ಬೆಂಗಳೂರು : ಡ್ರಗ್ಸ್ ಮಾಫಿಯಾ ಇದೀಗ ಕನ್ನಡ ಚಿತ್ರರಂಗವನ್ನೇ ಅಲ್ಲೋಲ ಕಲ್ಲೋಲ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಡ್ರಗ್ಸ್ ಸೇವನೆ ಮಾಡುತ್ತಾರೆ ಅಂತಾ ಪ್ರಶಾಂತ್ ಸಂಬರಗಿ ಆರೋಪ ಮಾಡಿದ್ದಾರೆ. ಈ ಬೆನ್ನಲ್ಲೇ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಬರಗಿ ವಿರುದ್ದ ಕಿಡಿಕಾರಿದ್ದಾರೆ.


ಡ್ರಗ್ಸ್ ಜಾಲದಲ್ಲಿ ನನ್ನ ಹೆಸರು ಬಂದಿದ್ದು ಬೇಜಾರಾಗಿದೆ. ಅಷ್ಟೇ ಅಲ್ಲ ನೋವಾಗಿದ್ದು, ಸಿಟ್ಟು ಬರ್ತಿದೆ. ನನಗೂ ಡ್ರಗ್ಸ್ಗೂ ಸಂಬಂಧವೇ ಇಲ್ಲ, ಅದನ್ನು ಊಹಿಸಿಕೊಂಡರೆ ಭಯ ಆಗುತ್ತೆ ಎಂದು ರಘು ದೀಕ್ಷಿತ್ ಅಸಮಾಧಾನ ಹೊರಹಾಕಿದ್ದಾರೆ.

ನನ್ನ ರಕ್ತದಲ್ಲಿ ಸಂಗೀತ ಇದೆ, ಅದನ್ನು ಬಿಟ್ಟು ಬೇರೇನೂ ಸಿಗುವುದಿಲ್ಲ. ನನ್ನ ವಿರುದ್ಧ ಇಂತಹ ಆರೋಪಗಳು ಬಂದಿರುವುದರಿಂದ ನನ್ನ ವೃತ್ತಿ ಜೀವನಕ್ಕೆ ಸಮಸ್ಯೆಯಾಗಲಿದೆ. ಯಾರೂ ಏನೇ ಆರೋಪ ಮಾಡಲಿ, ನಾನು ಕ್ಷಮಿಸಿ ಬಿಡ್ತೀನಿ. ಬೇರೆಯವರ ಡ್ರಗ್ ವ್ಯಾಮೋಹದ ಬಗ್ಗೆ ನನಗೆ ಗೊತ್ತಿಲ್ಲ, ನಾನು ಅಂತಹವನಲ್ಲ. ಸಂಗೀತದ ಕೆಲಸಕ್ಕೆ ಬಂದಿದ್ದೇನೆ, ಅದನ್ನೇ ಮಾಡುತ್ತೇನೆ ಎಂದು ರಘು ದೀಕ್ಷಿತ್ ಸ್ಪಷ್ಟಪಡಿಸಿದ್ದಾರೆ.

ಪ್ರಶಾಂತ್ ಸಂಬರಗಿ ಹಾಗೂ ನಾನು ಸಂಪರ್ಕಕ್ಕೆ ಬಂದು ಏಳೆಂಟು ವರ್ಷಗಳಾಗಿವೆ. ಈ ವಿಷಯದಲ್ಲಿ ಪ್ರಶಾಂತ್ ನನ್ನನ್ನು ನೇರವಾಗಿ ಕೇಳಬಹುದಿತ್ತು. ನನ್ನ ನೋಡಿದ್ರೆ ಡ್ರಗ್ಸ್ ತೆಗೆದುಕೊಂಡ ಹಾಗೆ ಕಾಣ್ತೀನಾ.

ಯಾಕೆ ಈ ಆರೋಪ ಮಾಡುತ್ತಿದ್ದಾರೆ ಅಂತ ನನಗೆ ಗೊತ್ತಿಲ್ಲ. ಇಂತಹ ಆರೋಪ ಬರುತ್ತೆ ಎಂದು ನಾನು ಊಹೆ ಕೂಡ ಮಾಡಿರಲಿಲ್ಲ. ಈ ಬಗ್ಗೆ ಯಾವುದೇ ತನಿಖೆ ಮಾಡಿದ್ರೂ ಎದುರಿಸಲು ನಾನು ರೆಡಿ ಇದ್ದೇನೆ ಎಂದಿದ್ದಾರೆ.