ಬೆಂಗಳೂರು: ಈ ವರ್ಷದ ಆರಂಭದಿಂದ ಅಂತ್ಯದವರೆಗೂ ರಾಜ್ಯ,ದೇಶ,ವಿಶ್ವವನ್ನು ಕಂಗೆಡಿಸಿದ್ದು ಕೊರೋನಾ. ವಿಶ್ವದೆಲ್ಲೆಡೆ ಹಾಗೂ ರಾಜ್ಯದಲ್ಲಿ ಕೊರೋನಾ ಸಂಕಷ್ಟ ನಿಧಾನಕ್ಕೆ ಕುಗ್ಗುತ್ತ ಬಂದಿದ್ದರೂ ಸಂಪೂರ್ಣ ಸೋಂಕು ಮುಕ್ತವಾಗೋದು ಸಾಧ್ಯವಾಗಿಲ್ಲ. ಈ ಮಧ್ಯೆ ಹೊಸವರ್ಷ ಸ್ವಾಗತಿಸಲು ಇನ್ನೇನು ದಿನಗ ಣನೆ ಆರಂಭವಾಗಿರುವ ಬೆನ್ನಲ್ಲೇ, ಕೊರೋನಾ ಕರಿನೆರಳು ಸಂಭ್ರಮಾಚರಣೆಯ ಖುಷಿ ಮೇಲೂ ಬೀಳುವ ಮುನ್ಸೂಚನೆ ದೊರೆತಿದೆ.

2020 ರಲ್ಲಿ ಯಾವ ಹಬ್ಬ-ಹರಿದಿನವನ್ನೂ ಮುಕ್ತವಾಗಿ, ಖುಷಿಯಿಂದ ಅದ್ದೂರಿಯಾಗಿ ಆಚರಿಸಲು ಕೊರೋನಾ ಬಿಡಲೇ ಇಲ್ಲ. ಹೀಗಾಗಿ ಜನರು ಹಬ್ಬಗಳನ್ನು ಕೇವಲ ಶೃದ್ಧಾ-ಭಕ್ತಿಯಿಂದ ಮನೆಯಲ್ಲೇ ಆಚರಿಸಿ ಸಮಾಧಾನ ಪಟ್ಟುಕೊಂಡಿದ್ದಾರೆ. ಆದರೆ ಹಿರಿ-ಕಿರಿಯರೆನ್ನದೇ ಎಲ್ಲರೂ ಸಂಭ್ರಮಿಸುವ ಹೊಸವರ್ಷಾಚರಣೆಗೆ ಇನ್ನೇನು ದಿನಗಣನೆ ನಡೆದಿದ್ದು, ಆದರೆ ಕೊರೋನಾ ಹಿನ್ನೆಲೆಯಲ್ಲಿ ವರ್ಷಾಚರಣೆಯ ಸಂಭ್ರಮಕ್ಕೆ ಬ್ರೇಕ್ ಬೀಳುವ ಸಾಧ್ಯತೆ ದಟ್ಟವಾಗಿದೆ.

ದೀಪಾವಳಿಯ ಸಂಭ್ರಮಕ್ಕೂ ಕತ್ತರಿ ಹಾಕಿರುವ ರಾಜ್ಯ ಸರ್ಕಾರ ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಮತ್ತಷ್ಟು ಮಾಲಿನ್ಯ ತಪ್ಪಿಸಲು ಪಟಾಕಿ ನಿಷೇಧಿಸಿ ಆಜ್ಞೆ ಹೊರಡಿಸಿದೆ. ಇದು ಜೀವ ಉಳಿಸಿಕೊಳ್ಳುವ ವರ್ಷ. ಹೀಗಾಗಿ ಮತ್ತಷ್ಟು ಪರಿಸರ ಹಾಗೂ ಆರೋಗ್ಯ ಮಾಲಿನ್ಯಕ್ಕೆ ಅವಕಾಶ ನೀಡದೇ ಪರಿಸರ ಸ್ನೇಹಿ ದೀಪಾವಳಿ ಆಚರಿಸಿ ಎಂದಿದೆ.

ಹೀಗಾಗಿ ಇದೇ ಕಾರಣ ಮುಂದಿಟ್ಟುಕೊಂಡು ಅದ್ದೂರಿ ವರ್ಷಾಚರಣೆಗೂ ನಿಯಂತ್ರಣ ಹೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಬೆಂಗಳೂರಿನ ಎಂಜಿ ರೋಡ್ ಸೇರಿದಂತೆ ನಗರದಾದ್ಯಂತ ಹಾಗೂ ನಾಡಿನಾದ್ಯಂತ ಬಾರ್,ಪಬ್,ಪಾರ್ಟಿ ಹಾಲ್,ರೆಸಾರ್ಟ್ ಗಳಲ್ಲಿ ಫುಲ್ ನೈಟ್ ಪಾರ್ಟಿ,ಹಾಡು,ಕುಣಿತದ ಜೊತೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಆದರೆ ಈ ಭಾರಿ ಎಲ್ಲದಕ್ಕೂ ಕೊರೋನಾ ಭೀತಿ ಇದೆ.

ಸಾವಿರಾರು ಜನರು ಒಂದೆಡೆ ಸೇರೋದರಿಂದ ಕೊರೋನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇದೇ ಕಾರಣವನ್ನು ಮುಂದಿಟ್ಟುಕೊಂಡು ಸರ್ಕಾರ ಸಾಮೂಹಿಕ ವರ್ಷಾಚರಣೆ ಸಂಭ್ರಮಕ್ಕೆ ನಿಷೇಧ ಹೇರುವ ಸಾಧ್ಯತೆ ಇದೆ. ಆದರೆ ಒಂದೊಮ್ಮೆ ಸರ್ಕಾರ ನಿಷೇಧ ಹೇರಿದಲ್ಲಿ ಈಗಾಗಲೇ ವ್ಯಾಪಾರವಿಲ್ಲದೇ ಕಂಗೆಟ್ಟಿರುವ ಬಾರ್,ಪಬ್,ಪಾರ್ಟಿ ಹಾಲ್ ಹಾಗೂ ರೆಸಾರ್ಟ್ ಪ್ರವಾಸೋದ್ಯಮ ಮತ್ತಷ್ಟು ಕಳೆಗುಂದಲಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಹೊಸ ವರ್ಷಾಚರಣೆ ನಿಷೇದ ಪ್ರಸ್ತಾಪವಿದೆ. ಆದರೆ ಈ ಕುರಿತು ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಜೊತೆ ಸಿಎಂ ಸಭೆ ನಡೆಸಲಿದ್ದು, ಚರ್ಚೆಯ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದಿದ್ದಾರೆ. ಒಟ್ಟಿನಲ್ಲಿ 2021 ರ ಸ್ವಾಗತಕ್ಕೂ ಕೊರೋನಾ ಅಡ್ಡಗಾಲಾಗಿದ್ದು, ಜನತೆಯ ಬೇಸರಕ್ಕೆ ಕಾರಣವಾಗಿದೆ.