ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನಗರ ಸಂಚಾರ ಪೊಲೀಸರು ವಾಹನ ಸವಾರರಿಗೆ ಭರ್ಜರಿ ಶಾಕ್ ಕೊಟ್ಟಿದ್ದಾರೆ. ಕಳೆದೊಂದು ವಾರದ ಅವಧಿಯಲ್ಲಿ ಕಾರ್ಯಾಚರಣೆಯನ್ನು ನಡೆಸಿ 55,717 ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಬರೋಬ್ಬರಿ 2,35,33,100 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಚಾಲಕರನ್ನು ಭೌತಿಕವಾಗಿ ತಡೆದು ಸಂಚಾರ ನಿಯಮ ಉಲ್ಲಂಘನಾ ಪ್ರಕರಣಗಳನ್ನು ದಾಖಲು ಮಾಡುವ ಪದ್ಧತಿಯನ್ನು ಕಳೆದ ಮಾರ್ಚ ತಿಂಗಳಿಂದ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಲಾಕ್ ಡೌನ್ ಸಡಿಲಿಕೆಯ ನಂತರ ವಾಹನ ಓಡಾಟ ಹೆಚ್ಚಾದಂತೆ ಸಂಚಾರ ನಿಯಮ ಉಲ್ಲಂಘನೆಯು ಹೆಚ್ಚಾಗಿತ್ತು. ಹೀಗಾಗಿ ಎಲ್ಲಾ ರೀತಿಯ ಮುಂಜಾಗೃತಾ ಕ್ರಮಗಳನ್ನು ಅನುಸರಿಸಿಕೊಂಡು ವಾಹನ ಚಾಲಕರನ್ನು ಭೌತಿಕವಾಗಿ ತಡೆದು ಪ್ರಕರಣಗಳನ್ನು ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ ತಿಳಿಸಿದ್ದಾರೆ.

ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನ ಚಾಲನೆಯ 108 ಪ್ರಕರಣದಲ್ಲಿ 66,000 ರೂ.ದಂಡ, ಅತಿವೇಗದ 17 ಪ್ರಕರಣದಲ್ಲಿ 5100 ರೂ., ಕುಡಿದು ವಾಹನ ಚಾಲನೆಯ 4 ಪ್ರಕರಣ, ಡಿಸ್ ಪ್ಲೇ ಇಲ್ಲದೆ ಚಾಹನೆ 2, ಎಲ್ಲೆಂದರಲ್ಲಿ ಪಾರ್ಕಿಂಗ್ 2398 ಪ್ರಕರಣದಲ್ಲಿ 7,08200 ರೂ., ಡಿಎಲ್ ಇಲ್ಲದೆ ದ್ವಿಚಕ್ರ ವಾಹನ ಚಾಲನೆಯ 394 ಪ್ರಕರಣದಲ್ಲಿ 2,11,000 ರೂ., ಲೈನ್ ಶಿಸ್ತುಪಾಲಿಸದ 480 ಪ್ರಕರಣದಲ್ಲಿ 1,96,900 ರೂ.,ಸಮವಸ್ತ್ರ ಧರಿಸದ 273 ಪ್ರಕರಣದಲ್ಲಿ 124600 ರೂ., ವಸೂಲಿ ಮಾಡಲಾಗಿದೆ.

ಇನ್ನು ನಗರದಲ್ಲಿ 47 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದ ದ್ವಿಚಕ್ರ ವಾಹನ ಮಾಲೀಕನಿಂದ ಸಂಚಾರಿ ಪೊಲೀಸರು ಬರೋಬ್ಬರಿ 23,000 ರೂಪಾಯಿ ದಂಡ ವಸೂಲಿ ಮಾಡಿದ್ದಾರೆ.