ಮಂಗಳೂರು : ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್ ದಾಖಲೆಯನ್ನು ಮೀರಿಸುವ ಸಾಧನೆಗೈದಿರೋ ಕಂಬಳದ ಓಟಗಾರ ಶ್ರೀನಿವಾಸ ಗೌಡ ಸಾಯ್ (ಭಾರತೀಯ ಕ್ರೀಡಾ ಪ್ರಾಧಿಕಾರ) ನೀಡಿದ್ದ ಆಫರ್ ಅನ್ನು ತಿರಸ್ಕರಿಸಿದ್ದಾರೆ.

ಕಂಬಳ ಓಟಕ್ಕೂ ಸಿಂಥೆಟಿಕ್ ಟ್ರಾಕ್ ಓಟಕ್ಕೂ ವ್ಯತ್ಯಾಸಗಳಿವೆ. ಕಂಬಳದಲ್ಲಿ ಓಟಗಾರರಿಗೆ ಹಾಗೂ ಕೋಣಗಳಿಗೆ ಹಿಮ್ಮಡಿ ಹೆಚ್ಚು ಪ್ರಾಮುಖ್ಯತೆ ವಹಿಸಿದ್ರೆ, ಟ್ರಾಕ್ ನಲ್ಲಿ ಓಡಲು ಕಾಲಿನ ಬೆರಳುಗಳು ಹೆಚ್ಚು ಪ್ರಮುಖ ಪಾತ್ರವಹಿಸುತ್ತವೆ. ಕ್ರೀಡಾ ಪ್ರಾಧಿಕಾರದ ತರಬೇತಿಯಲ್ಲಿ ನಾನು ಪಾಲ್ಗೊಳ್ಳುವುದಿಲ್ಲ. ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದು ನಾನು ಅವರನ್ನು ಭೇಟಿಯಾಗಲಿದ್ದೇನೆ ಎಂದ ಶ್ರೀನಿವಾಸ ಗೌಡರು ಕಂಬಳ ಓಟದಿಂದ ತನಗೆ ಸಿಗುತ್ತಿರೋ ಆದಾಯದಲ್ಲಿ ನೆಮ್ಮದಿಯಾಗಿದ್ದೇನೆ. ಕಂಬಳ ಓಟದಿಂದ ತಾನು ಜನಪ್ರಿಯನಾಗಿರುವುದಕ್ಕೆ ಸಂತಸವಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಇತ್ತೀಚಿಗಷ್ಟೇ ಐಕಳದಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡರು ಹೊಸ ದಾಖಲೆಯನ್ನು ನಿರ್ಮಿಸಿದ್ದರು. ಒಲಿಂಪಿಕ್ ನಲ್ಲಿ ವಿಶ್ವದ ವೇಗದ ಓಟಗಾರ ಓಡಿದ ಸಮಯಕ್ಕೂ ಮೊದಲೇ ಗುರಿ ತಲುಪೋ ಮೂಲಕ ವಿಶ್ವದಾದ್ಯಂತ ಸುದ್ದಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಜೀಜು ಕ್ರೀಡಾ ಪ್ರಾಧಿಕಾರದ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದ್ದರು. ಶ್ರೀನಿವಾಸ ಗೌಡರು ಕೂಡ ಒಲಿಂಪಿಕ್ ತರಬೇತಿ ಪಡೆದು ದೇಶವನ್ನು ಪ್ರತಿನಿಧಿಸುತ್ತಾರೆ ಅಂತಾ ಹಲವರು ಹೇಳಿದ್ದರು. ಆದ್ರೀಗ ಶ್ರೀನಿವಾಸ ಗೌಡರು ಆಹ್ವಾನ ತಿರಸ್ಕರಿಸೋ ಮೂಲಕ ಎಲ್ಲಾ ಕುತೂಹಲಗಳಿಗೂ ತೆರೆ ಎಳೆದಿದ್ದಾರೆ.