ಬೆಂಗಳೂರು : ಡೆಡ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಆದೇಶ ಜಾರಿಯಾಗುತ್ತೆ ಅನ್ನುವ ಮಾತುಗಳು ಕೇಳಿಬರುತ್ತಿವೆ. ರಾಜ್ಯದ ಹಲವು ಸಚಿವರು ಕೂಡ ಲಾಕ್ ಡೌನ್ ಜಾರಿಯ ಕುರಿತು ಸುಳಿವು ನೀಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಆಚರಿಸಲಾಗುತ್ತಿದೆ. ಇನ್ನೊಂದೆಡೆ ಬೆಂಗಳೂರಿನ 4 ಕಡೆ ಲಾಕ್ ಡೌನ್ ಹಾಗೂ 5 ಕಡೆಗಳಲ್ಲಿ ಸೀಲ್ ಡೌನ್ ಆದೇಶವನ್ನು ಜಾರಿ ಮಾಡಲಾಗಿದೆ. ಜೊತೆಗೆ ಪೊಲೀಸ್ ಸಿಬ್ಬಂಧಿಗಳಿಗೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕು ಆವರಿಸುತ್ತಿದೆ. ಸಾಲದಕ್ಕೆ ರಾಜ್ಯದಲ್ಲಿ ಕೊರೊನಾ ಮಹಾಮಾರಿಗೆ ಬಲಿಯಾಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಲಾಕ್ ಡೌನ್ ಆದೇಶ ಜಾರಿಯ ಕುರಿತು ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಾಳೆ ಬೆಳಗ್ಗೆ 11 ಗಂಟೆಯ ವಿಧಾನಸೌಧದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮ. ರಾಜ್ಯದಲ್ಲಿ ಲಾಕ್ ಡೌನ್ ಆದೇಶವನ್ನು ಮತ್ತೆ ಜಾರಿ ಮಾಡಬೇಕೆ ಅನ್ನುವ ಕುರಿತು ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಕೇಂದ್ರ ಸರಕಾರ ಕೂಡ ಪರಿಸ್ಥಿತಿಗೆ ಅನುಗುಣವಾಗಿ ಲಾಕ್ ಡೌನ್ ಹಾಗೂ ಸೀಲ್ ಡೌನ್ ಆದೇಶವನ್ನು ಜಾರಿ ಮಾಡಲು ರಾಜ್ಯ ಸರಕಾರಗಳಿಗೆ ಅನುಮತಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ತಜ್ಞರು, ಸಚಿವರು, ಟಾಸ್ಕ್ ಪೋರ್ಸ್ ಸಮಿತಿಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನವನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಒಂದೊಮ್ಮೆ ರಾಜ್ಯದಲ್ಲಿ ಲಾಕ್ ಡೌನ್ ಆದೇಶವನ್ನು ಜಾರಿಗೊಳಿಸುವುದೇ ಆದ್ರೆ ನಾಳೆಯಿಂದ ಆರಂಭಗೊಳ್ಳಲಿರುವ ಎಸ್ಎಸ್ಎಲ್ ಸಿ ಪರೀಕ್ಷೆಗೆ ಯಾವುದೇ ತೊಂದರೆಯಾಗದಂತೆ ಯಾವೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಅನ್ನುವ ಕುರಿತು ಕೂಡ ಚರ್ಚೆ ನಡೆಯುವ ಸಾಧ್ಯತೆಯಿದೆ. ಇನ್ನೊಂದೆಡೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು, ಲಾಕ್ ಡೌನ್ ಆದೇಶನ್ನು ಜಾರಿ ಮಾಡದೆಯೇ ಯಾವೆಲ್ಲಾ ಕ್ರಮಗಳನ್ನು ಅನುಸರಿಸಿ ಕೊರೊನಾ ನಿಯಂತ್ರಿಸಬಹುದು ಅನ್ನುವ ಕುರಿತು ಅಭಿಪ್ರಾಯವನ್ನು ಕೇಳಿದ್ದಾರೆ. ಹೀಗಾಗಿ ನಾಳಿನ ಸಚಿವ ಸಂಪುಟ ಸಭೆ ಅತ್ಯಂತ ಮಹತ್ವದೆನಿಸಿದೆ.