ಕುಂದಾಪುರ : ಕರಾವಳಿಯ ಬಿಜೆಪಿಯಲ್ಲಿ ಸಾಕಷ್ಟು ಬದಲಾವಣೆಗಳು ನಡೆಯುತ್ತಿದೆ. ಈಗಾಗಲೇ ಒಡೆದ ಮನೆಯಂತಾಗಿರುವ ಕುಂದಾಪುರ ಬಿಜೆಪಿಗೆ ತೇಪೆ ಹಾಕುವ ಕಾರ್ಯಕ್ಕೆ ಪಕ್ಷ ಮುಂದಾಗಿದೆ. ಈ ನಡುವಲ್ಲೇ ಕಿಶೋರ್ ಕುಮಾರ್ ಅವರಿಗೆ ಪಕ್ಷದಲ್ಲೀಗ ಉನ್ನತ ಸ್ಥಾನ ನೀಡಿದೆ. ಇದರ ಬೆನ್ನಲ್ಲೇ ಬಿಜೆಪಿ ಹಾಲಾಡಿಗೆ ಪರ್ಯಾಯ ನಾಯಕನ ನೇಮಕ ಮಾಡಿತೇ ಅನ್ನೋ ಚರ್ಚೆ ಶುರುವಾಗಿದೆ.

ಹೌದು, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದೆರಡು ದಶಕಗಳಿಂದಲೂ ಸೋಲಿಲ್ಲದಂತೆ ಮೆರೆದವರು ಹಾಲಾಡಿ ಶ್ರೀನಿವಾಸ ಶೆಟ್ಟಿ. ದಕ್ಷ, ಪ್ರಾಮಾಣಿಕ ಆಡಳಿತದ ಜೊತೆ ಜೊತೆಗೆ ಸರಳತೆಯಿಂದಲೇ ಕುಂದಾಪುರದ ವಾಜಪೇಯಿ ಅಂತಾ ಕರೆಯಿಸಿಕೊಳ್ಳುತ್ತಿದ್ದಾರೆ. ಹಾಲಾಡಿ ಮೂರು ಬಾರಿ ಬಿಜೆಪಿ ಶಾಸಕರಾಗಿ, ಒಂದು ಬಾರಿ ಪಕ್ಷೇತರ ಶಾಸಕರಾಗಿ ಅಧಿಕಾರ ನಡೆಸುತ್ತಿದ್ದಾರೆ. ಆದರೆ ಹಲವು ಬಾರಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ರಾಜಕೀಯದಿಂದಲೇ ದೂರ ಉಳಿಯುವುದಾಗಿಯೂ ಹೇಳಿಕೊಂಡಿದ್ದರು. ಈ ಹಿಂದೆ ಚಿಕ್ಕಮಗಳೂರು ಉಡುಪಿ ಸಂಸದರ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗುತ್ತಾರೆ ಅನ್ನೋ ಮಾತುಗಳು ಕೇಳಿಬಂದಿತ್ತು.

ಸಚಿವ ಸ್ಥಾನ ನೀಡದೇ ಅವಮಾನಿಸಿದ ಬಿಜೆಪಿ ವಿರುದ್ದ ತೊಡೆತಟ್ಟಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಿದ್ದರು. ತದನಂತರ ದಲ್ಲಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡು ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಬಿಜೆಪಿ ವಿರುದ್ದ ಮುನಿಸಿಕೊಂಡು ಪಕ್ಷೇತರರಾಗಿ ಚುನಾವಣೆಗೆ ಸ್ಪರ್ಧಿಸಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ತನ್ನೊಂದಿಗೆ ಅತ್ಯಾಪ್ತರಾಗಿದ್ದ ಹಲವರ ಮೇಲೆ ಮುನಿಸಿ ಕೊಂಡಿದ್ದರು.

2012ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹಾಲಾಡಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರೆ, ಬಿಜೆಪಿಯ ಕಟ್ಟಾಳು, ನಿಷ್ಟಾವಂತ ಕಾರ್ಯಕರ್ತರೆನಿಸಿಕೊಂಡಿದ್ದ ಕಿಶೋರ್ ಕುಮಾರ್ ಅವರಿಗೆ ಬಿಜೆಪಿ ಮಣೆ ಹಾಕಿತ್ತು. ಪಕ್ಷದ ಆಣತಿಯಂತೆ ಕಿಶೋರ್ ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ವೇಳೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದರೂ ಕೂಡ ಬಿಜೆಪಿಯ ಕೆಲ ಮುಖಂಡರು ಕಿಶೋರ್ ಕುಮಾರ್ ಬೆಂಬಲಕ್ಕೆ ನಿಂತಿರಲಿಲ್ಲ. ಪಕ್ಷಕ್ಕೆ ಮುಜುಗರವನ್ನು ತಪ್ಪಿಸುವ ನಿಟ್ಟಿನಲ್ಲಿ ಪಕ್ಷಕೊಟ್ಟ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದರು. ಕಿಶೋರ್ ಕುಮಾರ್ ಸವಾಲುಗಳ ನಡುವಲ್ಲೇ ಪ್ರಬಲ ಪೈಪೋಟಿ ನೀಡಿದ್ದರು ಹಾಲಾಡಿ ಗೆಲುವನ್ನು ಕಂಡಿದ್ದರು. ಆದರೆ ಕಿಶೋರ್ ಕುಮಾರ್ ಎದುರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟರು ಇಲ್ಲದೇ ಇದ್ದಿದ್ರೆ ಕಿಶೋರ್ ಖಂಡಿತಾ ಗೆಲುವನ್ನು ಕಾಣುತ್ತಿದ್ರು ಅಂತಾ ಕ್ಷೇತ್ರ ಮತದಾರರು ಮಾತನಾಡಿಕೊಳ್ಳುತ್ತಿದ್ದಾರೆ.
2012ರ ಚುನಾವಣೆ ಇತಿಹಾಸದ ಪುಟ ಸೇರಿದೆ. ಚುನಾವಣೆಯಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಗೆದ್ದು ಬಿಜೆಪಿ ವಿರುದ್ದ ಪ್ರತೀಕಾರ ತೀರಿಸಿಕೊಂಡಿದ್ದು ಆಗಿದೆ. ಆದರೆ ಒಂದು ಕಾಲದಲ್ಲಿ ಅತ್ಯಾಪ್ತರೆನಿಸಿಕೊಂಡಿದ್ದ ಕಿಶೋರ್ ಕುಮಾರ್ ಹಾಗೂ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಅದೊಂದು ಚುನಾವಣೆ ಇಬ್ಬರ ನಡುವೆ ದ್ವೇಷದ ಜ್ವಾಲೆಯನ್ನೇ ಎಬ್ಬಿಸಿತ್ತು. ನಂತರದಲ್ಲಿ ಹಾಲಾಡಿ ಪಕ್ಷಕ್ಕೆ ಮರಳಿ ಬಂದ ನಂತರದಲ್ಲಿಯೂ ಇಬ್ಬರ ನಡುವಿನ ಮುನಿಸು ಹೆಚ್ಚುತ್ತಲೇ ಹೋಗಿತ್ತು. ಪಕ್ಷದ ನಾಯಕರೂ ಕೂಡ ಇಬ್ಬರನ್ನೂ ರಾಜೀ ಮಾಡೋದಕ್ಕೆ ಮುಂದಾಗಲಿಲ್ಲ. ಅಲ್ಲದೇ ಕಿಶೋರ್ ಕುಮಾರ್ ಅವರನ್ನು ಬಿಜೆಪಿ ಪಕ್ಷದಿಂದಲೇ ಉಚ್ಚಾಟನೆಯನ್ನೂ ಮಾಡಿತ್ತು. ಆದ್ರೆ ಕಿಶೋರ್ ಕುಮಾರ್ ಪಕ್ಷ ನಿಷ್ಟೆಯನ್ನು ಬಿಡಲೇ ಇಲ್ಲಾ. ಅದೇ ಕಾರಣಕ್ಕೆ ಇದೀಗ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಹುದ್ದೆಯನ್ನು ಪಕ್ಷ ನೀಡಿದೆ.

ಕುಂದಾಪುರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಲ್ಲವ, ಬಂಟರು, ಮೊಗವೀರರೇ ಬಿಜೆಪಿಯ ಓಟ್ ಬ್ಯಾಂಕ್. ಬಿಲ್ಲವ ಸಮುದಾಯದಿಂದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿದ್ರೆ, ಬಂಟ ಸಮುದಾಯದಿಂದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿದ್ದಾರೆ. ಆದರೆ ಮೊಗವೀರ ಸಮುದಾಯದಿಂದ ಬಿಜೆಪಿಯಲ್ಲಿ ಉನ್ನತ ಹುದ್ದೆಯಲ್ಲಿ ಗುರುತಿಸಿಕೊಂಡ ನಾಯಕರಿಲ್ಲ. ಇದೇ ಕಾರಣಕ್ಕೆ ಇದೀಗ ಬಿಜೆಪಿ ಕಿಶೋರ್ ಕುಮಾರ್ ಅವರಿಗೆ ಮಣೆ ಹಾಕಿದೆ.

ಕೋಟ ಶ್ರೀನಿವಾಸ ಪೂಜಾರಿ ಅವರು ಎರಡು ಬಾರಿ ಸಚಿವರಾಗಿದ್ದರೂ ಕೂಡ ಕುಂದಾಪುರ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ವರ್ಚಸ್ಸನ್ನು ಹೆಚ್ಚಿಸಿಕೊಂಡಿಲ್ಲ. ಆದರೆ ಕುಂದಾಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ ಅನುಭವವಿರುವ ಕಿಶೋರ್ ಕುಮಾರ್ ಅವರನ್ನೇ ಬಿಜೆಪಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಪರ್ಯಾಯವಾಗಿ ಸಜ್ಜು ಮಾಡುತ್ತಿದೆ. ಇದೇ ಕಾರಣದಿಂದಲೇ ಪಕ್ಷದಲ್ಲಿ ಉನ್ನತ ಹುದ್ದೆ ನೀಡಲಾಗಿದೆ ಎನ್ನಲಾಗುತ್ತಿದೆ.

ಈಗಾಗಲೇ ಸ್ವಚ್ಚ ರಾಜಕಾರಣಿ ಅಂತ ಹೆಸರು ಪಡೆದಿರುವ ಹಾಲಾಡಿ ಅವರನ್ನು ಕೇಂದ್ರದ ಸೇವೆಗೆ ಬಳಸಿಕೊಳ್ಳುವ ಸಾಧ್ಯತೆಯಿದೆ. ಇದೇ ಕಾರಣಕ್ಕೆ ಕುಂದಾಪುರ ಕ್ಷೇತ್ರಕ್ಕೆ ಪರ್ಯಾಯ ನಾಯಕರನ್ನಾಗಿ ಕಿಶೋರ್ ಕುಮಾರ್ ಅವರನ್ನು ಸಿದ್ದ ಪಡಿಸುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಆದರೆ ಶಾಸಕ ಹಾಲಾಡಿ ಹಾಗೂ ಕಿಶೋರ್ ಕುಮಾರ್ ತಮ್ಮ ವೈಮಸ್ಸು ಮುಂದುವರಿಸಿದ್ರೆ ಇಬ್ಬರಿಗೆ ಮಾತ್ರವಲ್ಲ ಪಕ್ಷಕ್ಕೂ ದೊಡ್ಡಮಟ್ಟಿನ ಹೊಡೆತ ಬೀಳೋದಂತೂ ಗ್ಯಾರಂಟಿ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ.