ಕಲಬುರ್ಗಿ : ಪ್ರತಿಯೊಬ್ಬ ಭಾರತೀಯರಿಗೂ ಆಧಾರ್ ಹೊಂದುವುದನ್ನು ಕೇಂದ್ರ ಸರಕಾರ ಕಡ್ಡಾಯಗೊಳಿಸಿದೆ. ಆಧಾರ್ ಕೇಂದ್ರಗಳನ್ನು ತೆರೆದು ಆಧಾರ್ ಪಡೆಯಲು ಸಹಕಾರವನ್ನೂ ನೀಡುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಕಳೆದ 12ವರ್ಷಗಳಿಂದಲೂ 12 ಬಾರಿ ಅರ್ಜಿ ಸಲ್ಲಿಸಿದ್ರೂ ಆಧಾರ್ ಕಾರ್ಡ್ ಮಾತ್ರ ಸಿಕ್ಕಿಲ್ಲ. ಕಾರಣ ಕೇಳಿದ್ರೆ ಅಚ್ಚರಿಯಾಗೋದು ಗ್ಯಾರಂಟಿ.

ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದ ನಿವಾಸಿಯಾಗಿರುವ ಈರಮ್ಮ ಎಂಬ 30 ವರ್ಷದ ಮಹಿಳೆ ಆಧಾರ್ ಕಾರ್ಡ್ ಗಾಗಿ ಇದುವರೆಗೂ ಬರೋಬ್ಬರಿ 12 ಬಾರಿ ಅರ್ಜಿ ಸಲ್ಲಿಸಿದ್ದಾರೆ. ಬೆರಳಚ್ಚಿನ ಮಾದರಿ ಕೊಟ್ಟು, ಫೋಟೋ ತೆಗೆಯಿಸಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಆಧಾರ್ ಗಾಗಿ ಅಲೆದಾಡುತ್ತಲೇ ಇರುವ ಮಹಿಳೆ, ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಲು ಪರದಾಡುತ್ತಿದ್ದಾರೆ. ಹೀಗೆ ಪದೇ ಪದೇ ರಿಜೆಕ್ಟ್ ಆಗಲು ಕಾರಣವಾಗಿರೋದು ಮಗನ ಆಧಾರ್ ಗೆ ತನ್ನ ಬೆರಳಚ್ಚು ನೀಡಿರುವುದು.

ಕೇಂದ್ರ ಸರ್ಕಾರ ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಈರಮ್ಮನ ಹೆಸರಲ್ಲಿ ಆಧಾರ್ ಕಾರ್ಡ್ ಇಲ್ಲ. ಹೀಗಾಗಿ ಸರ್ಕಾರದ ಯಾವುದೇ ಯೋಜನೆಯ ಫಲವೂ ಈಕೆಗೆ ಸಿಗುತ್ತಿಲ್ಲ. ಪಡಿತರ ಚೀಟಿ, ಉದ್ಯೋಗ ಖಾತ್ರಿ ಕೂಲಿ ಕೆಲಸ, ಬ್ಯಾಂಕ್ ಖಾತೆ ತೆಗೆಯುವುದು, ಆಶ್ರಯ ಮನೆ ಇತ್ಯಾದಿ ಯಾವುದಕ್ಕೆ ಅರ್ಜಿ ಸಲ್ಲಿಸಿದರೂ ಆಧಾರ್ ಇಲ್ಲದ ಕಾರಣಕ್ಕೆ ತಿರಸ್ಕೃತಗೊಳ್ಳುತ್ತಿವೆ. ಸರ್ಕಾರ ಕೂಲಂಕುಷವಾಗಿ ಪರಿಶೀಲಿಸಿ, ಆಧಾರ್ ನೋಂದಣಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈರಮ್ಮಳ ಸಹೋದರ ಜಗದೀಶ್ ಪೂಜಾರಿ ಆಗ್ರಹಿಸಿದ್ದಾನೆ.
ಪದೇ ಪದೇ ಆಧಾರ್ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದರೂ ಕೂಡ ಪ್ರಯೋಜನವಾಗದೇ ಇದ್ದಾಗ, ಮಹಿಳೆ ಕಲಬುರ್ಗಿಯ ಮಿನಿ ವಿಧಾನ ಸೌಧದದಲ್ಲಿ ಆಧಾರ್ ನೋಂದಣಿ ಅಧಿಕಾರಿಗಳನ್ನು ಭೇಟಿಯಾದಾಗ ಆಧಾರ್ ಕಾರ್ಡ್ ಸಿಗದೇ ಇರೋದಕ್ಕೆ ಕಾರಣ ತಿಳಿದು ಬಂದಿದೆ. 2008 ರಲ್ಲಿ ಈರಮ್ಮ ತನ್ನ ಪುತ್ರ ಭೀಮಾಶಂಕರ್ ನ ಆಧಾರ್ ನೋಂದಣಿ ವೇಳೆ ತನ್ನ ಬೆರಳಚ್ಚು ನೀಡಿದ್ದಳು.
ನಂತರದಲ್ಲಿ ಎಷ್ಟೇ ಬಾರಿ ಬೆರಳಚ್ಚು ಸ್ಕ್ಯಾನ್ ಮಾಡಿ ಆಧಾರ್ ನೋಂದಣಿಗೆ ಯತ್ನಿಸಿದರೂ ತಾಂತ್ರಿಕ ಕಾರಣದಿಂದಾಗಿ ರಿಜೆಕ್ಟ್ ಆಗಿದೆ. ವಿಚಿತ್ರವೆಂದರೆ ಈರಮ್ಮ ಥಂಬ್ ನೀಡಿದ್ದರಿಂದ ಮಗ ಭೀಮಾಶಂಕರ್ ಹೆಸರಲ್ಲಿ ಒಂದು ಆಧಾರ್ ಕಾರ್ಡ್ ನೋಂದಣಿಯಾಗಿದ್ದರೆ, ಶಾಲೆಯಲ್ಲಿ ಭೀಮಾಶಂಕರ್ ಥಂಬ್ ಆಧರಿಸಿ ಮತ್ತೊಂದು ಆಧಾರ್ ರಜಿಸ್ಟರ್ ಆಗಿದೆ.
ಈರಮ್ಮನ ಸಮಸ್ಯೆಯನ್ನು ಆಲಿಸಿರುವ ಹಿರಿಯ ಅಧಿಕಾರಿಗಳು ಸಮಸ್ಯೆಯನ್ನು ಬಗೆ ಹರಿಸಿಕೊಡುವ ಭರವಸೆಯನ್ನು ನೀಡಿದ್ದಾರೆ. ಒಟ್ಟಿನಲ್ಲಿ ಮಹಿಳೆ ಮಾಡಿಕೊಂಡ ಆ ಸಣ್ಣ ಎಡವಟ್ಟು ಇಂದು ಸಮಸ್ಯೆಯನ್ನು ತಂದೊಡ್ಡಿದೆ.