ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಬಿಕ್ಕಟ್ಟಿನ ನಡುವಲ್ಲೇ ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗುತ್ತಿದೆ. ಎಂಟು ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಸುಮಾರು 30ಕ್ಕೂ ಅಧಿಕ ಮಸೂದೆಗಳು ಮಂಡನೆಯಾಗುವ ಸಾಧ್ಯತೆಯಿದೆ. ಆದರೆ ಮುಂಗಾರು ಅಧಿವೇಶನದಲ್ಲಿ ರಾಜ್ಯ ಸರ್ಕಾರದ ಮೇಲೆ ಹರಿಹಾಯಲು ವಿಪಕ್ಷಗಳು ಎದುರು ನೋಡುತ್ತಿವೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಕಲಾಪದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ಕೂಡ ಕೊರೊನಾ ತಪಾಸಣಯನ್ನು ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಕಾರಣದಿಂದ ಅಧಿವೇಶನದಲ್ಲಿ ಗೈರು ಸಂಖ್ಯೆ ಹೆಚ್ಚಿರುವ ಸಾಧ್ಯತೆ ಇದೆ. ಸುಮಾರು 20 ಶಾಸಕರು ಸದನಕ್ಕೆ ಗೈರಾಗಬಹುದು. ಇದರಲ್ಲಿ ಆರು ಸಚಿವರೂ ಇದ್ದಾರೆ. ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಪಶು ಸಂಗೋಪನೆ ಸಚಿವ ಪ್ರಭು ಚವಾಣ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ. ಗೋಪಾಲಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರು ಅಧಿವೇಶನದಿಂದ ದೂರ ಉಳಿಯುವ ಸಾಧ್ಯತೆಯಿದೆ.

ಎಂಟು ದಿನಗಳ ಅಧಿವೇಶನದಲ್ಲಿ ರಾಜ್ಯ ಸರ್ಕಾರ 30ಕ್ಕೂ ಹೆಚ್ಚು ಮಸೂದೆಗಳನ್ನ ಮಂಡಿಸುವ ನಿರೀಕ್ಷೆ ಇದೆ. ಇದರಲ್ಲಿ ಸುಗ್ರೀವಾಜ್ಞೆಗಳೂ ಒಳಗೊಂಡಿವೆ ಎಪಿಎಂಸಿ ತಿದ್ದುಪಡಿ, ಭೂಸುಧಾರಣೆ ತಿದ್ದುಪಡಿಗೆ ಸುಗ್ರೀವಾಜ್ಞೆಗಳನ್ನ ಸರ್ಕಾರ ಹೊರಡಿಸುವ ಸಾಧ್ಯತೆ ಇದೆ. ಈ ಎರಡು ತಿದ್ದುಪಡಿ ಕಾಯ್ದೆಗಳಿಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷಗಳು ತೀವ್ರವಾಗಿ ವಿರೋಧಿಸಿವೆ. ಕೋವಿಡ್, ಕೃಷಿ ಜೊತೆಗೆ ಡ್ರಗ್ಸ್ ಪ್ರಕರಣಗಳು, ನೆರೆ ಪರಿಹಾರ, ಡಿಜೆ ಹಳ್ಳಿ ಹಿಂಸಾಚಾರ ಇತ್ಯಾದಿ ವಿಚಾರಗಳು ಅಧಿವೇಶನದಲ್ಲಿ ಚರ್ಚೆಯಾಗಬಹುದು. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾದ್ದರಿಂದ ಅವರ ನಾಯಕತ್ವದಲ್ಲಿ ಹೊಸ ತೀಕ್ಷ್ಣತೆ ತೋರುವ ಉತ್ಸಾಹದಲ್ಲಿ ಕಾಂಗ್ರೆಸ್ ಇದೆ.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಮುಂಗಾರು ಅಧಿವೇಶನವನ್ನು ಅರ್ಧಕ್ಕೆ ಮೊಟಕುಗೊಳಿಸಿದೆ. ಅಂತೆಯೇ ರಾಜ್ಯ ಸರಕಾರ ಕೂಡ 8 ದಿನಗಳ ಕಾಲ ನಡೆಯಲಿರುವ ಅಧಿವೇಶನವನ್ನು ಕೇವಲ 3 ದಿನಕ್ಕೆ ಮೊಟಕು ಗೊಳಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಅಧಿವೇಶನವನ್ನು ಮೊಟಕುಗೊಳಿಸಲು ಬಿಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈಗಾಗಲೇ ಘೋಷಿಸಿದ್ದಾರೆ.