ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ನಟಿ ರಾಗಿಣಿ, ಸಂಜನಾಗೆ ಜೈಲು ಫಿಕ್ಸ್

0

ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‍ಡಿಪಿಎಸ್ ವಿಶೇಷ ನ್ಯಾಯಾಲಯ ಜಾಮೀನು ಅರ್ಜಿಯನ್ನು ಸಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ. ಹೀಗಾಗಿ ನಟಿ ಮಣಿಯರಿಗೆ ಸದ್ಯಕ್ಕೆ ಜೈಲು ಫಿಕ್ಸ್ ಆಗಿದೆ.

ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಸಿಬಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟಿ ಸಂಜನಾ ಹಾಗೂ ರಾಗಿಣಿ ಜಾಮೀನು ಅರ್ಜಿಯನ್ನು ನ್ಯಾಯಾಲಯ ಇಂದು ವಿಚಾರಣೆ ನಡೆಸಿದೆ. ನಟಿ ಸಂಜನಾ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಕೆ ಸಲ್ಲಿಸಲು ಸಿಸಿಬಿ ಪರ ವಕೀಲರು ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸಂಜನಾ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದೆ.

ಈಗಾಗಲೇ ನಟಿ ರಾಗಿಣಿ ಪರ ಸಲ್ಲಿಕೆಯಾಗಿದ್ದ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸಿಸಿಬಿ ಪರ ವಕೀಲರು ಸುಮಾರು 12 ಪುಟಗಳ ಆಕ್ಷೇಪಣೆ ಸಲ್ಲಿಸಿದ್ದಾರೆ. ಕಳೆದೈದು ವರ್ಷಗಳಿಂದಲೂ ರಾಗಿಣಿ ಡ್ರಗ್ಸ್ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ. ಮಾತ್ರವಲ್ಲ ಡ್ರಗ್ಸ್ ಪೆಡ್ಲರ್ ಗಳ ಜೊತೆಗೆ ಸೇರಿ ಮೋಜು ಮಸ್ತಿ ಮಾಡಿದ್ದಾರೆ. ಮುಂಬೈ, ಗೋವಾ, ಆಂಧ್ರ ಪ್ರದೇಶ ಮಾತ್ರವಲ್ಲದೇ ವಿದೇಶಗಳಿಂದಲೂ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡಿದ್ದಾರೆ.

ಮಾಧಕ ವಸ್ತು ಜಾಲದ ಸಕ್ರೀಯ ಸದಸ್ಯೆಯಾಗಿರುವ ರಾಗಿಣಿ ಕೊಕೇನ್, ಎಲ್ ಎಸ್ ಡಿ, ಎಂಡಿಎಂಎ ಸೇರಿದಂತೆ ವಿವಿಧ ಮಾಧಕ ವಸ್ತುಗಳನ್ನು ತರಿಸಿಕೊಂಡು ಮಾರಾಟ ಮಾಡಿದ್ದಾರೆ. ಮಾತ್ರವಲ್ಲದೇ ಡಿಜಿಟಲ್ ಸಾಕ್ಷ್ಯಗಳನ್ನು ನಾಶ ಮಾಡಲು ಮುಂದಾಗಿದ್ದರು. ರಾಗಿಣಿಗೆ ಸಂಬಂಧಿಸಿದಂತೆ ಸಿಸಿಬಿ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಆರೋಪಿಗಳಿಗೆ ಜಾಮೀನು ಮಂಜೂರು ಮಾಡದಂತೆ ಎಂದು ಸಿಸಿಬಿ ಪರ ವಕೀಲರು ವಾದ ಮಂಡಿಸಿದ್ದಾರೆ.

ಸಿಸಿಬಿ ಸಲ್ಲಿಕೆ ಮಾಡಿದ್ದ ಆಕ್ಷೇಪಣೆಗ ಕುರಿತು ವಾದ ಮಂಡಿಸಿದ ರಾಗಿಣಿ ಪರ ವಕೀಲರು, ರಾಗಿಣಿ ಯಾವುದೇ ತಪ್ಪನ್ನೂ ಮಾಡಿಲ್ಲ. ರಾಗಿಣಿ ವಿರುದ್ದ ಯಾವುದೇ ಸಾಕ್ಷಾಧಾರಗಳಿಲ್ಲ. ಸಿಸಿಬಿ ಪೊಲೀಸರು ಮಾಡಿರುವ ಆರೋಪಕ್ಕೆ ಹುರುಳಿಲ್ಲ. ಪ್ರಾಥಮಿಕ ಹಂತದ ತನಿಖೆಯ ನಂತರದಲ್ಲಿ ಎಫ್ ಐಆರ್ ದಾಖಲು ಮಾಡಬೇಕು. ಆದರೆ ಸಿಸಿಬಿ ಪೊಲೀಸರು ಮೊದಲೇ ಎಫ್ ಐಆರ್ ದಾಖಲು ಮಾಡಿ ನಂತರ ದಾಳಿ ನಡೆಸಿದ್ದಾರೆ.

ಪೊಲೀಸರು ಆತುರದಲ್ಲಿ ಪ್ರಕರಣದ ತನಿಖೆಯ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇತರ ಆಯಾಮಗಳ ಮೂಲಕ ನನ್ನ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ರಾಗಿಣಿ ಮನೆಯಲ್ಲಿ ಎರಡು ಫೋನ್ ಮತ್ತು ಆರು ಆರ್ಗೆನಿಕ್ಸ್ ಸಿಗರೇಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಎಫ್‍ಐಆರ್ ನಲ್ಲಿ ಯಾವ ಕಾರಣಕ್ಕೆ ಬಂಧನ ಮಾಡಲಾಗಿದೆ ಅನ್ನುವುದುನ್ನು ಉಲ್ಲೇಖಿಸಿಲ್ಲ ಎಂದಿದ್ದಾರೆ.

ಇನ್ನು ರಾಗಿಣಿ ಡ್ರಗ್ಸ್ ಖರೀದಿ ಮಾಡಿದ್ದರೂ ಕೂಡ ಕಮರ್ಷಿಯಲ್ ಕ್ವಾಂಟಿಟಿಯಲ್ಲಿ ಖರೀದಿ ಮಾಡಿಲ್ಲ. ರಾಗಿಣಿ ಡ್ರಗ್ಸ್ ಕನ್ಸೂಮರ್ ಅಲ್ಲವೇ ಅಲ್ಲ. ಸಿಸಿಬಿ ಪೊಲೀಸರು ಪ್ಲಾನ್ ಮಾಡಿಕೊಂಡ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ರಾಗಿಣಿ ಸಂಪೂರ್ಣ ಅಮಾಯಕರು. ಉದ್ದೇಶಪೂರ್ವಕವಾಗಿ ರಾಗಿಣಿಯವರನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ರಾಗಿಣಿ ಸಂಪೂರ್ಣ ಅಮಾಯಕರು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿದ್ದಾರೆ.

ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ನ್ಯಾಯಾಧೀಶರು ಜಾಮೀನು ಅರ್ಜಿಯ ವಿಚಾರಣೆಯನ್ನು ಸಪ್ಟೆಂಬರ್ 24ಕ್ಕೆ ಮುಂದೂಡಿಕೆ ಮಾಡಿದ್ದಾರೆ. ಹೀಗಾಗಿ ಮುಂದಿನ ಮೂರು ದಿನಗಳ ಕಾಲ ತುಪ್ಪದ ಬೆಡಗಿ ಜೈಲಿನಲ್ಲಿ ಉಳಿಯಬೇಕಾದ ಅನಿವಾರ್ಯತೆಯಿದೆ.

Leave A Reply

Your email address will not be published.