ಭಾನುವಾರ, ಏಪ್ರಿಲ್ 27, 2025
HomeBreakingಕಣ್ಮನ ಸೆಳೆಯುತ್ತಿದೆ ಮಹಾಬಲಿಪುರಂ : ಗಂಗಾವತರಣದ ಬಗ್ಗೆ ನಿಮಗೆಷ್ಟು ಗೊತ್ತು

ಕಣ್ಮನ ಸೆಳೆಯುತ್ತಿದೆ ಮಹಾಬಲಿಪುರಂ : ಗಂಗಾವತರಣದ ಬಗ್ಗೆ ನಿಮಗೆಷ್ಟು ಗೊತ್ತು

- Advertisement -
  • ಹೇಮಂತ್ ಚಿನ್ನು

ನಾವು ಚಿಕ್ಕವರಿರುವಾಗ ಮಹಾಬಲಿಪುರಂ, ಮಹಾಬಲಿಪುರಂ ಅಂತ ತೆಲುಗು ದೂರದರ್ಶನದಲ್ಲಿ ಒಂದು ಹಾಡು ಬರುತ್ತಿತ್ತು. ಅದನ್ನು ನೋಡಿದಾಗಲೆಲ್ಲಾ ಮಹಾಬಲಿಪುರಂ ನೋಡಬೇಕೆಂದು ಅನಿಸುತ್ತಿತ್ತು. ಆ ಅವಕಾಶ ಇತ್ತೀಚೆಗೆ ಒದಗಿ ಬಂತು. ಇತ್ತೀಚೆಗೆ ನಮ್ಮ ಶಿಕ್ಷಕ ಮಿತ್ರರು ಏರ್ಪಡಿಸಿದ್ದ ಪ್ರವಾಸದಲ್ಲಿ ಬೇರೆಬೇರೆ ಊರುಗಳನ್ನು ನೋಡಿದ ನಂತರ ರಾತ್ರಿ 9.30 ಆಗಿತ್ತು.

ನಮ್ಮ ಬಸ್ ಮಹಾಬಲಿಪುರಂನ ಪ್ರಸಿದ್ಧ ಗಂಗಾವತರಣದ ಬಳಿ ನಿಲ್ಲಿಸಿತ್ತು. ನನಗೆ ಖುಷಿಯೋ ಖುಷಿ !! ಆ ಶಿಲ್ಪಕ್ಕೆ ಒಳ್ಳೆಯ ವಿದ್ಯುದ್ದೀಪಗಳನ್ನು ಅಳವಡಿಸಿದ್ದರಿಂದ ಬಹಳ ಆಕರ್ಷಣೀಯವಾಗಿತ್ತು. ಈಗಲೇ ಎಲ್ಲಾ ನೋಡಲಾಗುವುದಿಲ್ಲವಲ್ಲ ಅಂತ ಬೇಸರವಾಗಿ ರೂಂ ಪಡೆದು ಮಲಗಿದರೂ ಬೆಳಗ್ಗೆ ಮಹಾಬಲಿಪುರಂ ನೋಡುತ್ತೀನಿ ಅನ್ನುವ ಕುತೂಹಲಕ್ಕೆ ನಿದ್ದೆಯೇ ಬರದೆ ಒದ್ದಾಡಿ, ಬೆಳಗ್ಗೆ 5.30 ಕ್ಕೆ ಎದ್ದು ಸಮುದ್ರತೀರದಲ್ಲಿ ಸೂರ್ಯೋದಯ ನೋಡೋಣ ಅಂತ ನನ್ನ ಯಜಮಾನರನ್ನು ಎಬ್ಬಿಸಿದರೆ ವಾರದ ಹಿಂದೆ ಅವರು ಸ್ನೇಹಿತರ ಜೊತೆ ಇದೇ ಪ್ರವಾಸ ಕೈಗೊಂಡಿದ್ದ ಅವರಿಗೆ ಬರಲು ಆಸಕ್ತಿ ಇರಲಿಲ್ಲ. ಹಾಗಾಗಿ ತಿಳಿಯದ ಊರಿನಲ್ಲಿ ಬರದ ತಮಿಳಿನಲ್ಲಿ ದಾರಿ ಕೇಳುತ್ತಾ ಸಮುದ್ರ ದಡಕ್ಕೆ ಹೊರಟೆ.

ಅಲ್ಲಿ ನನಗಿಂತ ಮೊದಲೇ ನಮ್ಮ ಬಸ್ಸಿನ ಮಿತ್ರರು ಇದ್ದಿದ್ದರಿಂದ ಅವರ ಜೊತೆಯಲ್ಲಿ ಸೂರ್ಯೋದಯ ಸಮಯದಲ್ಲಿ ಕೆಂಪು ಕೆಂಪಾದ ಸಮುದ್ರದ ನೀರಿನ ಕಿರಿ ಹಿರಿ ಅಲೆಗಳೊಂದಿಗೆ ಮನಸೋ ಇಚ್ಚೆ ಆಟ ಆಡಿದೆವು. ಆನಂತರ ರೂಂಗೆ ಹೋಗಿ ಫ್ರೆಷ್ ಆಗಿ ಶೋರ್ ಟೆಂಪಲ್ ನೋಡಲು ಹೋದೆವು. ಅಲ್ಲಿ ಟಿಕೆಟ್ ಪಡೆಯಲು ಹೋದಾಗ ಅಚ್ಚರಿ ಕಾದಿತ್ತು. 25 ರೂ ಮುಖ ಬೆಲೆಯ ಆ ಟಿಕೆಟ್‌ನ್ನು ಬಳಸಿ ಮಹಾಬಲಿಪುರಂನ ಎಲ್ಲಾ ಪ್ರೇಕ್ಷಣೀಯ ಸ್ಥಳಗಳನ್ನೂ ನೋಡಬಹುದಾದ್ದರಿಂದ ಟಿಕೆಟ್ ಜಾಗ್ರತೆಯಾಗಿ ಇಟ್ಟು ಕೊಳ್ಳಬೇಕೆಂದು ಟಿಕೆಟ್ ಕೌಂಟರ್‌ನಲ್ಲಿ ಇದ್ದವರು ಹೇಳಿದರು. ಈ ರೀತಿಯ ಟಿಕೆಟ್ ವ್ಯವಸ್ಥೆ ಈ ಮೊದಲು ನೋಡಿರಲಿಲ್ಲ.

ಶೋರ್ ಟೆಂಪಲ್ ಅಂದರೆ ಸಮುದ್ರ ತೀರದಲ್ಲಿರುವ ದೇವಾಲಯ ಎಂದು ಅರ್ಥ. ಈ ದೇವಾಲಯವನ್ನು ಪಲ್ಲವ ರಾಜರು 8ನೇ ಶತಮಾನದಲ್ಲಿ ಗ್ರಾನೈಟ್ ಬ್ಲಾಕ್‌ಗಳಿಂದ ನಿರ್ಮಿಸಲಾಗಿದ್ದು ಇದನ್ನು ದಕ್ಷಿಣ ಭಾರತದ ಅತ್ಯಂತ ಪ್ರಮುಖ ರಚನಾತ್ಮಕ ದೇವಾಲಯ ಎಂದು ಗುರುತಿಸಲಾಗಿದೆ.

ಈ ದೇವಾಲಯದ ಶಿಲ್ಪಕಲೆಯನ್ನು ಕಣ್ತುಂಬಿಕೊಂಡ ನಂತರ ಕೃಷ್ಣನ ಬೆಣ್ಣೆ ಚೆಂಡು ಎಂದು ಹೆಸರಿಸಲಾಗುವ ದೊಡ್ಡ ಕಲ್ಲನ್ನು ನೋಡಲು ಹೊರಟೆವು. ಕಿರಿದಾದ ಅಡಿ ಉಳ್ಳ ಈ ದೊಡ್ಡ ಕಲ್ಲೊಂದು ಮಹಾಬಲಿಪುರಂನ ಗಣೇಶನ ರಥದ ಬಳಿ ಇದೆ. ಇದನ್ನು ಅಲ್ಲಿಂದ ಸರಿಸಲು ಪಲ್ಲವ ರಾಜರೂ ಬ್ರಿಟೀಷ್ ರಾಜರೂ ಆನೆಗಳಿಂದ ಎಳೆಸಿ ಪ್ರಯತ್ನ ಪಟ್ಟರೂ ಅದನ್ನು ಇಂಚಷ್ಟೂ ಕದಲಿಸಲಾಗಿಲ್ಲ. ಇದೊಂದು ವಿಸ್ಮಯವೇ ಸರಿ !!!

ಮುಂದಿನ ಭೇಟಿ ಪಂಚರಥಗಳಿಗೆ. ಇವು ಐದೂ ಏಕಶಿಲಾ ರಥಗಳಾಗಿದ್ದು, ಗ್ರಾನೈಟ್ ಕಲ್ಲಿನಿಂದ ಕೆತ್ತಲಾಗಿದೆ. ಇವು ದ್ರಾವಿಡ ಶೈಲಿಯಲ್ಲಿವೆ. ಇವುಗಳ ಕಾಲ 6 ರಿಂದ 7 ನೇ ಶತಮಾನವಾಗಿದ್ದು ಪಲ್ಲವ ರಾಜರಾದ ಮಹೇಂದ್ರವರ್ಮ ಹಾಗೂ ನರಸಿಂಹವರ್ಮ ನಿರ್ಮಿಸಿದರೆಂದೂ ಇತಿಹಾಸ. ಇವುಗಳ ಸೊಬಗನ್ನು ನೋಡಿಯೇ ಅರಿಯ ಬೇಕು, ವರ್ಣಿಸಲಾಗುವುದಿಲ್ಲ. ಅದರ ನಂತರ ನಾವು ನೋಡ ಹೊರಟಿದ್ದು ಗಂಗಾವತರಣ ಶಿಲ್ಪವನ್ನು, ಇದಂತೂ ನನಗೆ ತುಂಬಾ ಇಷ್ಟವಾಯಿತು.

ಪಾಶುಪಾತಾಸ್ತ್ರವನ್ನು ಪಡೆಯಲು ಅರ್ಜುನ ತಪಸ್ಸು ಮಾಡಿದ ಗಂಗಾವತರಣದ ಚಿತ್ರ ಇಲ್ಲಿ ಪ್ರಧಾನವಾಗಿದ್ದು, ಇದರ ಜೊತೆಗೆ ವಿವಿಧ ರೀತಿಯ, ವಿವಿಧ ಆಕಾರದ, ವಿವಿಧ ಕಥೆಗಳನ್ನು ಹೇಳುವ ಲೆಕ್ಕವಿಲ್ಲದಷ್ಟು ಕಣ್ಮನ ತಣಿಸುವಷ್ಟು ಶಿಲ್ಪಗಳು ಇವೆ. ಬಹುತೇಕ ಮಹಾಬಲಿಪುರಂ ಶಿಲ್ಪಗಳೆಲ್ಲಾ ರಥದ ಆಕಾರದಲ್ಲಿರುವುದು ವಿಷೇಶ. ಇದಲ್ಲದೆ ಗಣೇಶ ರಥ, ಲೈಟ್ ಹೌಸ್ ಸಿಂಹದ ಗುಹೆಗಳೂ ಇವೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular