ಕೆಲವು ಕಡೆ ಕುರುಹುಗಳೇ ಕಾಣಿಸುತ್ತಿಲ್ಲ. ಈ ಹೊರ ಕೋಟೆಯನ್ನು ಮೂಲಕೋಟೆ ಕಟ್ಟಿಸಿದ ನಂತರದ ದಿನಗಳಲ್ಲಿ ಭದ್ರತೆಯ ದೃಷ್ಟಿಯನ್ನರಿತು ಕಟ್ಟಲಾಗಿದೆ.

ಇದರ ಒಳಭಾಗದಲ್ಲಿ ಶಸ್ತ್ರ ಸಜ್ಜಿತ ಸೈನಿಕರು, ಕಾವಲು ಕಾಯುತ್ತಿದ್ದರು. ಒಟ್ಟಿನಲ್ಲಿ ಇದೊಂದು ಟಿಪ್ಪುವಿನ ಕಾಲದಲ್ಲಿ ಅಭೇದ್ಯ ಕೋಟೆಯಾಗಿ ಪರಿಣಮಿಸಿತ್ತು. ಈ ಹೊರ ಕೋಟೆಯ ನೈರುತ್ಯ ದಿಕ್ಕಿನ ಒಳಭಾಗದಲ್ಲಿ ಮೂರು ಸಮಾಧಿಗಳಂತಹ ಗುರುತುಗಳಿವೆ. ಇವು ನಶಿಸಿಹೋಗಿ ಈಗ ಕೇವಲ ಮಣ್ಣಿನ ಗುಡ್ಡೆಗಳಾಗಿ ಕಾಣುತ್ತವೆ. ಇವು ಪ್ರಾಯಶಃ ಟಿಪ್ಪು ಕಡೆಯ ಸೈನಿಕರದ್ದಾಗಿವೆ ಎಂದು ಸ್ಥಳೀಯರ ಅಭಿಪ್ರಾಯ. ಸಮಾಧಿಗಳಂತೆ ತೋರುವ ಈ ಮಣ್ಣಿನ ಗುಡ್ಡೆಗಳ ಹಿನ್ನೆಲೆಯಾಗಿ ಒಂದು ವಾಸ್ತವ ಕಥೆಯು ಈ ಭಾಗದಲ್ಲಿ ಪ್ರಚಲಿತವಾಗಿದೆ. ಟಿಪ್ಪು ಹುಲಿ ಎಂದೆ ಖ್ಯಾತನಾಗಿದ್ದ ಅಂದಿನ ದಿನಗಳಲ್ಲಿ ಆತನನ್ನಾಗಲೀ, ಅವನ ಸೈನ್ಯದ ಠಿಕಾಣಿಯನ್ನಾಗಲಿ ದಮನಮಾಡಬೇಕೆಂದು ಬ್ರಿಟೀಷ್ ಅಧಿಕಾರಿಗಳು ಹೊಂಚುಹಾಕುತ್ತಿದ್ದರು.

ಒಂದು ದಿನ ಕೆಲವು ಬ್ರಿಟೀಷ್ ಸೈನ್ಯಾಧಿಕಾರಿಗಳು ಟಿಪ್ಪುವಿನ ಗಟ್ಟಿಯಾದ ಮತ್ತು ಸಂಪದ್ಭರಿತ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಾಯಶಃ ಮಂಗಳೂರು ದಿಕ್ಕಿನಿಂದ ಈ ಮಂಜ್ರಾಬಾದ್ ಕೋಟೆಯೆಡೆಗೆ 4-6 ಜನ ಸೈನ್ಯಾಧಿಕಾರಿಗಳು ಕುದುರೆಗಳ ಮೇಲೆ ಧಾವಿಸಿ ಬರುತಿದ್ದರು. ಈ ಪ್ರಕರಣವು ಕೋಟೆ ಕಟ್ಟಿಸಿದ ನಂತರದ ಸಂದರ್ಭವಾಗಿರಬಹುದು. ಮೊದಲು ಕೋಟೆಯ ಮೇಲಿನ ಸೈನಿಕರನ್ನು ಸದೆ ಬಡಿದು ಒಳಗೆ ನುಗ್ಗಿ ಕೋಟೆಯನ್ನು ವಶಪಡಿಸಿಕೊಳ್ಳುವುದರ ಮೂಲಕ ಕೊಲ್ಲಿಸುವ ಯೋಜನೆ ಬ್ರಿಟೀಷರದಾಗಿತ್ತು. ದೂರದಿಂದಲೇ ಬ್ರಿಟೀಷ್ ಅಧಿಕಾರಿಗಳು ಕೋಟೆಯೆಡೆಗೆ ದಾವಿಸಿ ಬರುತ್ತಿರುವುದನ್ನು ಮನಗಂಡ ಸೈನಿಕರು ಕೋವಿಗಳಿಂದ ಸಣ್ಣ ಸಣ್ಣ ತುಪಾಕಿಯಿಂದ ಅದರೆಡೆಗೆ ಗುಂಡುಗಳನ್ನು ಹಾರಿಸಲಾರಂಬಿಸಿದರು. ಆ ಕೂಡಲೆ ಕಾರ್ಯ ಸಫಲವಾಗಲಿಲ್ಲವೆಂದು ಅರಿತ ಕೋಟೆಯ ಮೇಲಿನ ಅಸಂಖ್ಯಾತ ಸೈನಿಕರನ್ನು ಕಂಡು ಬ್ರಿಟೀಷ್ ಸೈನಿಕರು ಓಟಕಿತ್ತರು.

ಈ ಕಡೆ ದಾಳಿಯಿಂದ ಮರಣಹೊಂದಿದ ಟಿಪ್ಪುವಿನ ಸೈನಿಕರ ಶವಗಳನ್ನು ಆಯಾಯ ಸ್ಥಳದಲ್ಲಿಯೇ ಅಂತ್ಯಕ್ರಿಯೆ ಮಾಡಲಾಯಿತು. ಪ್ರಸಕ್ತ ಮಳೆಗಾಳಿಯ ಒಡೆತಕ್ಕೆ ಸಮಾಧಿಗಳು ಹಾಳಾಗಿ ದಿಬ್ಬದಂತೆ ಕಾಣಲಾರಂಬಿಸಿದವು. ಇದರ ಕೆಳಭಾಗದ ನಾಲ್ಕು ದಿಕ್ಕುಗಳಲ್ಲಿ ಮಡಿದ ಸೈನ್ಯಾಧಿಕಾರಿಗಳ ಜನನ ಮರಣ ಮತ್ತು ಸೇವೆಯ ವಿವರ ಪರಾಕ್ರಮಗಳೆಲ್ಲವನ್ನು ಬರೆಯಿಸಲಾಯಿತು. ಈ ಸ್ಥೂಪದ ರಕ್ಷಣೆಗಾಗಿ ವರ್ಷಕ್ಕೊಮ್ಮೆ ಸುಣ್ಣ ಬಣ್ಣ ಮಾಡಿಸಲೆಂದು ಒಬ್ಬರಿಗೆ ನೇಮಿಸಲಾಗಿತ್ತಂತೆ. ಕಾಲ ನಂತರ ಈ ಸ್ಥೂಪದ ಕಡೆ ಗಮನಹರಿಸದೆ ಇರುವುದರಿಂದಾಗಿ ಗೋರಿ ಬಿದ್ದು ಹೋಯಿತು. ಕಲ್ಲುಗಳು ದುರ್ಬಳಕೆಯಾದವು. ಈ ಸಮಾದಿಗೆ ಇಲ್ಲಿಯ ಜನರು ಫರಂಗಿಗೋರಿ ಎಂದು ಕರೆಯುತ್ತಾರೆ. ಈ ಕಾರಣದಿಂದಾಗಿ ಅಧಿಕಾರಿಯ ದಾಖಲೆಗಳು ಇಂದಿನ ಇತಿಹಾಸಕಾರರಿಗೆ ಲಭ್ಯವಾಗಲಿಲ್ಲ.

PC CREDIT : Ashwathrai/ ManjarabadfortFB

ಕೋಟೆಯ ಮೇಲೆ ಮಡಿದ ಸೈನಿಕರ ಸಮಾಧಿಯ ಪಕ್ಕದಲ್ಲಿಯೂ ಸೈನಿಕರ ಹೆಸರು ಇತರೆ ವಿಷಯಗಳನ್ನು ಪರ್ಶಿಯನ್ ಭಾಷೆಯಲ್ಲಿ ದಾಖಲಿಸಿ ಶಾಸನವೊಂದನ್ನು ನಿಲ್ಲಿಸಲಾಗಿತ್ತು. 1987 ರಲ್ಲಿ ಪುರಾತತ್ವ ಇಲಾಖೆಯವರು ಶಾಸನದ ನಕಲನ್ನು ತೆಗೆದುಕೊಂಡು ಹೋಗಿದ್ದರೂ ಇದರ ವರದಿಯನ್ನು ಇನ್ನೂ ಪ್ರಕಟಿಸಿಲ್ಲ. ಕಾಲಾ ನಂತರದಲ್ಲಿ ಅದು ಕೂಡ ನಾಶವಾಗಿ ಟಿಪ್ಪುಸೈನಿಕರ ವಿಷಯಗಳು ಲಭ್ಯವಾಗಿಲ್ಲ. ಈಗ ದೊರೆತಿರುವ ವಿಷಯವು ಬಾಯಿಯಿಂದ ಬಾಯಿಗೆ ತಲೆಮಾರುಗಳಿಂದ ತಿಳಿಯುತ್ತ ಬಂದದ್ದನ್ನು ಇಲ್ಲಿ ದಾಖಲಿಸಲಾಗಿದೆ. ಆದರೆ ಸೈನಿಕರದ್ದೆಂದು ಹೇಳಲಾಗುವ ಈ ಸಮಾಧಿಗಳ ಬಗ್ಗೆ ಸಂಶೋಧಕ ಶ್ರೀವತ್ಸ ಎಸ್.ವಟಿಯವರು ಇವು ಬ್ರಿಟೀಷರ ಕಾಲದಲ್ಲಿ ಜಮೀನುಗಳ ಅಳತೆಗಾಗಿ ಮಾಡಿದ್ದ ಮೋಜಣಿ ಗುರುತುಗಳು. ಹಾಗಾಗಿ ಸೈನಿಕರನ್ನು ಬೇರೆಡೆಗೆ ದಫನ್ ಮಾಡಿರಬಹುದೆಂದು ಹೇಳುತ್ತಾರೆ.

1956ರ ಪ್ರಾಚ್ಯವಸ್ತು ಸಂರಕ್ಷಣೆ ಕಾಯ್ದೆಯಡಿ ಈ ಕೋಟೆ ಪ್ರಾಚ್ಯ ಇಲಾಖೆಯ ಸ್ಮಾರಕವಾಗಿ ಮಾರ್ಪಟ್ಟಿದ್ದು ಇದನ್ನು ಕಾಯಲು ಕಾವಲುಗಾರನನ್ನು ನೇಮಕ ಮಾಡಲ್ಪಟ್ಟಿದೆ. ಈ ಕೋಟೆಗೆ ಹೋಗಲು ಎನ್.ಹೆಚ್ 75ರ ರಾಷ್ಟೀಯ ಹೆದ್ದಾರಿ 5 ಕಿ.ಮೀ. ತಿರುವು ರಸ್ತೆಗಳನ್ನು ದಾಟಿಹೋದರೆ ಮಂಜ್ರಾಬಾದ್ ಕೋಟೆ ಸಿಗುತ್ತದೆ. ಇಲ್ಲಿ ಹೋಟೆಲ್‍ಗಳು, ಒಂದಿಷ್ಟು ವಾಸದ ಮನೆಗಳು ಸಿಗುತ್ತವೆ. 1923ರಲ್ಲಿಯೇ ತಯಾರಿಸಲ್ಪಟ್ಟ ನಕಾಶೆಯ ಪ್ರಕಾರ ಕೋಟೆಗೆ ಹೋಗುವ ರಸ್ತೆಯು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಎಡ ಭಾಗದಲ್ಲಿದೆ. ಟಿಪ್ಪು ಸುಲ್ತಾನ್ ಗುಡ್ಡದ ಮೇಲೆ ಗಟ್ಟಿ ಮುಟ್ಟಾದ ಕೋಟೆಯನ್ನೇನೋ ವಿವಿಧ ಕಾರಣಕ್ಕಾಗಿ ಕಟ್ಟಿಸಿದ್ದು ನಿಜ. ಕಾಲದ ಹೊಡೆತಕ್ಕೆ ಸಿಲುಕಿದ ಈ ಕೋಟೆ ನಲುಗಿ ಅವಶೇಷವಾಗುವ ಹಂತ ಇದೀಗ ತಲುಪಿದೆ. ಕಮಾನುಗಳು ಬಿರುಕು ಬಿಟ್ಟು ನೀರು ಸೋರುತ್ತಲಿದ್ದು ಕಳ್ಳಕಾಕರ ಪಾಲಾಗಿ ಮಣ್ಣು ಶೇಕರಗೊಂಡಿದೆ. ಕೆಲವು ಒಳಕೋಣೆಗಳಿಗೆ ಬೆಳಕಿನ ವ್ಯವಸ್ಥೆ ಇಲ್ಲದೆ ಗಲೀಜು ತುಂಬಿ ದುರ್ವಾಸನೆ ಬರುತ್ತಿದೆ. ಲ್ಯಾಟ್ರಿನ್ ಮಾದರಿಯ ಕೋಣೆಯಲ್ಲಿನ ಶೌಚಲಯದ ಮುಕ್ಕಾಲುಭಾಗ ಮುಚ್ಚಿಹೋಗಿದೆ. ವಿಕೃತ ಪ್ರೇಮಿಗಳಿಂದ ಅಕ್ಷರಗಳು ಕೆತ್ತಲ್ಪಟ್ಟಿದ್ದು ಗೋಡೆಗಳು ವಿರೂಪಗೊಂಡಿವೆ. ಗೈಡ್‍ಗಳು ಒಬ್ಬರು ಈ ಹಿಂದೆ ಇಲ್ಲದಿದ್ದರಿಂದ ಈ ಕೋಟೆಯ ಐತಿಹಾಸಿಕ ವಿವರ ತಿಳಿಯದಾಗಿದೆ.

ಮಂಜ್ರಾಬಾದ್ ಕೋಟೆಯ ಮೇಲೆ ಬೀಳುವ ಮಳೆನೀರು ಎರಡು ಮಹಾಸಾಗರ ಸೇರುತ್ತದೆ !

ಕೋಟೆಯ ಮೇಲೆ ಬೀಳುವ ನೀರು ಇಬ್ಬಾಗವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರುವ ಜಗತ್ತಿನ ಏಕೈಕ ಕೋಟೆ ಎಂದರೇ ಅದು ಸಕಲೇಶಪುರದ ಮಂಜ್ರಾಬಾದ್ ಕೋಟೆಯಾಗಿದೆ. ಸಮುದ್ರಮಟ್ಟದಿಂದ ಮಂಜ್ರಾಬಾದ್ ಕೋಟೆಯು 988 ಮೀಟರ್ ಎತ್ತರದಲ್ಲಿದೆ. ಪಶ್ಚಿಮ ಘಟ್ಟಗಳ ವ್ಯಾಪ್ತಿಗೆ ಒಳ ಪಡುವ ಮಲೇಯಾದ್ರಿ ಪರ್ವತ ಶ್ರೇಣಿಯಲ್ಲಿದ್ದು, ಪೂರ್ವ ಮತ್ತು ಪಶ್ಚಿಮ ಭೂ ಗಡಿ ರೇಖೆಯ ಮದ್ಯದ ಬೆಟ್ಟದಲ್ಲಿ ನಿರ್ಮಿತವಾಗಿರುವ ಮಂಜ್ರಾಬಾದ್ ಕೋಟೆಯ ಮೇಲೆ ಬೀಳುವ ಮಳೆ ನೀರು ಪಶ್ಚಿಮ ಮುಖವಾಗಿ ಅರಬ್ಬಿ ಸಮುದ್ರಕ್ಕೂ ಪೂರ್ವ ಮುಖವಾಗಿ ಬಂಗಾಳ ಕೊಲ್ಲಿಗೂ ಸೇರುತ್ತದೆ. ಮಂಜ್ರಾಬಾದ್ ಕೋಟೆಯ ಪಶ್ಚಿಮ ಭಾಗದಲ್ಲಿ ಬಿದ್ದ ಮಳೆಯ ನೀರು ಎತ್ತಿನ ಹಳ್ಳ ನಂತರ ಕೆಂಪು ಹಳ್ಳ ನಂತರ ಎಳನೀರು ನದಿ, ಗುಂಡ್ಯನದಿ ಯೊಂದಿಗೆ ಕುಮಾರಧಾರ ಮೂಲಕ ನೇತ್ರಾವತಿ ನದಿಯ ಸೇರಿ ಅನಂತರ ಉಲ್ಲಾಳ ಬಳಿ ಅರಬ್ಬಿ ಸಮುದ್ರ ಸೇರುತ್ತಿದೆ. ಪೂರ್ವಬಾಗದಲ್ಲಿ ಬಿದ್ದ ನೀರು ಹೇಮಾವತಿ ನದಿಯ ಮೂಲಕ ಕಾವೇರಿ ನದಿಗೆ ಸಂಗಮವಾಗಿ ಚೆನೈ ಬಳಿ ಬಂಗಾಳ ಕೊಲ್ಲಿ ಸೇರುತ್ತದೆ. ಒಂದು ನಿರ್ದಿಷ್ಟ ಪ್ರದೇಶಕ್ಕೆ ಬೀಳುವ ಮಳೆಯ ನೀರು ಎರಡು ಸಾಗರಗಳಿಗೆ ಇಬ್ಬಾಗವಾಗಿ ಹರಿಯುತ್ತದೆ ಎನ್ನುವ ಮಾಹಿತಿಯನ್ನು ಆಧರಿಸಿ ಈ ಬೆಟ್ಟದ ಮೇಲೆ ಕೋಟೆ ಕಟ್ಟಲು ಕಾರಣವಾಗಿರಬಹುದು. ಈ ಬಗ್ಗೆ ಸರಕಾರ ಮತ್ತಷ್ಟು ಮಾಹಿತಿ ಸಂಗ್ರಹಿಸುವ ಅಗತ್ಯವಿದೆ.

ನೀರು ಇಬ್ಬಾಗವಾಗಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಸೇರುವ ಸ್ಥಳವಾಗಿ ಸಕಲೇಶಪುರ ತಾಲ್ಲೂಕು ಬಿಸ್ಲೆ ಸಮೀಪ ಮಂಕನಹಳ್ಳಿಯಲ್ಲಿ ಬ್ರಿಟೀಷರು ಬ್ರಿಡ್ಜ್ ನಿರ್ಮಿಸಿದ್ದು `ವೇ ಆಫ್ ಬೆಂಗಾಲ್ ಮತ್ತು ಅರಬಿಯನ್ ಸೀ’ ಎಂಬ ನಾಮ ಫಲಕವನ್ನು ನೋಡಬಹುದಾಗಿದೆ. ಸಕಲೇಶಪುರಕ್ಕೆ ಹತ್ತಿರವಾಗಿ ಕಂಡುಬರುವ ಮತ್ತೋಂದು ಪ್ರದೇಶವೆಂದರೇ 4 ಕಿ ಮೀ ದೂರದಲ್ಲಿರುವ ದೋಣಿಗಾಲ್ ಸಮೀಪದ ಮಂಜ್ರಾಬಾದ್ ದರ್ಗಾವಾಗಿದೆ. ದರ್ಗಾದ ಕಾಣಿಕೆ ಹುಂಡಿ ಮುಂಭಾಗದ ಬೆಂಗಳೂರು ಮತ್ತು ಮಂಗಳೂರು ಹೆದ್ದಾರಿ ಮೇಲೆ ಬೀಳುವ ನೀರು ಇಬ್ಬಾಗವಾಗಿ ಅರಬ್ಬಿ ಸಮುದ್ರ ಮತ್ತು ಹಿಂದೂ ಮಹಾಸಾಗರಕ್ಕೆ ಸೇರುತ್ತದೆ.

ರುದ್ರ ರಮಣೀಯ ಸೂರ್ಯೋದಯ ಮತ್ತು ಸೂರ್ಯಸ್ತಮ :

ಮಂಜ್ರಾಬಾದ್ ಕೋಟೆಯ ಮೇಲೆ ಸೂರ್ಯೋದಯ ಮತ್ತು ಸೂರ್ಯಸ್ತಮ ವೀಕ್ಷಣೆ ಒಂದು ರೋಮಾಂಚನ ಅನುಭವವಾಗಿದೆ. ಮೋಡಗಳ ಮದ್ಯೆ ಮುಂಜಾನೆ ಮೂಡುವ ಸೂರ್ಯನ ಕಿರಣಗಳು ಪಶ್ಚಿಮ ಘಟ್ಟಗಳ ನಿಸರ್ಗ ಸೌಂದರ್ಯದ ಮೇಲೆ ಬೀಳುವ ಮೊದಲು ದೃಷ್ಯದಲ್ಲಿ ಮಂಜು ಕಂಡು ಬಂದರೆ ಕೆಲವೇ ಸಮಯದಲ್ಲಿ ಮಂಜು ಕರಗಿ ಕಣ್ಣಿನ ಮುಂದೆ ಪ್ರಕೃತಿ ಸೌಂದರ್ಯದ ರಾಶಿ ತೆರೆದುಕೊಳ್ಳುತ್ತದೆ. ಸಂಜೆಯ ಸೂರ್ಯಾಸ್ತಮ ಸುಂದರ ಅನುಭವ ನೀಡುತ್ತದೆ. ದುಖಃಕರ ವಿಚಾರವೇನೆಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತಮ ವೀಕ್ಷಣೆಗೆ ಇಲ್ಲಿ ಅವಕಾಶವಿಲ್ಲದಂತಾಗಿದೆ. ಮುಖ್ಯವಾಗಿ ಗುಡ್ಡದ ಮೇಲಿನ ಕೋಟೆಯ ಒಳಾವರಣವನ್ನು ವೀಕ್ಷಿಸಬೇಕೆಂದು ವೃದ್ದರು ಹೋಗಿಬರಲು ಗುಡದ ಬುಡದಿಂದ ರೋಫ್ ವೇ ಕಲ್ಪಿಸಿದರೆ ಸಂಪೂರ್ಣವಾಗಿ ಟಿಪ್ಪುವಿನ ಕೋಟೆಯ ಕಲಾ ಕೌಶಲ್ಯದ ಅರಿವಾಗುತ್ತದೆ. ಇದಲ್ಲದೆ ಕೋಟೆಗೆ ಸಂಬಂಧಿಸಿದಂತೆ ಭಿತ್ತಿ ಪತ್ರಗಳು, ಕರ ಪತ್ರಗಳು, ಚಿತ್ರ ಪಟಗಳನ್ನು ಮಾಡಿಸಿ ಪ್ರಚಾರ ಪಡಿಸಿದರೆ ದೇಶ ವಿದೇಶಗಳ ಪ್ರವಾಸಿಗರಿಗೆ ಅರಿವು ಮೂಡಿಸಿದಂತಗುತ್ತದೆ.

ಭಿತ್ತಿಪತ್ರ, ಕರಪತ್ರ, ಭಾವಚಿತ್ರಗಳು ಭಾರತೀಯ ಎಲ್ಲಾ ಭಾಷೆಗಳಲ್ಲಿದ್ದರೆ ಉಪಕಾರ ಮಾಡಿದಂತಾಗುತ್ತದೆ. ಇದಕ್ಕೆಲ್ಲಾ ಸಂಪರ್ಕ ಕಲ್ಪಿಸಬೇಕಾದರೆ ಸಕಲೇಶಪುರ ಕೇಂದ್ರ ಸ್ಥಳದಿಂದ ಕೋಟೆಯ ದರ್ಶನಕ್ಕೆಂದೇ ವಿಶೇಷವಾಗಿ ವಾಹನಗಳನ್ನು ಕಲ್ಪಿಸಬೇಕಿದೆ. ನಿರ್ಮಿಸಬೇಕಾದ ಪುಟ್ಟ ಬಸ್ ನಿಲ್ದಾಣದ ಪಕ್ಕದಲ್ಲಿ ಒಂದು ವಿಶ್ರಾಂತಿ ಗೃಹವನ್ನು ಕಟ್ಟಿಸಿ ಅಲ್ಲಿ ಕೋಟೆಯ ಸಮಗ್ರ ಮಾಹಿತಿ ಮತ್ತು ಭಾವಚಿತ್ರಗಳನ್ನು ಅನಾವರಣ ಮಾಡಿದರೆ ಪ್ರವಾಸಿಗರ ನೆನಪಿನಲ್ಲಿ ಅಚ್ಚೊತ್ತಿದಂತೆ ಆಗುತ್ತದೆ. ಮೇಲುಗಡೆ ಕೋಟೆಯನ್ನು ನೋಡಲು ಹೋಗುವ ನೋಡುಗರಿಗೆ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ ಕೋಟೆಯ ಪಶ್ಚಿಮ, ಪೂರ್ವ ದಿಕ್ಕಿನ ಸೌಂದರ್ಯವನ್ನು ವೀಕ್ಷಿಸಲು ಅನುಕೂಲವಾಗುವಂತೆ ವ್ಯೂ ಪಾಯಿಂಟ್ ನಿರ್ಮಿಸಿದರೆ ಬಂದಂತಹವರಿಗೆ ಕೋಟೆಯ ದರ್ಶನದೊಂದಿಗೆ ಗಿರಿ ಶಿಖರಗಳ ಸೃಷ್ಟಿ ಸೊಬಗಿನ ದರ್ಶನವನ್ನು ಮಾಡಿಸಿಕೊಟ್ಟಂತಾಗುತ್ತದೆ.ಈ ಎಲ್ಲಾ ಕಾರ್ಯಗಳು ಕೈಗೂಡಲು ಪ್ರವಾಸೋಧ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪ್ರಾಚ್ಯ ಸಂಶೋಧನಾ ಇಲಾಖೆ ಒಟ್ಟಿಗೆ ಸೇರಿ ಒಮ್ಮನಸ್ಸು ಮಾಡಿದರೆ ಈ ಕೋಟೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬಹುದು. ಮಂಜ್ರಾಬಾದ್ ಕೋಟೆಯನ್ನು ಪ್ರವಾಸಿಗರ ಸ್ವರ್ಗವನ್ನಾಗಿಸೋಣ ಬನ್ನಿ.

ಇದನ್ನೂ ಓದಿ : ಸೌಂದರ್ಯಕ್ಕೆ ಮನಸೋಲದವರೇ ಇಲ್ಲ : ಹೇಗೆ ಗೊತ್ತಾ ನಿಸರ್ಗ ತಾಣ

ಇದನ್ನೂ ಓದಿ : ಕತ್ತಲ ರಾತ್ರಿ ಆ ಗ್ರಾಮಕ್ಕೆ ಹೋದವರು ಹಿಂತಿರುಗಿ ಬಂದ ಮಾತೇ ಇಲ್ಲಾ : ಕುಲಧರ ಗ್ರಾಮವೆಂದ್ರೆ ರಾಜಸ್ತಾನದ ಜನ ಬೆಚ್ಚಿ ಬೀಳೋದ್ಯಾಕೆ !

( Karnataka Best Tourist Spot :The stellar Manjarabad Fort )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular