ಧಾರವಾಡ : ಕಾರು ಹಾಗೂ ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಬಳಿಯ ಕೊಂಡಿಕೊಪ್ಪ ಕ್ರಾಸ್ ಬಳಿ ನಡೆದಿದೆ.
ರಾಯಚೂರು ಜಿಲ್ಲೆಯ ಮಾನ್ವಿಯ ವಿಠ್ಠಲ ನಗರ ನಿವಾಸಿಗಳಾಗಿರುವ ಸಣ್ಣಗಂಗಣ್ಣ (52ವರ್ಷ ), ನಾಗಮ್ಮ (48 ವರ್ಷ ), ಹನಮಪ್ಪ ಭೋವಿ (37 ವರ್ಷ ) ಹಾಗೂ ಈರಣ್ಣ (24 ವರ್ಷ ) ಮೃತ ದುರ್ದೈವಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸಣ್ಣ ಈರಣ್ಣ ಹಾಗೂ ಲಕ್ಷ್ಮೀ ಎಂಬವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇಂದು ಮುಂಜಾನೆ ಕಾರಿನಲ್ಲಿ 6 ಮಂದಿ ಮಾನ್ವಿಯಿಂದ ಕಾರವಾರದ ಹಲಗದ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರ್ ನಲ್ಲಿದ್ದ ಆರು ಜನರ ಪೈಕಿ ನಾಲ್ವರು ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.
ಕ್ರೂಸರ್ ಚಾಲಕನೂ ಕೂಡಾ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಅಣ್ಣಿಗೇರಿ ಠಾಣೆಯ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.