ಮಂಗಳವಾರ, ಮೇ 13, 2025
HomeSpecial StoryAprameya Temple : ತೊಟ್ಟಿಲು ಹರಕೆಯನ್ನು ಕಟ್ಟಿದರೆ, ಸಂತಾನ ಭಾಗ್ಯ ಕರುಣಿಸುವ ಅಪ್ರಮೇಯ ಸ್ವಾಮಿ

Aprameya Temple : ತೊಟ್ಟಿಲು ಹರಕೆಯನ್ನು ಕಟ್ಟಿದರೆ, ಸಂತಾನ ಭಾಗ್ಯ ಕರುಣಿಸುವ ಅಪ್ರಮೇಯ ಸ್ವಾಮಿ

- Advertisement -
  • ಭಾಗ್ಯ

Aprameya Temple : ಕರುನಾಡು ದೇವಾಲಯಗಳ ಬೀಡು. ಇಲ್ಲಿ ರಾಜ ಮಹಾರಾಜರ ಕಾಲದ ಅನೇಕ ದೇವಾಲಯಗಳು ಇಂದಿಗೂ ತಮ್ಮ ಇರುವಿಕೆಯನ್ನು ಸಾಬೀತು ಪಡಿಸಿ ಕೊಂಡರೆ, ಇನ್ನೂ ಹಲವು ಹೊಸದಾಗಿ ನಿರ್ಮಾಣಗೊಂಡ ದೇವಾಲಯಗಳೂ ಜಗತ್ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇಷ್ಟಾರ್ಥ ಸಿದ್ಧಿಗೆ, ಕಲ್ಯಾಣ ಯೋಗಕ್ಕಾಗಿ, ಸಂತಾನ ಭಾಗ್ಯಕ್ಕಾಗಿ ಹೀಗೆ ಬೇಡಿದ ವರವನ್ನು ಕರುಣಿಸುವ ದೇವರನ್ನು ಆರಾಧಿಸುವ ನಿಟ್ಟಿನಲ್ಲಿ ಭಕ್ತರು ತಮ್ಮ ನೆಚ್ಚಿನ ದೇವಾಲಯಗಳಿಗೆ ಭೇಟಿ ಕೊಡುವುದಿದೆ. ಅವುಗಳಲ್ಲಿ ಮಕ್ಕಳ ಭಾಗ್ಯ ಕರುಣಿಸುವ ದೇವರೆಂದೇ ಖ್ಯಾತಿ ಪಡೆದಿರುವ ಪುರಾತನ ದೇಗುಲವೊಂದರ ಬಗೆಗೆ ಇಂದಿನ ಮಾಹಿತಿ.

ಕರಕುಶಲ ಬೊಂಬೆಗಳ ಬೀಡು ಚನ್ನಪಟ್ಟಣ ತಾಲೂಕಿನಿಂದ 3 ಕಿ.ಮೀ ದೂರದಲ್ಲಿರುವ ಮಳೂರು ಎಂಬ ಗ್ರಾಮದಲ್ಲಿ ಇರುವ ಅಪ್ರಮೇಯ ಸ್ವಾಮಿ ದೇವಸ್ಥಾನ ವಿಶ್ವಪ್ರಸಿದ್ಧ. ಇಡೀ ಭರತ ಖಂಡದಲ್ಲಿ ಕೃಷ್ಣನ ಬಾಲ ಲೀಲೆಯನ್ನ ಹೋಲುವಂತಹ ವಿಗ್ರಹ ಇರುವುದು ಇಲ್ಲಿ ಮಾತ್ರ. ಇಲ್ಲಿನ ಅಂಬೆಗಾಲು ಕೃಷ್ಣನ ಮನಮೋಹಕ ವಿಗ್ರಹವಂತೂ ಈ ಪುರಾತನ ದೇವಸ್ಥಾನಕ್ಕೆ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುತ್ತದೆ.

ಶ್ರಾವಣ ಮಾಸದಲ್ಲಿ ಬರುವ ಶ್ರೀಕೃಷ್ಣ ಜನ್ಮಾಷ್ಟಮಿಯಂದು ದೇವಾಲಯಕ್ಕೆ ಹೋಗಿ ಪೂಜಿ ಸಲ್ಲಿಸಿ ಹರಕೆ ಕಟ್ಟಿದರೆ, ಸಂಕಷ್ಟ ಪರಿಹಾರವಾಗಿತ್ತದೆ ಹಾಗೂ ಮಕ್ಕಳಿಲ್ಲದವರು ಇಲ್ಲಿಗೆ ಭೇಟಿ (Aprameya Temple) ನೀಡಿ ತೊಟ್ಟಿಲು ಹರಕೆ ಕಟ್ಟಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆ ಭಕ್ತರದ್ದು. ನವನೀತ ಕೃಷ್ಣ, ಸಂತಾನ ಕೃಷ್ಣ, ಅಂಬೆಗಾಲು ಕೃಷ್ಣ ಎಂದು ಭಕ್ತರಿಂದ ಕರೆಸಿಕೊಳ್ಳುವ ಈ ಕೃಷ್ಣನ ದೇವಾಲಯಕ್ಕೆ ಮದುವೆಯಾಗಿ 25 ವರ್ಷಗಳು ಕಳೆದರೂ ಮಕ್ಕಳಿಲ್ಲದ ದಂಪತಿ ಇಲ್ಲಿಗೆ ಬಂದು ಅಬೆಗಾಲು ಕೃಷ್ಣನಿಗೆ ಹರಕೆ ಹೊತ್ತು ಸಂತಾನ ಭಾಗ್ಯ ಪಡೆದಿರುವ ಅನೇಕ ನಿದರ್ಶನಗಳಿವೆ. ತಮ್ಮ ಶಕ್ತ್ಯಾನುಸಾರ ಮರ, ಬೆಳ್ಳಿ ಅಥವಾ ಚಿನ್ನ ಯಾವುದಾದರೂ ತೊಟ್ಟಿಲನ್ನು ಸಮರ್ಪಿಸುತ್ತೇವೆ ಎಂದು ಬೇಡಿಕೊಂಡರೆ ಸಾಕು, ಮಕ್ಕಳ ಭಾಗ್ಯ ಸಿಗುತ್ತದೆ. ಹೀಗೆ ಸಂತಾನ ಪಡೆದ ಮಂದಿ ಕಾಣಿಕೆಯಾಗಿ ನೀಡಿರುವ ಸಾವಿರಾರು ತೊಟ್ಟಿಲುಗಳೇ ಇದಕ್ಕೆ ಸಾಕ್ಷಿಯಾಗಿದೆ.

ಶ್ರೀರಾಮಾಪ್ರಮೇಯ ಸ್ವಾಮಿ ದೇವಾಲಯದಲ್ಲಿ (Aprameya Temple) ಮೂಲ ವಿಗ್ರಹ ಶ್ರೀ ದೇವಿ, ಭೂದೇವಿ ಸಮೇತ ಶ್ರೀರಾಮಪ್ರಮೇಯ ಸ್ವಾಮಿಯವರದ್ದು..ಅತ್ಯಂತ ಜನಪ್ರಿಯ ಜಗನ್ಮೋಹನ ಅಂಬೇಗಾಲು ಶ್ರೀನವನೀತ ಕೃಷ್ಣನ ಸಾಲಿಗ್ರಾಮ ಶಿಲೆಯ ವಿಗ್ರಹ ಹಾಗೂ ಆಳ್ವಾರ್ ಆಚಾರ್ಯರ ವಿಗ್ರಹಗಳು ಇಲ್ಲಿನ ಪ್ರಮುಖ ಆಕರ್ಷಣೆ. ಪ್ರಪಂಚದಾದ್ಯಂತ ಶ್ರೀ ರಾಮಾಪ್ರಮೇಯ ಸ್ವಾಮಿಯವರ ಹೆಸರಿನಲ್ಲಿರುವುದು ಇದೊಂದೇ ದೇಗುಲ. ಶ್ರೀವಿಷ್ಣು ಸಹಸ್ರನಾಮದಲ್ಲಿ ಶ್ರೀಅಪ್ರಮೇಯ (Aprameya Temple) ಎಂಬುದು ಒಂದು ನಾಮವಾಗಿದ್ದು ಆಳವಾದ ಸ್ವರೂಪ ಉಳ್ಳದ್ದು, ದೇವರ ಸೌಂದರ್ಯ, ಲಾವಣ್ಯ, ಪರಾಕ್ರಮ, ಶಕ್ತಿಯನ್ನು ಅಳೆಯಲು ಸಾಧ್ಯವಿಲ್ಲ ಎಂಬ ಅರ್ಥವನ್ನು ಕೊಡುತ್ತದೆ.

ಇಲ್ಲಿನ ಶ್ರೀಅಂಬೇಗಾಲು ನವನೀತ ಕೃಷ್ಣನ ವಿಗ್ರಹವು 6 ತಿಂಗಳ ಮಗು ಸರ್ವಾಲಂಕಾರ ಭೂಷಿತನಾಗಿ, ಒಂದು ಕೈಯಲ್ಲಿ ಬೆಣ್ಣೆಯುಂಡೆ ಯನ್ನು ಹಿಡಿದು, ಮತ್ತೊಂದು ಕೈಯನ್ನು ನೆಲಕ್ಕೆ ಊರಿ, ಒಂದು ಕಾಲನ್ನು ಮಡಚಿಕೊಂಡು ಮತ್ತೊಂದು ಕಾಲನ್ನು ಎತ್ತಿಕೊಂಡು, ಅಂಬೆಗಾಲಿನಲ್ಲಿ ಮುಂದೆ, ಮುಂದೆ ಬರುವಂತಿದ್ದು ಅದ್ಭುತವಾಗಿ ಕಂಡುಬರುತ್ತದೆ.

ದೇವಾಲಯದ ಐತಿಹ್ಯ: ಪುರಾಣ ಪ್ರಸಿದ್ಧ ಶ್ರೀ ಅಪ್ರಮೇಯಸ್ವಾಮಿ ದೇವಸ್ಥಾನವನ್ನು ‘ಅಪ್ರಮೇಯ’ ಎಂಬ ದಂಡನಾಯಕನ ನೇತೃತ್ವದಲ್ಲಿ ಕಟ್ಟಿಸಿದ ಬಗ್ಗೆ ಕ್ರಿ.ಶ 1006ರ ಕಲಿಯೂರು ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಇದು ದ್ರಾವಿಡ ಶೈಲಿಯ ಶ್ರೇಷ್ಠವಾಸ್ತು ರಚನೆ. ಈ ದೇವಾಲಯ ನಿರ್ಮಾಣಕ್ಕೆ ಉಪಯೋಗಿಸಿರುವುದು ಗಟ್ಟಿಯಾದ ಕಣಕಲೆ. ದೇಗುಲವನ್ನು ಅಡಿಪಾಯವಿಲ್ಲದೆ ಹಾಗೆಯೇ ಮರಳಿನ ಮೇಲೆ ನಿರ್ಮಿಸಿರುವುದಾಗಿ ಶಾಸನದಲ್ಲಿ ಉಲ್ಲೇಖವಿದೆ. ವ್ಯಾಸತೀರ್ಥರು ಈ ದೇವಾಲಯದಲ್ಲಿ ಪ್ರತಿಷ್ಠಾಪಿಸಿರುವ ‘ಅಂಬೆಗಾಲು ಬೆಣ್ಣೆ ಕೃಷ್ಣನ’ ವಿಗ್ರಹವು ಮುದ್ದಾಗಿದೆ. ಪುರಂದದಾಸರು ತಮ್ಮ ಪ್ರಸಿದ್ಧಿ ‘ಜಗದೋದ್ಧಾರನ’ಕೀರ್ತನೆಯನ್ನು ಇದೇ ದೇವಾಲಯದಲ್ಲಿ ರಚಿಸಿದ್ದಾರೆ ಎಂಬುದು ಸ್ಥಳ ಪುರಾಣ ಐತಿಹ್ಯ.

ಶ್ರೀಕ್ಷೇತ್ರದಲ್ಲಿ ಭಕ್ತರ ಉದ್ಧಾರಕ್ಕಾಗಿ ಶ್ರೀಮನ್ನಾರಾಯಣನು, ಮಹಾಲಕ್ಷ್ಮೀ ಸಮೇತನಾಗಿ ಅರವಿಂದವಲ್ಲಿ ತಾವರೆ ಮೇಲೆ ಕುಳಿತಿದ್ದಾನೆ. ಶ್ರೀ ರಾಮನು ಸೀತಾನ್ವೇಷಣೆ ಮಾಡುತ್ತಾ ಸಾಗುವಾಗ ಇಲ್ಲಿನ ಅಪ್ರಮೇಯ ದೇವರನ್ನು ಪೂಜಿಸಿದ್ದರಿಂದ ಇದಕ್ಕೆ ‘ಶ್ರೀರಾಮಾಪ್ರಮೇಯ ಸ್ವಾಮಿ’ ಎಂಬ ಹೆಸರು ಬಂದಿರುವುದಾಗಿ ಸ್ಥಳ ಪ್ರತೀತಿಯಿದೆ.

ಮೈಸೂರು ಮಹಾ ಸಂಸ್ಥಾನದ ಅಂದಿನ ಅರಸರು, ಅಂಬೆಗಾಲು ಕೃಷ್ಣನ ಮೂರ್ತಿ ಅಂದ ನೋಡಿ ಅರಮನೆಯಲ್ಲಿರಬೇಕು ಎಂದು ಮಳೂರಿನಿಂದ ಆಸ್ಥಾನಕ್ಕೆ ತೆಗೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ. ಈ ಸಂದರ್ಭದಲ್ಲಿ ಕೃಷ್ಣನೇ ಮಹಾರಾಜರ ಕನಸಿನಲ್ಲಿ ಬಂದು ತನ್ನ ಸ್ವಸ್ಥಾನದಲ್ಲಿ ಇರಿಸುವಂತೆ ಹೇಳಿದ್ದನಂತೆ. ಈ ವಿಚಾರವನ್ನ ನಿರ್ಲಕ್ಷ್ಯ ಮಾಡಿದ್ದರಿಂದ ಅರಮನೆ ಅಗ್ನಿಗೆ ಆಹುತಿಯಾಯಿತು. ಆನಂತರ ಮಹಾರಾಜರು ಅಂಬೆಗಾಲು ಕೃಷ್ಣನ ಮೂರ್ತಿಯನ್ನ ಮತ್ತೆ ಸ್ವಸ್ಥಾನದಲ್ಲೇ ಪ್ರತಿಷ್ಠಾಪಿಸಿದರು ಎಂಬ ಪ್ರತೀತಿ ಇದೆ.

ಇದು ರಾಜೇಂದ್ರ ಸಿಂಹ ಚೋಳನ ಆಳ್ವಿಕೆಗೆ ಒಳಪಟ್ಟಿದ್ದರಿಂದ ರಾಜೇಂದ್ರ ಸಿಂಹ ನಗರಿ, ದಕ್ಷಿಣ ಕಾಶಿ ಎಂದೂ, ಶ್ರೀರಾಮಚಂದ್ರನು ಅಪ್ರಮೇಯ ಸ್ವಾಮಿಯನ್ನು ಪ್ರಾರ್ಥಿಸಿ ಪೂಜಿಸಿದ್ದರಿಂದ ಶ್ರೀರಾಮಾಪ್ರಮೇಯ ಸ್ವಾಮಿಯೆಂದು ಈ ಕ್ಷೇತ್ರವನ್ನು ‘ತೆಂಕಣ ಅಯೋಧ್ಯೆ’ ಎಂದು ಕರೆಯುತ್ತಾರೆ. ಶ್ರೀರಾಮ ಅಪ್ರಮೇಯ ಸ್ವಾಮಿ ದೇವಸ್ಥಾನವು ಸುಮಾರು 1600 ವರ್ಷಗಳ ಹಳೇ ದೇವಸ್ಥಾನವಾಗಿದ್ದು, ಸಾವಿರ ವರ್ಷಗಳ ಹಿಂದೆ ರಾಜೇಂದ್ರ ಸಿಂಹ ಚೋಳನ ಕಾಲದಲ್ಲಿ ದೇವಸ್ಥಾನ ಜೀರ್ಣೋದ್ಧಾರಗೊಂಡಿದ್ದು ಮತ್ತೆ ವಿಜಯನಗರ ಅರಸರ ಕಾಲದಲ್ಲಿ ಪ್ರಾಕಾರ ನಿರ್ಮಾಣ ಮುಂತಾದ ಜೀರ್ಣೋದ್ಧಾರ ಕಾರ್ಯಗಳು ನಡೆದಿವೆ.

ಮುಮ್ಮಡಿ ಕೃಷ್ಣರಾಜ ಒಡೆಯರು ಈ ದೇವಾಲಯಕ್ಕೆ ಭೇಟಿ ನೀಡಿ, ಭಾವಪರವಶರಾಗಿ ದೇವರಿಗೆ ಹಲವು ಬಗೆಯ ಆಭರಣಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 1991 ರಲ್ಲಿ ರಾಜಗೋಪುರ, ವಿಮಾನ ಗೋಪುರಗಳು ಜೀರ್ಣೋದ್ಧಾರ ಕಾರ್ಯಗಳು ನಡೆದಿದ್ದು, ಕಾಲಕಾಲಕ್ಕೆ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ನಡೆದಿರುವುದರಿಂದ ದೇವಸ್ಥಾನವು ಸುಸ್ಥಿತಿಯಲ್ಲಿದೆ.

ಒಟ್ಟಾರೆ ಸಾಕಷ್ಟು ವೈಶಿಷ್ಟ್ಯಗಳನ್ನ ಹೊಂದಿರುವ ಅಂಬೆಗಾಲು ಕೃಷ್ಣನ ದೇವಾಲಯಕ್ಕೆ ದಿನ ನಿತ್ಯ ನೂರಾರು ಭಕ್ತರು ಬಂದು ಇಷ್ಟಾರ್ಥ ಸಿದ್ಧಿಗಾಗಿ ಹರಕೆ ಹೊರುತ್ತಾರೆ. ದೇಶ ವಿದೇಶಗಳಿಂದಲೂ ಭಕ್ತರು ಇಲ್ಲಿಗೆ ಭೇಟ ಕೊಟ್ಟಿ ಅಂಬೆಗಾಲು ಕೃಷ್ಣನನ್ನು ಕಣ್ತುಂಬಿಕೊಳ್ಳುತ್ತಾರೆ.

ಇದನ್ನೂ ಓದಿ : Surya Temple : ಮಣ್ಣಿಗೆ ಒಲಿತಾನೆ ಶಿವ : ಮಣ್ಣಿನ ಗೊಂಬೆಯ ಹರಕೆಯಿಂದ ಈಡೇರುತ್ತೆ ಅಭೀಷ್ಟ

ಇದನ್ನೂ ಓದಿ : Worshiping rats : ಈ ಮಾತೆಗೆ ಇಲಿಗಳೇ ಮಕ್ಕಳು : ಮೂಷಿಕನನ್ನು ಪೂಜಿಸಿದ್ರೆ ಇಷ್ಟಾರ್ಥ ಸಿದ್ಧಿ

(Aprameya Temple Chennapatna )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular