ಟೊಯೊಟಾ ನಿರ್ಮಾಣದ ಕಾರುಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಇನೋವಾ ಕ್ರಿಸ್ಟಾ ಮಾದರಿಯು ದುಬಾರಿ ಬೆಲೆ ನಡುವೆಯೂ ಭಾರೀ ಪ್ರಮಾಣದ ಮಾರಾಟ ಸಂಖ್ಯೆಯನ್ನು ತನ್ನದಾಗಿಸಿಕೊಂಡಿದ್ದು, ಇದೀಗ ಫೇಸ್ಲಿಫ್ಟ್ ಆವೃತ್ತಿ ಮೂಲಕ ಎಂಪಿವಿ ಕಾರು ಮಾರಾಟ ದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹೊಸ ಕಾರು 2021ರ ಆರಂಭದಲ್ಲಿ ಬಿಡುಗಡೆಯಾಗಲಿದ್ದು, ಕಾರಿನ ವಿನ್ಯಾಸ ವೈರಲ್ ಆಗಿದೆ.

2018 ರಲ್ಲಿ ಮೊದಲ ಬಾರಿಗೆ ಹೊಸ ತಲೆಮಾರಿನ ಇನೋವಾ ಕ್ರಿಸ್ಟಾ ಬಿಡುಗಡೆ ಮಾಡಿದ್ದ ಟೊಯೊಟಾ ಕಂಪನಿಯು ಇದೀಗ ಫೇಸ್ಲಿಫ್ಟ್ ಮಾದರಿಯನ್ನು ಕೆಲವು ಸಣ್ಣ-ಪುಟ್ಟ ಬದಲಾವಣೆಗಳೊಂದಿಗೆ ಬಿಡುಗಡೆಗೆ ಸಿದ್ದವಾಗಿದ್ದು, ಹೊಸ ಕಾರು ಬಿಡುಗಡೆಗೂ ಮುನ್ನ ಕಾರಿನ ವಿನ್ಯಾಸದ ಕುರಿತಾದ ಪೇಟೆಂಟ್ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಟುತ್ತಿವೆ.

2021ರ ಇನೋವಾ ಕ್ರಿಸ್ಟಾ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾದರಿಗಿಂತಲೂ ಸಾಕಷ್ಟು ಹೊಸ ಪ್ರೀಮಿಯಂ ಫೀಚರ್ಸ್ ಪಡೆದುಕೊಂಡಿರಲಿದ್ದು, ಕಾರಿನ ಹೊರ ಮತ್ತು ಒಳ ಭಾಗದ ವಿನ್ಯಾಸಗಳಲ್ಲಿ ಮಹತ್ವದ ಬದಲಾವಣೆ ಪಡೆದುಕೊಂಡಿದೆ.

ಹೊಸ ಕಾರಿನಲ್ಲಿ ಮರವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್ಲ್ಯಾಂಪ್ಸ್ ಒಳಗೊಂಡ ಫ್ರಂಟ್ ಫಾಸಿಯಾ, ಮರುವಿನ್ಯಾಸಗೊಂಡ ಗ್ರಿಲ್ ಮತ್ತು ಬಂಪರ್, ಹೊಸ ಮಾದರಿಯ ಟೈಲ್ ಲ್ಯಾಂಪ್ಸ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ನೀಡಲಾಗುತ್ತಿದ್ದು, ಹಿಂಭಾಗದ ಬಂಪರ್ ವಿನ್ಯಾಸ ದಲ್ಲಿ ಯಾವುದೇ ಹೊಸ ಬದಲಾವಣೆ ತಂದಿಲ್ಲ.

ಹೊಸ ಕಾರಿನಲ್ಲಿ ಒಳಭಾಗದ ವಿನ್ಯಾಸವು ಕೂಡಾ ಸಾಕಷ್ಟು ಬದಲಾವಣೆಗೊಂಡಿದೆ. ಇನ್ನೋವಾ ಕ್ರಿಸ್ಟಾ ಕಾರಿನಲ್ಲಿ ಅತ್ಯಾಧುನಿಕ ಇಂಟಿರೀಯರ್ ಅಳವಡಿಸಲಾಗಿದ್ದು, ಎಂಪಿವಿ ಕಾರಿನಲ್ಲಿಯೂ ಇನ್ನಷ್ಟು ಅತ್ಯಾಧುನಿಕಗೊಳಿಸಲಾಗಿದೆ . ಆದರೆ ಎಂಜಿನ್ ಆಯ್ಕೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾದರಿಯನ್ನೇ ಮುಂದುವರಿಸಲಾಗಿದೆ.

ಬಿಎಸ್-6 ಎಮಿಷನ್ ಜಾರಿ ನಂತರ ಇನೋವಾ ಕ್ರಿಸ್ಟಾ ಎಂಪಿವಿ ಕಾರಿನಲ್ಲಿ 2.7-ಲೀಟರ್ ಪೆಟ್ರೋಲ್ ಮತ್ತು 2.4-ಲೀಟರ್ ಡೀಸೆಲ್ ಎಂಜಿನ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡುತ್ತಿರುವ ಟೊಯೊಟಾ ಕಂಪನಿಯು ಈ ಹಿಂದಿನ 2.8-ಲೀಟರ್ ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯನ್ನು ಹೊಸ ಎಮಿಷನ್ ಪ್ರಕಾರ ಸ್ಥಗಿತಗೊಳಿಸಿದೆ.

ಇದರ ಬೆನ್ನಲ್ಲೇ ಹೊಸ ಕಾರಿನಲ್ಲಿ ಮೊದಲ ಬಾರಿಗೆ ಹೊಸ ಕಾರಿನಲ್ಲಿ ಸಿಎನ್ಜಿ ಆಯ್ಕೆಯನ್ನು ನೀಡಲಿದ್ದು, ಸಿಎನ್ಜಿ ಆವೃತ್ತಿಯು ಡೀಸೆಲ್ ಕಾರಿಗಿಂತಲೂ ತುಸು ಹೆಚ್ಚಿನ ಮಟ್ಟದ ಮೈಲೇಜ್ ವೈಶಿಷ್ಟ್ಯತೆಯೊಂದಿಗೆ ಶೀಘ್ರದಲ್ಲೇ ಮಾರುಕಟ್ಟೆ ಪ್ರವೇಶಿಸಲಿದೆ.

ಮಾಲಿನ್ಯ ತಗ್ಗಿಸುವ ಉದ್ದೇಶದಿಂದ ಏಪ್ರಿಲ್ 1ರಿಂದಲೇ ಬಿಎಸ್-6 ಎಮಿಷನ್ ಜಾರಿಗೆ ತರಲಾಗಿದ್ದು, ಹೊಸ ನಿಯಮ ಅನುಸಾರವಾಗಿ ಬಹುತೇಕ ಕಾರು ಮಾದರಿಗಳು ಈಗಾಗಲೇ ಎಂಜಿನ್ನೊಂದಿಗೆ ಬಿಡುಗಡೆಗೊಂಡಿವೆ. ಟೊಯೊಟಾ ಕೂಡಾ ಇನೋವಾಕ್ರಿಸ್ಟಾ ಸೇರಿದಂತೆ ವಿವಿಧ ಕಾರು ಮಾದರಿಗಳನ್ನು ಬಿಎಸ್-6 ಎಂಜಿನ್ನೊಂದಿಗೆ ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳ ಎಂಜಿನ್ ಮತ್ತು ಸುರಕ್ಷಾ ಸೌಲಭ್ಯ ಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಇನೋವಾ ಕ್ರಿಸ್ಟಾ ಕಾರು ಆವೃತ್ತಿಯು ಹೊಸ ಎಂಜಿನ್ನೊಂದಿಗೆ ದೆಹಲಿ ಎಕ್ಸ್ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ. 15.67 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ. 24.68 ಲಕ್ಷ ಬೆಲೆ ಹೊಂದಿದ್ದು, ಫೇಸ್ಲಿಫ್ಟ್ ಆವೃತ್ತಿ ಇನ್ನಷ್ಟು ದುಬಾರಿಯಾಗಿರುವ ಸಾಧ್ಯತೆಯಿದೆ.