ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದಂತೆಯೇ ರಾಜ್ಯ ಸರಕಾರ ಕಠಿಣ ನಿರ್ಧಾರಗಳನ್ನು ಕೈಗೊಳ್ಳಲು ಮುಂದಾಗಿದೆ. ಮದುವೆ, ಅಂತ್ಯ ಕ್ರೀಯೆ, ಸಮಾರಂಭಗಳಿಗೆ ಕಠಿಣ ರೂಲ್ಸ್ ಜಾರಿ ಮಾಡಿದ್ದು, ಗ್ರಾಹಕರು ಸಾಮಾಜಿಕ ಅಂತರ ಕಾಪಾಡದೇ ಇದ್ರೆ ಮಾಲೀಕರಿಗೆ ಬರೆ ಬೀಳುವುದು ಗ್ಯಾರಂಟಿ.

ರಾಜ್ಯದಲ್ಲಿ 6 ಲಕ್ಷಕ್ಕೂ ಅಧಿಕ ಮಂದಿ ಕೊರೊನಾ ಸೋಂಕಿಗೆ ತುತ್ತಾಗುತ್ತಿದ್ದಾರೆ. ನಿತ್ಯವೂ 8 ರಿಂದ 10 ಸಾವಿರ ಹೊಸ ಪ್ರಕರಣ ಪತ್ತೆ ಯಾಗುತ್ತಿದೆ. ಈ ನಡುವಲ್ಲೇ ಸಕ್ರೀಯ ಪ್ರಕರಣಗಳ ಸಂಖ್ಯೆಯಲ್ಲಿಯೂ ಏರಿಕೆಯನ್ನು ಕಾಣುತ್ತಿದೆ. ಈ ನಿಟ್ಟಿನಲ್ಲಿ ಕೊರೊನಾ ನಿಯಂತ್ರಣ ಕ್ಕೆ ಕೇಂದ್ರ ಸರಕಾರ ಕಟ್ಟಪ್ಪಣೆಯನ್ನು ಹೊರಡಿಸುತ್ತಿದ್ದಂತೆಯೇ ರಾಜ್ಯ ಸರಕಾರ ಕೂಡ ಎಚ್ಚೆತ್ತುಕೊಂಡಿದೆ.

ಮದುವೆ ಸಮಾರಂಭಕ್ಕೆ 50 ಮಂದಿಗಷ್ಟೇ ಅವಕಾಶ ನೀಡಲಾಗಿದ್ದು, ಸಭೆ ಸಮಾರಂಭಗಳಲ್ಲೂ 50 ಜನ ಮೀರುವಂತಿಲ್ಲ. ಈ ನಿಯಮ ಉಲ್ಲಂಘಿಸಿದರೆ ಕಲ್ಯಾಣ ಮಂಟಪದ ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. ಸಾರ್ವಜನಿಕವಾಗಿ 5ಕ್ಕಿಂತ ಹೆಚ್ಚು ಮಂದಿ ಸೇರುವಂತಿಲ್ಲ. ಅಂತ್ಯಸಂಸ್ಕಾರದ ಮನೆಯಲ್ಲಿ 20 ಜನರಿಗಷ್ಟೇ ಅನುಮತಿ ನೀಡಲಾಗಿದೆ.

ಅಂಗಡಿ, ಮಾಲ್, ಮಾರುಕಟ್ಟೆಗಳಲ್ಲಿ ಜನರು ಸಾಮಾಜಿಕ ಅಂತರ ಮರೆಯುತ್ತಿರುವುದರಿಂದಾಗಿ ಕೊರೊನಾ ಸೋಂಕು ಹರಡುತ್ತಿದೆ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚಿಸಲಾಗಿದೆ. ಮಾಲ್, ಮಾರ್ಕೆಟ್ ಹಾಗೂ ಅಂಗಡಿ ಮುಂಭಾಗದಲ್ಲಿ ಗ್ರಾಹಕರು ಕನಿಷ್ಠ 6 ಅಡಿ ಅಂತರ ಇರಬೇಕು. ಸಾಮಾಜಿಕ ಅಂತರ ಪಾಲಿಸದಿದ್ರೆ ಗ್ರಾಹಕರಿಗೆ ದಂಡ ಹಾಕಲಾಗುತ್ತದೆ. ಗ್ರಾಹಕರ ಜೊತೆಗೆ ಮಾಲೀಕರಿಗೂ ದಂಡ ಹಾಕಲಾಗುತ್ತದೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.