ಮಂಗಳವಾರ, ಏಪ್ರಿಲ್ 29, 2025
HomeCoastal Newsಉಡುಪಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟ : ಪಕ್ಷೇತರರಾಗಿ ಕಣಕ್ಕೆ ಇಳಿತಾರಾ ಕೃಷ್ಣಮೂರ್ತಿ ಆಚಾರ್ಯ

ಉಡುಪಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಪೋಟ : ಪಕ್ಷೇತರರಾಗಿ ಕಣಕ್ಕೆ ಇಳಿತಾರಾ ಕೃಷ್ಣಮೂರ್ತಿ ಆಚಾರ್ಯ

- Advertisement -

ಉಡುಪಿ : ಕಾಂಗ್ರೆಸ್‌ ಎರಡನೇ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಉಡುಪಿ ಕಾಂಗ್ರೆಸ್‌ ಪಕ್ಷದಲ್ಲಿ(Udupi Congress) ಭಿನ್ನಮತ ಸ್ಪೋಟಗೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಸಾದ್‌ ಕಾಂಚನ್‌ ಕಣಕ್ಕೆ ಇಳಿಯುತ್ತಲೇ ಇತ್ತ ಕೃಷ್ಣಮೂರ್ತಿ ಆಚಾರ್ಯ ಮುನಿಸಿಕೊಂಡಿದ್ದು, ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ. ಅಲ್ಲದೇ ಈ ಬಾರಿ ಉಡುಪಿ (Udupi) ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕೃಷ್ಣಮೂರ್ತಿ ಆಚಾರ್ಯ, ರಮೇಶ್‌ ಕಾಂಚನ್‌, ಪ್ರಸಾದ್‌ ಕಾಂಚನ್‌ ಹೆಸರುಗಳು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಸಮೀಕ್ಷೆಗಳಲ್ಲಿಯೂ ಕೂಡ ಕೃಷ್ಣಮೂರ್ತಿ ಆಚಾರ್ಯ ಅವರೇ ಪಕ್ಷದ ಅಭ್ಯರ್ಥಿಯಾಗುತ್ತಾರೆ ಅಂತಾ ಹೇಳಲಾಗುತ್ತಿತ್ತು. ಆದರೆ ಇಂದು ಪ್ರಕಟವಾಗಿರುವ ಎರಡನೇ ಪಟ್ಟಿಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡರಾದ ಸರಳಾ ಕಾಂಚನ್‌ ಅವರ ಪುತ್ರ ಉದ್ಯಮಿ ಪ್ರಸಾದ್‌ ಕಾಂಚನ್‌ ಅವರನ್ನು ಕಾಂಗ್ರೆಸ್‌ ಪಕ್ಷ ಕಣಕ್ಕೆ ಇಳಿಸಿದೆ.

ಪ್ರಸಾದ್‌ ಕಾಂಚನ್‌ ಅವರು ಕಾಂಗ್ರೆಸ್‌ ಅಭ್ಯರ್ಥಿ ಆಗುತ್ತಿದ್ದಂತೆಯೇ ಕೃಷ್ಣಮೂರ್ತಿ ಆಚಾರ್ಯ ಅವರು ಕಾಂಗ್ರೆಸ್‌ ಪಕ್ಷದ ವಿರುದ್ದ ಮುನಿಸಿಕೊಂಡಿದ್ದಾರೆ. ಇಂದು ಮಧ್ಯಾಹ್ನ ಕಾಂಗ್ರೆಸ್‌ ಜಿಲ್ಲಾಧ್ಯಕ್ಷರನ್ನು ಭೇಟಿ ಮಾಡಿ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ನಂತರ ಸಂಜೆ ಸಮಾನ ಮನಸ್ಕರ ಸಭೆ ಕರೆದಿದ್ದು, ಸಭೆಯ ನಂತರದಲ್ಲಿ ಚುನಾವಣೆಗೆ ಸ್ಪರ್ಧಿಸುವ ಕುರಿತು ನಿರ್ಧಾರ ಪ್ರಕಟಿಸುತ್ತೇನೆ ಎಂದು News Next ಜೊತೆ ಮಾತನಾಡಿದ್ದಾರೆ.

ಜಾತಿ ನೋಡಿ ಟಿಕೆಟ್‌ ನೀಡುವುದು ಎಷ್ಟು ಸರಿ. ಕಾಂಗ್ರೆಸ್‌ ಪಕ್ಷಕ್ಕಾಗಿ ಕಳೆದ ಮೂವತ್ತು ವರ್ಷಗಳಿಂದಲೂ ದುಡಿದಿದ್ದೇನೆ. ಬಿಜೆಪಿ ವಿರುದ್ದದ ಹೋರಾಟಕ್ಕಾಗಿ ನಾನು ಎರಡು ಬಾರಿ ಜೈಲುಗೆ ಹೋಗಿದ್ದೇನೆ. ಪಕ್ಷಕ್ಕಾಗಿ ತನ್ನ ಮಗನನ್ನೇ ಕಳೆದುಕೊಂಡಿದ್ದೇನೆ. ಪ್ರತೀ ಬಾರಿಯೂ ತನಗೆ ಸಿಗಬೇಕಾದ ಎಲ್ಲಾ ಅಧಿಕಾರವನ್ನೂ ತ್ಯಾಗ ಮಾಡಿದ್ದೇನೆ. ಈ ಬಾರಿಯ ಚುನಾವಣೆಗೂ ಮೊದಲು ಕಾಂಗ್ರೆಸ್‌ ಪಕ್ಷ ನಡೆಸಿದ ಸಮೀಕ್ಷೆಯಲ್ಲಿ ನನ್ನ ಹೆಸರಿತ್ತು. ದೆಹಲಿಯಿಂದ ಇಂದು ನನಗೆ ಕರೆ ಬರುತ್ತದೆ ಎಂದು ಹೇಳಿದ್ದರು. ಆದರೆ ನಿನ್ನೆ ಸಂಜೆಯ ವೇಳೆಯಲ್ಲಿ ಅಭ್ಯರ್ಥಿ ಬದಲಾಗಿದ್ದಾರೆ ಎಂದು ನೋವನ್ನು ತೋಡಿಕೊಂಡಿದ್ದಾರೆ.

ನನಗೆ ಮೂರು ಬಾರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾಗುವ ಅವಕಾಶವಿತ್ತು. ಆದರೂ ಪಕ್ಷಕ್ಕಾಗಿ ಬೇರೆಯವರಿಗೆ ಹುದ್ದೆಯನ್ನು ಬಿಟ್ಟುಕೊಟ್ಟಿದ್ದೆ. ನನ್ನ ಪತ್ನಿಗೆ ಎರಡು ಬಾರಿ ನಗರಸಭೆಯ ಅಧ್ಯಕ್ಷರಾಗುವ ಅವಕಾಶವಿದ್ದಾಗಲೂ ಅದನ್ನು ತಪ್ಪಿಸಿದ್ದರು. ನಾನು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷನಾಗಬೇಕು ಎಂದು ಸುಮಾರು 11 ಸಾವಿರ ಮಂದಿ ಸಹಿ ಮಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಕಳುಹಿಸಿಕೊಟ್ಟಿದ್ದರು. ಈ ಬಾರಿ ನನಗೆ ಕಾಂಗ್ರೆಸ್‌ ಟಿಕೆಟ್‌ ನೀಡುವುದಾಗಿಯೂ ಹಿರಿಯರು ಭರವಸೆ ನೀಡಿದ್ದರು. ಆದರೆ ಅಂತಿಮ ಹಂತದಲ್ಲಿ ಎಲ್ಲವೂ ಬದಲಾಗಿದೆ. ಉಡುಪಿ ಜಿಲ್ಲೆಯವರನ್ನು ಬಿಟ್ಟು ಹೊರ ಜಿಲ್ಲೆಯವರಿಗೆ ಟಿಕೆಟ್‌ ನೀಡುವುದು ಎಷ್ಟು ಸರಿ ಎಂದಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ರಿಕ್ಷಾ ಯೂನಿಯನ್‌ ಸದಸ್ಯರು, ಅಭಿಮಾನಿಗಳು ಇಂದು ನನ್ನ ಜೊತೆಯಲ್ಲಿದ್ದಾರೆ. ಇಂದು ಸಂಜೆ ಅವರೊಂದಿಗೆ ಸಭೆ ನಡೆಸಿ ನನ್ನ ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ಎಲ್ಲರೂ ಪಕ್ಷೇತರರಾಗಿ ಸ್ಪರ್ಧಿಸುವಂತೆ ಸೂಚಿಸಿದ್ರೆ ಈ ಬಾರಿ ಖಂಡಿತವಾಗಿಯೂ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : Congress Candidate List : ಕಾಂಗ್ರೆಸ್‌ ಪಕ್ಷದ 42 ಅಭ್ಯರ್ಥಿಗಳ ಎರಡನೇ ಹಂತದ ಪಟ್ಟಿ ರಿಲೀಸ್‌

ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಕನಸು ನನಸು: 60 ಲಕ್ಷ ವೆಚ್ಚದಲ್ಲಿ ಮನೆ ಕಟ್ಟಿಸಿ ಕೊಟ್ಟ ಬಿಜೆಪಿ

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular