Badrinath : ಹಿಂದೂಗಳ ಪುಣ್ಯಭೂಮಿ ಬದರೀನಾಥ : ಗಢವಾಲ ವಾಸ್ತುಶಿಲ್ಪದ ಬಗ್ಗೆ ನಿಮಗೆ ಗೊತ್ತಾ ?

ಹಿಂದೂಗಳ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಬದರೀನಾಥ ತನ್ನ ವಿಶಿಷ್ಟವಾದ ವಾಸ್ತುಶಿಲ್ಪ ಕಲೆಗೆ ಹೆಸರಾಗಿದೆ. ಅಲಕನಂದಾ ನದಿಯ ದಡದಲ್ಲಿ ಸುಮಾರು 3133 ಮೀಟರ್ ಎತ್ತರದಲ್ಲಿರುವ ಬದರೀನಾಥ ದೇವಾಲಯ ಗಢವಾಲ ವಾಸ್ತುಶಿಲ್ಪಕಲೆಗೆ ಹೆಸರಾಗಿದೆ. ದೇವಾಲಯದ ಹಿಂಭಾಗದಲ್ಲಿರುವ ನೀಲಕಂಠ ಪರ್ವತ ಶಿಖರ ಕಾವಲುಗಾರನಂತಿದೆ. ಪ್ರಾಚೀನ ಕಾಲದಲ್ಲಿ ಈ ಪ್ರದೇಶದಲ್ಲಿ ಬೋರೆಹಣ್ಣಿನ ಮರಗಳು ಹೆಚ್ಚಾಗಿದ್ದ ಕಾರಣ, ಬದರೀ ವನ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು.

ಇಲ್ಲಿನ ಸುಂದರ ಪರ್ವತಗಳು, ಝರಿಗಳು, ಬಿಸಿ ನೀರಿನ ಬುಗ್ಗೆಗಳು ರಮಣೀಯವಾದ ಪ್ರಾಕೃತಿಕ ಸೌಂದರ್ಯದಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಶಿಷ್ಟ ವಾಸ್ತುಶಿಲ್ಪಕಲೆಗೆ ಹೆಸರಾದ ಬದರೀನಾಥ ಮಂದಿರಕ್ಕೆ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ದೇವಾಲಯದ ಸುತ್ತಲಿನ ನಿಸರ್ಗದ ಚೆಲುವಿಗೆ ಮಾರುಹೋಗುತ್ತಾರೆ. ಅಲಕನಂದಾ ನದಿಯ ದಡದಲ್ಲಿ ಸ್ವಾಭಾವಿಕವಾದ ಬಿಸಿ ನೀರಿನ ಬುಗ್ಗೆಗಳು ಇದ್ದು, ಇವುಗಳಲ್ಲಿ ತಪ್ತಕುಂಡ್ ನೀರು ಬಿಸಿಯಾಗಿರುತ್ತದೆ.

ಇದನ್ನೂ ಓದಿ: ಕಣ್ಮನ ಸೆಳೆಯುತ್ತಿದೆ ಮಹಾಬಲಿಪುರಂ : ಗಂಗಾವತರಣದ ಬಗ್ಗೆ ನಿಮಗೆಷ್ಟು ಗೊತ್ತು

ದೇವಾಲಯಕ್ಕೆ ಹೋಗುವ ಮೊದಲು ಭಕ್ತರು ಇಲ್ಲಿ ಸ್ನಾನ ಮಾಡುತ್ತಾರೆ. ಬದರೀನಾಥದಲ್ಲಿ ಸುಮಾರು 4 ಕಿಲೋ ಮೀಟರ್ ದೂರದಲ್ಲಿರುವ ಮಾನಾಗ್ರಾಮ್ ಹಳ್ಳಿಯಲ್ಲಿ ಇಂಡೋ – ಮಂಗೋಲಿಯನ್ ಸಮುದಾಯದವರು ನೆಲೆಸಿದ್ದಾರೆ. ಉಣ್ಣೆ ಉಡುಪು ತಯಾರಿಕೆ ಇಲ್ಲಿನ ಪ್ರಮುಖವಾದ ಗೃಹ ಕೈಗಾರಿಕೆಯಾಗಿದೆ. ಬದರೀನಾಥದಿಂದ 40 ಕಿಲೋ ಮೀಟರ್ ವಿಸ್ತೀರ್ಣದಲ್ಲಿ ಹರಡಿರುವ ಪುಷ್ಪ ಕಣಿವೆ ಪ್ರಮುಖ ಸ್ಥಳವಾಗಿದೆ. ಸುಮಾರು 300 ಕಾಡುಜಾತಿಯ ಪುಷ್ಪಗಳು ಇಲ್ಲಿವೆ.

ವಿವಿಧ ಬಣ್ಣದ ಪುಷ್ಪಗಳಿಂದ ಕಂಗೊಳಿಸುವ ಉದ್ಯಾನದ ಒಂದು ಮಗ್ಗುಲಿನಲ್ಲಿ ಹಿಮಚ್ಛಾದಿತ ಪರ್ವತ ಶಿಖರ ಮತ್ತು ಹಿಮನದಿಗಳ ರಮಣೀಯವಾದ ದೃಶ್ಯಗಳು ಪ್ರವಾಸಿಗರನ್ನು ಹೊಸ ಲೋಕಕ್ಕೆ ಕರೆದೊಯ್ಯುತ್ತದೆ. ಈ ಜಾಗವನ್ನು ತಲುಪಲು ಗೋವಿಂದಘಾಟ್ ನಿಂದ 16 ಕಿಲೋ ಮೀಟರ್ ದೂರ ಕಾಲ್ನಡಿಗೆಯಲ್ಲಿ ಸಾಗಬೇಕು. ಇಲ್ಲಿ ತಂಗಲು ವ್ಯವಸ್ಥೆ ಇದೆ. ಬದರೀನಾಥಕ್ಕೆ ಸಮೀಪದಲ್ಲಿ ಚಮೋಲಿ, ವಸುಂಧರಾ ಪ್ರಪಾತ, ಮಾತಾಮೂರ್ತಿ, ವ್ಯಾಸಗುಹೆ, ಗಣೇಶ ಗುಹೆ, ಶೇಷನೇತ್ರ ಸರೋವರ, ಭೀಮ ಸೇತುವೆ ಸ್ಥಳಗಳನ್ನು ನೋಡಬಹುದಾಗಿದೆ.

ಇದನ್ನೂ ಓದಿ: ಪಶ್ಚಿಮಘಟ್ಟದ ಜಲಪಾತಗಳ ಗ್ರಾಮ ಕೊಡಗಿನ ‘ಕರಿಕೆ’

(Badrinath : Do you know about the architecture of Gauwal?)

Comments are closed.