ಕೇಪ್ ಟೌನ್ : ಅಂಡರ್-19 ವಿಶ್ವಕಪ್ ಸೆಮಿಫೈನಲ್ ಪಂದ್ಯಾಟ ಇಂದು ನಡೆಯಲಿದೆ. ಬದ್ದವೈರಿ ಪಾಕಿಸ್ತಾನವನ್ನು ಬಗ್ಗುಬಡಿಯಲು ಬ್ಲೂಬಾಯ್ಸ್ ರೆಡಿಯಾಗಿದ್ದಾರೆ. ವಿಶ್ವಕಪ್ ಸರಣಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿರೋ ಟೀಂ ಇಂಡಿಯಾ ಯುವಪಡೆ ಇಂದಿನ ಫೈನಲ್ ಗೆದ್ದು ಪ್ರಶಸ್ತಿಗೆ ಮುತ್ತಿಕ್ಕಲು ಕಾತರವಾಗಿದೆ.
ಹರಿಣಗಳ ನಾಡಿನಲ್ಲಿ ನಡೆಯುತ್ತಿರೋ ಅಂಡರ್-19 ವಿಶ್ವಕಪ್ ಸೆಮಿಫೈನಲ್ ತಲುಪಿರುವ ಭಾರತ-ಪಾಕಿಸ್ತಾನ ಇಲ್ಲಿನ ಸೆನ್ವೆಸ್ಪಾರ್ಕ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಪ್ರಶಸ್ತಿ ಸುತ್ತಿಗೆ ಎಂಟ್ರಿ ಪಡೆಯಬೇಕಾದರೆ ಇಂದಿನ ಪಂದ್ಯ ನಿರ್ಣಾಯಕವಾಗಿದ್ದು ಭಾರೀ ಕುತೂಹಲ ಗರಿಗೆದರಿದೆ. ನಾಯಕ ಪ್ರಿಯಾಂ ಗಾರ್ಗ್ ನೇತೃತ್ವದ ಭಾರತೀಯ ಯುವ ಪಡೆ ಲೀಗ್ ಪಂದ್ಯಗಳಲ್ಲಿ ಒಂದೇ ಒಂದು ಸೋಲನ್ನ ಕಂಡಿಲ್ಲ. ಬ್ಯಾಟಿಂಗ್, ಬೌಲಿಂಗ್ ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರೋ ಬ್ಲೂ ಬಾಯ್ಸ್ ಎದುರಾಳಿಗಳಿಗೆ ನಡುಕ ಹುಟ್ಟಿಸಿದ್ದಾರೆ. ಇನ್ನೊಂದೆಡೆ ನಾಜೀರ್ ನಾಯಕತ್ವದ ಪಾಕಿಸ್ತಾನ ಕೂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇಂದಿನ ಪಂದ್ಯ ಪ್ರೇಕ್ಷಕರನ್ನು ಕುತೂಹಲ ಮೂಡಿಸಿದೆ.

ನಾಯಕ ಪ್ರಿಯಾಂ ಗಾರ್ಗ್, ಯಶಸ್ವಿ ಜೇಸ್ವಾಲ್, ದಿವ್ಯಾಂಶ್ ಸಕ್ಸೇನಾ ಬ್ಯಾಟಿಂಗ್ ಅಬ್ಬರಿಸುತ್ತಿದ್ರೆ, ಸಿದ್ದೇಶ್ ವೀರ್ ಬೌಲಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಿಂಚು ಹರಿಸುತ್ತಿದ್ದಾರೆ. ಇನ್ನು ರವಿ ಬಿಶ್ನೋಯಿ, ಕಾರ್ತಿಕ್ ತ್ಯಾಗಿ, ಆಕಾಶ್ ಸಿಂಗ್ ಬೌಲಿಂಗ್ ಅಸ್ತ್ರಗಳಾಗಿದ್ದು, ಎದುರಾಳಿಗಳನ್ನು ಕಟ್ಟಿಹಾಕುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಇನ್ನು ಪಾಕಿಸ್ತಾನ ಕೂಡ ಬಲಿಷ್ಟವಾಗಿದ್ದು, ಇರ್ಪಾನ್ ಖಾನ್, ಖಾಸಿಮ್ ಅಕ್ರಮ್, ಅಬ್ಬಾಸ್ ಅಫ್ರಿದಿ, ತಾಹೀರ್ ಹುಸೇನ್ ವಿಶ್ವಕಪ್ ಸರಣಿಯುದ್ದಕ್ಕೂ ಅದ್ಬುತ ಪ್ರದರ್ಶನ ನೀಡಿದ್ದಾರೆ. ಇಂದಿನ ಪಂದ್ಯ ಎರಡೂ ತಂಡಗಳಿಗೂ ಮಹತ್ವವಾಗಿದ್ದು, ಗೆದ್ದ ತಂಡ ಫೈನಲ್ ಪ್ರವೇಶಿಸಲಿದೆ.

ಅಂಡರ್-19 ವಿಶ್ವಕಪ್ನಲ್ಲಿ ಭಾರತ-ಪಾಕಿಸ್ತಾನ ತಂಡಗಳು ಈವರೆಗೆ 9 ಬಾರಿ ಎದುರಾಗಿವೆ. ಪಾಕಿಸ್ತಾನ ತಂಡ 5 ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಭಾರತದ 4 ಪಂದ್ಯಗಳಲ್ಲಿ ಜಯಿಸಿದೆ. ಆದರೆ 2012ರಿಂದ ಈವರೆಗೆ ಪಾಕ್ ವಿರುದ್ಧ ಭಾರತ ಸೋಲುಂಡಿಲ್ಲ. 2012,2014,2018 ರ ವಿಶ್ವಕಪ್ನಲ್ಲಿ ಭಾರತ ಜಯಭೇರಿ ಬಾರಿಸಿದೆ.