ನಾಗಪುರ : ಕೊರೊನಾ ಸೋಂಕು ದೃಢಪಟ್ಟರೆ ಮನೆಯವರನ್ನು ಕ್ವಾರಂಟೈನ್ ಮಾಡುವುದು ಮಾಮೂಲು. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಅವಿವಾಹಿತ ಮಹಿಳಾ ಕಾನ್ ಸ್ಟೇಬಲ್ ಪ್ರಿಯಕರನನ್ನೇ ತನ್ನ ಪತಿಯೆಂದು ಸುಳ್ಳು ಹೇಳಿ ಕ್ವಾರಂಟೈನ್ ಆಗಿದ್ದಾಳೆ. ಮೂರು ದಿನ ಕಳೆಯುವಷ್ಟರಲ್ಲೇ ಮಹಿಳಾ ಪೊಲೀಸ್ ಕಾನ್ ಸ್ಟೇಬಲ್ ಪ್ರೇಮ ಪ್ರಕರಣ ಬಯಲಾಗಿ ಹೋಗಿದೆ.

ನಾಗಾಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಕಾನ್‌ಸ್ಟೇಬಲ್ ಸಹೋದ್ಯೋಗಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಮಹಿಳಾ ಕಾನ್‌ಸ್ಟೇಬಲ್ ಅನ್ನು ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಮುಂದಾಗಿತ್ತು. ಆದರೆ ಈ ವಿಷಯವನ್ನು ಮಹಿಳಾ ಕಾನ್ ಸ್ಟೇಬಲ್ ಗೆ ತಿಳಿಸಿದಾಗ ತನ್ನ ಪತಿ ಅಂಚೆ ಇಲಾಖೆಯ ಕೆಲಸ ಮಾಡುತ್ತಿದ್ದು, ಅವರನ್ನೂ ಕೂಡ ತನ್ನೊಂದಿಗೆ ಕ್ವಾರಂಟೈನ್ ಮಾಡುವಂತೆ ಕೇಳಿಕೊಂಡಿದ್ದಾಳೆ. ಹೀಗಾಗಿ ಪೊಲೀಸ್ ತರಬೇತಿ ಕೇಂದ್ರದಲ್ಲಿ ಇಬ್ಬರನ್ನೂ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.

ಆದರೆ ಮೂರು ದಿನಗಳಿಂದಲೂ ತನ್ನ ಪತಿ ಮನೆಗೆ ಬಾರದೇ ಇದ್ದಾಗ ಪೊಲೀಸ್ ಕಾನ್ ಸ್ಟೇಬಲ್ ಪತಿಯೆಂದು ಕ್ವಾರಂಟೈನ್ ಆಗಿದ್ದ ವ್ಯಕ್ತಿಯ ಪತ್ನಿ ಎಲ್ಲೆಡೆ ವಿಚಾರಣೆ ನಡೆಸಿದ್ದಾರೆ. ಕೊನೆಗೆ ಪತಿ ಕ್ವಾರಂಟೈನ್ ಆಗಿರುವ ವಿಚಾರ ತಿಳಿದು ಪೊಲೀಸ್ ತರಬೇತಿ ಕೇಂದ್ರದ ಬಳಿಗೆ ಬಂದಾಗ ಭದ್ರತಾ ಸಿಬ್ಬಂದಿ ಆಕೆಯನ್ನು ಒಳಗೆ ಬಿಡಲಿಲ್ಲ. ಇದರಿಂದಾಗಿ ಮಹಿಳೆ ಬಜಾಜ್ ನಗರ ಠಾಣೆಯ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆ ದೂರು ನೀಡುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತ ಡಾ.ಭೂಷಣ್ ಕುಮಾರ್ ಉಪಾಧ್ಯಾಯ ಈ ಕುರಿತು ವಿಚಾರಣೆ ನಡೆಸಿದ್ದಾರೆ. ನಂತರ ಪೊಲೀಸ್ ಕಾನ್ ಸ್ಟೇಬಲ್ ಪ್ರೇಮ ಪ್ರಕರಣ ಬಯಲಾಗಿದ್ದು, ಅವಿವಾಹಿತೆಯಾಗಿದ್ದರೂ ತನ್ನ ಪತಿಯೆಂದು ಜಿಲ್ಲಾಡಳಿತಕ್ಕೆ ಸುಳ್ಳು ಹೇಳಿರುವುದು ಬಯಲಾಗಿದೆ.