ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ರಾಜ್ಯದಲ್ಲಿ ವಿಧಾನ ಮಂಡಲ ಅಧಿವೇಶನ ಆರಂಭವಾಗಿದೆ. ಒಂದೆಡೆ ಸದನಕ್ಕೆ 70ಕ್ಕೂ ಅಧಿಕ ಶಾಸಕರು ಗೈರು ಹಾಜರಾಗಿದ್ದಾರೆ. ಇನ್ನೊಂದೆಡೆ ರೈತರು ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ. ಆದರೆ ಈ ನಡುವಲ್ಲೇ ಬಿಜೆಪಿ ಶಾಸಕ ಹಾಗೂ ಸಚಿವರಿಬ್ಬರು ವಿಧಾನ ಸೌಧದದಲ್ಲಿಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ವಿಧಾನ ಮಂಡಲ ಅವಧಿವೇಶನದ ಟೀ ವಿರಾಮದ ವೇಳೆಯಲ್ಲಿ ವಿಧಾನ ಸೌಧದ ಸೆಂಟ್ರಲ್ ಹಾಲ್ ಲಾಂಜ್ ನಲ್ಲಿ ಶಾಸಕರು, ಸಚಿವರು ಟೀ ಕುಡಿಯುತ್ತಿದ್ದರು. ಈ ವೇಳೆಯಲ್ಲಿ ಚಿಕ್ಕಮಗಳೂರು ಶಾಸಕ ಬೆಳ್ಳಿ ಪ್ರಕಾಶ್ ಸಚಿವ ನಾರಾಯಣ ಗೌಡ ಜೊತೆಗೆ ಮಾತಿಗೆ ಇಳಿದಿದ್ದಾರೆ. ಕಡೂರು ಕ್ಷೇತ್ರಕ್ಕೆ ಅನುದಾನ ನೀಡದೆ ಸತಾಯಿಸುತ್ತಿದ್ದ ಸಚಿವ ನಾರಾಯಣ ಗೌಡ ಅವರನ್ನು ಏಕವಚನದಲ್ಲಿ ನಿಂದಿಸಿದ್ದಾರೆ. ಈ ವೇಳೆಯಲ್ಲಿ ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದಿದೆ.

ಬೆಳ್ಳಿ ಪ್ರಕಾಶ್ ಮೊದಲ ಬಾರಿ ಗೆದ್ದು ಕಡೂರು ಶಾಸಕರಾಗಿದ್ದಾರೆ. ಅನೇಕ ತಿಂಗಳ ಹಿಂದೆಯೇ ತಮ್ಮ ಕ್ಷೇತ್ರಕ್ಕೆ ಅನುದಾನ ಕೊಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೆ ಸಚಿವರು ಅನುದಾನ ಕೊಡದೇ ಸತಾಯಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅಸಮಾಧಾನ ಗೊಂಡಿದ್ದ ಶಾಸಕ ಬೆಳ್ಳಿ ಕ್ಯಾಂಟೀನ್‍ನಲ್ಲಿ ಅನುದಾನ ಬಿಡುಗಡೆಯ ಮಾಡದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯ ವಾಗಿದೆ.
ಬಳಿಕ ಮಾತಿನ ಚಕಮಕಿ ತಾರಕಕ್ಕೇರಿ ಇಬ್ಬರೂ ಕೂಡ ಕೈ ಕೈ ಮಿಲಾಯಿಸಿದ್ದಾರೆ. ಈ ವೇಳೆಯಲ್ಲಿ ಶಾಸಕ ಬೆಳ್ಳಿ ಪ್ರಕಾಶ್ ಅವರು ಸಚಿವ ನಾರಾಯಣ ಗೌಡರಿಗೆ ಏಟುಕೊಟ್ಟಿದ್ದಾರೆ. ನಂತರ ಸಚಿವರು ಕೂಡ ಬೆಳ್ಳಿಯವ ಹೊಟ್ಟೆಗೆ ಹೊಡೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಬೆಳ್ಳಿ ಪ್ರಕಾಶ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿಯೇ ನಾರಾಯಣಗೌಡ ಅವರ ಹೊಟ್ಟೆಗೆ ಬಲವಾಗಿ ಹೊಡೆದಿ ದ್ದಾರೆ ಎನ್ನಲಾಗುತ್ತಿದೆ.

ಶಾಸಕ ಬೆಳ್ಳಿ ಪ್ರಕಾಶ್ ಹಾಗೂ ಸಚಿವ ನಾರಾಯಣ ಗೌಡ ಅವರ ಗಲಾಟೆಯನ್ನು ಜೆಡಿಎಸ್ ಶಾಸಕ ಅನ್ನದಾನಿ ಅವರು ಬಿಡಿಸಿದ್ದಾರೆ. ಸಚಿವರಾದ ಈಶ್ವರಪ್ಪ, ಸೋಮಣ್ಣ, ಸಿ.ಟಿ.ರವಿ ಅವರ ಸಮ್ಮುಖದಲ್ಲಿಯೇ ಈ ಘಟನೆ ನಡೆದಿದೆ. ಘಟನೆಯ ಬೆನ್ನಲ್ಲೇ ಸ್ವ ಪಕ್ಷದ ಶಾಸಕರೇ ಅನುದಾನಕ್ಕಾಗಿ ಹೊಡೆದಾಡುವ ಸ್ಥಿತಿಗೆ ತಲುಪಿರುವಾಗ ವಿರೋಧ ಪಕ್ಷದ ಶಾಸಕರ ಗತಿಯೇನು ಅನ್ನೋ ಪ್ರಶ್ನೆ ಎದ್ದಿದೆ. ಮಾತ್ರವಲ್ಲ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಅನ್ನೋದು ಮತ್ತೊಮ್ಮೆ ಸಾಭೀತಾಗಿದೆ.